ವಿರಾಟ್ ಬ್ಯಾಟ್‌ನಿಂದ ಅಬ್ಬರಿಸಿದ ಆಕಾಶ್ ದೀಪ್; ಡ್ರೆಸ್ಸಿಂಗ್ ರೂಮ್‌ನಲ್ಲಿ ಸಂಭ್ರಮ, ಗಂಭೀರ್-ಕೊಹ್ಲಿ ರಿಯಾಕ್ಷನ್ ನೋಡಿ
ಆಕಾಶ್ ದೀಪ್ ಮತ್ತು ಜಸ್ಪ್ರೀತ್ ಬುಮ್ರಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಫಾಲೋ-ಆನ್ ತಪ್ಪಿಸಿದರು. ಈ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ರಿಯಾಕ್ಷನ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಬ್ಬಾ ಟೆಸ್ಟ್ ಅಂತಿಮ ದಿನದತ್ತ ಸಾಗುತ್ತಿದ್ದಂತೆಯೇ ಪಂದ್ಯದ ರೋಚಕತೆಯೂ ಹೆಚ್ಚುತ್ತಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ 3ನೇ ಟೆಸ್ಟ್ ಪಂದ್ಯದ 4ನೇ ದಿನದಂದು, ಭಾರತ ಸೋಲಿನ ಭೀತಿಯಿಂದ ಸದ್ಯ ಪಾರಾಗಿದೆ. ಆದರೆ, ಅಂತಿಮ ದಿನದಾಟದಲ್ಲಿ ಫಲಿತಾಂಶ ಏನಾದರೂ ಆಗಬಹುದು. ಟೀಮ್ ಇಂಡಿಯಾ ಪಂದ್ಯ ಗೆಲ್ಲುವ ಅವಕಾಶ ಕೈತಪ್ಪಿದೆ. ಆದರೆ ಆಸೀಸ್ ತಂಡಕ್ಕೆ ಗೆಲ್ಲುವ ಅವಕಾಶವಿದೆ. ಮಳೆ ಆಗಾಗ ಅಡ್ಡಿಪಡಿಸುತ್ತಿದ್ದ ನಡುವೆಯೇ ಬ್ಯಾಟಿಂಗ್ ನಡೆಸಿದ ಭಾರತ, ತನ್ನ ಬ್ಯಾಟಿಂಗ್ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ವಿಫಲವಾಯ್ತು. ತಂಡ ಫಾಲೊ-ಆನ್ ತಪ್ಪಿಸುವಲ್ಲಿ ಯಶಸ್ವಿಯಾಗುತ್ತಾ ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಆದರೆ, ಜಸ್ಪ್ರೀತ್ ಬುಮ್ರಾ ಹಾಗೂ ಆಕಾಶ್ ದೀಪ್ ಅದರಲ್ಲಿ ಯಶಸ್ವಿಯಾಗಿದ್ದಾರೆ.
ತಂಡದ ಮೊತ್ತ 213 ರನ್ ಆಗುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿತ್ತು. ಆ ಸಮಯದಲ್ಲಿ ಫಾಲೊ-ಆನ್‌ನಿಂದ ತಪ್ಪಿಸಲು ತಂಡಕ್ಕೆ ಇನ್ನೂ 33 ರನ್‌ಗಳ ಅಗತ್ಯವಿತ್ತು. ಜಸ್ಪ್ರೀತ್ ಬುಮ್ರಾ ಮತ್ತು ಆರ್‌ಸಿಬಿ ಮಾಜಿ ಆಟಗಾರ ಆಕಾಶ್ ದೀಪ್, ಭಾರತದ ಮೊತ್ತವನ್ನು 246 ರನ್‌ಗಳ ಗಡಿ ದಾಟಿಸಿದರು. 54 ಎಸೆತಗಳಲ್ಲಿ ಅಜೇಯ 39 ರನ್‌ಗಳ ಜೊತೆಯಾಟವಾಡಿ ಗಮನ ಸೆಳೆದರು. ಇದರೊಂದಿಗೆ ಐದನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಮತ್ತೆ ಬ್ಯಾಟಿಂಗ್ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಭಾರತಕ್ಕೆ ಪಂದ್ಯವನ್ನು ಡ್ರಾ ಮಾಡುವ ಭರವಸೆ ಹೆಚ್ಚಿದೆ.
ಸಾಮರ್ಥಯ ತೋರಿಸಿದ ಬುಮ್ರಾ-ಆಕಾಶ್ ದೀಪ್
ಕಳೆದ ದಿನವಷ್ಟೇ ಪತ್ರಕರ್ತರೊಬ್ಬರು ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಪ್ರಶ್ನಿಸಿದ್ದರು. ಆ ಕ್ಷಣವೇ ಹಾಸ್ಯಭರಿತ ಉತ್ತರ ನೀಡಿದ್ದ ವೇಗಿ, ಇಂದು ಅದಕ್ಕೆ ಸೂಕ್ತ ಉತ್ತರ ನೀಡಿದರು. 27 ಎಸೆತಗಳಲ್ಲಿ 10 ರನ್ ಗಳಿಸಿ ಅಜೇಯರಾಗಿ ಉಳಿದರು. ರನ್ ಕಡಿಮೆಯಾದರೂ ಅವರು ತಮ್ಮ ವಿಕೆಟ್ ಉಳಿಸಿಕೊಂಡು ಆಡಿದ್ದು ಪ್ರಮುಖ ಅಂಶ. ಅದರಲ್ಲೂ ಒಂದು ಸಿಕ್ಸ್ ಸಿಡಿಸಿ ಗಮನ ಸೆಳೆದರು. ಇದೇ ವೇಳೆ ವಿರಾಟ್ ಕೊಹ್ಲಿ ನೀಡಿದ ಬ್ಯಾಟ್ ಹಿಡಿದು ಅಬ್ಬರಿಸಿದ ಆಕಾಶ್ ದೀಪ್ 31 ಎಸೆತಗಳಲ್ಲಿ 27 ರನ್ ಸಿಡಿಸಿದರು. ಆ ಮೂಲಕ ತಂಡ ಫಾಲೊ-ಆನ್‌ನಿಂದ ತಪ್ಪಿಸುವುದು ಮಾತ್ರವಲ್ಲದೆ, ತಂಡದ ಮೊತ್ತ 9 ವಿಕೆಟ್ ನಷ್ಟಕ್ಕೆ 252 ರನ್‌ಗೆ ಏರಿಸಿದರು.
ಬುಧವಾರ ಬ್ರಿಸ್ಬೇನ್‌ನಲ್ಲಿ ಮಳೆಯಾಗುವ ಸಂಭವವಿದೆ. ಶೇಕಡಾ 99.9ರಷ್ಟು ಮಳೆ ಸಂಭಾವ್ಯತೆ ಇದ್ದು, ಪಂದ್ಯ ರದ್ದು ಅಥವಾ ಡ್ರಾಗೊಳ್ಳುವ ಸಾಧ್ಯತೆಯೂ ಹೆಚ್ಚಿದೆ.
ಜವಾಬ್ದಾರಿಯುತ ಆಟದೊಂದಿಗೆ ಪ್ರೇಕ್ಷಕರನ್ನು ರಂಜಿಸಿದ ಬುಮ್ರಾ, ಪ್ಯಾಟ್ ಕಮಿನ್ಸ್ ಅವರ ಎಸೆತಕ್ಕೆ ಸಿಕ್ಸರ್ ಬಾರಿಸಿದರು. ಆ ನಂತರ ಆಕಾಶ್ ಕೂಡಾ ಅಬ್ಬರಿಸತೊಡಗಿದರು. ಕಮಿನ್ಸ್ ಎಸೆತದಲ್ಲಿ ಬೌಂಡರಿ ಬಾರಿಸಿದ ಆಕಾಶ್ ದೀಪ್, ಫಾಲೊ-ಆನ್ ತಪ್ಪಿಸಲು ಬೇಕಿದ್ದ ಅಗತ್ಯ ಮುನ್ನಡೆಯನ್ನು ಸಾಧಿಸಿದರು. ಆಗ ಟೀಮ್ ಇಂಡಿಯಾ ಡ್ರೆಸ್ಸಿಂಗ್ ಕೋಣೆಯಲ್ಲಿ ಸಂಭ್ರಮ ಕಾಣಿಸಿಕೊಂಡಿತು. ಮುಖ್ಯ ಕೋಚ್ ಗೌತಮ್ ಗಂಭೀರ್ ಜೋಶ್‌ನಿಂದ ಸಂಭ್ರಮಿಸುತ್ತಾ ತಮ್ಮ ಆಸನದಿಂದ ಜಿಗಿದು ಮತ್ತೆ ಕೂತರು. ವಿರಾಟ್ ಕೊಹ್ಲಿ ಎಂದಿನಂತೆ ತಮ್ಮ ಆಕ್ರಮಣಕಾರಿ ಹೈ ಫೈವ್‌ನೊಂದಿಗೆ ಖುಷಿಪಟ್ಟರು.
ಸಂಭ್ರಮಾಚರಣೆ ವಿಡಿಯೋ
ಆ ನಂತರ ಆಕಾಶ್ ದೀಪ್ ಆಕರ್ಷಕ ಸಿಕ್ಸರ್ ಸಿಡಿಸಿದರು. ಈ ವೇಳೆಯೂ ಡ್ರೆಸ್ಸಿಂಗ್ ಕೋಣೆಯಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು. ವಿರಾಟ್ ಕೊಹ್ಲಿ ಚೆಂಡನ್ನೇ ನೋಡುತ್ತಾ ಅಚ್ಚರಿಯಿಂದ ಸಂಭ್ರಮಿಸಿದರು.
ಪಂದ್ಯದಲ್ಲಿ ಭಾರತ ತಂಡದ ಬಹುತೇಕ ಎಲ್ಲಾ ಬ್ಯಾಟರ್‌ಗಳು ವಿಫಲರಾದರು. ಆದರೆ, ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ತಲಾ ಅರ್ಧಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು. ನಾಯಕ ರೋಹಿತ್ ಶರ್ಮಾ ಕೇವಲ 10 ರನ್‌ಗಳಿಗೆ ನಿರ್ಗಮಿಸಿ ಮತ್ತೊಮ್ಮೆ ವಿಫಲರಾದರು. ಜಡೇಜಾ ಮತ್ತು ರಾಹುಲ್ ಐದನೇ ವಿಕೆಟ್‌ಗೆ 67 ರನ್ ಒಟ್ಟುಗೂಡಿಸಿದರು.
ಭಾರತ ತಂಡ ಇನ್ನೂ 193 ರನ್‌ಗಳ ಹಿನ್ನಡೆಯಲ್ಲಿದೆ. ಕೊನೆಯ ದಿನದಾಟದಲ್ಲಿ ಭಾರತವನ್ನು ಆಲೌಟ್ ಮಾಡಿದ ಬಳಿಕ ಆಸೀಸ್ ಬ್ಯಾಟಿಂಗ್ ಮಾಡಬೇಕಿದೆ. ತಂಡವು ವೇಗದ ಆಟಕ್ಕೆ ಮಣೆ ಹಾಕಿ, ಕಡಿಮೆ ಓವರ್‌ಗಳನ್ನು ಬಳಸಿ ಹೆಚ್ಚು ರನ್ ಗಳಿಸುವ ತಂತ್ರ ಅನುಸರಿಸಬಹುದು. ಆ ಬಳಿಕ ಭಾರತ ತಂಡಕ್ಕೆ ಹೆಚ್ಚು ಓವರ್‌ಗಳಿಗೆ ಬ್ಯಾಟಿಂಗ್ ಅವಕಾಶ ನೀಡಿ ಆಲೌಟ್ ಮಾಡುವ ಪ್ರಯತ್ನ ಮಾಡಬಹುದು.