ತಿರುಮಲ ದೇವರ ಆಶೀರ್ವಾದದಿಂದ ಭಾರತ ವಿಶ್ವಕಪ್ ಗೆಲ್ಲುತ್ತೆ; ತಿರುಪತಿ ತಿಮ್ಮಪ್ಪನ ದರ್ಶನದ ಬಳಿಕ ಗಂಭೀರ್​ ವಿಶ್ವಾಸ
ಕನ್ನಡ ಸುದ್ದಿ  /  ಕ್ರಿಕೆಟ್  /  ತಿರುಮಲ ದೇವರ ಆಶೀರ್ವಾದದಿಂದ ಭಾರತ ವಿಶ್ವಕಪ್ ಗೆಲ್ಲುತ್ತೆ; ತಿರುಪತಿ ತಿಮ್ಮಪ್ಪನ ದರ್ಶನದ ಬಳಿಕ ಗಂಭೀರ್​ ವಿಶ್ವಾಸ

ತಿರುಮಲ ದೇವರ ಆಶೀರ್ವಾದದಿಂದ ಭಾರತ ವಿಶ್ವಕಪ್ ಗೆಲ್ಲುತ್ತೆ; ತಿರುಪತಿ ತಿಮ್ಮಪ್ಪನ ದರ್ಶನದ ಬಳಿಕ ಗಂಭೀರ್​ ವಿಶ್ವಾಸ

Gautam Gambhir-Lord Balaji temple in Tirumala: 140 ಕೋಟಿ ಭಾರತೀಯರ ಪ್ರಾರ್ಥನೆಯೊಂದಿಗೆ ಭಾರತ ವಿಶ್ವಕಪ್‌ ಗೆಲ್ಲಲಿದೆ ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಳಿಕ ಭರವಸೆ ವ್ಯಕ್ತಪಡಿಸಿದರು.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಗೌತಮ್ ಗಂಭೀರ್.
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಗೌತಮ್ ಗಂಭೀರ್.

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ (Gautam Gambhir), ತಿರುಪತಿ ತಿರುಮಲದ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಈ ಬಾರಿ ಭಾರತ ತಂಡ ಏಕದಿನ ವಿಶ್ವಕಪ್ ಗೆಲ್ಲಲು ಪ್ರಾರ್ಥಿಸಿದ್ದಾರೆ. ಭಾರತದ 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಗೌತಮ್ ಗಂಭೀರ್, ಕುಟುಂಬ ಸದಸ್ಯರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ (Lord Balaji temple in Tirumala) ಪಡೆದರು.

ಗಂಭೀರ್​ ಮತ್ತು ಅವರ ಕುಟುಂಬ ಸದಸ್ಯರಿಗೆ ದೇವಸ್ಥಾನದ ಅಧಿಕಾರಿಗಳು ಆತ್ಮೀಯ ಸ್ವಾಗತ ಕೋರಿದರು. ಅಲ್ಲಿನ ರಂಗನಾಯಕರ ಮಂಟಪದಲ್ಲಿ ವೈದಿಕರಿಂದ ವೇದಾಶೀರ್ವಾದ ಪಡೆದರು. ಗಂಭೀರ್ ಪ್ರಾರ್ಥನೆಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂದ ಗಂಭೀರ್​

ದರ್ಶನ ಪಡೆದ ಗಂಭೀರ್, ಸುಪ್ರಭಾತ ಸೇವೆಯಲ್ಲಿ ಭಾಗವಹಿಸಿ ವೆಂಕಟೇಶ್ವರನ ದರ್ಶನ ಪಡೆದು ಪುನೀತರಾದರು. ಮುಂಜಾನೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಸಾದ ಸ್ವೀಕರಿಸಿದರು. ಪ್ರಾರ್ಥನೆ ಸಲ್ಲಿಸಿದ ಗಂಭೀರ್ ಮಾತನಾಡಿ, 140 ಕೋಟಿ ಭಾರತೀಯರ ಪ್ರಾರ್ಥನೆಯೊಂದಿಗೆ ಭಾರತ ವಿಶ್ವಕಪ್‌ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ದರ್ಶನ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗಂಭೀರ್, ನಾವೆಲ್ಲರೂ ಭಾರತ ತಂಡದ ಗೆಲುವಿಗೆ ಪ್ರಾರ್ಥಿಸಬೇಕು. ದೇವರ ದರ್ಶನ ಅದ್ಭುತವಾಗಿ ನಡೆಯಿತು. 140 ಕೋಟಿ ಭಾರತೀಯರ ಪ್ರಾರ್ಥನೆ ಮತ್ತು ತಿರುಮಲ ದೇವರ ಆಶೀರ್ವಾದದಿಂದ ಭಾರತ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ವಿಶ್ವಕಪ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ಎದುರು ಸರಣಿ ಗೆದ್ದ ಭಾರತ

ಏಕದಿನ ವಿಶ್ವಕಪ್​ಗೂ ಮುನ್ನ ಭಾರತಕ್ಕೆ ಆಸ್ಟ್ರೇಲಿಯಾ ಸರಣಿ ಗೆದ್ದ ವಿಶ್ವಾಸದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಗೆದ್ದ ಭಾರತ, ಕೊನೆಯ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಸೋಲು ಕಂಡಿತು. ಇದರೊಂದಿಗೆ 2-1ರಲ್ಲಿ ಸರಣಿ ವಶಪಡಿಸಿಕೊಂಡಿದೆ. ಸದ್ಯ ಟೀಮ್ ಇಂಡಿಯಾ, ಏಕದಿನ ವಿಶ್ವಕಪ್​ಗಾಗಿ ಗುವಾಹಟಿಗೆ ಬಂದು ಸೇರಿದೆ.

ಅಕ್ಟೋಬರ್ 5ರಿಂದ ಟೂರ್ನಿ ಆರಂಭ

ಭಾರತದಲ್ಲಿ ಅಕ್ಟೋಬರ್ 5ರಿಂದ ಕ್ರಿಕೆಟ್ ಹಬ್ಬ ಶುರುವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮತ್ತು ರನ್ನರ್​ಅಪ್ ತಂಡಗಳು ಮುಖಾಮುಖಿಯಾಗಲಿವೆ. ಟೀಮ್ ಇಂಡಿಯಾ ಅಕ್ಟೋಬರ್ 8ರಂದು ಶನಿವಾರ ಆಸ್ಟ್ರೇಲಿಯಾ ಎದುರು ಸೆಣಸಾಟ ನಡೆಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಏಕದಿನ ವಿಶ್ವಕಪ್​ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.

Whats_app_banner