ಕನ್ನಡ ಸುದ್ದಿ  /  ಕ್ರಿಕೆಟ್  /  Gautam Gambhir: ಹೊಸಯುಗ ಆರಂಭ, ಭಾರತ ಕ್ರಿಕೆಟ್​ ತಂಡದ ನೂತನ ಹೆಡ್​ಕೋಚ್ ಆಗಿ ಗೌತಮ್ ಗಂಭೀರ್ ನೇಮಕ

Gautam Gambhir: ಹೊಸಯುಗ ಆರಂಭ, ಭಾರತ ಕ್ರಿಕೆಟ್​ ತಂಡದ ನೂತನ ಹೆಡ್​ಕೋಚ್ ಆಗಿ ಗೌತಮ್ ಗಂಭೀರ್ ನೇಮಕ

Gautam Gambhir: ಟೀಮ್ ಇಂಡಿಯಾ ನೂತನ ಹೆಡ್​ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ. ಗಂಭೀರ್ 2024ರ​ ಐಪಿಎಲ್​ನಲ್ಲಿ ಕೆಕೆಆರ್ ತಂಡದ ಮೆಂಟರ್​ ಸೇವೆ ಸಲ್ಲಿಸಿದ್ದರು.

BREAKING: ಭಾರತೀಯ ಕ್ರಿಕೆಟ್​ ತಂಡದ ನೂತನ ಹೆಡ್​ಕೋಚ್ ಆಗಿ ಗೌತಮ್ ಗಂಭೀರ್ ನೇಮಕ
BREAKING: ಭಾರತೀಯ ಕ್ರಿಕೆಟ್​ ತಂಡದ ನೂತನ ಹೆಡ್​ಕೋಚ್ ಆಗಿ ಗೌತಮ್ ಗಂಭೀರ್ ನೇಮಕ (AFP)

ರಾಹುಲ್ ದ್ರಾವಿಡ್ ಅವರಿಂದ ತೆರವಾದ ಭಾರತ ಕ್ರಿಕೆಟ್ ತಂಡದ ಮುಖ್ಯಕೋಚ್ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ​ ಘೋಷಣೆ ಮಾಡಿದ್ದಾರೆ. ಗಂಭೀರ್ ಇದೇ ತಿಂಗಳ ಕೊನೆಯಲ್ಲಿ ಶ್ರೀಲಂಕಾ ಪ್ರವಾಸದೊಂದಿಗೆ ಅಧಿಕಾರ ಸ್ವೀಕರಿಸಲಿದ್ದಾರೆ. 2024ರ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಮಾಡಿದ್ದ ರಾಹುಲ್ ದ್ರಾವಿಡ್ ಅವರ ಅಧಿಕಾರವಧಿ ಜೂನ್ 29ಕ್ಕೆ ಮುಕ್ತಾಯಗೊಂಡಿತು. ಇದಕ್ಕೂ ಮುನ್ನವೇ ಗಂಭೀರ್​ ಹೆಡ್​ಕೋಚ್ ಆಗುವ ವದಂತಿಗಳು ಹರಡಿದ್ದವು. ಇದೀಗ ಔಪಚಾರಿಕವಾಗಿ ಘೋಷಿಸಲಾಗಿದೆ.

ವಿಶ್ವಕಪ್ ನಂತರ ತಮ್ಮ ಅಧಿಕಾರ ಮತ್ತೆ ವಿಸ್ತರಿಸಿಕೊಳ್ಳುವುದಿಲ್ಲ ಎಂದು ದ್ರಾವಿಡ್ ಈ ಹಿಂದೆಯೇ ಹೇಳಿದ್ದರು. ಭಾರತದ ಮಾಜಿ ಆರಂಭಿಕ ಆಟಗಾರರಾದ ಗಂಭೀರ್ ಮತ್ತು ಡಬ್ಲ್ಯುವಿ ರಾಮನ್ ಅವರನ್ನು ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ (CAC) ಕಳೆದ ತಿಂಗಳು ಮುಖ್ಯ ಕೋಚ್ ಹುದ್ದೆಗೆ ಸಂದರ್ಶನ ನಡೆಸಿತ್ತು. ಆದರೆ ಗಂಭೀರ್ ಅವರನ್ನು ಅಂತಿಮಗೊಳಿಸಿ ನೇಮಕ ಮಾಡಿದೆ. ವಿಶ್ವಕಪ್ ವಿಜೇತ ಗಂಭೀರ್ ಇತ್ತೀಚೆಗೆ ಕೋಲ್ಕತಾ ನೈಟ್ ರೈಡರ್ಸ್ (KKR) ಪರ ಮೆಂಟರ್​ ಆಗಿ ಸೇವೆ ಸಲ್ಲಿಸಿದ್ದರು. ಅವರ ಮಾರ್ಗದರ್ಶನದಲ್ಲಿ 2024ರ ಐಪಿಎಲ್​ ಅನ್ನು ಕೆಕೆಆರ್​ ಗೆದ್ದುಕೊಂಡಿತು.

ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಎಕ್ಸ್​ ಖಾತೆಯಲ್ಲಿ ಅಧಿಕೃತ ಪೋಸ್ಟ್ ಮಾಡಿದ್ದು, ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ. ಭಾರತ ತಂಡವನ್ನು ಮುನ್ನಡೆಸಲು ಗಂಭೀರ್ ಸೂಕ್ತ ಮತ್ತು ಅರ್ಹ ವ್ಯಕ್ತಿ ಎಂಬ ವಿಶ್ವಾಸ ಇದೆ ಎಂದು ಬಿಸಿಸಿಐ ಕಾರ್ಯದರ್ಶಿ ಪ್ರತಿಪಾದಿಸಿದ್ದಾರೆ. ‘ಭಾರತ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಗೌತಮ್ ಗಂಭೀರ್ ಅವರನ್ನು ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ಆಧುನಿಕ ಕ್ರಿಕೆಟ್ ವೇಗವಾಗಿ ವಿಕಸನಗೊಂಡಿದ್ದು, ಅದನ್ನು ಗಂಭೀರ್ ಹತ್ತಿರದಿಂದ ನೋಡಿದ್ದಾರೆ’ ಎಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

‘ತಮ್ಮ ವೃತ್ತಿಜೀವನದುದ್ದಕ್ಕೂ ವಿವಿಧ ಪಾತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ನಂತರ ಗೌತಮ್ ಭಾರತ ಕ್ರಿಕೆಟನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ನನಗೆ ವಿಶ್ವಾಸ ಇದೆ. ಟೀಮ್ ಇಂಡಿಯಾ ಬಗ್ಗೆ ಅವರ ಸ್ಪಷ್ಟ ದೃಷ್ಟಿಕೋನ, ಅಪಾರ ಅನುಭವದೊಂದಿಗೆ ಈ ರೋಮಾಂಚಕಾರಿ ಮತ್ತು ಹೆಚ್ಚು ಬೇಡಿಕೆಯ ಕೋಚಿಂಗ್ ಪಾತ್ರವನ್ನು ತೆಗೆದುಕೊಳ್ಳಲು ಉತ್ಸುಕರಾಗಿದ್ದಾರೆ. ಈ ಹೊಸ ಪ್ರಯಾಣ ಪ್ರಾರಂಭಿಸುವಾಗ ಬಿಸಿಸಿಐ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಹೇಳಿದ್ದಾರೆ.

ಲಕ್ನೊ ಮೆಂಟರ್​ ಸ್ಥಾನದಿಂದ ಕೆಳಗಿಳಿದಿದ್ದ ಗಂಭೀರ್​

2022ರಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ತಂಡಕ್ಕೆ ಮೆಂಟರ್ ಆಗಿ ನೇಮಕಗೊಂಡಿದ್ದರು. 2022 ಮತ್ತು 2023ರಲ್ಲಿ ಎಲ್​ಎಸ್​ಜಿ ತಂಡವನ್ನು ಪ್ಲೇಆಫ್​ಗೇರಿಸಿದ್ದ ಗಂಭೀರ್, 2024ರ ಐಪಿಎಲ್​​ಗೆ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಸೇರಿಕೊಂಡರು. 2017ರಲ್ಲಿ ಕೆಕೆಆರ್ ಫ್ರಾಂಚೈಸಿ ತೊರೆದಿದ್ದ ಗಂಭೀರ್​, 7 ವರ್ಷಗಳ ನಂತರ ಮತ್ತೊಮ್ಮೆ ಅದೇ ಫ್ರಾಂಚೈಸಿ ಸೇರಿದರು. ಕೆಕೆಆರ್​ಗೆ ಎರಡು ಬಾರಿಗೆ ಟ್ರೋಫಿ ಗೆದ್ದುಕೊಟ್ಟಿದ್ದ ನಾಯಕನಿಗೆ ಫ್ರಾಂಚೈಸಿ ಮೆಂಟರ್​ ಆಗಿ ನೇಮಕ ಮಾಡಿತ್ತು. ಅವರ ಮಾರ್ಗದರ್ಶನದಲ್ಲಿ ಕೋಲ್ಕತ್ತಾ ಕಪ್ ಗೆದ್ದು ಸಂಭ್ರಮಿಸಿತು.