ಆತ 24 ಕ್ಯಾರೆಟ್ ಚಿನ್ನ; ರೋಹಿತ್ ಬಳಿಕ ರಿಷಬ್ ಪಂತ್ ಭಾರತ ಟೆಸ್ಟ್ ನಾಯಕ ಆಗಬಹುದು ಎಂದ ಆಕಾಶ್ ಚೋಪ್ರಾ
Aakash Chopra on Rishabh Pant: ಭಾರತ ಟೆಸ್ಟ್ ಕ್ರಿಕೆಟ್‌ನ ಸುದೀರ್ಘ ಭವಿಷ್ಯವನ್ನು ನೋಡಿ ಹೇಳುವುದಾದರೆ ರಿಷಬ್ ಪಂತ್ ಟೀಮ್ ಇಂಡಿಯಾ ನಾಯಕ ಆಗಬಹುದು. ಒಬ್ಬ ಟೆಸ್ಟ್ ಕ್ರಿಕೆಟಿಗನಾಗಿ ರಿಷಬ್ ಪಂತ್ 24 ಕ್ಯಾರೆಟ್ ಚಿನ್ನ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಿಂದ ಹಿಂದೆ ಸರಿದ ಬಳಿಕ, ಹಿರಿಯ ಮತ್ತು ಅನುಭವಿ ಆಟಗಾರ ರೋಹಿತ್ ಶರ್ಮಾಗೆ ಟೀಮ್ ಇಂಡಿಯಾ ನಾಯಕತ್ವದ ಪಟ್ಟಾಭಿಷೇಕ ಮಾಡಲಾಯ್ತು. ಸದ್ಯ ಚುಟುಕು ಸ್ವರೂಪದ ನಾಯಕತ್ವದಿಂದ ಹಿಟ್‌ಮ್ಯಾನ್ ಅವರನ್ನು ಬಹುತೇಕ ಹೊರಗಿಡಲಾಗಿದೆ. ಆದರೆ, ಟೆಸ್ಟ್ ತಂಡವನ್ನು ರೋಹಿತ್ ಮುನ್ನಡೆಸುತ್ತಿದ್ದಾರೆ. ಮುಂದೆ ಹೆಚ್ಚು ವರ್ಷಗಳ ಕಾಲ ಹಿಟ್‌ಮ್ಯಾನ್ ಭಾರತ ಕ್ರಿಕೆಟ್ ತಂಡದ ಪರ ಆಡುವುದು ಅನುಮಾನ. ಹೀಗಾಗಿ ಮುಂದಿನ ಟೆಸ್ಟ್ ನಾಯಕ ಯಾರು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ರೋಹಿತ್ ಶರ್ಮಾ ಬಳಿಕ ರಿಷಬ್ ಪಂತ್ (Rishabh Pant) ಭಾರತದ ಮುಂದಿನ ಟೆಸ್ಟ್ ನಾಯಕರಾಗಬಹುದು ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ (Aakash Chopra) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ಪಂತ್, ಇಲ್ಲಿಯವರೆಗೆ ಕೇವಲ ಐದು ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಅತ್ತ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿದ ಅನುಭವ ಹೊಂದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿಯೂ ಭಾರತ ತಂಡವನ್ನು ರೋಹಿತ್ ಮುನ್ನಡೆಸಲಿದ್ದಾರೆ. ಆದರೆ, ವೈಟ್ ಬಾಲ್ ಸರಣಿಯಿಂದ ವಿಶ್ರಾಂತಿ ಕೋರಿದ ಹಿನ್ನೆಲೆಯಲ್ಲಿ, ಹಿಟ್‌ಮ್ಯಾನ್ ಟಿ20 ಮತ್ತು ಏಕದಿನ ಸರಣಿಯಲ್ಲಿ ಆಡುತ್ತಿಲ್ಲ.
ಇದನ್ನೂ ಓದಿ | ಕ್ಯಾಪ್ಟನ್ಸಿಯಿಂದ ಕೊಹ್ಲಿಯನ್ನು ನಾನು ವಜಾಗೊಳಿಸಿಲ್ಲ; ಕಾರಣ ಬಹಿರಂಗಪಡಿಸಿ ಸ್ಪಷ್ಟನೆ ನೀಡಿದ ಗಂಗೂಲಿ
ಕಳೆದ ಡಿಸೆಂಬರ್‌ನಲ್ಲಿ (2022) ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಪಂತ್, ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಸುಮಾರು ಒಂದು ವರ್ಷದಿಂದ ಅವರು ವಿಶ್ರಾಂತಿಯಲ್ಲಿದ್ದಾರೆ. ಇದೇ ಕಾರಣದಿಂದಾಗಿ ಅವರನ್ನು ಭಾರತ ತಂಡಕ್ಕೆ ಪರಿಗಣಿಸಲಾಗಿಲ್ಲ.
24 ಕ್ಯಾರೆಟ್ ಚಿನ್ನ
“ನಾನು ದೀರ್ಘಾವಧಿಯನ್ನು ಮುಂದಿಟ್ಟುಕೊಂಡು ಮಾತನಾಡುತ್ತಿದ್ದೇನೆ. ಶುಭ್ಮನ್ ಗಿಲ್ ಟೆಸ್ಟ್ ನಾಯಕ ಆಗಬಹುದು. ಆದರೆ ನಾನು ಈಗ ಅದು ಹೇಳುವುದಿಲ್ಲ. ಸುದೀರ್ಘ ಭವಿಷ್ಯವನ್ನು ನೋಡಿ ಹೇಳುವುದಾದರೆ ರಿಷಬ್ ಪಂತ್ ನಾಯಕ ಆಗಬಹುದು. ಒಬ್ಬ ಟೆಸ್ಟ್ ಕ್ರಿಕೆಟಿಗನಾಗಿ ರಿಷಬ್ ಪಂತ್ 24 ಕ್ಯಾರೆಟ್ ಚಿನ್ನ,” ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಕಳೆದ ವರ್ಷ ಐಸಿಸಿ ವರ್ಷದ ಪುರುಷರ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಭಾರತದ ಏಕೈಕ ಕ್ರಿಕೆಟಿಗ ಪಂತ್. ಕಳೆದ ವರ್ಷ ಗಮನಾರ್ಹ ಪ್ರದರ್ಶನ ನೀಡಿದ್ದ ಅವರು, 12 ಇನ್ನಿಂಗ್ಸ್‌ಗಳಲ್ಲಿ 61.81 ಸರಾಸರಿಯಲ್ಲಿ 680 ರನ್ ಗಳಿಸಿದ್ದರು. ಅಲ್ಲದೆ ಟೆಸ್ಟ್‌ನಲ್ಲಿ 21 ಸಿಕ್ಸರ್‌ಗಳನ್ನು ಬಾರಿಸಿ ಗಮನ ಸೆಳೆದಿದ್ದರು. ಎರಡು ಶತಕ ಮತ್ತು ನಾಲ್ಕು ಅರ್ಧ ಶತಕಗಳೊಂದಿಗೆ ಸ್ಥಿರ ಪ್ರದರ್ಶನ ನೀಡಿದ್ದರು.
ಇದನ್ನೂ ಓದಿ | ಇವತ್ತು ನಿನ್ನನ್ನು ಬಿಡಲ್ಲ ಎಂದಿದ್ದೆ; ಕೊಹ್ಲಿಗೆ ಸ್ಲೆಡ್ಜ್ ಮಾಡಿದ್ದ ಘಟನೆ ನೆನೆದ ಪಾಕ್ ಆಟಗಾರ
“ಶುಭ್ಮನ್ ಮತ್ತು ಗಿಲ್ ಇಬ್ಬರೂ ಆಗಬಹುದು ಅಥವಾ ಪಂತ್ ಒಬ್ಬನೇ ಆಗಿರಬಹುದು. ಆತ ಪಂದ್ಯವನ್ನೇ ಬದಲಾಯಿಸಬಲ್ಲ ಆಟಗಾರ. ಹೀಗಾಗಿ ರೋಹಿತ್ ಟೆಸ್ಟ್ ಕ್ರಿಕೆಟ್‌ಗ್ ಗುಡ್ ಬೈ ಹೇಳಿದ ಬಳಿಕ ನೀವು ಬೇರೆಯವರನ್ನು ನಾಯಕನನ್ನಾಗಿ ನೇಮಿಸಬಹುದು ಎಂದಾದರೆ, ನಾನು ಈ ಇಬ್ಬರಲ್ಲಿ ಒಬ್ಬರ ಕಡೆಗೆ ನೋಡುತ್ತೇನೆ” ಎಂದು ಚೋಪ್ರಾ ಹೇಳಿದ್ದಾರೆ.