Gautam Gambhir: ಟೀಮ್ ಇಂಡಿಯಾ ಹೆಡ್ಕೋಚ್ ಆಗುವ ಕುರಿತು ಮೊದಲ ಬಾರಿಗೆ ಮೌನ ಮುರಿದ ಗೌತಮ್ ಗಂಭೀರ್
Gautam Gambhir on Team India Head Coach: ಟೀಮ್ ಇಂಡಿಯಾ ಹೆಡ್ಕೋಚ್ ಆಗುವ ಕುರಿತು ಇದೇ ಮೊದಲ ಬಾರಿಗೆ ಗೌತಮ್ ಗಂಭೀರ್ ಮೌನ ಮುರಿದಿದ್ದಾರೆ.
ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮೆಂಟರ್ ಗೌತಮ್ ಗಂಭೀರ್ (Gautam Gambhir) ಅವರೇ ಭಾರತದ ಪುರುಷರ ಕ್ರಿಕೆಟ್ ತಂಡದ ಮುಖ್ಯಕೋಚ್ ಆಗಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಈಗಾಗಲೇ ಬಿಸಿಸಿಐ ಮಾತುಕತೆ ನಡೆಸಿದ್ದು ಗಂಭೀರ್ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ರಾಹುಲ್ ದ್ರಾವಿಡ್ ಅವರ ಸ್ಥಾನ ತುಂಬಲು ಗಂಭೀರ್ ಸೂಕ್ತ ವ್ಯಕ್ತಿ ಎಂದು ಕ್ರಿಕೆಟ್ ತಜ್ಞರು, ಪಂಡಿತರು ಮತ್ತು ಮಾಜಿ ಕ್ರಿಕೆಟರ್ಗಳು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಆಗುವ ಬಗ್ಗೆ ಮೌನ ಮುರಿದಿದ್ದಾರೆ.
ಟೀಮ್ ಇಂಡಿಯಾದ ಉನ್ನತ ಹುದ್ದೆಗೇರಲು ಮುಂಚೂಣಿಯಲ್ಲಿದ್ದಾರೆ ಎಂಬ ವರದಿಗಳ ಮಧ್ಯೆಯೂ ಗೌತಮ್ ಗಂಭೀರ್ ಮೌನವಾಗಿದ್ದರು. ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಮೂರನೇ ಟ್ರೋಫಿ ಗೆದ್ದುಕೊಡಲು ನೆರವಾದ ಗಂಭೀರ್ ಹೆಸರು ರಾಹುಲ್ ದ್ರಾವಿಡ್ ಉತ್ತರಾಧಿಕಾರಿ ಸ್ಥಾನಕ್ಕೆ ದೊಡ್ಡದಾಗಿ ಹೆಸರು ಕೇಳಿ ಬರುತ್ತಿದೆ. ಮುಖ್ಯಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ನೀಡಿದ್ದ ಗಡುವು ಇತ್ತೀಚೆಗೆ ಕೊನೆಗೊಂಡಿತು. ಅಲ್ಲದೆ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಗಂಭೀರ್ ಬೆಂಬಲಕ್ಕೆ ನಿಂತಿದ್ದಾರೆ.
ಕೋಚ್ಗಿಂತ ದೊಡ್ಡ ಗೌರವವಿಲ್ಲ ಎಂದ ಗೌತಮ್ ಗಂಭೀರ್
ಜೂನ್ 1ರ ಶನಿವಾರ ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದ್ರಾವಿಡ್ ಅವರ ಉತ್ತರಾಧಿಕಾರಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಗಂಭೀರ್, ಭಾರತೀಯ ಶಿಬಿರಕ್ಕೆ ಸೇರಲು ಇಷ್ಟಪಡುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ. 'ನಾನು ಭಾರತ ತಂಡಕ್ಕೆ ತರಬೇತುದಾರನಾಗಲು ಇಷ್ಟಪಡುತ್ತೇನೆ. ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ. 140 ಕೋಟಿ ಭಾರತೀಯರನ್ನು ಮತ್ತು ವಿಶ್ವದಾದ್ಯಂತ ಇರುವವರನ್ನು ಪ್ರತಿನಿಧಿಸುವ ಭಾಗ್ಯ ದೊಡ್ಡದು ಎಂದು ಗಂಭೀರ್ ಪಿಟಿಐಗೆ ತಿಳಿಸಿದ್ದಾರೆ.
ದ್ರಾವಿಡ್ ಅವರ ಅಧಿಕಾರಾವಧಿ ಜೂನ್ನಲ್ಲಿ ಕೊನೆಗೊಳ್ಳಲಿದೆ. ಕಳೆದ ವರ್ಷ ಭಾರತದ ದ್ರಾವಿಡ್ ಅವರ 2 ವರ್ಷಗಳ ಒಪ್ಪಂದ ಮುಗಿದ ನಂತರ ಅಲ್ಪಾವಧಿಗೆ ವಿಸ್ತರಣೆ ಮಾಡಲಾಯಿತು. ರೋಹಿತ್ ನೇತೃತ್ವದ ಟೀಂ ಇಂಡಿಯಾ ಜೂನ್ 5ರಂದು ಐರ್ಲೆಂಡ್ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಜೂನ್ 9 ರಂದು ನ್ಯೂಯಾರ್ಕ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಬ್ಲಾಕ್ಬಸ್ಟರ್ ಮುಖಾಮುಖಿಗೆ ಭಾರತ ಸಜ್ಜಾಗಲಿದೆ. ನಂತರ ಯುಎಇ ಮತ್ತು ಕೆನಡಾ ತಂಡಗಳನ್ನು ಎದುರಿಸಲಿದೆ.
ಅಬುಧಾಬಿಯ ಮೆಡಿಯೋರ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಗಂಭೀರ್ಗೆ ಕೋಚಿಂಗ್ ಕೆಲಸವನ್ನು ತೆಗೆದುಕೊಳ್ಳುವ ಬಗ್ಗೆ ಮತ್ತು ವಿಶ್ವಕಪ್ನಲ್ಲಿ ಭಾರತದ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸುವ ಬಗ್ಗೆ ಪ್ರಶ್ನೆ ಕೇಳಲಾಯಿತು. ಬಹಳಷ್ಟು ಜನರು ನನ್ನನ್ನು ಕೇಳಿದ್ದರೂ ನಾನು ಈ ಪ್ರಶ್ನೆಗೆ ಉತ್ತರಿಸಿಲ್ಲ. ಆದರೆ ನಾನು ಈಗ ನಿಮಗೆ ಉತ್ತರಿಸಬೇಕಾಗಿದೆ. 140 ಕೋಟಿ ಭಾರತೀಯರು ಭಾರತ ವಿಶ್ವಕಪ್ ಗೆಲ್ಲಲು ಬೆಂಬಲಿಸುತ್ತಾರೆ. ಪ್ರತಿಯೊಬ್ಬರೂ ನಮಗಾಗಿ ಪ್ರಾರ್ಥಿಸಲು ಪ್ರಾರಂಭಿಸಿದರೆ ಭಾರತವು ವಿಶ್ವಕಪ್ ಗೆಲ್ಲುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ನಿರ್ಭೀತರಾಗಿರಬೇಕು ಎಂದು ಗಂಭೀರ್ ಹೇಳಿದ್ದಾರೆ.
ಇನ್ನಷ್ಟು ಟಿ20 ವಿಶ್ವಕಪ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ