ಕ್ರಿಕೆಟ್ ಪ್ರಿಯರಿಗೆ ಬುಧವಾರ ಫುಲ್ ಮೀಲ್ಸ್; ಫೆ 12ರಂದು ಭಾರತ, ಪಾಕಿಸ್ತಾನ ಸೇರಿ 6 ತಂಡಗಳ ನಡುವೆ 3 ಏಕದಿನ ಪಂದ್ಯಗಳು
ODI Matches: ಫೆಬ್ರವರಿ 12ರಂದು ಒಂದೇ ದಿನ 3 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಲಿವೆ. ಭಾರತ ಮತ್ತು ಪಾಕಿಸ್ತಾನ ಹೊರತುಪಡಿಸಿ, ಇನ್ನೂ ನಾಲ್ಕು ತಂಡಗಳು ಮೈದಾನಕ್ಕಿಳಿಯಲಿವೆ.

ಫೆಬ್ರವರಿ 12ರ ಬುಧವಾರ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ದೊಡ್ಡ ದಿನ. ಅವರಿಗೆ ದಿನವಿಡೀ ಸಾಕಷ್ಟು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸಿಗಲಿದೆ. ಒಂದು ಅಥವಾ ಎರಡಲ್ಲ, 3 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಒಂದೇ ದಿನ ನಡೆಯಲಿವೆ. ಎಲ್ಲವೂ ದೊಡ್ಡ ತಂಡಗಳಾಗಿದ್ದು, ಅವುಗಳಲ್ಲಿ ಐದು ತಂಡಗಳು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲಿವೆ. ಭಾರತ ಮತ್ತು ಪಾಕಿಸ್ತಾನ ಕೂಡ ಪ್ರತ್ಯೇಕ ಪಂದ್ಯಗಳಲ್ಲಿ ಕಣಕ್ಕಿಳಿಯಲಿವೆ. ಒಟ್ಟು ಆರು ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಈ 3 ಪಂದ್ಯಗಳ ಸಮಯ ಮತ್ತು ಪಂದ್ಯಗಳ ವಿವರ ಇಂತಿದೆ.
ಮೊದಲ ಪಂದ್ಯ: ಶ್ರೀಲಂಕಾ vs ಆಸ್ಟ್ರೇಲಿಯಾ
ದಿನದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಫೆಬ್ರವರಿ 12 ರಂದು ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದ್ದು, ಇದು ಎರಡು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವಾಗಿದೆ. ಆಸೀಸ್ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿ ಕಳೆದುಕೊಂಡಿರುವ ಲಂಕಾ, ಏಕದಿನ ಸಿರೀಸ್ನಲ್ಲಿ ಪುಟಿದೇಳುವ ಲೆಕ್ಕಾಚಾರದಲ್ಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾಗವಾಗದ ಲಂಕಾ, ಸರಣಿ ಗೆಲ್ಲುವ ಗುರಿಯನ್ನಷ್ಟೇ ಹೊಂದಿರುತ್ತದೆ. ಆದರೆ ಕಾಂಗರೂ ಪಡೆ ಇದು ಮಹತ್ವದ ಟೂರ್ನಿಗೆ ಸಿದ್ಧತೆ ಸರಣಿಯಾಗಿದೆ. ಕೊಲೊಂಬೋದಾ ಆರ್ ಪೇಮದಾಸ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯ ಶ್ರೀಲಂಕಾದ ಕಾಲಮಾನ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ. ಆ ಸಮಯದಲ್ಲಿ ಭಾರತದಲ್ಲೂ ಬೆಳಿಗ್ಗೆ 10 ಗಂಟೆ ಆಗಿರುತ್ತದೆ.
ಎರಡನೇ ಪಂದ್ಯ: ಭಾರತ vs ಇಂಗ್ಲೆಂಡ್
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ಇದು. ಫೆಬ್ರವರಿ 12ರ ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಈಗಾಗಲೇ ಮೊದಲ 2 ಏಕದಿನಗಳಲ್ಲಿ ಗೆದ್ದು 2-0ರಲ್ಲಿ ಸರಣಿ ವಶಪಡಿಸಿಕೊಂಡಿರುವ ಭಾರತ, ಕ್ಲೀನ್ ಸ್ವೀಪ್ ಸಾಧಿಸುವ ಲೆಕ್ಕಾಚಾರದಲ್ಲಿದೆ. ಮತ್ತೊಂದೆಡೆ ಕ್ಲೀನ್ಸ್ವೀಪ್ ಮುಖಭಂಗದಿಂದ ಪಾರಾಗಲು ಇಂಗ್ಲೆಂಡ್ ಯೋಜಿಸುತ್ತಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ 2 ತಂಡಗಳಿಗೆ ಕೊನೆಯ ಏಕದಿನವಾದ ಕಾರಣ ಉಭಯ ತಂಡಗಳಿಗೂ ಈ ಪಂದ್ಯ ಗೆಲುವು ಅನಿವಾರ್ಯವಾಗಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಮೂರನೇ ಹಾಗೂ ಅಂತಿಮ ಏಕದಿನ ಜರುಗಲಿದೆ.
ಮೂರನೇ ಪಂದ್ಯ: ಪಾಕಿಸ್ತಾನ vs ಸೌತ್ ಆಫ್ರಿಕಾ
ದಿನದ ಮೂರನೇ ಪಂದ್ಯ ಪಾಕಿಸ್ತಾನ vs ಸೌತ್ ಆಫ್ರಿಕಾ ನಡುವೆ ನಡೆಯಲಿದೆ. ಈ ಪಂದ್ಯವು ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯ ಕೊನೆಯ ಲೀಗ್ ಪಂದ್ಯವಾಗಿದೆ. ಪಾಕಿಸ್ತಾನ ಸಮಯ ಪ್ರಕಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ, ಆದರೆ ಆ ಸಮಯದಲ್ಲಿ ಭಾರತದಲ್ಲಿ ಮಧ್ಯಾಹ್ನ 2:30 ಆಗಿರುತ್ತದೆ. ಆಡಿದ 2 ಪಂದ್ಯಗಳಿಗೆ ಎರಡನ್ನೂ ಗೆದ್ದ ನ್ಯೂಜಿಲೆಂಡ್ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಮತ್ತೊಂದು ಫೈನಲಿಸ್ಟ್ ತಂಡವು ಫೆಬ್ರವರಿ 12ರಂದು ಗೊತ್ತಾಗಲಿದೆ. ಪಾಕ್-ಹರಿಣಗಳ ನಡುವೆ ಗೆದ್ದ ತಂಡವು ಫೈನಲ್ನಲ್ಲಿ ಕಿವೀಸ್ ಜೊತೆಗೆ ಸೆಣಸಾಟ ನಡೆಸಲಿದೆ. ಈಗಾಗಲೇ ಎರಡೂ ತಂಡಗಳು ಆಡಿರುವ ತಲಾ ಒಂದೊಂದು ಪಂದ್ಯದಲ್ಲಿ ಮುಗ್ಗರಿಸಿವೆ. ಕರಾಚಿಯ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಸಹ ಇದೇ ಮೈದಾನದಲ್ಲಿ ನಡೆಯಲಿವೆ.
