2024ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್-ವಿರಾಟ್ ಇನ್ನಿಂಗ್ಸ್ ತೆರೆಯಲಿ; ಆಕಾಶ್ ಚೋಪ್ರಾ ಸಲಹೆ
ಕನ್ನಡ ಸುದ್ದಿ  /  ಕ್ರಿಕೆಟ್  /  2024ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್-ವಿರಾಟ್ ಇನ್ನಿಂಗ್ಸ್ ತೆರೆಯಲಿ; ಆಕಾಶ್ ಚೋಪ್ರಾ ಸಲಹೆ

2024ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್-ವಿರಾಟ್ ಇನ್ನಿಂಗ್ಸ್ ತೆರೆಯಲಿ; ಆಕಾಶ್ ಚೋಪ್ರಾ ಸಲಹೆ

Aakash Chopra: ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರತದ ಇನ್ನಿಂಗ್ಸ್‌ ಓಪನಿಂಗ್ ಮಾಡಬೇಕು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (PTI)

ಏಕದಿನ ವಿಶ್ವಕಪ್‌ ಮುಗಿದ ನಂತರ ಕ್ರಿಕೆಟ್ ಆಡುವ ಎಲ್ಲಾ ದೇಶಗಳು 2024ರಲ್ಲಿ ನಡೆಯಲಿರುವ ಪ್ರಮುಖ ಟೂರ್ನಮೆಂಟ್‌ ಟಿ20 ವಿಶ್ವಕಪ್‌ ಕಡೆ ಗಮನ ಹರಿಸಿವೆ. ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿರುವ ಐಸಿಸಿ ಟೂರ್ನಮೆಂಟ್‌ನಲ್ಲಿ ಆಡಲು ಭಾರತ ತಂಡ ಕೂಡಾ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಟೀಮ್‌ ಇಂಡಿಯಾದ ಹಿರಿಯ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ತಂಡದ ಪರ ಇನ್ನಿಂಗ್ಸ್‌ ಓಪನಿಂಗ್ ಮಾಡಬೇಕು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ (Aakash Chopra) ಅಭಿಪ್ರಾಯಪಟ್ಟಿದ್ದಾರೆ.

ಈ ಇಬ್ಬರು ಅನುಭವಿ ಕ್ರಿಕೆಟಿಗರು ವರ್ಷದ ನಂತರ ಚುಟುಕು ಸ್ವರೂಪಕ್ಕೆ ಮರಳಿದ್ದಾರೆ.‌ ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ರೋಹಿತ್‌ ಹಾಗೂ ಕೊಹ್ಲಿ ಆಡುತ್ತಿದ್ದಾರೆ. ವಿಂಡೀಸ್‌ ಹಾಗೂ ಅಮೆರಿಕದಲ್ಲಿ ವಿಶ್ವಕಪ್‌ ಟೂರ್ನಿ ನಡೆಯುತ್ತಿರುವುದರಿಂದ ಇನಿಂಗ್ಸ್‌ನ ಮೊದಲ ಆರು ಓವರ್‌ಗಳಲ್ಲಿ ರನ್ ಗಳಿಸಲು ಉತ್ತಮ ಅವಕಾಶ ಇರುತ್ತದೆ ಎಂಬುದು ಚೋಪ್ರಾ ಅಭಿಪ್ರಾಯ. ಹೀಗಾಗಿ ಅನುಭವಿ ಆಟಗಾರರು ಇನ್ನಿಂಗ್ಸ್ ಓಪನಿಂಗ್‌ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | ಬಾರಿಸಿದ್ದು 137 ರನ್, ಬೌಂಡರಿಗಳಿಂದ ಬಂದದ್ದೇ 116 ರನ್; ಪಾಕ್ ವಿರುದ್ಧ ಫಿನ್ ಅಲೆನ್ ದಾಖಲೆಯ ಶತಕ

2022ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡವು ಹೀನಾಯವಾಗಿ ಸೋತು ನಿರ್ಗಮಿಸಿತ್ತು. ಅದಾದ ನಂತರ ಒಂದು ವರ್ಷ ರೋಹಿತ್ ಮತ್ತು ವಿರಾಟ್ ಟಿ20 ಪಂದ್ಯದಲ್ಲಿ ಆಡಿರಲಿಲ್ಲ. ಇದೇ ಮೊದಲ ಬಾರಿಗೆ ಇಬ್ಬರೂ ಜೊತೆಯಾಗಿ ಅಫ್ಘಾನಿಸ್ತಾನ ವಿರುದ್ಧ ಆಡುತ್ತಿದ್ದಾರೆ.

ವಿರಾಟ್‌ ಸ್ಟ್ರೈಕ್‌ ರೇಟ್‌ ಕಾಯ್ದುಕೊಳ್ಳುತ್ತಾರೆ

ಜೂನ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೂ ಮುಂಚಿತವಾಗಿ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಚೋಪ್ರಾ, ವಿರಾಟ್ ತಮ್ಮ ಇನ್ನಿಂಗ್ಸ್‌ನಲ್ಲಿ ಸಮಯವನ್ನು ತೆಗೆದುಕೊಂಡು ಎಚ್ಚರಿಕೆಯ ಆರಂಭ ನೀಡುತ್ತಾರೆ. ನಂತರ ಪ್ರಾಬಲ್ಯ ಸಾಧಿಸುವ ಹಂತಕ್ಕೆ ಬಂದು ಚೆನ್ನಾಗಿ ಸ್ಕೋರ್ ಮಾಡುತ್ತಾರೆ ಎಂದು ಆಕಾಶ್ ಹೇಳಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ, ಅವರು ಪವರ್‌ಪ್ಲೇನಲ್ಲಿ ಉತ್ತಮ ಸ್ಟ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ಹೇಳಿದರು.

“ವಿರಾಟ್ ಕೊಹ್ಲಿ ಆಟದ ಶೈಲಿಯನ್ನು ನೋಡಿದರೆ, ಅವರು ಕ್ರೀಸ್‌ಕಚ್ಚಿದ ಮೇಲೆ ಸಾಕಷ್ಟು ರನ್ ಗಳಿಸುತ್ತಾರೆ. ಟಿ20ಗಳಲ್ಲಿಯೂ ಸಹ ಅವರು ಕೆಲವೊಮ್ಮೆ ಮೊದಲ ಎಸೆತದಲ್ಲೇ ಬೌಂಡರಿ ಮತ್ತು ಸಿಕ್ಸರ್‌ ಹೊಡೆಯಲು ಪ್ರಾರಂಭಿಸುತ್ತಾರೆ. ಅವರು ಆಡಲು ಸಮಯ ತೆಗೆದುಕೊಳ್ಳುತ್ತಾರೆ ಹೌದು. 150 ಸ್ಟ್ರೈಕ್ ರೇಟ್‌ನಲ್ಲಿ ಆಡಬೇಕು ಎಂದರೆ ಅದನ್ನು ಪವರ್‌ಪ್ಲೇನಲ್ಲಿ ಮಾಡುತ್ತಾರೆ” ಎಂದು ಆಕಾಶ್ ಹೇಳಿದ್ದಾರೆ.

ಈಗಿನಿಂದಲೇ ಟೆಂಪ್ಲೇಟ್ ಅನುಸರಿಸಿ

“ನ್ಯೂಯಾರ್ಕ್ ಅಥವಾ ವೆಸ್ಟ್ ಇಂಡೀಸ್‌ನ ಪಿಚ್‌ಗಳಲ್ಲಿ ಮೊದಲ ಆರು ಓವರ್‌ಗಳಲ್ಲಿ ಹೆಚ್ಚು ರನ್ ಗಳಿಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆರಂಭದಿಂದಲೇ ಒಟ್ಟಿಗೆ ಆಡಬೇಕೆಂದು ನಾವು ಬಯಸುತ್ತೇವೆ. ಆ ಟೆಂಪ್ಲೇಟ್ ಅನ್ನು ಅನುಸರಿಸುವುದಿದ್ದರೆ ಈಗಿನಿಂದಲೇ ಅದನ್ನು ಪ್ರಾರಂಭಿಸಿ,” ಎಂದು ಚೋಪ್ರಾ ಸಲಹೆ ನೀಡಿದ್ದಾರೆ.

ಇದನ್ನೂ ಓದಿ | ಒಂದು ದಿನ ಗಿಲ್ ಸಹ ಗುಜರಾತ್ ತೊರೆಯಬಹುದು; ಹಾರ್ದಿಕ್ ಮುಂಬೈ ಸೇರಿದ ಬಗ್ಗೆ ಶಮಿ ಪ್ರತಿಕ್ರಿಯೆ

ಇದೇ ವೇಳೆ ಟಿ20ಯ ನಂಬರ್‌ ವನ್‌ ಬ್ಯಾಟ್‌ ಸೂರ್ಯಕುಮಾರ್‌ ಯಾದವ್‌ ಕುರಿತಾಗಿಯೂ ಚೋಪ್ರಾ ಮಾತನಾಡಿದ್ದಾರೆ.‌ “ನಾನು ಸೂರ್ಯಕುಮಾರ್ ಯಾದವ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಲು ಬಯಸುವುದಿಲ್ಲ. ನನಗೆ ಅವರು ಆಡಬೇಕು. ಸೂರ್ಯಕುಮಾರ್ ಯಾದವ್ ಭಾರತದ ನಂಬರ್ ವನ್ ಟಿ20 ಬ್ಯಾಟರ್. ಹಾಗಾಗಿ ಅವರು 3ನೇ ಕ್ರಮಾಂಕದಲ್ಲಿ ಆಡಬೇಕೆಂದು ನಾನು ಬಯಸುತ್ತೇನೆ. ಅವರು ತಮ್ಮ ಆಟವನ್ನು ಆಡಲು ಅವರಿಗೆ ಸಮಯವನ್ನು ನೀಡಲು ನಾನು ಬಯಸುತ್ತೇನೆ” ಎಂದು ಚೋಪ್ರಾ ಹೇಳಿದ್ದಾರೆ.

Whats_app_banner