Explainer: ಸಿಎಸ್‌ಕೆ ಪ್ಲೇಆಫ್ ಪ್ರವೇಶಿಸಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು; ಆರ್‌ಸಿಬಿಯಂತೆ ಕಂಬ್ಯಾಕ್ ಮಾಡಿದರೆ 6ನೇ ಕಪ್ ಕಷ್ಟವಲ್ಲ
ಐಪಿಎಲ್ 19ನೇ ಆವೃತ್ತಿಯಲ್ಲಿ ಸಿಎಸ್‌ಕೆ ತಂಡ ಪ್ಲೇಆಫ್ ಪ್ರವೇಶಿಸಬೇಕಾದರೆ, ಮುಂದೆ ಕಠಿಣ ಶ್ರಮ ಹಾಕಬೇಕಾಗುತ್ತದೆ. ಹಾಗಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇನ್ನೆಷ್ಟು ಪಂದ್ಯ ಗೆಲ್ಲಬೇಕು? ತಂಡಕ್ಕೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಇದೆಯಾ ಎಂಬುದನ್ನು ತಿಳಿಯೋಣ.

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಅತ್ಯಂತ ಕಳಪೆ ಫಾರ್ಮ್‌ನಲ್ಲಿದೆ. ತಂಡದ ಈ ಬಾರಿಯ ಫಾರ್ಮ್ ನೋಡಿದರೆ, ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಆವೃತ್ತಿಯ ಪ್ಲೇಆಫ್ ಹಂತಕ್ಕೆ ಅರ್ಹತೆ ಪಡೆಯುವ ಸಾಧ್ಯತೆ ತೀರಾ ಕಡಿಮೆ ಇದೆ. ಶುಕ್ರವಾರ (ಏ.11) ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ 8 ವಿಕೆಟ್‌ಗಳಿಂದ ಹೀನಾಯವಾಗಿ ಸೋತ ತಂಡವು, ಈವರೆಗೆ ಆಡಿದ ಆರು ಪಂದ್ಯಗಳಿಂದ ಕೇವಲ ಒಂದರಲ್ಲಿ ಗೆದ್ದು ಸತತ 5 ಪಂದ್ಯಗಳಲ್ಲಿ ಸೋತಂತಾಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಸಿಎಸ್‌ಕೆ ತಂಡ ಸತತ 5 ಪಂದ್ಯಗಳಲ್ಲಿ ಸೋತಿದೆ. ಇದು ತಂಡದ ಅಭಿಮಾನಿಗಳಿಗೂ ಭಾರಿ ನಿರಾಶೆ ಮೂಡಿಸಿದೆ.
ತಂಡಕ್ಕೆ ಟೂರ್ನಿಯಲ್ಲಿ ಮುಂದೆ ಎಂಟು ಪಂದ್ಯಗಳು ಮಾತ್ರ ಉಳಿದಿವೆ. ಹೀಗಾಗಿ ತಂಡ ಪ್ಲೇಆಫ್ ಪ್ರವೇಶಿಸುವ ಅವಕಾಶ ಇದೆಯಾ ಎಂಬ ಚಿಂತೆ ಅಭಿಮಾನಿಗಳದ್ದು. ಲೀಗ್ ಹಂತದ ಕೊನೆಯಲ್ಲಿ ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ಮಾತ್ರ ನಾಕೌಟ್ ಹಂತ ಪ್ರವೇಶಿಸುತ್ತದೆ. ಇದಕ್ಕೆ ಚೆನ್ನೈ ತಂಡ ಕಠಿಣ ಪ್ರಯತ್ನ ಮಾಡಬೇಕಾಗುತ್ತದೆ.
ಸಾಮಾನ್ಯವಾಗಿ, ಲೀಗ್ ಹಂತದ ಕೊನೆಯಲ್ಲಿ 16 ಅಂಕಗಳನ್ನು ಗಳಿಸುವ ತಂಡಗಳು ಪ್ಲೇಆಫ್ ಸ್ಥಾನಗಳಲ್ಲಿ ಸ್ಥಾನ ಪಡೆಯುವುದು ಖಚಿತ. ಇದಕ್ಕಾಗಿ 8 ಪಂದ್ಯಗಳಲ್ಲಿ ಗೆಲ್ಲಬೇಕಾಗುತ್ತದೆ. ಆಗ ಸ್ಥಾನ ಭದ್ರ. ಕೆಲವೊಂದು ಸನ್ನಿವೇಶಗಳಲ್ಲಿ ಇತರ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ 7 ಪಂದ್ಯ ಗೆದ್ದ ತಂಡಗಳು ಕೂಡಾ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಪಡೆಯುತ್ತವೆ. ಅಲ್ಲಿ ನೆಟ್ ರನ್‌ರೇಟ್ ಲೆಕ್ಕಕ್ಕೆ ಬರುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಸಿಎಸ್‌ಕೆ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇದೆ.
ಆರ್‌ಸಿಬಿಯಂಥಾ ಗೆಲುವು ಬೇಕು
ಕಳೆದ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಾ, ಒಂದು ಹಂತದಲ್ಲಿ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇತ್ತು. ತಂಡವು ಆಡಿದ ಮೊದಲ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋತು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿತ್ತು. ಆದರೂ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಕೊನೆಯ ಆರು ಪಂದ್ಯಗಳಲ್ಲಿ ಸತತ ಆರು ಗೆಲುವು ಸಾಧಿಸಿ 14 ಅಂಕಗಳೊಂದಿಗೆ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಆರ್‌ಸಿಬಿಯಷ್ಟೇ ಅಂಕಗಳನ್ನು ಪಡೆದಿದ್ದ ಇತರ ಮೂರು ತಂಡಗಳು ಕಡಿಮೆ ನೆಟ್ ರನ್‌ರೇಟ್ ಕಾರಣದಿಂದಾಗಿ ಎಲಿಮನೇಟ್ ಆಯ್ತು.
ಈ ಎಲ್ಲಾ ಸಾಧ್ಯತೆಗಳ ಲೆಕ್ಕಾಚಾರದ ಪ್ರಕಾರ ಸಿಎಸ್‌ಕೆ ತಂಡಕ್ಕೆ ಕೂಡಾ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಅವಕಾಶಗಳಿವೆ. ಆದರೆ, ಉಳಿದ ಪಂದ್ಯಗಳಲ್ಲಿ ತಂಡ ಗೆಲ್ಲಬೇಕಾಗುತ್ತದೆ. ಅಥವಾ ಇತರ ತಂಡಗಳ ಫಲಿತಾಂಶಗಳ ಆಧಾರದಲ್ಲಿ ಸಿಎಸ್‌ಕೆ ಭವಿಷ್ಯ ನಿರ್ಧಾರವಾಗುತ್ತದೆ.
7 ಪಂದ್ಯ ಗೆದ್ದರೆ ಸೇಫ್
ಸಿಎಸ್‌ಕೆ ತಂಡವು ಟೂರ್ನಿಯಲ್ಲಿ ಮುಂದೆ ಒಟ್ಟು 8 ಪಂದ್ಯಗಳಲ್ಲಿ ಆಡಲಿದೆ. ಇದರಲ್ಲಿ ಕನಿಷ್ಠ 7 ಪಂದ್ಯಗಳಲ್ಲಿ ಗೆದ್ದರೆ ತಂಡ ಪ್ಲೇ ಆಫ್ ಅರ್ಹತೆ ಗಿಟ್ಟಿಸುವುದು ಬಹುತೇಕ ಖಚಿತ. ಆಗ ತಂಡದ ಖಾತೆಯಲ್ಲಿ 16 ಅಂಕಗಳು (ಈಗಾಗಲೇ 1 ಪಂದ್ಯ ಗೆದ್ದಿದೆ) ಇರುತ್ತವೆ. ಒಂದು ವೇಳೆ ಎಂಟರಲ್ಲಿ 6 ಪಂದ್ಯಗಳಲ್ಲಿ ಗೆದ್ದರೆ ತಂಡವು 14 ಅಂಕಗಳೊಂದಿಗೆ ಗುಂಪು ಹಂತ ಮುಗಿಸುತ್ತದೆ. ಆಗ, ಪ್ಲೇಆಫ್‌ಗೆ ಪ್ರವೇಶಿಸಲು ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ.
ಸದ್ಯ, ಸತತ 5 ಪಂದ್ಯಗಳ ಸೋಲಿನ ನಂತರ ತಂಡವು ಗೆಲುವಿನ ಲಯಕ್ಕೆ ಮರಳುವುದು ತುಸು ಕಷ್ಟವಾಗಲಿದೆ. ಯಾವೊಬ್ಬ ಆಟಗಾರ ಕೂಡಾ ಫಾರ್ಮ್‌ನಲ್ಲಿಲ್ಲ. ಇದು ತಂಡಕ್ಕೆ ದೊಡ್ಡ ಸಂಕಷ್ಟ. ಫಾರ್ಮ್ ಕಳೆದುಕೊಂಡಿರುವ ಆಟಗಾರರು ಆತ್ಮವಿಶ್ವಾಸ ಕಳೆದುಕೊಂಡಿರುವಂತಿದೆ. ಸೋಲನ್ನು ಮರೆತು 5 ಬಾರಿಯ ಚಾಂಪಿಯನ್ ಎಂಬ ಪಟ್ಟಕ್ಕೆ ಅನುಗುಣವಾಗಿ ಆಡಿದರೆ ಮಾತ್ರ ಮುಂದೆ ಗೆಲುವು ಸಿಗಬಹುದು.
