Flop Test XI: 2024ರ ವರ್ಷದಲ್ಲಿ ವೈಫಲ್ಯ ಅನುಭವಿಸಿದ ಸ್ಟಾರ್​ಗಳ ಟೆಸ್ಟ್​ ಪ್ಲೇಯಿಂಗ್​ 11; ಭಾರತದ ನಾಲ್ವರಿಗೆ ಸ್ಥಾನ
ಕನ್ನಡ ಸುದ್ದಿ  /  ಕ್ರಿಕೆಟ್  /  Flop Test Xi: 2024ರ ವರ್ಷದಲ್ಲಿ ವೈಫಲ್ಯ ಅನುಭವಿಸಿದ ಸ್ಟಾರ್​ಗಳ ಟೆಸ್ಟ್​ ಪ್ಲೇಯಿಂಗ್​ 11; ಭಾರತದ ನಾಲ್ವರಿಗೆ ಸ್ಥಾನ

Flop Test XI: 2024ರ ವರ್ಷದಲ್ಲಿ ವೈಫಲ್ಯ ಅನುಭವಿಸಿದ ಸ್ಟಾರ್​ಗಳ ಟೆಸ್ಟ್​ ಪ್ಲೇಯಿಂಗ್​ 11; ಭಾರತದ ನಾಲ್ವರಿಗೆ ಸ್ಥಾನ

Flop Test XI Of Year 2024: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ಅವರಂತಹ ದೊಡ್ಡ ಆಟಗಾರರು ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಲಿಲ್ಲ. ಅಂತಹ ಆಟಗಾರರ 2024ರ ಟೆಸ್ಟ್ ಪ್ಲೇಯಿಂಗ್​ XI ಹೀಗಿದೆ ನೋಡಿ.

ಬಾಬರ್ ಅಜಮ್, ವಿರಾಟ್ ಕೊಹ್ಲಿ​ ಇನ್; 2024ರ ವರ್ಷದ ಫ್ಲಾಪ್ ಸ್ಟಾರ್​ಗಳ ಟೆಸ್ಟ್​ ಪ್ಲೇಯಿಂಗ್​ XI
ಬಾಬರ್ ಅಜಮ್, ವಿರಾಟ್ ಕೊಹ್ಲಿ​ ಇನ್; 2024ರ ವರ್ಷದ ಫ್ಲಾಪ್ ಸ್ಟಾರ್​ಗಳ ಟೆಸ್ಟ್​ ಪ್ಲೇಯಿಂಗ್​ XI

2024ರ ಕ್ಯಾಲೆಂಡರ್ ವರ್ಷಕ್ಕೆ ಗುಡ್​ಬೈ ಹೇಳುವ ಸಮಯ ಬಂದಿದೆ. ಹೊಸ ವರ್ಷ 2025 ಅನ್ನು ಸ್ವಾಗತಿಸಲು ಸಹ ಸಜ್ಜಾಗಿದ್ದೇವೆ. ಈ ವರ್ಷ ಕ್ರಿಕೆಟ್ ಫ್ಯಾನ್ಸ್​ಗೆ ಭರಪೂರ ಮನರಂಜನೆ ಸಿಕ್ಕಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ಮರಣೀಯ ಗೆಲುವುಗಳ ಜೊತೆಗೆ ಅಚ್ಚರಿ ಮತ್ತು ಆಘಾತಕಾರಿ ಸೋಲುಗಳನ್ನೂ ಕಂಡಿದ್ದೇವೆ. ಅದರಂತೆ ಟೆಸ್ಟ್​​​ನಲ್ಲಿ ಕೆಲ ಆಟಗಾರರು ಅದ್ಭುತ ಪ್ರದರ್ಶನದ ಮೂಲಕ ರಂಜಿಸಿದ್ದರೆ, ಬಹುತೇಕ ಆಟಗಾರರು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ವಿಫಲರಾದರು. ಅಂತಹ 2024ರ ಫ್ಲಾಪ್ ಸ್ಟಾರ್​ಗಳ ಟೆಸ್ಟ್​ ಪ್ಲೇಯಿಂಗ್​ 11 ಇಲ್ಲಿದೆ.

ಈ ವರ್ಷ ಟೆಸ್ಟ್​ ಕ್ರಿಕೆಟ್​​ನಲ್ಲಿ ಹಿರಿಯ ಆಟಗಾರರ ಜೊತೆಗೆ ಯುವಕರ ಸದ್ದು ತುಸು ಜೋರೇ ಇತ್ತು. ಯಶಸ್ವಿ ಜೈಸ್ವಾಲ್ ಸೇರಿದಂತೆ ಬಹುತೇಕ ಮಂದಿ ಅಬ್ಬರಿಸಿ ಬೊಬ್ಬಿರಿದಿದರು. ಆದರ ಹಿರಿಯ ಆಟಗಾರರು ಮಾತ್ರ ತಮ್ಮ ಸಾಮರ್ಥ್ಯಕ್ಕೆ ಮತ್ತು ಅನುಭವಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಹೆಣಗಾಡಿದ್ದು ವಿಪರ್ಯಾಸ. ಬಹುತೇಕ ಸೂಪರ್​ ಸ್ಟಾರ್​ ಆಟಗಾರರೇ ಈ ಬಾರಿ ರನ್ ಗಳಿಸಲು, ವಿಕೆಟ್ ಪಡೆಯಲು ವಿಫಲರಾದರು. ಈ ಪೈಕಿ ಭಾರತದ ನಾಲ್ವರು ಇರುವುದು ವಿಪರ್ಯಾಸ. ಈ ವರ್ಷ ನಿರೀಕ್ಷೆ ಹುಟ್ಟಿಸಿ ನಿರಾಸೆ ಮೂಡಿಸಿದವರು ಯಾರು? ಇಲ್ಲಿದೆ ವಿವರ.

ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ

ಇದು ನೂರು ನೂರಕ್ಕೆ ಸತ್ಯ. ರೋಹಿತ್​, ವಿರಾಟ್ ಕೊಹ್ಲಿ ಮೇಲಿದ್ದ ನಿರೀಕ್ಷೆ ಅಷ್ಟಿಷ್ಟಲ್ಲ. ಟಿ20ಐ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಜೋಡಿ, ಟೆಸ್ಟ್​​​ನಲ್ಲಿ ತಮ್ಮ ಪಾರಮ್ಯ ಮುಂದುವರೆಸುತ್ತಾರೆ ಎಂದು ಭರವಸೆ ಇಡಲಾಗಿತ್ತು. ಆದರೆ ಆಗಿದ್ದೇ ಬೇರೆ. ರೋಹಿತ್​ ಈ ವರ್ಷ 14 ಟೆಸ್ಟ್​​, 25 ಇನ್ನಿಂಗ್ಸ್​​ಗಳಲ್ಲಿ 25.41ರ ಬ್ಯಾಟಿಂಗ್ ಸರಾಸರಿಯಲ್ಲಿ ಗಳಿಸಿದ್ದು ಕೇವಲ 610 ರನ್. ಕೊಹ್ಲಿ ಮೇಲಿನ ನಿರೀಕ್ಷೆ ರೋಹಿತ್​​ಗಿಂತ ತುಸು ಜಾಸ್ತಿನೇ ಇತ್ತು. ಆದರೆ 10 ಟೆಸ್ಟ್​, 18 ಇನ್ನಿಂಗ್ಸ್​ಗಳಲ್ಲಿ 25.75ರ ಬ್ಯಾಟಿಂಗ್ ಸರಾಸರಿಯಲ್ಲಿ ಗಳಿಸಿರೋದು 412 ರನ್.

ಭಾರತದ ಮತ್ತೊಬ್ಬ ಆಟಗಾರ ಮೊಹಮ್ಮದ್ ಸಿರಾಜ್. ಅತ್ಯಲ್ಪ ಅವಧಿಯಲ್ಲೇ ಟೆಸ್ಟ್​ ಕ್ರಿಕೆಟ್​ನಲ್ಲಿ ಸಂಚಲನ ಮೂಡಿಸಿದ್ದ ಸಿರಾಜ್ ಪಾಲಿಗೆ ಈ ವರ್ಷ ಅತ್ಯಂತ ಕೆಟ್ಟ ವರ್ಷವಾಗಿದೆ. 2024ರಲ್ಲಿ 13 ಪಂದ್ಯ, 24 ಇನ್ನಿಂಗ್ಸ್​​ಗಳಲ್ಲಿ ಪಡೆದಿರುವ ವಿಕೆಟ್​ಗಳ ಸಂಖ್ಯೆ 32. ಹಾಗೆಯೇ ರಿಷಭ್ ಪಂತ್ ಕೂಡ ಈ ಪಟ್ಟಿಗೆ ಸೇರಿದ್ದಾರೆ. ಅವರು ಈ ವರ್ಷ 9 ಟೆಸ್ಟ್​​​, 16 ಇನ್ನಿಂಗ್ಸ್​​​ಗಳಲ್ಲಿ 546 ರನ್ ಗಳಿಸಿದ್ದಾರೆ. ಪ್ರಸ್ತುತ ಆಸೀಸ್ ಸರಣಿಯಲ್ಲೂ ಈ ನಾಲ್ವರು ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಫ್ಲಾಪ್​ ಸ್ಟಾರ್​ಗಳ ಪ್ಲೇಯಿಂಗ್ 11ನಲ್ಲಿ ಪಂತ್ ಅವರೇ ವಿಕೆಟ್ ಕೀಪರ್​.

ಇವರ ಜೊತೆಗೆ ಆಸ್ಟ್ರೇಲಿಯಾದ ಉಸ್ಮಾನ್ ಖವಾಜ, ನಾಥನ್ ಲಿಯಾನ್ ಸಹ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಖವಾಜ 9 ಟೆಸ್ಟ್​, 17 ಇನ್ನಿಂಗ್ಸ್​ಗಳಲ್ಲಿ 394 ರನ್ ಗಳಿಸಿದ್ದರೆ, ಲಿಯಾನ್ 9 ಟೆಸ್ಟ್​​, 15 ಇನ್ನಿಂಗ್ಸ್​​ಗಳಲ್ಲಿ ಪಡೆದ ವಿಕೆಟ್​ಗಳ ಸಂಖ್ಯೆ 29 ಅಷ್ಟೆ. ಪಾಕಿಸ್ತಾನ ಬಾಬರ್ ಅಜಮ್​ ಈ ವರ್ಷ 5 ಪಂದ್ಯಗಳಲ್ಲಿ 198 ರನ್ ಗಳಿಸುವ ಮೂಲಕ ಕೆಟ್ಟ ಪ್ರದರ್ಶನ ನೀಡಿದ್ದಾರೆ. ಇಂಗ್ಲೆಂಡ್​ನ ನಾಯಕ ಬೆನ್​ ಸ್ಟೋಕ್ಸ್​, ಒಲಿ ಪೋಪ್​ ಫ್ಲಾಪ್​ ಸ್ಟಾರ್​ಗಳಾಗಿದ್ದಾರೆ. ಸ್ಟೋಕ್ಸ್ 13 ಪಂದ್ಯ, 23 ಇನ್ನಿಂಗ್ಸ್​​ಗಳಲ್ಲಿ 602 ರನ್ ಗಳಿಸಿದ್ದಾರೆ. ಜತೆಗೆ ನಾಯಕನಾಗಿಯೂ ಸತತ ಸೋಲುಗಳೊಂದಿಗೆ ವೈಫಲ್ಯ ಕಂಡಿದ್ದಾರೆ.

ನ್ಯೂಜಿಲೆಂಡ್​​ನ ಟಾಮ್ ಲಾಥಮ್, ಟಿಮ್ ಸೌಥಿ, ಬಾಂಗ್ಲಾದೇಶದ ಶಕೀಬ್ ಅಲ್ ಅಸನ್​ ಸಹ ಈ ವರ್ಷ ಕಳಪೆ ಪ್ರದರ್ಶನ ನೀಡಿದ್ದಾರೆ. ಲಾಥಮ್ 24 ಇನ್ನಿಂಗ್ಸ್​​ಗಳಲ್ಲಿ 633 ರನ್ ಸಿಡಿಸಿದ್ದರೆ, ನಿವೃತ್ತಿ ಘೋಷಿಸಿದ ಸೌಥಿ 21 ಇನ್ನಿಂಗ್ಸ್​​ಗಳಲ್ಲಿ ಪಡೆದಿರುವ ವಿಕೆಟ್ ಸಂಖ್ಯೆ 17 ಮಾತ್ರ. ಮತ್ತೊಂದೆಡೆ ಆಲ್​​ರೌಂಡರ್ ಶಕೀಬ್​ 5 ಟೆಸ್ಟ್​​ಗಳಲ್ಲಿ 36 ರನ್, ಕೇವಲ 16 ವಿಕೆಟ್ ಪಡೆದಿದ್ದಾರೆ. ಇವರೆಲ್ಲರ ಮೇಲೂ ಈ ಬಾರಿ ನಿರೀಕ್ಷೆ ಇತ್ತು. ಆದರೆ ಯಾರೂ ಸಹ ಅದಕ್ಕೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಈ ಫ್ಲಾಪ್​ ಸ್ಟಾರ್​ಗಳ ತಂಡದ ನಾಯಕ ಬೆನ್​ಸ್ಟೋಕ್ಸ್. ಏಕೆಂದರೆ ಅವರೇ ಹೆಚ್ಚು ಸೋಲು ಕಂಡಿದ್ದಾರೆ. ಭಾರತದ ಆಟಗಾರರಿಗೆ ಮತ್ತು ಬಾಬರ್ ಅಜಮ್​ಗೆ ಈ ವರ್ಷ ಇನ್ನೂ ಒಂದು ಇನ್ನಿಂಗ್ಸ್ ಆಡುವ ಅವಕಾಶ ಇದೆ.

2024ರ ಫ್ಲಾಪ್ ಟೆಸ್ಟ್ ಪ್ಲೇಯಿಂಗ್ XI

ಆರಂಭಿಕರು: ರೋಹಿತ್​ ಶರ್ಮಾ, ಉಸ್ಮಾನ್ ಖವಾಜ

ಮಧ್ಯಮ ಕ್ರಮಾಂಕ: ಟಾಮ್ ಲಾಥಮ್, ವಿರಾಟ್ ಕೊಹ್ಲಿ, ಬಾಬರ್​ ಅಜಮ್.

ವಿಕೆಟ್ ಕೀಪರ್​: ರಿಷಭ್ ಪಂತ್

ಆಲ್​ರೌಂಡರ್ಸ್: ಬೆನ್​ಸ್ಟೋಕ್ಸ್ (ನಾಯಕ), ಶಕೀಬ್ ಅಲ್ ಹಸನ್.

ಬೌಲರ್ಸ್: ಮೊಹಮ್ಮದ್ ಸಿರಾಜ್, ಟಿಮ್ ಸೌಥಿ, ನಾಥನ್ ಲಿಯಾನ್.

Whats_app_banner