ಲಕ್ನೋ ಗೆಲುವಿನ ರಥ ನಿಲ್ಲಿಸುವುದೇ ಚೆನ್ನೈ, ಶಿಷ್ಯನ ಎದುರಾದರೂ ಗೆಲ್ಲುತ್ತಾರಾ ಗುರು; ಎಲ್‌ಎಸ್‌ಜಿ vs ಸಿಎಸ್‌ಕೆ ಕದನದ ಅಂಶಗಳು!
ಐಪಿಎಲ್ 2025ರ 30ನೇ ಪಂದ್ಯ ಇಂದು ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಸಂಭಾವ್ಯ ಪ್ಲೇಯಿಂಗ್ 11, ಪಿಚ್ ರಿಪೋರ್ಟ್ ಸೇರಿದಂತೆ ಪಂದ್ಯದ ವಿವರ ಇಂತಿದೆ.

ಲಕ್ನೋ: ಐಪಿಎಲ್ 2025ರ 30ನೇ ಪಂದ್ಯ ಇಂದು ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ. ಲಕ್ನೋ ಗೆಲುವಿನ ರಥ ನಿಲ್ಲಿಸಲು ಚೆನ್ನೈ ಸಜ್ಜಾಗಿದೆ. ಪ್ರಸ್ತುತ ಎಲ್‌ಎಸ್‌ಜಿ ಪ್ರಸ್ತುತ 6 ಪಂದ್ಯಗಳಲ್ಲಿ 4 ಗೆಲುವುಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆದರೆ ಧೋನಿ ಪಡೆ ಆಡಿರುವ 6ರಲ್ಲಿ 1 ಗೆಲುವು, ಸತತ ಐದು ಸೋಲುಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದೆ. ಆದರೆ ಕಳೆದ ಪಂದ್ಯದಲ್ಲಿ ತವರಿನಲ್ಲೇ ಕೆಕೆಆರ್ ವಿರುದ್ಧ ಮಣಿದಿತ್ತು. ಧೋನಿ ನಾಯಕತ್ವದಲ್ಲಿ ಸಹ ಉತ್ಸಾಹ ಕುಂದಿರುವಂತೆ ಕಂಡು ಬಂದಿತ್ತು. ಮತ್ತೊಂದೆಡೆ ಲಕ್ನೋ ತಂಡವು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಗಮನ ಸೆಳೆದಿದೆ. ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸುವ ಮೂಲಕ ಬೃಹತ್ ಸ್ಕೋರಿದ್ದರೂ ಗುರಿ ಮುಟ್ಟುವ ವಿಶ್ವಾಸ ನೀಡಿದ್ದಾರೆ. ಅದರಲ್ಲೂ ನಿಕೋಲಸ್ ಪೂರನ್ ಬ್ಯಾಟಿಂಗ್ ವೈಭವ ಅದ್ಭುತವಾಗಿದೆ.
ಎಲ್‌ಎಸ್‌ಜಿ ಮೊದಲ ಎಸೆತದಿಂದಲೇ ಗುರಿಯಿಟ್ಟು ಆಡಿದ್ದು, ಸತತ 3 ಪಂದ್ಯಗಳಲ್ಲಿ ಪವರ್‌ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದೆ ಮುಂದುವರಿದಿದೆ. ಆದರೆ ಸಿಎಸ್‌ಕೆ ತಂಡವು ಅಗ್ರಸ್ಥಾನದಲ್ಲಿ ಆವೇಗ ಮತ್ತು ಸ್ಥಿರತೆಗಾಗಿ ಹೋರಾಡುತ್ತಲೇ ಇದೆ. ಸಿಎಸ್‌ಕೆ ಬ್ಯಾಟಿಂಗ್ ವಿಭಾಗದಲ್ಲಿ ಧಮ್ಮೇ ಇಲ್ಲದಂತೆ ಕಾಣುತ್ತಿದೆ. ಈವವರೆಗೂ ಆಡಿದ 6 ಪಂದ್ಯಗಳಲ್ಲಿ ಯಾವ ಬ್ಯಾಟ್ಸ್ಮನ್ ಕೂಡ 150 ರನ್ಗಳ ಗಡಿ ದಾಟಿಲ್ಲ. ಈ ಹಿಂದೆ 2014ರಲ್ಲಿ ಕೆಕೆಆರ್ ಇಂತಹದೊಂದು ಸಾಧನೆ ಮಾಡಿತ್ತು.
ನಿಕೋಲಸ್ ಪೂರನ್ ಅವರು ಸಿಎಸ್‌ಕೆ ತಂಡ ಗಳಿಸಿದ್ದಕ್ಕಿಂತ (32) ಹೆಚ್ಚು ಸಿಕ್ಸರ್ (31) ಬಾರಿಸಿದ್ದಾರೆ. 3ನೇ ಕ್ರಮಾಂಕದಲ್ಲಿ ಪೂರನ್ ವೇಗದ ಜೊತೆಗೆ ಏಡನ್ ಮಾರ್ಕ್ರಾಮ್ ಫಾರ್ಮ್‌ಗೆ ಮರಳಿರುವುದು, ಮಿಚೆಲ್ ಮಾರ್ಷ್ ಆಕ್ರಮಣಕಾರಿ ಬ್ಯಾಟಿಂಗ್ ಎಲ್ಎಸ್ಜಿಗೆ ದೊಡ್ಡ ಬಲವಾಗಿದೆ. ಲಕ್ನೋ ಪವರ್‌ಪ್ಲೇನಲ್ಲಿ 10.3 ರನ್ರೇಟ್ನಲ್ಲಿ ಸ್ಕೋರ್ ಮಾಡಿದರೆ, ಕಿಂಗ್ಸ್ 7.5ರಂತೆ ಸ್ಕೋರ್ ಮಾಡಿದೆ. ಇದು ಋತುವಿನ ಅತ್ಯಂತ ಕಡಿಮೆ. ವಾಸ್ತವವಾಗಿ ಸಿಎಸ್ಕೆಯ ಒಟ್ಟು ಸ್ಟ್ರೈಕ್ ರೇಟ್ 124.23 ಅತ್ಯಂತ ಕೆಟ್ಟದಾಗಿದೆ.
ಸೂಪರ್ ಜೈಂಟ್ಸ್ ಕೊನೆಯ ಐದರಲ್ಲಿ 4 ಗೆಲುವು, 1 ಸೋಲು ಕಂಡಿದೆ. ಆದರೆ ಚೆನ್ನೈ 5ಕ್ಕೆ ಐದೂ ಸೋತಿದೆ. ಮಿಚೆಲ್ ಮಾರ್ಷ್ ತನ್ನ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಹಿಂದಿನ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಈ ಪಂದ್ಯಕ್ಕೆ ಮರಳಬಹುದು. ಸಿಎಸ್‌ಕೆ ಪರ ಮತೀಶಾ ಪತಿರಾಣ ಇಂಪ್ಯಾಕ್ಟ್ ಪ್ಲೇಯರ್ ಆಗಬಹುದು. ಪತಿರಾಣ ಐದು ಇನ್ನಿಂಗ್ಸ್‌ಗಳಲ್ಲಿ 4 ಬಾರಿ ಪೂರನ್ ಅವರನ್ನು ಔಟ್ ಮಾಡಿದ್ದಾರೆ, ಸರಾಸರಿ ಕೇವಲ 6.3.
ಲಕ್ನೋ ಸಂಭವನೀಯ XII: ಏಡನ್ ಮಾರ್ಕ್ರಾಮ್, 2 ಮಿಚೆಲ್ ಮಾರ್ಷ್/ಹಿಮ್ಮತ್ ಸಿಂಗ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್), ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ಆಕಾಶ್ ದೀಪ್, ರವಿ ಬಿಷ್ಣೋಯ್, ದಿಗ್ವೇಶ್ ಸಿಂಗ್ ರಾಠಿ.
ಸಿಎಸ್‌ಕೆ ಸಂಭವನೀಯ XII: ಡೆವೊನ್ ಕಾನ್ವೆ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ವಿಜಯ್ ಶಂಕರ್, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಆರ್ ಅಶ್ವಿನ್, ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮತೀಶಾ ಪತಿರಾಣ.
ಸುಮಾರು ಒಂದು ದಶಕದ ನಂತರ ಆರ್ ಅಶ್ವಿನ್ ಸಿಎಸ್‌ಕೆ ಜೊತೆ ಮತ್ತೆ ಒಂದಾದರೂ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ಬರುತ್ತಿಲ್ಲ. 6 ಪಂದ್ಯಗಳಲ್ಲಿ 3ರಲ್ಲಿ ತಮ್ಮ ಪೂರ್ಣ ಕೋಟಾವನ್ನು ಬೌಲಿಂಗ್ ಮಾಡಿದ್ದಾರೆ. ಆದರೆ ಅವರು ಬಯಸಿದಷ್ಟು ವಿಕೆಟ್ (ಐದು) ಪಡೆದಿಲ್ಲ. ಪವರ್‌ಪ್ಲೇ ಮತ್ತು ಡೆತ್‌ನಲ್ಲಿ ಅವರು ದುಬಾರಿಯಾಗಿದ್ದಾರೆ (ಓವರ್‌ಗೆ 15 ರನ್ ಬಿಟ್ಟುಕೊಟ್ಟಿದ್ದಾರೆ). ಆದರೆ ಪೂರನ್ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. 8 ಇನ್ನಿಂಗ್ಸ್‌ಗಳಲ್ಲಿ 3 ಬಾರಿ ಅವರನ್ನು ಔಟ್ ಮಾಡಿದ್ದಾರೆ. ನೂರ್ ಅಹ್ಮದ್ ಮಾತ್ರ ಸಿಎಸ್‌ಕೆ ಪರ ಮಿಂಚುತ್ತಿದ್ದಾರೆ.
ಪಿಚ್ ವರದಿ
ಲಕ್ನೋದ ಎಕಾನಾ ಕ್ರೀಡಾಂಗಣದಲ್ಲಿ ಋತುವಿನ ನಾಲ್ಕನೇ ಪಂದ್ಯವಾಗಿದೆ. ಕೆಂಪು ಜೇಡಿಮಣ್ಣಿನ ಪಿಚ್ನಲ್ಲಿ ಪಂಜಾಬ್ ಕಿಂಗ್ಸ್ಗೆ ಆತಿಥ್ಯ ನೀಡಿದ್ದ ಎಲ್‌ಎಸ್‌ಜಿ, ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ಕಪ್ಪು ಮಣ್ಣಿನಲ್ಲಿ ಆಡಿತ್ತು. ಇಂದಿನ ಲಕ್ನೋ, ಚೆನ್ನೈ ಪಂದ್ಯವು ಮಿಶ್ರ ಮಣ್ಣಿನ ಮೇಲ್ಮೈಯಾದ ಪಿಚ್ ಸಂಖ್ಯೆ -5 ರಲ್ಲಿ ನಡೆಯಲಿದೆ. ಇದು ಬ್ಯಾಟರ್ಸ್ ಮತ್ತು ಬೌಲರ್ ಇಬ್ಬರಿಗೂ ಸಮಾನವಾಗಿ ಸಹಾಯ ಮಾಡುತ್ತದೆ. ಹೀಗಾಗಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಬಹುದು. ಲಕ್ನೋದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಚೇಸಿಂಗ್ ತಂಡ ಎರಡರಲ್ಲಿ ಗೆದ್ದಿದೆ.
ಲಕ್ನೋ vs ಸಿಎಸ್‌ಕೆ ಮುಖಾಮುಖಿ ದಾಖಲೆ
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ನಲ್ಲಿ ಒಟ್ಟು 5 ಬಾರಿ ಮುಖಾಮುಖಿಯಾಗಿದ್ದು, ಎಲ್‌ಎಸ್‌ಜಿ ಮೂರರಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದೆ. ಆದರೆ ಸಿಎಸ್‌ಕೆ 1ರಲ್ಲಿ ಮಾತ್ರ ಗೆದ್ದಿದೆ. ಆದರೆ ಒಂದು ಪಂದ್ಯ ರದ್ದಾಗಿದೆ.
ಎಕಾನಾ ಸ್ಟೇಡಿಯಂ ಐಪಿಎಲ್ ದಾಖಲೆಗಳು ಮತ್ತು ಅಂಕಿಅಂಶಗಳ
ಒಟ್ಟು ಪಂದ್ಯಗಳು - 17
ಮೊದಲು ಬ್ಯಾಟಿಂಗ್ ಮಾಡಿದ ತಂಡಗಳ ಗೆಲುವು - 8 (47.06%)
ಚೇಸಿಂಗ್ ಮಾಡುವಾಗ ಗೆದ್ದ ತಂಡಗಳ ಸಂಖ್ಯೆ - 8 (47.06%)
ಟಾಸ್ ಗೆಲ್ಲುವ ಮೂಲಕ ಗೆದ್ದ ಪಂದ್ಯಗಳು - 10 (58.82%)
ಟಾಸ್ ಸೋತು ಗೆದ್ದ ಪಂದ್ಯಗಳು - 6 (35.29%)
ಫಲಿತಾಂಶವಿಲ್ಲದ ಪಂದ್ಯ - 1 (5.88%)
ಗರಿಷ್ಠ ಸ್ಕೋರ್ - 235/6
ಕನಿಷ್ಠ ಸ್ಕೋರ್ - 108/10
ಚೇಸಿಂಗ್ನಲ್ಲಿ ಗರಿಷ್ಠ ಸ್ಕೋರ್ - 177/2
ಪ್ರತಿ ವಿಕೆಟ್ಗೆ ಸರಾಸರಿ ರನ್ - 26.10
ಪ್ರತಿ ಓವರ್‌ಗೆ ಸರಾಸರಿ ರನ್ - 8.43
