ಪ್ರೇಮಿಗಳ ದಿನ: ಇಂದು ಕ್ರಿಕೆಟ್ ಪ್ರಿಯರಿಗೆ ಹಬ್ಬವೋ ಹಬ್ಬ; ಆರ್ಸಿಬಿ, ಪಾಕಿಸ್ತಾನ ಸೇರಿ 8 ತಂಡಗಳ ನಡುವೆ 4 ಪಂದ್ಯಗಳು
February 14th: ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನವಾದ ಇಂದು ಒಂದೇ ದಿನ 4 ದೊಡ್ಡ ಪಂದ್ಯಗಳು ನಡೆಯಲಿವೆ. ಮೂರು ಏಕದಿನ ಪಂದ್ಯಗಳು, ಒಂದು ಟಿ20 ಪಂದ್ಯ ಜರುಗಲಿದೆ.

ಪ್ರೇಮಿಗಳ ದಿನವಾದ ಇಂದು (ಫೆಬ್ರವರಿ 14) ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಲಿದೆ. ಇವತ್ತು ದಿನವಿಡೀ ಪಂದ್ಯಗಳ ಮನರಂಜನೆ ಸಿಗಲಿದೆ. ಒಂದಲ್ಲ, ಎರಡಲ್ಲ, ಆರ್ಸಿಬಿ, ಪಾಕಿಸ್ತಾನ ಸೇರಿ 8 ತಂಡಗಳ ನಡುವೆ 4 ಪಂದ್ಯಗಳು ಒಂದೇ ದಿನ ನಡೆಯಲಿವೆ. ಈ ಪೈಕಿ 3 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳು, ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನಾಲ್ಕು ಪಂದ್ಯಗಳ ಸಮಯ ಇಲ್ಲಿದೆ.
1. ಶ್ರೀಲಂಕಾ vs ಆಸ್ಟ್ರೇಲಿಯಾ, 2ನೇ ಏಕದಿನ
ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯವು ಇಂದು ಬೆಳಿಗ್ಗೆ 10 ಗಂಟೆಗೆ ಕೊಲೊಂಬೊದಾ ಆರ್ ಪ್ರೇಮದಾಸ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ ಸಿದ್ಧತೆಗೆ ಆಸ್ಟ್ರೇಲಿಯಾ ಪಾಲಿಗೆ ಇದು ಅಂತಿಮ ಪಂದ್ಯ. ಈಗಾಗಲೇ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಗೆದ್ದು ಲಯಕ್ಕೆ ಮರಳುವುದರ ಜೊತೆಗೆ ಐಸಿಸಿ ಟೂರ್ನಿಗೆ ಅತ್ಯುತ್ತಮವಾಗಿ ಸಿದ್ಧತೆಯನ್ನು ಪೂರ್ಣಗೊಳಿಸುವುದು ಅನಿವಾರ್ಯ. ಮೊದಲ ಪಂದ್ಯದಲ್ಲಿ ಶ್ರೀಲಂಕಾ 214 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಲು ವಿಫಲವಾದ ಆಸೀಸ್ 165ಕ್ಕೆ ಆಲೌಟ್ ಆಗಿ 49 ರನ್ಗಳಿಂದ ಶರಣಾಗಿತ್ತು.
2. ಐರ್ಲೆಂಡ್ vs ಜಿಂಬಾಬ್ವೆ, ಮೊದಲ ಏಕದಿನ
ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವೆ ಮೊದಲ ಏಕದಿನ ಪಂದ್ಯವು ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಪಂದ್ಯ ಆರಂಭವಾಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಉಭಯ ತಂಡಗಳ ನಡುವೆ ನಡೆದ ಏಕೈಕ ಟೆಸ್ಟ್ನಲ್ಲಿ ಐರ್ಲೆಂಡ್ 63 ರನ್ಗಳ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಏಕದಿನ ಸರಣಿಯಲ್ಲಿ ಆತಿಥೇಯರನ್ನು ತವರಿನಲ್ಲಿ ಟೆಸ್ಟ್ ಸೋಲಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.
3. ಪಾಕಿಸ್ತಾನ vs ನ್ಯೂಜಿಲೆಂಡ್ ಫೈನಲ್ ಪಂದ್ಯ
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ತ್ರಿಕೋನ ಸರಣಿಯ ಫೈನಲ್ ಪಂದ್ಯ ಇಂದು ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ. ಈ ಪಂದ್ಯ ಕರಾಚಿ ನ್ಯಾಷನಲ್ ಸ್ಟೇಡಿಯಂನಲ್ಲಿ ಜರುಗಲಿದೆ. ಸರಣಿಯಲ್ಲಿ ನ್ಯೂಜಿಲೆಂಡ್ ಎರಡು ಪಂದ್ಯಗಳನ್ನು ಗೆದ್ದು ಫೈನಲ್ಗೆ ಅರ್ಹತೆ ಪಡೆದರೆ, ದಕ್ಷಿಣ ಆಫ್ರಿಕಾವನ್ನು ಮಣಿಸಿದ ಪಾಕ್ ಎರಡನೇ ತಂಡವಾಗಿ ಪ್ರಶಸ್ತಿ ಸುತ್ತಿಗೇರಿತು. ದಕ್ಷಿಣ ಆಫ್ರಿಕಾ ನೀಡಿದ್ದ 352 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಪಾಕ್ ದಾಖಲೆಯ ಗೆಲುವಿನ ಜೊತೆಗೆ ಅಂತಿಮ ಹಂತಕ್ಕೆ ಅರ್ಹತೆ ಪಡೆಯಿತು. ಆದರೆ ದಕ್ಷಿಣ ಆಫ್ರಿಕಾ ಎರಡೂ ಲೀಗ್ ಪಂದ್ಯಗಳನ್ನು ಸೋತು ಹೊರಬಿತ್ತು. ಫೈನಲ್ನಲ್ಲಿ ಗೆದ್ದ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭರ್ಜರಿ ಸಿದ್ಧತೆಯೊಂದಿಗೆ ಸರಣಿ ಕೊನೆಗೊಳಿಸಲಿದೆ.
4. ಆರ್ಸಿಬಿ vs ಗುಜರಾತ್ ಜೈಂಟ್ಸ್, ಡಬ್ಲ್ಯುಪಿಎಲ್
3ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಇಂದಿನಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯ ಇಂದು ಸಂಜೆ 7.30ಕ್ಕೆ ನಡೆಯಲಿದೆ. ಆರ್ಸಿಬಿ ಮತ್ತು ಗುಜರಾತ್ ಜೈಂಟ್ಸ್ ನಡುವೆ ನಡೆಯುವ ಈ ಪಂದ್ಯಕ್ಕೆ ವಡೋದರಾದ ಕೋಟಂಬಿ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ. ಹಾಲಿ ಚಾಂಪಿಯನ್ ಆರ್ಸಿಬಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಲು ಸಜ್ಜಾಗಿದ್ದು, ಅಭಿಮಾನಿಗಳು ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಇಂದು ನಡೆಯುವ ಎಲ್ಲಾ ಪಂದ್ಯಗಳು ದೊಡ್ಡ ಪಂದ್ಯಗಳಾಗಿದ್ದು, ಕ್ರಿಕೆಟ್ ಪ್ರಿಯರಿಗೆ ನಾನ್ಸ್ಟಾಪ್ ಮನರಂಜನೆ ಒದಗಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.
