ವಿರಾಟ್ ಕೊಹ್ಲಿ ರಣಜಿ ಪಂದ್ಯ ನೋಡಲು ಅಭಿಮಾನಿಗಳ ಸಾಗರ: ನೂಕುನುಗ್ಗಲು, ಹಲವರಿಗೆ ಗಾಯ; ಮೈದಾನಕ್ಕೆ ನುಗ್ಗಿದ ಫ್ಯಾನ್
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ ರಣಜಿ ಪಂದ್ಯ ನೋಡಲು ಅಭಿಮಾನಿಗಳ ಸಾಗರ: ನೂಕುನುಗ್ಗಲು, ಹಲವರಿಗೆ ಗಾಯ; ಮೈದಾನಕ್ಕೆ ನುಗ್ಗಿದ ಫ್ಯಾನ್

ವಿರಾಟ್ ಕೊಹ್ಲಿ ರಣಜಿ ಪಂದ್ಯ ನೋಡಲು ಅಭಿಮಾನಿಗಳ ಸಾಗರ: ನೂಕುನುಗ್ಗಲು, ಹಲವರಿಗೆ ಗಾಯ; ಮೈದಾನಕ್ಕೆ ನುಗ್ಗಿದ ಫ್ಯಾನ್

ವಿರಾಟ್‌ ಕೊಹ್ಲಿಯನ್ನು ನೋಡಲು ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಸಾಗರವೇ ಹರಿದು ಬಂದಿದೆ. ಉಚಿತವಾಗಿ ರಣಜಿ ಟ್ರೋಫಿ ಪಂದ್ಯದ ಜೊತೆಗೆ ಕೊಹ್ಲಿಯನ್ನು ನೋಡುವ ಅವಕಾಶವನ್ನು ಫ್ಯಾನ್ಸ್‌ ಮಿಸ್‌ ಮಾಡಿಲ್ಲ. ಹೀಗಾಗಿ ದೆಹಲಿಯಲ್ಲಿ ಹಲವು ಅವಾಂತರಗಳು ಸಂಭವಿಸಿವೆ.

ವಿರಾಟ್ ಕೊಹ್ಲಿ ರಣಜಿ ಪಂದ್ಯ ನೋಡಲು ಅಭಿಮಾನಿಗಳ ಸಾಗರ: ನೂಕುನುಗ್ಗಲು, ಹಲವರಿಗೆ ಗಾಯ
ವಿರಾಟ್ ಕೊಹ್ಲಿ ರಣಜಿ ಪಂದ್ಯ ನೋಡಲು ಅಭಿಮಾನಿಗಳ ಸಾಗರ: ನೂಕುನುಗ್ಗಲು, ಹಲವರಿಗೆ ಗಾಯ (PTI)

ವಿಶ್ವದ ಸ್ಟಾರ್‌ ಕ್ರಿಕೆಟಿಗನೊಬ್ಬ ದೇಶೀಯ ಕ್ರಿಕೆಟ್‌ ಆಡುತ್ತಿದ್ದಾರೆ ಎಂದಾಗ ಸಹಜವಾಗಿಯೇ ಅಭಿಮಾನಿಗಳ ಕಾತರ ಹೆಚ್ಚು. ಸಾಮಾನ್ಯವಾಗಿ ಹೆಚ್ಚು ಆಡಂಬರವಿಲ್ಲದೆ ನಡೆಯುವ ರಣಜಿ ಟ್ರೋಫಿ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಆಡುತ್ತಾರೆ ಎಂದಾಗಲೇ, ಫ್ಯಾನ್ಸ್‌ ಕುತೂಹಲ ಹೆಚ್ಚಾಗಿತ್ತು. ಬಿಸಿಸಿಐ ಕೂಡಾ ವಿರಾಟ್‌ ರಣಜಿ ಪುನರಾಗಮನಕ್ಕಾಗಿ ವಿಶೇಷ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದೆಹಲಿ ಮತ್ತು ರೈಲ್ವೇಸ್‌ ತಂಡಗಳ ನಡುವಿನ ಪಂದ್ಯಕ್ಕೆ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಹರಿದು ಬಂದಿದ್ದಾರೆ. ಬೆಳಗ್ಗೆಯೇ ಸುಮಾರು 15,000 ಅಭಿಮಾನಿಗಳು ಕೋಟ್ಲಾದಲ್ಲಿ ಸೇರಿದ್ದರು. ಹೀಗಾಗಿ ಹಲವು ಅವಾಂತರಗಳು ಸೃಷ್ಟಿಯಾಗಿವೆ.

2012ರ ನಂತರ ಮೊದಲ ಬಾರಿಗೆ ರಣಜಿ ಟ್ರೋಫಿ ಪಂದ್ಯವಾಡುತ್ತಿರುವ ವಿರಾಟ್‌ ಕೊಹ್ಲಿಯನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದರು. ಈ ನಡುವೆ ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿದ ಘಟನೆಯೂ ನಡೆಯಿತು. ರೈಲ್ವೇಸ್‌ ಇನ್ನಿಂಗ್ಸ್‌ನ ಹನ್ನೊಂದನೇ ಓವರ್‌ ವೇಳೆಗೆ ಮೈದಾನಕ್ಕೆ ನುಗ್ಗಿದ ಅಭಿಮಾನಿ ಕೊಹ್ಲಿಯತ್ತ ಓಡಲು ಆರಂಭಿಸಿದ. ಈ ವೇಳೆ ಪೊಲೀಸ್ ಕಮಾಂಡೋಗಳು ಕ್ರೀಡಾಂಗಣಕ್ಕೆ ಪ್ರವೇಶಿಸಿ ಆತನನ್ನು ಹೊರಗೆ ಕರೆದುಕೊಂಡು ಹೋದರು.

ದೆಹಲಿ ಮೆಟ್ರೋದಿಂದಲೇ ವಿರಾಟ್‌ ಪರ ಘೋಷಣೆಗಳು ಮೊಳಗಿದವು. ವಿರಾಟ್‌ ಮಾತ್ರವಲ್ಲದೆ ಆರ್‌ಸಿಬಿ ಪರವೂ ಘೋಷಣೆಗಳು ಕೇಳಿಬಂದವು. ಕೊಹ್ಲಿ ಅಭ್ಯಾಸ ಮಾಡುವಾಗಲೂ ಕ್ರೀಡಾಂಗಣದ ತುಂಬೆಲ್ಲಾ 'ಕೊಹ್ಲಿ, ಕೊಹ್ಲಿ' ಘೋಷಣೆಗಳು ಕೇಳಿಬಂದವು.‌

ಉಚಿತ ಪ್ರವೇಶ

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುತ್ತಾರೆ. ಇದೇ ಸ್ಟೇಡಿಯಂನಲ್ಲಿ ಕೊಹ್ಲಿ ಈ ಹಿಂದೆ ಹಲವು ಪಂದ್ಯಗಳನ್ನಾಡಿದ್ದಾರೆ. ಆದರೆ, ಆ ಸಮಯದಲ್ಲಿ ಇಲ್ಲದ ಕ್ರೇಜ್‌ ಈಗ ಯಾಕೆ ಎಂಬ ಪ್ರಶ್ನೆ ನಿಮಗಿರಬಹುದು. ಕೊಹ್ಲಿ ರಣಜಿ ಟ್ರೋಫಿ ಆಡುತ್ತರುವ ಹಿನ್ನೆಲೆಯಲ್ಲಿ‌ ಈ ಪಂದ್ಯ ನೋಡಲು ಯಾವುದೇ ಟಿಕೆಟ್‌ ಇಲ್ಲ. ಹೀಗಾಗಿ ಫ್ರೀಯಾಗಿ ಪಂದ್ಯ ನೋಡಬಹುದು. ಇಂಥಾ ಅವಕಾಶವನ್ನು ಫ್ಯಾನ್ಸ್‌ ಮಿಸ್‌ ಮಾಡಿಕೊಂಡಿಲ್ಲ. ಉಚಿತವಾಗಿ ಕೊಹ್ಲಿಯನ್ನು ನೋಡುವ ಅವಕಾಶವನ್ನು ಮಿಸ್‌ ಮಾಡಲ್ಲ ಎಂದು ಫ್ಯಾನ್ಸ್‌ ಹೇಳಿಕೊಂಡಿದ್ದಾರೆ.

ಬೆಳಗ್ಗೆ 7 ಗಂಟೆಯಿಂದಲೇ ಪ್ರೇಕ್ಷಕರು ಅರುಣ್ ಜೇಟ್ಲಿ ಕ್ರೀಡಾಂಗಣದ ಗೇಟ್ ಸಂಖ್ಯೆ 16 ಮತ್ತು 17ರ ಹೊರಗೆ ಸಾಲುಗಟ್ಟಿ ನಿಲ್ಲಲು ಶುರು ಮಾಡಿದ್ದಾರೆ. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) ಗೌತಮ್ ಗಂಭೀರ್ ಸ್ಟ್ಯಾಂಡ್‌ನಲ್ಲಿ ಎರಡು ಗೇಟ್‌ಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಿತ್ತು. ಆದರೆ ಬೆಳಗ್ಗೆ 9 ಗಂಟೆಗೆ ಅಭಿಮಾನಿಗಳು ಬ್ಯಾರಿಕೇಡ್‌ಗಳನ್ನು ಮುರಿದು ಒಳನುಗ್ಗಲು ಯತ್ನಿಸಿದರು. ಹೀಗಾಗಿ ಗೇಟ್ ಸಂಖ್ಯೆ 18ನ್ನು ತೆರೆಯಬೇಕಾಯ್ತು.

ಗೌತಮ್ ಗಂಭೀರ್ ಸ್ಟ್ಯಾಂಡ್ ತುಂಬಿದ ನಂತರ ​​ಬಿಷನ್ ಸಿಂಗ್ ಬೇಡಿ ಆಲ್ಕೋವ್ ಅನ್ನು ಕೂಡಾ ತೆರೆಯಬೇಕಾಯಿತು. ತೆರೆದ 10 ನಿಮಿಷಗಳಲ್ಲಿ ಈ ಸ್ಟ್ಯಾಂಡ್‌ ಕೂಡಾ ತುಂಬಿತು. ದೆಹಲಿ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರೂ, ಜನಸಂದಣಿ ಹೆಚ್ಚುತ್ತಲೇ ಇತ್ತು.

ಸ್ಟೇಡಿಯಂ ಹೊರಗೆ ಶೂಗಳ ರಾಶಿ

16ನೇ ಗೇಟ್ ಬಳಿ ಅಭಿಮಾನಿಗಳು ತುಂಬಿದ್ದ ಕಾರಣದಿಂದ ಭದ್ರತಾ ಸಿಬ್ಬಂದಿಗೆ ಜನರನ್ನು ನಿಯಂತ್ರಿಸಲು ಕಷ್ಟವಾಯ್ತು. ದೆಹಲಿ ಪೊಲೀಸರು ಕೂಡಾ ಸ್ಥಳದಲ್ಲಿದ್ದರು. ಈ ನಡುವೆ ಕಾಲ್ತುಳಿತ ಸಂಭವಿಸಿತು. ಐದು ವರ್ಷದ ಮಗುವಿನೊಂದಿಗೆ ದಂಪತಿಗಳು ಬಂದಿದ್ದು, ಮಗು ಕೆಳಗೆ ಬಿದ್ದು ಗಾಯಗೊಂಡಿತು. ಪೊಲೀಸ್ ಬೈಕ್‌ಗೆ ಹಾನಿಯಾಯ್ತು. ಸ್ಟೇಡಿಯಂ ಹೊರಬಾಗದಲ್ಲಿ ಚಪ್ಪಲಿ, ಶೂಗಳು, ಹೆಲ್ಮೆಟ್‌ಗಳು ರಾಶಿ ಬಿದ್ದವು.

ಕಾಲ್ತುಳಿತ, ಕೆಲವರಿಗೆ ಗಾಯ

ಗೇಟ್ 16ರ ಹೊರಗೆ ಜನಸಮೂಹದ ನಡುವೆ ಪರಸ್ಪರ ತಳ್ಳಾಟ ನಡೆಯಿತು. ಒಂದೆರಡು ಅಭಿಮಾನಿಗಳು ಪ್ರವೇಶ ದ್ವಾರದ ಬಳಿ ಬಿದ್ದು ಗಾಯಗೊಂಡರು. ಹಲವರು ತಮ್ಮ ಬೂಟುಗಳನ್ನು ಬಿಟ್ಟು ಹೋದರು. ಈ ಗೊಂದಲದಲ್ಲಿ ಕನಿಷ್ಠ ಮೂರು ಜನರು ಗಾಯಗೊಂಡರು. ಗಾಯಗೊಂಡ ಅಭಿಮಾನಿಗಳಿಗೆ ಡಿಡಿಸಿಎ ಭದ್ರತಾ ಸಿಬ್ಬಂದಿ ಮತ್ತು ಗೇಟ್ ಬಳಿ ಪೊಲೀಸರು ಚಿಕಿತ್ಸೆ ನೀಡಿದರು. ಅಭಿಮಾನಿಗಳಲ್ಲಿ ಒಬ್ಬರಿಗೆ ಕಾಲಿಗೆ ಬ್ಯಾಂಡೇಜ್ ಹಾಕುವ ಅಗತ್ಯ ಬಂತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ವೇಳೆ ಭದ್ರತಾ ಸಿಬ್ಬಂದಿಯೂ ಗಾಯಗೊಂಡರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಬಿಸಿಸಿಐ ಹಾಗೂ ದೆಹಲಿ ಕ್ರಿಕೆಟ್ ಆಡಳಿತಾಧಿಕಾರಿಗಳು ಇಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಹಾಜರಾಗುತ್ತಾರೆ ಎಂಬುದನ್ನು ನಿರೀಕ್ಷಿಸಿರಲಿಲ್ಲ ಎಂಬುದು ಸ್ಪಷ್ಟವಾಯ್ತು.

Whats_app_banner