ಅರ್ಷದೀಪ್ ಬದಲಿಗೆ ಹರ್ಷಿತ್ ರಾಣಾಗೆ ಸ್ಥಾನ; ಕೋಚ್ ಗೌತಮ್ ಗಂಭೀರ್ ವಿರುದ್ಧ ಸಿಡಿದ ಫ್ಯಾನ್ಸ್, ಪಕ್ಷಪಾತದ ಆರೋಪ
ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಭಾರತದ ಎರಡನೇ ಸ್ಪೆಷಲಿಸ್ಟ್ ವೇಗಿ ಅರ್ಷದೀಪ್ ಸಿಂಗ್ ಬದಲಿಗೆ ಹರ್ಷಿತ್ ರಾಣಾ ಅವರನ್ನು ಆಯ್ಕೆ ಮಾಡಲಾಯ್ತು. ಇದು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳನ್ನು ಕೆರಳಿಸಿದೆ. ಕೋಚ್ ಗೌತಮ್ ಗಂಭೀರ್ ವಿರುದ್ಧ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಭಾರತ ತಂಡದ ಆಡುವ ಬಳಗವು ತುಸು ಅಚ್ಚರಿ ಮೂಡಿಸುವಂತಿದೆ. ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಮಾಡಲಾಗಿದ್ದ ಬೌಲಿಂಗ್ ಸಂಯೋಜನೆಯನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ತಂಡದಲ್ಲಿ ಮೂವರು ಸ್ಪಿನ್ನರ್‌ಗಳು ಮತ್ತು ಮೂವರು ವೇಗದ ಬೌಲರ್‌ಗಳಿದ್ದಾರೆ. ನಿರೀಕ್ಷೆಯಂತೆ ಮೊಹಮ್ಮದ್ ಶಮಿ ತಂಡದ ಮುಂಚೂಣಿ ವೇಗಿಯಾಗಿ ಸ್ಥಾನ ಪಡೆದಿದ್ದಾರೆ. ಆದರೆ, ಭಾರತದ ಎರಡನೇ ಸ್ಪೆಷಲಿಸ್ಟ್ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಕೈಬಿಟ್ಟು ಹರ್ಷಿತ್ ರಾಣಾಗೆ ಅವಕಾಶ ನೀಡಿದ್ದು, ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಬಗೆಬಗೆಯ ಚರ್ಚೆ ಶುರುವಾಗಿದೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಕಳೆದ ಜನವರಿ ತಿಂಗಳಲ್ಲೇ ಭಾರತ ತಂಡವನ್ನು ಘೋಷಿಸಲಾಗಿತ್ತು. ಆಗಲೇ ಅರ್ಷದೀಪ್ ಸಿಂಗ್ ಭಾರತದ ತಾತ್ಕಾಲಿಕ ತಂಡದ ಭಾಗವಾಗಿದ್ದರು. ಆದರೆ ಗಾಯಾಳು ಜಸ್ಪ್ರೀತ್ ಬುಮ್ರಾ ಪಂದ್ಯಾವಳಿಯಿಂದ ಹೊರಬಿದ್ದ ನಂತರ, ಎರಡು ವಾರಗಳ ಹಿಂದೆ ಹರ್ಷಿತಾ ರಾಣಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಅದರ ಬೆನ್ನಲ್ಲೇ ರಾಣಾ ಇಂಗ್ಲೆಂಡ್ ವಿರುದ್ಧದ ಎಲ್ಲಾ ಮೂರು ಏಕದಿನ ಪಂದ್ಯಗಳನ್ನು ಆಡಿದರು.
ಆಂಗ್ಲರ ವಿರುದ್ಧ ಅಷ್ಟೇನೂ ಪರಿಣಾಮಕಾರಿಯಾಗಿ ಬೌಲಂಗ್ ಮಾಡದ ರಾಣಾ, ಪವರ್‌ಪ್ಲೇನಲ್ಲಿ ದುಬಾರಿಯಾದರು. ಹೊಸ ಚೆಂಡಿನೊಂದಿಗೆ ಮಿಂಚಲು ತುಸು ವಿಫಲರಾದರು. ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಆಯ್ಕೆ ಕ್ರಮವನ್ನು ಸಮರ್ಥಿಸಿಕೊಂಡರೂ, ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಲು ಹೆಣಗಾಡಿದರು. ಈ ನಡುವೆ, ರಾಣಾಗಿಂತ ಅನುಭವಿ ಆಟಗಾರ ಅರ್ಷದೀಪ್ ಸಿಂಗ್ ಅವಕಾಶ ವಂಚಿತರಾದರು. ಅವರು ಇಂಗ್ಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯ ಮಾತ್ರ ಆಡಿದರು.
ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ರಾಣಾ ಅವರನ್ನು ಗಂಭೀರ್ ಎರಡನೇ ವೇಗಿಯಾಗಿ ಬೆಂಬಲಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳನ್ನು ಕೆರಳಿಸಿತು. ಭಾರತ ತಂಡದ ಮುಖ್ಯ ಕೋಚ್ "ಪಕ್ಷಪಾತ" ಮಾಡಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಅನುಭವಿ ಆಟಗಾರ ಅರ್ಷದೀಪ್ ಇದ್ದರೂ, ರಾಣಾ ಅವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಿದ ನಿರ್ಧಾರ ಸರಿ ಇಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಟ್ವಿಟರ್‌ನಲ್ಲಿ ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ
ಐಪಿಎಲ್ ಬೆನ್ನಲ್ಲೇ ಟೀಮ್ ಇಂಡಿಯಾ ಪದಾರ್ಪಣೆ
2024ರ ಐಪಿಎಲ್ ಅಂತ್ಯವಾದ ನಂತರ, ಹರ್ಷಿತ್ ರಾಣಾ ಭಾರತ ತಂಡದ ಪರ ಎಲ್ಲಾ ಸ್ವರೂಪಗಳಲ್ಲಿ ಪದಾರ್ಪಣೆ ಮಾಡಿದ್ದಾರೆ. ಇದರ ಹಿಂದೆ ಗಂಭೀರ್ ಪಾತ್ರ ಮಹತ್ವದ್ದು. ಗಂಭೀರ್ ಮಾರ್ಗದರ್ಶನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ರಾಣಾ ಆಡಿರುವುದು ಹೊಸ ವಿಷಯವೇನಲ್ಲ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಬೌಲಿಂಗ್ ನಡುವೆಯೂ, ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಹರ್ಷಿತ್ ರಾಣಾಗೆ ಮಣೆ ಹಾಕಲಾಗಿದೆ. ಆದರೆ, ಅರ್ಷದೀಪ್ ಅವರಷ್ಟು ಪರಿಣಾಮಕಾರಿ ಬೌಲರ್ ರಾಣಾ ಅಲ್ಲ ಎಂಬುದು ಟೀಮ್ ಇಂಡಿಯಾ ಫ್ಯಾನ್ಸ್ ಅಭಿಪ್ರಾಯ.
ಬಾಂಗ್ಲಾದೇಶ ಇನ್ನಿಂಗ್ಸ್‌ನ ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ನಾಯಕ ನಜ್ಮುಲ್ ಹುಸೇನ್ ಶಾಂಟೊ ಅವರನ್ನು ಔಟ್ ಮಾಡುವ ಮೂಲಕ ರಾಣಾ ಮಿಂಚಿದರು. ಒಟ್ಟಾರೆ 7.4 ಓವರ್ ಎಸೆದ ಅವರು 4.00ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದರು.


