ಭಾರತ ತಂಡದಲ್ಲಿ ಹೊಸ ಬಿರುಕು; ಪ್ಲೇಯಿಂಗ್ 11ನಿಂದ ಕೈಬಿಟ್ಟಿದ್ದಕ್ಕೆ ಗೌತಮ್ ಗಂಭೀರ್ ವಿರುದ್ಧ ಸ್ಟಾರ್ ಆಟಗಾರ ಅಸಮಾಧಾನ: ವರದಿ
Team India: ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ಮುನಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಭಾರತ ತಂಡದಲ್ಲಿ ಎಲ್ಲವೂ ಸರಿಯಾಗಿದೆಯೇ? ಅದಕ್ಕೆ ಉತ್ತರ, 'ಇಲ್ಲ' ಎನ್ನುತ್ತಿವೆ ವರದಿಗಳು. ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ತಂಡದಲ್ಲಿ ಹೊಸ ಬಿರುಕು ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಫೆಬ್ರವರಿ 20ರಂದು ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಅಭಿಯಾನ ಪ್ರಾರಂಭಿಸಲಿದೆ. ಗೌತಮ್ ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದ ನಂತರ ಭಾರತ ಆಡುತ್ತಿರುವ ಮೊದಲ ಐಸಿಸಿ ಟೂರ್ನಮೆಂಟ್ ಇದಾಗಿದೆ.
ಆದರೆ, ಗಂಭೀರ್ ಅಧಿಕಾರ ವಹಿಸಿಕೊಂಡಾಗಿನಿಂದ ಭಾರತ ಉತ್ತಮ ಫಾರ್ಮ್‌ನಲ್ಲಿಲ್ಲ ಎಂಬ ವಾಸ್ತವ ಒಪ್ಪಿಕೊಳ್ಳಲೇಬೇಕು. ಪ್ರಮುಖ 3 ಸರಣಿಗಳಲ್ಲಿ ಭಾರತ ಸೋಲು ಕಂಡಿತು. ಹಲವು ದಿಟ್ಟ ನಿರ್ಧಾರಗಳ ತೆಗೆದುಕೊಂಡು ಟೀಕೆಗೆ ಗುರಿಯಾದರು. ಕೆಕೆಆರ್ ಆಟಗಾರರಿಗೆ ಮಣೆ ಹಾಕುತ್ತಿದ್ದಾರೆ ಎನ್ನುವ ಆರೋಪಕ್ಕೂ ಗುರಿಯಾದರು. ಗಂಭೀರ್ ಕೋಚ್ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಅಸಮಾಧಾನದ ವದಂತಿಗಳೂ ಒಂದಲ್ಲ ಒಂದು ಬೆಳಕಿಗೆ ಬರುತ್ತಲೇ ಇವೆ. ಮೆಗಾ ಐಸಿಸಿ ಈವೆಂಟ್‌ಗೂ ಮುನ್ನ ಡ್ರೆಸ್ಸಿಂಗ್ ಕೋಣೆಯಲ್ಲಿ ಮತ್ತೊಂದು ಉದ್ವಿಗ್ನತೆ ಉಂಟಾಗಿದೆ.
ಗಂಭೀರ್ ವಿರುದ್ಧ ಪಂತ್ ಮುನಿಸು
ಕೋಚ್ ಗಂಭೀರ್ ವಿರುದ್ಧ ಸ್ಟಾರ್ ವಿಕೆಟ್ ಕೀಪರ್ವೊಬ್ಬರು ಮುನಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಟೈಮ್ಸ್ ನೌಗೆ ಮೂಲಗಳು ಪ್ರತ್ಯೇಕವಾಗಿ ದೃಢಪಡಿಸಿರುವ ಪ್ರಕಾರ, ಭಾರತದ ವಿಕೆಟ್ ಕೀಪರ್ ಬ್ಯಾಟರ್ ಒಬ್ಬರು ಗಂಭೀರ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಮುನಿಸಿಕೊಂಡಿರುವ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ರಿಷಭ್ ಪಂತ್. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಗೌತಮ್ ಗಂಭೀರ್ ನೀಡಿದ್ದ ಹೇಳಿಕೆಯೊಂದು ಈ ಅಸಮಾಧಾನಕ್ಕೆ ಕಾರಣವಾಗಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಕ್ತಾಯಗೊಂಡ ಬಳಿಕ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಗಂಭೀರ್ಗೆ ಪ್ರಶ್ನೆಯೊಂದು ಎದುರಾಗಿತ್ತು. ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ - ಇಬ್ಬರಲ್ಲಿ ಮೊದಲ ಆಯ್ಕೆ ಯಾರು ಎಂಬ ಪ್ರಶ್ನೆ ಕೇಳಲಾಗಿತ್ತು. ಆಗ ಮೊದಲ ಆಯ್ಕೆ ರಾಹುಲ್ ಎಂದು ಗಂಭೀರ್ ಉತ್ತರಿಸಿದ್ದರು. ಹಾಗಾಗಿ ಭಾರತದ ಪ್ಲೇಯಿಂಗ್ನಲ್ಲಿ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಪರಿಗಣಿಸಲಿಲ್ಲ ಎಂಬ ಕಾರಣ ಪಂತ್ ದೂಷಿಸಿದ್ದಾರೆ ಎನ್ನಲಾಗಿದೆ.
ಅಂದು ಗಂಭೀರ್ ಏನು ಹೇಳಿದ್ದರು?
ಅಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಗಂಭೀರ್, 'ಕೆಎಲ್ ರಾಹುಲ್ ಅವರೇ ನಮ್ಮ ಮೊದಲ ಆದ್ಯತೆಯ ವಿಕೆಟ್ ಕೀಪರ್. ರಿಷಭ್ ಪಂತ್ ಅವರಿಗೂ ಅವಕಾಶ ಸಿಗಲಿದೆ. ಆದರೆ ಒಂದು ಬಾರಿಗೆ ಇಬ್ಬರನ್ನು ಕಣಕ್ಕಿಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ತಂಡವನ್ನು ಪ್ರಕಟಿಸುವ ಅವಧಿಯಲ್ಲಿ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಪಂತ್ ನಮ್ಮ ಮೊದಲ ಆಯ್ಕೆ ಎಂದಿದ್ದರು. ಆದರೆ ಗಂಭೀರ್, ಪಂತ್ ವಿರುದ್ಧ ಹೇಳಿಕೆ ನೀಡಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಹಾಗಿದ್ದರೆ, ತಮ್ಮನ್ನು ತಂಡಕ್ಕೆ ಆಯ್ಕೆ ಮಾಡುವ ಅವಶ್ಯಕತೆ ಏನಿತ್ತು ಎಂಬುದು ಪಂತ್ ಪ್ರಶ್ನೆಯಾಗಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ರಿಷಭ್ ಪಂತ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲೂ ಪಂತ್ಗೆ ಅವಕಾಶ ಸಾಧ್ಯತೆ ತೀರಾ ಕಡಿಮೆ. ಒಂದು ವೇಳೆ ಕೆಎಲ್ ರಾಹುಲ್ ಗಾಯಗೊಂಡರೆ ಅಥವಾ ಬೇರೆ ಬ್ಯಾಟರ್ ಗಾಯಗೊಂಡರೆ ಅಥವಾ ಬೇರೆ ಯಾವುದೇ ಸಮಸ್ಯೆ ಉದ್ಭವಿಸಿದರೂ ಪಂತ್ ತಂಡದಲ್ಲಿ ಕಾಣಿಸಿಕೊಳ್ಳುವ ಅವಕಾಶ ಇದೆ.
