ಕನ್ನಡ ಸುದ್ದಿ  /  ಕ್ರಿಕೆಟ್  /  ಅನುಭವಿ ಆಟಗಾರನಿಗೆ ಫಾರ್ಮ್ ಸಮಸ್ಯೆಯೇ ಅಲ್ಲ, ಫೈನಲ್‌ನಲ್ಲೂ ಕೊಹ್ಲಿಯೇ ಇನ್ನಿಂಗ್ಸ್ ಆರಂಭಿಸ್ತಾರೆ; ವಿರಾಟ್‌ಗೆ ರೋಹಿತ್‌ ಬೆಂಬಲ

ಅನುಭವಿ ಆಟಗಾರನಿಗೆ ಫಾರ್ಮ್ ಸಮಸ್ಯೆಯೇ ಅಲ್ಲ, ಫೈನಲ್‌ನಲ್ಲೂ ಕೊಹ್ಲಿಯೇ ಇನ್ನಿಂಗ್ಸ್ ಆರಂಭಿಸ್ತಾರೆ; ವಿರಾಟ್‌ಗೆ ರೋಹಿತ್‌ ಬೆಂಬಲ

ಟಿ20 ವಿಶ್ವಕಪ್ ಆರಂಭವಾದಾಗಿನಿಂದ ವಿರಾಟ್ ಕೊಹ್ಲಿ ಫಾರ್ಮ್ ಕಳಪೆಯಾಗಿದೆ. ಭಾರತದ ಸೆಮಿಫೈನಲ್ ಗೆಲುವಿನ ನಂತರ ವಿರಾಟ್‌ ಫಾರ್ಮ್‌ ಕುರಿತು ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ. ಫಾರ್ಮ್‌ ಸಮಸ್ಯೆಯೇ ಅಲ್ಲ ಎಂದು ಹೇಳಿದ್ದಾರೆ.

ಫೈನಲ್‌ನಲ್ಲೂ ಕೊಹ್ಲಿಯೇ ಇನ್ನಿಂಗ್ಸ್ ಆರಂಭಿಸ್ತಾರೆ; ವಿರಾಟ್‌ಗೆ ರೋಹಿತ್‌ ಬೆಂಬಲ
ಫೈನಲ್‌ನಲ್ಲೂ ಕೊಹ್ಲಿಯೇ ಇನ್ನಿಂಗ್ಸ್ ಆರಂಭಿಸ್ತಾರೆ; ವಿರಾಟ್‌ಗೆ ರೋಹಿತ್‌ ಬೆಂಬಲ (PTI)

ಭಾರತ ಕ್ರಿಕೆಟ್‌ ತಂಡವು ಟಿ20 ವಿಶ್ವಕಪ್‌ ಫೈನಲ್‌ ಪ್ರವೇಶಿಸಿದೆ. ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 68 ರನ್‌ಗಳಿಂದ ಮಣಿಸಿದ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪಂದ್ಯಕ್ಕೆ ಮಳೆ ನಿರಂತರ ಅಡ್ಡಿಪಡಿಸಿದರೂ, ಪಂದ್ಯದಲ್ಲಿ ರೋಹಿತ್‌ ಶರ್ಮಾ ಪಡೆ ಆರಂಭದಿಂದಲೂ ಪ್ರಾಬಲ್ಯ ಸಾಧಿಸಿತು. ನಾಯಕನಾಟವಾಡಿದ ರೋಹಿತ್ ಶರ್ಮಾ 39 ಎಸೆತಗಳಲ್ಲಿ 57 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 47 ರನ್ ಗಳಿಸಿ ಭಾರತಕ್ಕೆ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲು ನೆರವಾದರು. ಭಾರತದ ಬೃಹತ್‌ ಗುರಿಗೆ ಉತ್ತರವಾಗಿ ಇಂಗ್ಲೆಂಡ್ 16.4 ಓವರ್‌ಗಳಲ್ಲಿ ಕೇವಲ 103 ರನ್‌ಗಳಿಗೆ ಆಲೌಟ್ ಆಯ್ತು. ಈ ಗೆಲುವಿನೊಂದಿಗೆ ಭಾರತ ಶನಿವಾರ ಬಾರ್ಬಡೋಸ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ, ಇದೇ ಮೊದಲ ಬಾರಿಗೆ ಫೈನಲ್ ತಲುಪಿದ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.

ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಬಂದರೂ, ಟೂರ್ನಿಯುದ್ದಕ್ಕೂ ಆರಂಭಿಕರಾಗಿ ವಿಫಲರಾಗಿದ್ದ ವಿರಾಟ್ ಕೊಹ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಟೂರ್ನಿಯ ಆರಂಭದಿಂದಲೂ ರನ್‌ ಗಳಿಸಲು ಹೆಣಗಾಡುತ್ತಿರುವ ಅನುಭವಿ ಆಟಗಾರ, ಇದೀಗ ಫೈನಲ್‌ ತಲುಪಿರುವ ಭಾರತಕ್ಕೆ ದೊಡ್ಡ ಕಳವಳವಾಗಿದ್ದಾರೆ. ಗಯಾನಾದಲ್ಲಿ ನಡೆದ ನಿರ್ಣಾಯಕ ಸೆಮಿಫೈನಲ್‌ ಪಂದ್ಯದಲ್ಲಿ ಅವರು ಕೇವಲ 9 ರನ್‌ಗಳಿಗೆ ಔಟಾಗಿ ಮತ್ತೊಮ್ಮೆ ಒಂದಂಕಿ ಮೊತ್ತಕ್ಕೆ ನಿರ್ಗಮಿಸಿದರು.

ಕೊಹ್ಲಿ ಫಾರ್ಮ್‌ ಬಗ್ಗೆ ನಮಗೆ ಚಿಂತೆಯಿಲ್ಲ

ಪಂದ್ಯಾವಳಿಯಲ್ಲಿ ಕೊಹ್ಲಿ ರೋಹಿತ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. 2024ರ ಟಿ20 ವಿಶ್ವಕಪ್‌ಗೂ ಮುನ್ನ ಅವರು ಟಿ20 ವೃತ್ತಿಜೀವನದಲ್ಲಿ ಒಮ್ಮೆ ಮಾತ್ರ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಐಪಿಎಲ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಓಪನರ್‌ ಆಗಿ ಉತ್ತಮ ಸಾಧನೆ ಮಾಡಿದ್ದಾರೆ. ಇದು ಈಗ ವರ್ಕೌಟ್‌ ಆಗುತ್ತಿಲ್ಲ. ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಕೊಹ್ಲಿ ಫಾರ್ಮ್ ಕುರಿತು ಭಾರತೀಯ ನಾಯಕ ರೋಹಿತ್‌ ಶರ್ಮಾ ಬಳಿ ಕೇಳಲಾಯಿತು. ಆದರೆ ರೋಹಿತ್ ಅವರು ಸ್ಟಾರ್ ಬ್ಯಾಟ್ಸ್ಮನ್ ಫಾರ್ಮ್ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ ಎಂದು ಹೇಳಿದರು.

ಟ್ರೆಂಡಿಂಗ್​ ಸುದ್ದಿ

ಬಾರ್ಬಡೋಸ್‌ನಲ್ಲಿ ಜೂನ್ 29ರ ಶನಿವಾರ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ರೋಹಿತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಭಾರತದ ಅನುಭವಿ ಬ್ಯಾಟರ್‌ಗೆ ಫಾರ್ಮ್ ಮುಖ್ಯವಲ್ಲ ಎಂದು ಒತ್ತಿ ಹೇಳಿದರು.

“ಅವರು ಉತ್ತಮ ಗುಣಮಟ್ಟದ ಆಟಗಾರ. ಅವರು ಅದನ್ನು ಉಳಿಸಿಕೊಳ್ಳುತ್ತಾರೆ. ಇಂಥಾ ಪ್ರಮುಖ ಪಂದ್ಯಗಳಲ್ಲಿ ಅವರ ಆಟದ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಕೊಹ್ಲಿಗೆ ಫಾರ್ಮ್ ಎಂದಿಗೂ ಸಮಸ್ಯೆಯಾಗಿಲ್ಲ. ಏಕೆಂದರೆ 15 ವರ್ಷಗಳಿಂದ ಕ್ರಿಕೆಟ್ ಆಡುತ್ತಾ ಬಂದಿರುವ ಅನುಭವಿ ಆಟಗಾರರಿಗೆ ಫಾರ್ಮ್‌ ಅನ್ನೋದು ಸಮಸ್ಯೆಯಲ್ಲ. ಮೈದಾನದಲ್ಲಿ ಅವರು ಚೆನ್ನಾಗಿ ಕಾಣುತ್ತಿದ್ದಾರೆ. ಅವರಲ್ಲಿ ಇರಾದೆ ಇದೆ. ಬಹುಶಃ ಅವರು ಅದನ್ನು ಫೈನಲ್‌ ಪಂದ್ಯಕ್ಕಾಗಿ ಉಳಿತಾಯ ಮಾಡುತ್ತಿದ್ದಾರೆ,” ಎಂದು ರೋಹಿತ್ ಪಂದ್ಯದ ನಂತರದ ಸಂದರ್ಶನದಲ್ಲಿ ತಿಳಿಸಿದರು.

ಇದೇ ವೇಳೆ ಫೈನಲ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿಯವರನ್ನು ಆಡಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರೋಹಿತ್‌, ಖಂಡಿತವಾಗಿ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ ಎಂದು ಹೇಳಿದ್ದಾರೆ.

ಕಳೆದ 11 ವರ್ಷಗಳಿಂದ ಐಸಿಸಿ ಟ್ರೋಫಿ ಬರ ಎದುರಿಸುತ್ತಿರುವ ಭಾರತ, ಕೊನೆಗೂ ಮತ್ತೊಂದು ಫೈನಲ್‌ ಪ್ರವೇಶಿಸಿದೆ. ಐಸಿಸಿ ವಿಶ್ವಕಪ್‌ಗಳಲ್ಲಿ ಇದೇ ಮೊದಲ ಬಾರಿಗೆ ಫೈನಲ್‌ ಆಡುತ್ತಿರುವ ದಕ್ಷಿಣ ಆಫ್ರಿಕಾಗೆ ಸವಾಲೆಸುಯುತ್ತಿದೆ. 2014ರ ಆವೃತ್ತಿಯಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿದ್ದ ಭಾರತ ತಂಡ ಇದು ಮೂರನೇ ಬಾರಿ ಫೈನಲ್ ಆಡುತ್ತಿದೆ.