ಶ್ರೀಲಂಕಾ ಏಕದಿನ ಸರಣಿಯಲ್ಲಿ ಆಡುವಂತೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಕೋಚ್ ಗೌತಮ್ ಗಂಭೀರ್ ಮನವಿ
ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಹೀಗಾಗಿ ಕೋಚ್ ಗೌತಮ್ ಗಂಭೀರ್, ಮೂವರು ಅನುಭವಿ ಆಟಗಾರರ ಬಳಿ ಆಡುವಂತೆ ಮನವಿ ಮಾಡಿದ್ದಾರೆ.
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಪಂದ್ಯವಳಿಯಲ್ಲಿ ಸೋತರೂ, ಈ ಬಾರಿಯ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದ ಬಳಿಕ ಭಾರತ ಕ್ರಿಕೆಟ್ ತಂಡ ತುಸು ನಿರಾಳವಾಗಿದೆ. ಇದೀಗ ಟೀಮ್ ಇಂಡಿಯಾ ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಪ್ರಮುಖ ಐಸಿಸಿ ಟೂರ್ನಮೆಂಟ್‌ಗೆ ಸಿದ್ಧತೆಯಾಗಿ ತಂಡವು ಎರಡು ಸರಣಿಗಳಲ್ಲಿ ಕೇವಲ ಆರು ಏಕದಿನ ಪಂದ್ಯಗಳಲ್ಲಿ ಮಾತ್ರ ಆಡಲಿದೆ. ಮೊದಲ ಸರಣಿಯು ಆಗಸ್ಟ್ 3ರಿಂದ 7ರವರೆಗೆ ಶ್ರೀಲಂಕಾದಲ್ಲಿ ನಡೆಯಲಿದ್ದು, ಎರಡನೇ ಸರಣಿಯು 2025ರ ಫೆಬ್ರವರಿ ಮೊದಲ ವಾರದಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿದೆ.
ಈಗಾಗಲೇ, ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಹಿಂದೆ ಸರಿದಿರುವ ಕುರಿತು ಮಾಹಿತಿ ಲಭಿಸಿದೆ. ವೈಯಕ್ತಿಕ ಕಾರಣಗಳನ್ನು ನೀಡಿ ಅವರು ಸರಣಿಯಿಂದ ವಿರಾಮ ಕೇಳಿದ್ದಾರೆ. ಅತ್ತ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಕೂಡಾ ಏಕದಿನ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಈ ತಿಂಗಳ ಆರಂಭದಲ್ಲಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಹೀಗಾಗಿ ಅನುಭವಿ ಆಟಗಾರರೇ ಸರಣಿಯಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಿದೆ.
“ಏಕದಿನ ತಂಡಕ್ಕೆ ವಿರಾಟ್ ಹಾಗೂ ರೋಹಿತ್ ಸ್ವಯಂಚಾಲಿತ ಆಯ್ಕೆಯಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮುಂಚಿತವಾಗಿ ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳು ಅವರಿಗೆ ಸಾಕಷ್ಟು ಪ್ರಮಾಣದ ಅಭ್ಯಾಸ ನೀಡುತ್ತದೆ. ಮುಂದಿನ ಕೆಲವು ತಿಂಗಳುಗಳವರೆಗೆ, ಅವರಿಬ್ಬರೂ ಟೆಸ್ಟ್ ಪಂದ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಭಾರತವು ಸೆಪ್ಟೆಂಬರ್‌ನಿಂದ ಜನವರಿ ತಿಂಗಳವರೆಗೆ ಬರೋಬ್ಬರಿ 10 ಪಂದ್ಯಗಳನ್ನು ಆಡಲಿದೆ,” ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿದೆ.
ಎಲ್ಲರೂ ತಂಡದಲ್ಲಿರಬೇಕು
ಇತ್ತ, ಭಾರತದ ತಂಡದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಭಿಪ್ರಾಯ ಬೇರೆಯೇ ಇದೆ. ಶ್ರೀಲಂಕಾ ಪ್ರವಾಸದಲ್ಲಿ ಕೊಹ್ಲಿ, ರೋಹಿತ್ ಮತ್ತು ಬುಮ್ರಾ ಏಕದಿನ ಸರಣಿಯ ಭಾಗವಾಗಬೇಕೆಂದು ಗೌತಿ ಬಯಸಿದ್ದಾರೆ. ಬಿಸಿಸಿಐ ಈ ವಾರದಲ್ಲೇ ಈ ಎರಡು ಸರಣಿಗಳಿಗೆ ತಂಡವನ್ನು ಪ್ರಕಟಿಸಲಿದೆ. ಅದಕ್ಕೂ ಮೊದಲು ಗಂಭೀರ್ ಈ ಮೂವರಿಗೂ ಮನವಿ ಮಾಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆದರೆ, ಟಿ20 ವಿಶ್ವಕಪ್ ಗೆಲುವಿನ ಬಳಿಕ ಆಟಗಾರರು ಪ್ರಸ್ತುತ ವಿರಾಮದಲ್ಲಿದ್ದಾರೆ. ಹೆಚ್ಚಿನ ಆಟಗಾರರು ತಮ್ಮ ಕುಟುಂಬಗಳೊಂದಿಗೆ ವಿದೇಶದಲ್ಲಿರುವುದರಿಂದ ಅವರು ಇನ್ನೂ ತವರಿಗೆ ಮರಳಿಲ್ಲ. ಹೀಗಾಗಿ ಈ ಮೂವರನ್ನು ಗಂಭಿರ್ ಸಂಪರ್ಕಿಸಿ ತಂಡಕ್ಕೆ ಮರಳುವಂತೆ ಕೇಳಿಕೊಂಡಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಮಹತ್ವದ ಐಸಿಸಿ ಟೂರ್ನಿಯಾಗಿರುವ ಚಾಂಪಿಯನ್ಸ್ ಟ್ರೋಫಿಗೂ ಮೊದಲು ಭಾರತವು ಬೆರಳೆಣಿಕೆಯಷ್ಟು ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದೆ. ಈ ವರ್ಷ ಶ್ರೀಲಂಕಾ ಸರಣಿಯಲ್ಲಿ ಮಾತ್ರ ಏಕದಿನ ಸ್ವರೂಪದಲ್ಲಿ ತಂಡ ಕಣಕ್ಕಿಳಿಯಲಿದೆ. ಹೀಗಾಗಿ ಗಂಭೀರ್ ವಿನಂತಿಯಲ್ಲೂ ಅರ್ಥವಿದೆ. ಎಲ್ಲಾ ಆಟಗಾರರು ತಂಡ ಸೇರಿಕೊಂಡರೆ, ಐಸಿಸಿ ಪಂದ್ಯಾವಳಿಗೆ ತಯಾರಿ ನಡೆಸಲು ಗಂಭೀರ್‌ಗೂ ಸುಲಭವಾಗಲಿದೆ. ಆ ಮೂಲಕ ಬಲಿಷ್ಠ ತಂಡ ಕಟ್ಟಲು ಈಗಿನಿಂದಲೇ ಯೋಜನೆ ರೂಪಿಸಬಹುದು.
ಭಾರತ ಕ್ರಿಕೆಟ್ ತಂಡದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಜಿಂಬಾಬ್ವೆ ಸರಣಿಯಿಂದ ಭಾರತಕ್ಕೆ ಆಲ್ರೌಂಡ್ ಲಾಭ; ಹಾರ್ದಿಕ್ ಪಾಂಡ್ಯ ನಾಯಕತ್ವಕ್ಕೆ ಹೆಚ್ಚಿದ ಬಲ