ಮೆಲ್ಬೋರ್ನ್ ಟೆಸ್ಟ್ ಬಳಿಕ ಭಾರತ ತಂಡದಲ್ಲಿ ಬಿರುಕು; ನಿಜವಲ್ಲ ಎಂದ ಗಂಭೀರ್, ಬೆಂಡೆತ್ತಿದ ಬಿಸಿಸಿಐ, ಅಭ್ಯಾಸಕ್ಕೆ ಬಾರದ ರೋಹಿತ್
Indian Cricket Team: ಆಟಗಾರರ ಮತ್ತು ಕೋಚ್ ನಡುವಿನ ಚರ್ಚೆ ಅವರ ನಡುವೆ ಉಳಿಯಬೇಕು. ಡ್ರೆಸ್ಸಿಂಗ್ ರೂಮ್ನಲ್ಲಿ ನಡೆಯುವ ಯಾವುದೇ ಸಂಭಾಷಣೆ ಡ್ರೆಸ್ಸಿಂಗ್ ರೂಮ್ನಲ್ಲಿಯೇ ಇರಬೇಕು’ ಎಂದು ಗೌತಮ್ ಗಂಭೀರ್ ಸೂಚಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಆಗಿರುವ ಚರ್ಚೆಗಳು ಲೀಕ್ ಆಗಿವೆ ಎಂಬುದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಭಾರತ ತಂಡದ ಹೆಡ್ಕೋಚ್ ಗೌತಮ್ ಗಂಭೀರ್ ಅವರು, 'ಡ್ರೆಸ್ಸಿಂಗ್ ಕೋಣೆಯಲ್ಲಿನ ಚರ್ಚೆ ಎಷ್ಟು ಗೌಪ್ಯವಾಗಿರುತ್ತವೋ ಅಷ್ಟು ಉತ್ತಮ ಎಂದು ತಾಕೀತು ಮಾಡಿದ್ದಾರೆ. ಇದೇ ವೇಳೆ ಡ್ರೆಸ್ಸಿಂಗ್ ರೂಮ್ನಲ್ಲಿ ಬಿರುಕು ಉಂಟಾಗಿದೆ ಎನ್ನುವ ವರದಿಗಳನ್ನು ಭಾರತ ತಂಡದ ಕೋಚ್ ತಳ್ಳಿಹಾಕಿದ್ದಾರೆ. ಮತ್ತೊಂದೆಡೆ ತಂಡದ ಪ್ರದರ್ಶನದಲ್ಲಿ ಭಾರತದ ಸಹಾಯಕ ಸಿಬ್ಬಂದಿಗೆ ಪರಿಶ್ರಮ ಹೇಗಿದೆ ಎಂಬುದಕ್ಕೆ ಸಂಬಂಧಿಸಿ ಬಿಸಿಸಿಐ ಬೆಂಡೆತ್ತಿದೆ.
ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನಾ ದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, ‘ಆಟಗಾರ ಎಂದ ಮೇಲೆ ಆತನ ಆಟದ ಮೇಲೆ ತನ್ನ ಸಾಮರ್ಥ್ಯ ಹೊಂದಿರುತ್ತಾರೆ. ಹೀಗಾಗಿ ಅಂತಹ ಕ್ರಿಕೆಟಿಗರ ಸಹಜ ಆಟವನ್ನು ಬೆಂಬಲಿಸುವುದು ಉತ್ತಮ’ ಎಂದ ಅವರು, ‘ಆಟಗಾರರ ಮತ್ತು ಕೋಚ್ ನಡುವಿನ ಚರ್ಚೆ ಅವರ ನಡುವೆ ಉಳಿಯಬೇಕು. ಡ್ರೆಸ್ಸಿಂಗ್ ರೂಮ್ನಲ್ಲಿ ನಡೆಯುವ ಯಾವುದೇ ಸಂಭಾಷಣೆ ಡ್ರೆಸ್ಸಿಂಗ್ ರೂಮ್ನಲ್ಲಿಯೇ ಇರಬೇಕು’ ಎಂದು ಸೂಚಿಸಿದ್ದಾರೆ. ಬಿರುಕು ಉಂಟಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಹಾಗಾಗಿ ಇದಕ್ಕೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದಿದ್ದಾರೆ.
ಪ್ರತಿ ಪಂದ್ಯದಲ್ಲೂ ಒಬ್ಬ ಆಟಗಾರ ಮಾತ್ರ ಉತ್ತಮ ಪ್ರದರ್ಶನ ನೀಡಿದರೆ ಸಾಲದು. ಒಂದು ವೇಳೆ ವೈಫಲ್ಯ ಅನುಭವಿಸಿದರೆ ಅದಕ್ಕೆ ತಕ್ಕಂತ ತಯಾರಿ ನಡೆಸಬೇಕು, ತಂಡದ ಜೊತೆಗೆ ಚರ್ಚಿಸಿ ತನ್ನನ್ನು ತಾನು ಉತ್ತಮಪಡಿಸಿಕೊಳ್ಳಬೇಕು ಎಂದು ಗಂಭೀರ್ ಸೂಚನೆ ನೀಡಿದ್ದಾರೆ. ಆದರೆ ಡ್ರೆಸ್ಸಿಂಗ್ ರೂಮ್ನಲ್ಲಿ ನಡೆದ ಚರ್ಚೆಯ ಬಗ್ಗೆ ತಿಳಿದುಕೊಳ್ಳಲು ಮಾಧ್ಯಮಗಳಿಗೆ ಇಷ್ಟೊಂದು ಕುತೂಹಲವೇಕೆ? ಪಂದ್ಯದ ನಂತರ ಆಟಗಾರರು ಮತ್ತು ಕೋಚ್ಗಳ ನಡುವೆ ನಡೆಯುವ ಸಹಜ ಪ್ರಕ್ರಿಯೆ. ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವರದಿಗಳನ್ನು ನೋಡಿದರೆ ಹಾಸ್ಯಾಸ್ಪದ ಎನಿಸುತ್ತಿದೆ ಎಂದಿದ್ದಾರೆ.
ರೋಹಿತ್ ಜೊತೆಗಿನ ಸಂಬಂಧ ಹಳಸಿದೆ ಎಂಬುದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ನಾವು ಇಬ್ಬರು ಉತ್ತಮವಾಗಿಯೇ ಇದ್ದೇವೆ. ನಮ್ಮಿಬ್ಬರ ನಡುವೆ ಎಲ್ಲವೂ ಸರಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ರೋಹಿತ್ ಶರ್ಮಾ ಅವರು ಪ್ಲೇಯಿಂಗ್ 11ನಲ್ಲಿ ಇರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸದೆ ನಿರಾಕರಿಸಿದ ಗಂಭೀರ್, ಪಿಚ್ ಮತ್ತು ವಿಕೆಟ್ ನೋಡಿಕೊಂಡು ತಂಡವನ್ನು ನಿರ್ಧರಿಸುತ್ತೇವೆ ಎಂದಷ್ಟೇ ಸುಮ್ಮನಾದರು. ಡ್ರೆಸ್ಸಿಂಗ್ ರೂಮ್ನಲ್ಲಿ ಏನೆಲ್ಲಾ ನಡೆಯುತ್ತದೆ ಎಂದು ಇಲ್ಲಿ ಹೇಳೋಕೆ ಸಾಧ್ಯವಿಲ್ಲ. ನಮ್ಮಿಬ್ಬರ ಸಂಬಂಧ ಹದಗೆಟ್ಟಿದೆ ಎನ್ನುವುದು ಸತ್ಯಕ್ಕೆ ದೂರವಾದ ವರದಿಗಳು ಎಂದು ಹೇಳಿದ್ದಾರೆ. ಹೀಗಾಗಿ ರೋಹಿತ್ ಆಡುವುದು ಅನುಮಾನ ಎನ್ನುವಂತಾಗಿದೆ.
ಮೆಲ್ಬೋರ್ನ್ ಟೆಸ್ಟ್ ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್ ಮೀಟಿಂಗ್ನಲ್ಲಿ ಮುಖ್ಯ ಕೋಚ್ ಗಂಭೀರ್, ಸೀನಿಯರ್ ಆಟಗಾರರ ಕಳಪೆ ಪ್ರದರ್ಶನವನ್ನು ಉದ್ದೇಶಿಸಿ ಇನ್ಮುಂದೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ರು ಎನ್ನಲಾಗಿದೆ. ಈ ಕುರಿತು ಸಾಕಷ್ಟು ಚರ್ಚೆ ಏರ್ಪಟ್ಟಿತ್ತು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಐದನೇ ಮತ್ತು ಅಂತಿಮ ಪಂದ್ಯ ಜನವರಿ 3 ರಿಂದ ಸಿಡ್ನಿಯಲ್ಲಿ ನಡೆಯಲಿದೆ. ಬಿಜಿಟಿ ಸರಣಿಯನ್ನು ಉಳಿಸಲು ಮತ್ತು ಡಬ್ಲ್ಯುಟಿಸಿ ಫೈನಲ್ನ ಭರವಸೆಯನ್ನು ಜೀವಂತವಾಗಿಡಲು ಭಾರತವು ಈ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕು. ಸದ್ಯ ಮುಗಿದ 4 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 1-2 ಮುನ್ನಡೆ ಸಾಧಿಸಿದೆ.
ಭಾರತದ ಕೋಚಿಂಗ್ ಸಿಬ್ಬಂದಿಗೆ ಬೆಂಡೆತ್ತಿದ ಬಿಸಿಸಿಐ
ಬಿಜಿಟಿ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದೆ. ಗಂಭೀರ್ ಅವರ ನೆಚ್ಚಿನ ಸಹಾಯಕ ಸಿಬ್ಬಂದಿ ಅಭಿಷೇಕ್ ಶರ್ಮಾ ವಿರುದ್ಧ ಬಿಸಿಸಿಐ ಕಿಡಿಕಾರಿದೆ. ಜೊತೆಗೆ ಕೋಚಿಂಗ್ ಸಿಬ್ಬಂದಿ ಪ್ರದರ್ಶನ ಸಮಾಧಾನ ತಂದಿಲ್ಲ. ಯಾರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಬಿಸಿಸಿಐ ಅಧಿಕಾರಿಗಳ ಆರೋಪ. ಸುದ್ದಿ ಸಂಸ್ಥೆಯೊಂದರ ಪ್ರಕಾರ, ಒಂದು ವೇಳೆ ಭಾರತ ತಂಡ ಉತ್ತಮ ಪ್ರದರ್ಶನ ನೀಡದಿದ್ದರೆ, ಗೌತಮ್ ಗಂಭೀರ್ ಕೋಚ್ ಹುದ್ದೆ ಕಳೆದುಕೊಳ್ಳಬಹುದು ಎಂದು ಎಂದು ಹೆಸರು ಹೇಳಲಿಚ್ಛಿಸದ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ ಎಂಬುದನ್ನು ಕಾದು ನೋಡೋಣ.
ಸ್ಲಿಪ್ ಕ್ಯಾಚ್ ಪ್ರಾಕ್ಟೀಸ್ಗೆ ಬಾರದ ರೋಹಿತ್
ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ರೋಹಿತ್ ಶರ್ಮಾ, ಗೌತಮ್ ಗಂಭೀರ್ ಮತ್ತು ಜಸ್ಪ್ರೀತ್ ಬುಮ್ರಾ ತೀವ್ರ ಚರ್ಚೆಯಲ್ಲಿ ತೊಡಗಿದ್ದ ಫೋಟೋಗಳು ವೈರಲ್ ಆಗಿವೆ. ಆದರೆ, ರೋಹಿತ್ ಆಡುತ್ತಾರೋ ಇಲ್ಲವೋ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದಾಗ್ಯೂ, ರೋಹಿತ್ ಅವರನ್ನು ಕೈಬಿಡುವ ಕೆಲವು ಸುಳಿವು ಸಿಕ್ಕಿದೆ. ಅದಕ್ಕೆ ಅವರು ಅಭ್ಯಾಸದಿಂದ ದೂರ ಇರುವುದೇ ಕಾರಣ. ಅಭ್ಯಾಸದ ವೇಳೆ ರೋಹಿತ್ ಶರ್ಮಾ ಹೊಸ ಸ್ಲಿಪ್ ಕಾರ್ಡನ್ ಭಾಗವಾಗಿಲ್ಲ. ಕೊಹ್ಲಿ ಪ್ರಥಮ, ಕೆಎಲ್ 2ನೇ ಮತ್ತು ರೆಡ್ಡಿ ಮೂರನೇ ಸ್ಥಾನದಲ್ಲಿದ್ದರು. ಶುಬ್ಮನ್ ಗಿಲ್ ಸ್ಪಿನ್ನರ್ಗಾಗಿ ಸ್ಲಿಪ್ಗಳಲ್ಲಿ ಕ್ಯಾಚ್ ತೆಗೆದುಕೊಳ್ಳುವ ಅಭ್ಯಾಸ ಮಾಡುತ್ತಿದ್ದರು. ಇವರಲ್ಲದೆ, ಯಶಸ್ವಿ ಜೈಸ್ವಾಲ್ ಕೂಡ ಸ್ಲಿಪ್ನಲ್ಲಿ ಕಾಣಿಸಿಕೊಂಡರು.