ರಾಹುಲ್ ದ್ರಾವಿಡ್ ಬಳಿಕ ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆಗುವುದು ಖಚಿತ; ಬಿಸಿಸಿಐ ಅಧ್ಯಕ್ಷ ಹೇಳಿದ್ದೇನು?
Rahul Dravid and Gautam Gambhir: ಟಿ20 ವಿಶ್ವಕಪ್ 2024 ಮುಕ್ತಾಯದೊಂದಿಗೆ ರಾಹುಲ್ ದ್ರಾವಿಡ್ ಹೆಡ್ಕೋಚ್ ಅವಧಿ ಮುಕ್ತಾಯವಾಗಿದೆ. ಅವರ ಸ್ಥಾನ ತುಂಬಲು ಗೌತಮ್ ಗಂಭೀರ್ ಮುಂಚೂಣಿಯಲ್ಲಿದ್ದಾರೆ.
ಟೀಮ್ ಇಂಡಿಯಾಗೆ ವಿಶ್ವ ಕಿರೀಟ ತೊಡಿಸಿದ ಹೆಡ್ಕೋಚ್ ರಾಹುಲ್ ದ್ರಾವಿಡ್ (Rahul Dravid) ತನ್ನ ಅಧಿಕಾರ ತ್ಯಜಿಸಿದ್ದಾರೆ. ಆಟಗಾರನಾಗಿ ಸಾಧಿಸಲಾಗದ್ದನ್ನು ಕೋಚ್ ಆಗಿ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಈ ಅವರ ಸ್ಥಾನಕ್ಕೆ ಹಲವರ ಹೆಸರುಗಳು ತೇಲಿ ಬರುತ್ತಿವೆ. ಈ ಪೈಕಿ ಮುಂಚೂಣಿಯಲ್ಲಿರುವ ಹೆಸರು ಅಂದರೆ ಕೋಲ್ಕತಾ ನೈಟ್ ರೈಡರ್ ಮೆಂಟರ್ ಗೌತಮ್ ಗಂಭೀರ್ (Gautam Gambhir). ವರದಿಗಳ ಪ್ರಕಾರ ಗಂಭೀರ್ ಅವರನ್ನೇ ಮುಖ್ಯಕೋಚ್ ಆಗಿ ನೇಮಕ ಮಾಡುವುದು ಬಹುತೇಕ ಖಚಿತವಾಗಿದೆ. ಆದರೆ, ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಆದಾಗ್ಯೂ, ಸುದ್ದಿ ಸಂಸ್ಥೆ ಎಎನ್ಐ ಜೊತೆಗಿನ ಇತ್ತೀಚಿನ ಸಂವಾದದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಗಂಭೀರ್ ಅವರಿಗೆ ಭಾರತದ ಕೋಚ್ ಹುದ್ದೆಯನ್ನು ನೀಡಲಾಗಿದೆ ಎಂದು ದೃಢಪಡಿಸಿದ್ದಾರೆ. ಅದೇ ವೇಳೆ ಗಂಭೀರ್ ಅವರು ತಮ್ಮ ಅನುಭವ ಪರಿಗಣಿಸಿ ಈ ಕೆಲಸವನ್ನು ವಹಿಸಿಕೊಂಡರೆ ಅದು ಭಾರತೀಯ ಕ್ರಿಕೆಟ್ಗೆ ಒಳ್ಳೆಯದು ಎಂದು ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ. ಕೋಚ್ ಹುದ್ದೆ ನೀಡಲಾಗಿದೆ ಎಂದವರು ನಂತರ ಒಪ್ಪಿಗೆ ನೀಡಿದರೆ ಉತ್ತಮ ಎಂದಿದ್ದು, ಗೊಂದಲಮಯಗೊಳಿಸಿದೆ.
ರೋಜರ್ ಬಿನ್ನಿ ಹೇಳಿದ್ದೇನು?
ಗೌತಮ್ ಗಂಭೀರ್ ಅವರಿಗೆ ಸಾಕಷ್ಟು ಅನುಭವವಿದೆ. ಅವರು ಕೆಲಸ ವಹಿಸಿಕೊಂಡರೆ ಅದು ಖಂಡಿತವಾಗಿಯೂ ಭಾರತೀಯ ಕ್ರಿಕೆಟ್ಗೆ ಉತ್ತಮ. ಕ್ರಿಕೆಟ್ ಆಡಿದ ಅನುಭವ ಹೊಂದಿರುವ ಕೋಚ್ಗಳ ಅಗತ್ಯ ಇದೆ. ಆಟದ ಎಲ್ಲಾ 3 ಸ್ವರೂಪಗಳಲ್ಲಿ ಆಡಿದ್ದಾರೆ ಎಂದು ಬಿನ್ನಿ ಎಎನ್ಐಗೆ ತಿಳಿಸಿದ್ದಾರೆ. ಗಂಭೀರ್ ಈ ಹಿಂದೆ ಭಾರತ ತಂಡಕ್ಕೆ ಕೋಚ್ ಆಗಲು ಇಷ್ಟಪಡುತ್ತೇನೆ ಎಂದು ಒಪ್ಪಿಕೊಂಡಿದ್ದರು ಎಂದು ಬಿನ್ನಿ ಹೇಳಿದ್ದಾರೆ.
ಪಿಟಿಐ ಜೊತೆಗಿನ ಸಂವಾದದಲ್ಲಿ ಮಾತನಾಡಿದ್ದ ಗಂಭೀರ್, ನಾನು ಭಾರತ ತಂಡಕ್ಕೆ ತರಬೇತುದಾರನಾಗಲು ಇಷ್ಟಪಡುತ್ತೇನೆ. ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ. ನೀವು 140 ಕೋಟಿ ಭಾರತೀಯರು ಮತ್ತು ವಿಶ್ವದಾದ್ಯಂತದ ಜನರನ್ನು ಪ್ರತಿನಿಧಿಸುತ್ತಿದ್ದೀರಿ ಎಂದು ಗಂಭೀರ್ ಹೇಳಿದ್ದರು. ಇದೀಗ ದ್ರಾವಿಡ್ ಅಧಿಕಾರ ಮುಕ್ತಾಯಗೊಂಡ ಬೆನ್ನಲ್ಲೇ ಗಂಭೀರ್ ಶೀಘ್ರದಲ್ಲೇ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ತಂಡದ ಆಯ್ಕೆ ಮತ್ತು ಸಹಾಯಕ ಸಿಬ್ಬಂದಿಯ ಮೇಲೆ ಸಂಪೂರ್ಣ ಸ್ವಾಯತ್ತತೆ, ಟೆಸ್ಟ್ ಕ್ರಿಕೆಟ್ಗೆ ಪ್ರತ್ಯೇಕ ತಂಡ ಮತ್ತು ರೋಹಿತ್ ಶರ್ಮಾ ಅವರಂತಹ ಹಿರಿಯ ಆಟಗಾರರನ್ನು ವಜಾಗೊಳಿಸುವ ಅಧಿಕಾರ ಸೇರಿದಂತೆ ಮುಖ್ಯ ಕೋಚ್ ಪಾತ್ರವನ್ನು ತೆಗೆದುಕೊಳ್ಳಲು ಗಂಭೀರ್ 5 ಷರತ್ತುಗಳನ್ನು ವಿಧಿಸಿದ್ದಾರೆ ಎಂದು ವರದಿಯಾಗಿದೆ. ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ಅವರು ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಪ್ರದರ್ಶನ ನೀಡದಿದ್ದರೆ, ಅವರನ್ನು ಕೈಬಿಡಬಹುದು ಎಂದು ಹೇಳಲಾಗಿದೆ.
ಕೋಚ್ ಆಗಿ ಗೌತಮ್ ಗಂಭೀರ್ ಅವರ ಅನುಭವ
ಗಂಭೀರ್ ಅವರಿಗೆ ಕೋಚಿಂಗ್ ಅನುಭವ ಹೆಚ್ಚಿಲ್ಲ. ಅವರು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಮತ್ತು ಕೋಲ್ಕತಾ ನೈಟ್ ರೈಡರ್ಸ್ಗೆ (ಕೆಕೆಆರ್) ಮೆಂಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಲಕ್ನೋ ಪರ ಆಡಿದ ಎರಡು ವರ್ಷಗಳ ಅವಧಿಯಲ್ಲಿ ಫ್ರಾಂಚೈಸಿ ಎರಡೂ ಬಾರಿಯೂ ಪ್ಲೇ ಆಫ್ ಹಂತ ತಲುಪಿದೆ. ಏತನ್ಮಧ್ಯೆ, ಈ ವರ್ಷ ಕೆಕೆಆರ್ಗೆ ಮೆಂಟರ್ ಆಗಿ ಮಾರ್ಗದರ್ಶಕರಾಗಿ ನೇಮಕಗೊಂಡ ಗಂಭೀರ್, 10 ವರ್ಷಗಳ ಅಂತರದ ನಂತರ ಐಪಿಎಲ್ 2024 ಟ್ರೋಫಿಯನ್ನು ಎತ್ತಲು ಫ್ರಾಂಚೈಸಿಗೆ ಸಹಾಯ ಮಾಡಿದರು.