ಫಖರ್‌ ಸ್ಫೋಟಕ ಆಟ, ಪಾಕಿಸ್ತಾನಕ್ಕೆ ಭರ್ಜರಿ ಜಯ; ವಿಶ್ವಕಪ್‌ನಿಂದ ಹೊರಬಿದ್ದ ಬಾಂಗ್ಲಾದೇಶ
ಕನ್ನಡ ಸುದ್ದಿ  /  ಕ್ರಿಕೆಟ್  /  ಫಖರ್‌ ಸ್ಫೋಟಕ ಆಟ, ಪಾಕಿಸ್ತಾನಕ್ಕೆ ಭರ್ಜರಿ ಜಯ; ವಿಶ್ವಕಪ್‌ನಿಂದ ಹೊರಬಿದ್ದ ಬಾಂಗ್ಲಾದೇಶ

ಫಖರ್‌ ಸ್ಫೋಟಕ ಆಟ, ಪಾಕಿಸ್ತಾನಕ್ಕೆ ಭರ್ಜರಿ ಜಯ; ವಿಶ್ವಕಪ್‌ನಿಂದ ಹೊರಬಿದ್ದ ಬಾಂಗ್ಲಾದೇಶ

Pakistan vs Bangladesh: ಕೋಲ್ಕತ್ತಾದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಬಾಂಗ್ಲಾದೇಶವು ಟೂರ್ನಿಯಿಂದ ನಿರ್ಗಮಿಸಿದೆ.

ಅರ್ಧಶತಕ ಸಿಡಿಸಿದ ಶಫೀಕ್‌ ಮತ್ತು ಫಖರ್
ಅರ್ಧಶತಕ ಸಿಡಿಸಿದ ಶಫೀಕ್‌ ಮತ್ತು ಫಖರ್ (AP)

ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ 2023 (ICC ODI World Cup 2023) ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ (Pakistan vs Bangladesh) ತಂಡವು ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಪಾಕ್‌ ತಂಡವು ಟೂರ್ನಿಯಲ್ಲಿ ಉಳಿಯುವ ಭರವಸೆಯಲ್ಲಿದ್ದರೆ, ಶಕೀಬ್‌ ಅಲ್‌ ಹಸನ್‌ ಬಳಗವು ವಿಶ್ವಕಪ್‌ ಆವೃತ್ತಿಯಿಂದ ಅಧಿಕೃತವಾಗಿ ಹೊರಬಿದ್ದಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇ, ಕೇವಲ 45.1 ಓವರ್‌ಗಳಲ್ಲಿ 204 ರನ್‌ ಗಳಿಸಿ ಆಲೌಟ್‌ ಆಯ್ತು. ಗೆಲುವಿಗೆ 205 ರನ್‌ಗಳ ಸಾಧಾರಣ ಗುರಿ ಪಡೆದ ಪಾಕಿಸ್ತಾನ, ಕೇವಲ 32.3 ಓವರ್‌ಗಳಲ್ಲಿ 3 ವಿಕೆಟ್‌ ಮಾತ್ರ ಕಳೆದುಕೊಂಡು 205 ರನ್‌ ಗಳಿಸಿತು. ಆ ಮೂಲಕ ಭರ್ಜರಿಯಾಗಿ 7 ವಿಕೆಟ್‌ಗಳಿಂದ ಜಯ ಸಾಧಿಸಿದೆ.

128 ರನ್‌ಗಳ ಬೃಹತ್‌ ಜೊತೆಯಾಟ

ಆತ್ಮವಿಶ್ವಾದದಿಂದಲೇ ಸಾಧಾರಣ ಗುರಿ ಬೆನ್ನಟ್ಟಲು ಮೈದಾನಕ್ಕಿಳಿದ ಪಾಕ್‌ ತಂಡದ ಆರಂಭಿಕರಾದ ಫಖರ್‌ ಜಮಾನ್‌ ಮತ್ತು ಶಫೀಕ್‌, ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟರು. ಇವರಿಬ್ಬರೂ ಶತಕದ ಜೊತೆಯಾಟ ಆಡುವುದು ಮಾತ್ರವಲ್ಲದೆ ಒಬ್ಬರ ನಂತರ ಮತ್ತೊಬ್ಬರಂತೆ ತಲಾ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ರಕ್ಷಣಾತ್ಮಕ ಆಟವಾಡುತ್ತಿದ್ದ ಅಬ್ದುಲ್ಲಾ ಶಫೀಕ್‌, 69 ಎಸೆತಗಳಿಂದ 68 ರನ್‌ ಗಳಿಸಿ ಮೆಹಿದಿ ಹಸನ್‌ ಮಿರಾಜ್‌ ಎಸೆತದಲ್ಲಿ ಔಟಾದರು. ಅಷ್ಟರಲ್ಲೇ ಫಖರ್‌ ಜೊತೆಗೆ 128 ರನ್‌ಗಳ ಬೃಹತ್‌ ಜೊತೆಯಾಟವಾಡಿದ್ದರು.

ವನ್‌ ಡೌನ್‌ ಕ್ರಮಾಂಕದಲ್ಲಿ ಬಂದ ಪಾಕ್‌ ನಾಯಕ ಬಾಬರ್‌ ಅಜಾಮ್‌, ದೊಡ್ಡ ಹೊಡೆತಕ್ಕೆ ಕೈ ಹಾಕಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಕೇವಲ 9 ರನ್‌ ಗಳಿಸಿ ಮಿರಾಜ್‌ ಎಸೆತದಲ್ಲಿ ಮಹಮದುಲ್ಲಾಗೆ ಕ್ಯಾಚ್‌ ನೀಡಿ ಡಗೌಟ್‌ಗೆ ಮರಳಿದರು.

ಸ್ಫೋಟಕ ಇನ್ನಿಂಗ್ಸ್‌ ಆಡಿದ ಫಖರ್‌ ಜಮಾನ್, 7 ಭರ್ಜರಿ ಸಿಕ್ಸರ್‌ ಜೊತೆಗೆ 74 ಎಸೆತಗಳಿಂದ 81 ರನ್‌ ಸಿಡಿಸಿ ‌ ಔಟಾದರು. ಮೆಹಿದಿ ಹಸನ್‌ ಮಿರಾಜ್ ಸತತ ಮೂರು ಪ್ರಮುಖ ವಿಕೆಟ್‌ ಕಬಳಿಸಿ ಮಿಂಚಿದರು. ಕೊನೆಯಲ್ಲಿ ಭರವಸೆಯ ಆಟಗಾರ ರಿಜ್ವಾನ್‌ (26) ಹಾಗೂ ಇಫ್ತಿಕರ್‌ ಅಹ್ಮದ್‌ (17) ಜೊತೆಗೂಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಬಾಂಗ್ಲಾದೇಶ ಪರ ಮಿರಾಜ್‌ ಎಲ್ಲಾ 3 ವಿಕೆಟ್‌ ಪಡೆದರು.

ಬಾಂಗ್ಲಾದೇಶ ಇನ್ನಿಂಗ್ಸ್

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ ಸಾಧಾರಣ ಮೊತ್ತ ಕಲೆಹಾಕಿತು. ಖಾತೆ ತೆರೆಯದೆ ತನ್ಜಿದ್‌ ಹಸನ್‌ ಔಟಾದರೆ, ಅವರ ಬೆನ್ನಲ್ಲೇ ನಜ್ಮುಲ್‌ ಹೊಸೈನ್‌ ಶಾಂಟೊ ಕೂಡಾ 4(3) ರನ್‌ ಗಳಿಸಿ ಔಟಾದರು. ಶಾಹೀನ್‌ ಅಫ್ರಿದಿ ಮೇಲಿಂದ ಮೇಲೆ ಎರಡು ವಿಕೆಟ್‌ ಕಬಳಿಸಿದರು. ಅನುಭವಿ ಆಟಗಾರ ಮುಶ್ಫಿಕರ್‌ ರಹೀಮ್‌ ಕೂಡಾ ಕೇವಲ 5 ರನ್‌ ಗಳಿಸಿ ಔಟಾಗಿ ನಿರಾಶೆ ಮೂಡಿಸಿದರೆ, ಜವಾಬ್ದಾರಿಯುತ ಆಟವಾಡಿದ ಲಿಟ್ಟನ್‌ ದಾಸ್‌ ಮತ್ತು ಮಹಮದುಲ್ಲಾ ಅರ್ಧಶತಕದ ಜೊತೆಯಾಟವಾಡಿದರು. ಕ್ರೀಸ್‌ಕಚ್ಚಿ ಆಡುತ್ತಿದ್ದ ಲಿಟ್ಟನ್‌ ದಾಸ್‌ 64 ಎಸೆತಗಳಿಂದ 45 ರನ್‌ ಗಳಿಸಿ ಅರ್ಧಶತಕದ ಅಂಚಿನಲ್ಲಿ ಇಫ್ತಿಕರ್‌ ಅಹಮದ್‌ಗೆ ವಿಕೆಟ್‌ ಒಪ್ಪಿಸಿದರು.

ಮಹಮದುಲ್ಲಾ ಮತ್ತೊಮ್ಮೆ ಆಕರ್ಷಕ ಅರ್ಧಶತಕ ಸಿಡಿಸಿದರು. 56 ರನ್‌ ಗಳಿಸಿ ಅವರು ಕೂಡಾ ಅಫ್ರಿದಿಗೆ ವಿಕೆಟ್‌ ಒಪ್ಪಿಸಿದರು. ಅವರ ಬೆನ್ನಲ್ಲೇ ತೌಹೀದ್ ಕೂಡಾ 7(3)‌ ರನ್‌ ಗಳಿಸಿ ಉಸಾಮಾ ಮಿರ್‌ಗೆ ವಿಕೆಟ್‌ ನೀಡಿದರು. ಜವಾಬ್ದಾರಿಯುತ ಆಟವಾಡುತ್ತಿದ್ದ ಶಕೀಬ್‌ ಅಲ್‌ ಹಸನ್‌ 64 ಎಸೆತಗಳಿಂದ 43 ರನ್‌ ಗಳಿಸಿ ಔಟಾದರು. 25 ರನ್‌ ಗಳಿಸಿ ಮಿರಾಜ್‌ ವಿಕೆಟ್‌ ಒಪ್ಪಿಸುತ್ತಿದ್ದಂತೆಯೇ ಬಾಂಗ್ಲಾ ತಂಡದ ಭರವಸೆ ಕಮರಿತು. ಅಂತಿಮವಾಗಿ ತಂಡವು 204 ರನ್‌ಗಳಿಗೆ ಆಲೌಟ್‌ ಆಯ್ತು.‌

Whats_app_banner