ಸತತ 6 ಸೋಲಿನಿಂದ ಸತತ 6 ಗೆಲುವಿನ ತನಕ; ಅಸಾಧ್ಯವನ್ನೂ ಸಾಧಿಸಿದ ಆರ್‌ಸಿಬಿ ಪ್ಲೇಆಫ್ ಹಾದಿಯೇ ರೋಚಕ
ಐಪಿಎಲ್ 2024ರ ಮೊದಲಾರ್ಧದ ಅಂತ್ಯಕ್ಕೆ, ಆರ್‌ಸಿಬಿ ತಂಡ ಪ್ಲೇಆಫ್ ರೇಸ್‌ನಲ್ಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಕಳಪೆ ಪ್ರದರ್ಶನದೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ತಂಡವು, ಇದೀಗ ಸಿಎಸ್‌ಕೆ ಮಣಿಸಿ ಪ್ಲೇಆಫ್ ಪ್ರವೇಶ ಮಾಡಿದೆ. ಈ ಹಾದಿ ಅತಿ ರೋಚಕ.

ಮೊದಲ 8 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು. ಉಳಿದ 7 ಪಂದ್ಯಗಳಲ್ಲಿ ಹೀನಾಯ ಸೋಲು. ಅದರಲ್ಲೂ ಆರು ಪಂದ್ಯಗಳಲ್ಲಿ ಸತತ ಸೋಲು. ಅಂಕಪಟ್ಟಿಯಲ್ಲಿ ಕೊನೆಯ (10ನೇ) ಸ್ಥಾನ. ಈ ತಂಡ ಐಪಿಎಲ್ 2024ರ ಪ್ಲೇಆಫ್ ಪ್ರವೇಶಿಸುವುದು ಬಿಡಿ, ಕನಿಷ್ಠ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆಯುವುದು ಕೂಡಾ ಅಸಾಧ್ಯ ಎಂದು ಹೇಳಿದವರೇ ಹೆಚ್ಚು. ಆದರೆ, ಆ ತಂಡದ ಕೋಟ್ಯಾಂತರ ನಿಷ್ಠಾವಂತ ಅಭಿಮಾನಿಗಳಿಗೆ ತನ್ನ ನೆಚ್ಚಿನ ತಂಡದ ಮೇಲೆ ಸಂಪೂರ್ಣ ನಂಬಿಕೆ ಇತ್ತು. ಆಟಗಾರರಲ್ಲೂ ಇಲ್ಲದ ಆತ್ಮವಿಶ್ವಾಸ ಫ್ಯಾನ್ಸ್‌ಗೆ ಇತ್ತು. ಅದೇ 'we believe in you' ಅನ್ನೋ ಥರ. ಕೊನೆಗೂ ಅಸಾಧ್ಯ ಅನ್ನೋದು ಸಾಧ್ಯವಾಗಿದೆ. ಅತಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಆರ್‌ಸಿಬಿ ಐಪಿಎಲ್ 2024ರ ಪ್ಲೇಆಪ್‌ಗೆ ಪ್ರವೇಶ ಮಾಡಿದೆ. ಅಂದರೆ, ಆಟ ಇಲ್ಲಿಗೆ ಮುಗಿದಿಲ್ಲ. ಈಗ ಶುರುವಾಗಿದೆ ಅಷ್ಟೇ…
ಎಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಯಲ್ ಗೆಲುವು ಸಾಧಿಸಿದೆ. ಅದು ಕೂಡಾ ಹಾಲಿ ಚಾಂಪಿಯನ್ ಹಾಗೂ 5 ಬಾರಿಯ ಐಪಿಎಲ್ ಟ್ರೋಫಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ. ಪ್ಲೇಆಫ್‌ಗೆ ಲಗ್ಗೆ ಹಾಕಲು ಸಾಧ್ಯವೇ ಇಲ್ಲ ಎಂಬಂತಿದ್ದ ಆರ್‌ಸಿಬಿ, ಲೀಗ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಸಿಎಸ್‌ಕೆ ಮಣಿಸಿ ಭರ್ಜರಿಯಾಗಿ ಪ್ಲೇಆಫ್ ಹಂತಕ್ಕೆ ಲಗ್ಗೆ ಹಾಕಿದೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಲೀಗ್ ಹಂತದ ಐಪಿಎಲ್ ಪಂದ್ಯದಲ್ಲಿ, ಆರ್‌ಸಿಬಿ ತಂಡವು ಗೆಲ್ಲುವುದು ಮಾತ್ರವಲ್ಲದೆ ದಾಖಲೆಯ ಅಂತರವೂ ಬೇಕಿತ್ತು. 18 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದರೆ, ಪ್ಲೇಆಫ್ ಲಗ್ಗೆ ಹಾಕಲು ಅವಕಾಶವಿತ್ತು. ಅದನ್ನು ಆರ್‌ಸಿಬಿ ಸಾಧಿಸಿಯೇ ಬಿಟ್ಟಿತು. 18 ರನ್‌ಗಳ ಗೆಲುವಿನ ಬದಲಿಗೆ ಭರ್ಜರಿ 27 ರನ್‌ಗಳ ಅಂತರದಿಂದ ಗೆದ್ದು ಬೀಗಿತು. ಇದರೊಂದಿಗೆ ಸಿಎಸ್‌ಕೆ ತಂಡವನ್ನು ಟೂರ್ನಿಯಿಂದ ಹೊರದಬ್ಬಿ ನಾಲ್ಕನೇ ತಂಡವಾಗಿ ಪ್ಲೇಆಫ್‌ಗೆ ಲಗ್ಗೆ ಹಾಕಿತು.
ಇದನ್ನೂ ಓದಿ | ಹೊಸ ಅಧ್ಯಾಯ ಆರಂಭ, ರೋಚಕ ಹಣಾಹಣಿಯಲ್ಲಿ ಗೆದ್ದು ಪ್ಲೇಆಫ್ ಪ್ರವೇಶಿಸಿದ ಆರ್‌ಸಿಬಿ; ಸೋತು ಹೊರಬಿದ್ದ ಸಿಎಸ್‌ಕೆ
ಟೂರ್ನಿಯಲ್ಲಿ ಆರ್‌ಸಿಬಿಯ ಆರಂಭ ನೋಡಿದರೆ, ಯಾರೂ ಈ ಫಲಿತಾಂಶವನ್ನು ನಿರೀಕ್ಷಿಸಿಯೇ ಇರಲಿಲ್ಲ. ಉದ್ಘಾಟನಾ ಪಂದ್ಯದಲ್ಲಿಯೇ ಇದೇ ಸಿಎಸ್‌ಕೆ ವಿರುದ್ಧ ಸೋತಿದ್ದ ಆರ್‌ಸಿಬಿ, ಆ ಬಳಿಕ ಪಂಜಾಬ್ ವಿರುದ್ಧ ಒಂದು ಗೆಲುವು ಒಲಿಸಿಕೊಂಡಿತು. ಆ ಬಳಿಕ ಸತತ ಆರು ಪಂದ್ಯಗಳಲ್ಲಿ ಸೋಲೊಪ್ಪಿತು. ಇದರಲ್ಲಿ ಕೆಕೆಆರ್ ವಿರುದ್ಧ ಕೇವಲ 1 ರನ್ ಅಂತರದ ಸೋಲು ಕೂಡಾ ಸೇರಿದೆ. ಆದರೆ, ಆ ಬಳಿಕ ಆರ್‌ಸಿಬಿ ಆಡಿದ್ದೇ ಆಟ.
ಸತತ 6 ಪಂದ್ಯಗಳಲ್ಲಿ ಗೆಲುವು
ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಅದರದ್ದೇ ತವರಿನಲ್ಲಿ 35 ರನ್‌ಗಳಿಂದ ಮಣಿಸುವ ಮೂಲಕ ಗೆಲುವಿನ ಅಭಿಯಾನ ಆರಂಭಿಸಿದ ಆರ್‌ಸಿಬಿ, ಅಲ್ಲಿಂದ ಈವರೆಗೆ ಸತತ 6 ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿದೆ. ಇದರಲ್ಲಿ ಎಲ್ಲವೂ ಭರ್ಜರಿ ಅಂತರದ ಗೆಲುವು ಆಗಿರುವುದು ವಿಶೇಷ. ಮುಂದೆ ಆರ್‌ಸಿಬಿಯು ಮೇ 22ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎಲಿಮನೇಟರ್ ಪಂದ್ಯದಲ್ಲಿ ಆಡಲಿದೆ.
ಇದನ್ನೂ ಓದಿ | ಐಪಿಎಲ್ ಇತಿಹಾಸದಲ್ಲಿ 700 ಬೌಂಡರಿ ಸಿಡಿಸಿದ ವಿರಾಟ್ ಕೊಹ್ಲಿ; ಫೋರ್ಗಳಿಂದಲೂ ಐತಿಹಾಸಿಕ ದಾಖಲೆ ಬರೆದ ಕಿಂಗ್
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
