ಪಾಕಿಸ್ತಾನದ ಪಿಎಸ್ಎಲ್ ಬದಲಿಗೆ 'ಐಪಿಎಲ್' ಎಂದು ಹೇಳಿದ ರಮೀಜ್ ರಾಜಾ; ಲೈವ್‌ನಲ್ಲೇ ಎಡವಟ್ಟು -ವಿಡಿಯೋ
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ನಿರೂಪಕ ರಮೀಜ್ ರಾಜಾ, ಬಾಯ್ತಪ್ಪಿ ಪಿಎಸ್ಎಲ್ ಅನ್ನು 'ಐಪಿಎಲ್' ಎಂದು ಕರೆದಿದ್ದಾರೆ. ಈ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದೆ. ಆಕಸ್ಮಿಕವಾಗಿ ಹೇಳಿದರೂ, ಐಪಿಎಲ್ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ.

ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಐಪಿಎಲ್. ಐಪಿಎಲ್‌ಗೆ ಪೈಪೋಟಿ ನೀಡಲು ವಿಶ್ವದಲ್ಲಿ ಹಲವು ಲೀಗ್‌ಗಳು ಆರಂಭವಾಗಿವೆ. ಆದರೆ, ಮಿಲಿಯನ್ ಡಾಲರ್ ಟೂರ್ನಿಯಾಗಿರುವ ಐಪಿಎಲ್‌ಗೆ ಸಮನಾಗಿ ಸ್ಪರ್ಧೆಯೊಡ್ಡುವ ಮತ್ತೊಂದು ಟೂರ್ನಿ ಇಲ್ಲ. ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿರುವಾಗಲೇ, ಅತ್ತ ನೆರೆಯ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಟೂರ್ನಿ ನಡೆಯುತ್ತಿದೆ. ಉಭಯ ದೇಶಗಳ ಲೀಗ್ ಪಂದ್ಯಗಳನ್ನು ಲಕ್ಷಾಂತರ ಜನರು ವೀಕ್ಷಿಸುತ್ತಾರೆ. ಮಾಜಿ ಕ್ರಿಕೆಟಿಗರು ಮತ್ತು ವಿಶ್ಲೇಷಕರು ಕೂಡಾ ಎರಡೂ ಲೀಗ್‌ಗಳಲ್ಲಿನ ಪ್ರಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಪ್ರತಿಕ್ರಿಯೆ ನೀಡುತ್ತಾರೆ.
ಇತ್ತೀಚೆಗೆ ಪಿಎಸ್‌ಎಲ್ ಪಂದ್ಯವನ್ನು ಸ್ಟೇಡಿಯಂನಲ್ಲಿ ಕುಳಿತು ನೋಡುತ್ತಿದ್ದ ಅಭಿಮಾನಿಯೊಬ್ಬ ಐಪಿಎಲ್ ಪಂದ್ಯವನ್ನು ಮೊಬೈಲ್‌ನಲ್ಲಿ ವೀಕ್ಷಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಪಿಎಸ್‌ಎಲ್ ಪಂದ್ಯದ ನಂತರ ಪ್ರಸ್ತುತಿ ಸಮಯದಲ್ಲಿ ಮತ್ತೊಮ್ಮೆ ಐಪಿಎಲ್ ಹೆಸರು ಕೇಳಿಬಂದಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಕ್ರಿಕೆಟ್ ವಿಶ್ಲೇಷಕರಾಗಿ, ವೀಕ್ಷಕ ವಿವರಣೆಕಾರರಾಗಿ ಗುರುತಿಸಿಕೊಂಡಿದ್ದಾರೆ. ಪಿಎಸ್‌ಎಲ್‌ನಲ್ಲಿ ಪಂದ್ಯದ ನಂತರ ರಮೀಜ್ ಆಕಸ್ಮಿಕವಾಗಿ ಪಿಎಸ್‌ಎಲ್ ಬದಲಿಗೆ ಐಪಿಎಲ್ ಎಂದು ಹೇಳಿದ್ದಾರೆ. 'ಕ್ಯಾಚ್ ಆಫ್ ಐಪಿಎಲ್' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮಂಗಳವಾರ ಮುಲ್ತಾನ್ ಸುಲ್ತಾನ್ಸ್ ಮತ್ತು ಲಾಹೋರ್ ಖಲಂದರ್ಸ್ ನಡುವಿನ ಪಿಎಸ್‌ಎಲ್ ಪಂದ್ಯದ ನಂತರ ಜೋಶುವಾ ಲಿಟಲ್ ಅವರನ್ನು ತಮ್ಮ 'ಕ್ಯಾಚ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು ಪಡೆಯಲು ಪಾಕಿಸ್ತಾನದ ಮಾಜಿ ನಾಯಕ ರಮೀಜ್ ಆಹ್ವಾನಿಸಿದರು. ರಮೀಜ್ ಅದನ್ನು ಪಿಎಸ್‌ಎಲ್ ಬದಲಿಗೆ 'ಕ್ಯಾಚ್ ಆಫ್ ದಿ ಐಪಿಎಲ್' ಎಂದು ಹೇಳಿದ್ದು ಎಲ್ಲರ ಅಚ್ಚರಿಗೆ ಕಾರಣವಾಯ್ತು. ಪಿಎಸ್‌ಎಲ್ ಟೂರ್ನಿಯಲ್ಲಿಯೇ ಐಪಿಎಲ್ ಹೆಸರು ಬಂದಿದ್ದು, ಟೂರ್ನಿಯ ಜನಪ್ರಿಯತೆಗೆ ಸಾಕ್ಷಿ.
ಪ್ರಸ್ತುತಿ ಸಮಾರಂಭದಲ್ಲಿ ಹಾಜರಿದ್ದ ಪಾಲುದಾರರು ರಮೀಜ್ ಹೇಳಿದ್ದನ್ನು ಕೇಳಿ ದಿಗ್ಭ್ರಮೆಗೊಂಡರು. ಅತ್ತ ಪಾಕಿಸ್ತಾನದ ಅಭಿಮಾನಿಗಳ ಒಂದು ಭಾಗವು ರಮೀಜ್ ಅವರ ತಪ್ಪು ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ.
ಇಲ್ಲಿದೆ ವಿಡಿಯೋ
ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ, ಲಾಹೋರ್ ಖಲಂದರ್ಸ್ ವಿರುದ್ಧ 228 ರನ್‌ಗಳನ್ನು ಯಶಸ್ವಿಯಾಗಿ ರಕ್ಷಿಸುವ ಮೂಲಕ ಮುಲ್ತಾನ್ ಸುಲ್ತಾನ್ಸ್ ಪಂದ್ಯವನ್ನು ಗೆದ್ದುಕೊಂಡಿತು. ಕೇವಲ 44 ಎಸೆತಗಳಲ್ಲಿ 87 ರನ್ ಗಳಿಸಿದ್ದಕ್ಕಾಗಿ ಮುಲ್ತಾನ್‌ನ ಯಾಸಿರ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಲಾಹೋರ್ ಪರ, ಸಿಕಂದರ್ ರಜಾ 27 ಎಸೆತಗಳಲ್ಲಿ 50 ರನ್ ಗಳಿಸಿದರು. ಆದರೆ, ತಂಡವು 20 ಓವರ್‌ಗಳಲ್ಲಿ 195/9 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಹೀಗಾಗಿ ಪಂದ್ಯವನ್ನು 33 ರನ್‌ಗಳಿಂದ ಸೋತಿತು.