ಕೆಎಲ್ ರಾಹುಲ್ ಭವಿಷ್ಯ ಹಾಳು ಮಾಡಬೇಡಿ; ಕರ್ನಾಟಕದ ಆಟಗಾರನ ಜತೆಗೆ ತಮಿಳುನಾಡು ಮಾಜಿ ಕ್ರಿಕೆಟಿಗನೂ ಆಕ್ರೋಶ
ಕೆಎಲ್ ರಾಹುಲ್ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಮಾಡುತ್ತಿರುವ ಕಾರಣ ಭಾರತದ ಮಾಜಿ ಕ್ರಿಕೆಟಿಗರಾದ ದೊಡ್ಡ ಗಣೇಶ್ ಮತ್ತು ಕ್ರಿಸ್ ಶ್ರೀಕಾಂತ್ ಅವರು ಗೌತಮ್ ಗಂಭೀರ್ ಅವರನ್ನು ಟೀಕಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ 2 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದಿರಬಹುದು ಮತ್ತು ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿರಬಹುದು. ಆದರೆ, ಮೊದಲ ಎರಡು ಪಂದ್ಯಗಳಲ್ಲಿ ಕಂಡುಬರುವ ಬ್ಯಾಟಿಂಗ್ ಕ್ರಮಾಂಕವು ತಂಡದ ನಿರ್ವಹಣೆಯ ಚಿಂತನೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆರಂಭಿಕ ಸ್ಥಾನದಿಂದ ಕೆಳ ಕ್ರಮಾಂಕದ ತನಕ ಬ್ಯಾಟಿಂಗ್ ಕ್ರಮಾಂಕದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಅದರಲ್ಲೂ ಕೆಎಲ್ ರಾಹುಲ್ ಕ್ರಮಾಂಕ ಬದಲಾವಣೆಯ ನಿರ್ಧಾರಕ್ಕೆ ಸಂಬಂಧಿಸಿ ಹೆಡ್ಕೋಚ್ ಗೌತಮ್ ಗಂಭೀರ್ ವಿರುದ್ಧ ಕರ್ನಾಟಕದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್, ತಮಿಳುನಾಡಿನ ಮಾಜಿ ಆಟಗಾರ ಕೃಷ್ಣಮಚಾರಿ ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿ, ಆತನ ಭವಿಷ್ಯ ಹಾಳು ಮಾಡಬೇಡಿ ಎಂದು ಹೇಳಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಅಂದರೆ 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 2023ರ ಏಕದಿನ ವಿಶ್ವಕಪ್ನಲ್ಲೂ ತನ್ನ ಪ್ರತಾಪ ಏನೆಂದು ತೋರಿಸಿದ್ದರು. ಈ ಕ್ರಮಾಂಕದಲ್ಲಿ 50+ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಅನೇಕ ಗೆಲುವುಗಳ ರೂವಾರಿಯೂ ಆಗಿದ್ದಾರೆ. ಆದರೆ ಅಂತಹ ಆಟಗಾರನಿಗೆ ಹಿಂಬಡ್ತಿ ನೀಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹೌದು, ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 2 ಏಕದಿನಗಳಲ್ಲಿ ರಾಹುಲ್ ಬದಲಿಗೆ ಅಕ್ಷರ್ ಪಟೇಲ್ಗೆ ಬಡ್ತಿ ನೀಡಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿಸಲಾಗಿದೆ. ಈ ಸ್ಲಾಟ್ನಲ್ಲಿ ಅಕ್ಷರ್ ಅಬ್ಬರಿಸಿದರೂ ರಾಹುಲ್ 6ನೇ ಆರ್ಡರ್ನಲ್ಲಿ ಕ್ರೀಸ್ಗೆ ಬಂದು ವೈಫಲ್ಯ ಅನುಭವಿಸಿದ್ದಾರೆ. ಬ್ಯಾಟಿಂಗ್ ಆರ್ಡರ್ ಬದಲಿಸಿದ ಕಾರಣ ಅವರು ಕಳಪೆ ಪ್ರದರ್ಶನ ನೀಡುತ್ತಿದ್ದಾರೆ ಎನ್ನಲಾಗಿದೆ.
ಪರಿಣಾಮ ಎದುರಿಸಬೇಕಾಗುತ್ತದೆ ಎಂದ ಕ್ರಿಸ್ ಶ್ರೀಕಾಂತ್
1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಮಾಜಿ ಮುಖ್ಯ ಆಯ್ಕೆದಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಗೌತಮ್ ಗಂಭೀರ್ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಶ್ರೇಯಸ್ ಅಯ್ಯರ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಇದು ಭಾರತಕ್ಕೆ ಸಕಾರಾತ್ಮಕ ವಿಷಯ. ಆದರೆ ರಾಹುಲ್ಗೆ ಇದು ತುಂಬಾ ದುರದೃಷ್ಟಕರ. ಹೌದು, ಅಕ್ಷರ್ ಪಟೇಲ್ ಉತ್ತಮವಾಗಿ ಆಡುತ್ತಿದ್ದಾರೆ. ಅದು ಕೂಡ ಖುಷಿ ವಿಚಾರವೇ. ಆದರೆ ಕೆಎಲ್ಗೆ ಮಾಡುತ್ತಿರುವ ಅನ್ಯಾಯ ಸರಿಯಲ್ಲ. ಅವರ ದಾಖಲೆ ನೋಡಿ, 5ನೇ ಕ್ರಮಾಂಕದಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ, ರಾಹುಲ್ ಸ್ಥಾನದ ಬಗ್ಗೆ ಮ್ಯಾನೇಜ್ಮೆಂಟ್ ಏನು ಯೋಚಿಸುತ್ತಿದೆ ಎಂದೇ ತಿಳಿಯುತ್ತಿಲ್ಲ. 6 ಅಥವಾ 7ರಲ್ಲಿ ಬ್ಯಾಟಿಂಗ್ ಮಾಡಿದರೆ, 6 ಅಥವಾ 7 ರನ್ ಮಾತ್ರ ಗಳಿಸುತ್ತಾರೆ. ಇದು ಅನ್ಯಾಯ ಎಂದು ಹೇಳಿದ್ದಾರೆ.
ಹೇ ಗಂಭೀರ್ ನೀನು ಮಾಡುತ್ತಿರುವುದು ಸರಿ ಇಲ್ಲ. ಪರಿಸ್ಥಿತಿಯನ್ನು ಅವಲಂಬಿಸಿ ಅಕ್ಷರ್ಗೆ ಬಡ್ತಿ ನೀಡಿದ್ದು ಸುಸಂಬದ್ಧ ಕಾರ್ಯತಂತ್ರವಾಗಲು ಸಾಧ್ಯವಿಲ್ಲ. ನೀವು ಈ ರೀತಿ ಬದಲಾವಣೆ ಮಾಡುತ್ತಲೇ ಇದ್ದರೆ, ಮುಂದೊಂದು ದಿನ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಅದೇ ಚಿಂತೆಗೀಡುಮಾಡುತ್ತದೆ. ಎಡ-ಬಲಗೈ ಸಂಯೋಜನೆಯ ಬಗ್ಗೆ ಮಾತನಾಡುವುದಾದರೆ ಅಗ್ರ 4ರಲ್ಲಿ ಏಕಿಲ್ಲ? ರಾಹುಲ್ ಕ್ರಮಾಂಕದಲ್ಲೇ ಮಾಡುವ ಅಗತ್ಯ ಏನಿದೆ? ಇಲ್ಲಿ ಅಕ್ಷರ್ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಅವರು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ನೀವು ರಾಹುಲ್ಗೆ ಹಿಂಬಡ್ತಿ ನೀಡಿ ಅವರ ಆತ್ಮವಿಶ್ವಾಸವನ್ನು ಕುಸಿಯುವಂತೆ ಮಾಡುವುದೇಕೆ? ವಿಶ್ವ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರನಿಗೆ ಇದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ.
ದೊಡ್ಡ ಗಣೇಶ್ ದೊಡ್ಡ ಹೇಳಿಕೆ
ಕರ್ನಾಟಕದ ಮಾಜಿ ಆಟಗಾರ ದೊಡ್ಡ ಗಣೇಶ್ ಕೂಡ ಪ್ರತಿಕ್ರಿಯಿಸಿ, ರಾಹುಲ್ಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಿಡಿಕಾರಿದ್ದಾರೆ. ಪ್ರಯೋಗ ನಡೆಸುತ್ತಿರುವವರಿಗೆ ತಲೆ ಇದ್ಯಾ ಎಂದು ಪ್ರಶ್ನಿಸಿದ್ದಾರೆ. ಅಕ್ಷರ್ ಮತ್ತೆ ಕೆಎಲ್ ರಾಹುಲ್ ಅವರಿಗಿಂತ ಮುಂದೆ ಬ್ಯಾಟಿಂಗ್ ನಡೆಸಿದ್ದಾರೆಯೇ? ನಿಜವಾಗಲೂ ನನಗೆ ಮಾತು ಬರುತ್ತಿಲ್ಲ. ರಾಹುಲ್ನಂತಹ ನಿಜವಾದ ಬ್ಯಾಟರ್ನನ್ನು 6ನೇ ಕ್ರಮಾಂಕಕ್ಕೆ ತಳ್ಳುವುದರಲ್ಲಿ ಏನಾದರೂ ಅರ್ಥವಿದೆಯೇ? ನೀವು 5 ರನ್ಗೆ 3 ವಿಕೆಟ್ ಆಗಿದ್ದಾಗ, ಅಕ್ಷರ್ ಅವರನ್ನು ಕಠಿಣ ಪಿಚ್ನಲ್ಲಿ ಕಳುಹಿಸುವ ಧೈರ್ಯ ನಿಮಗಿದೆಯೇ? ಇಲ್ಲದಿದ್ದರೆ, ಈ ಪ್ರಯೋಗಕ್ಕೆ ಯಾವ ಅರ್ಥವಿದೆ? ಇದು ಸಂಪೂರ್ಣವಾಗಿ ಅರ್ಥಹೀನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
