ಚೇತೇಶ್ವರ ಪೂಜಾರ ಆಯ್ಕೆ ಬಯಸಿದ್ದ ಗಂಭೀರ್‌ಗೆ ನೋ ಎಂದ ಆಯ್ಕೆದಾರರು; ಅರ್ಹ ಆಟಗಾರನಿಲ್ಲದೆ ಟೀಮ್‌ ಇಂಡಿಯಾ ವೈಫಲ್ಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಚೇತೇಶ್ವರ ಪೂಜಾರ ಆಯ್ಕೆ ಬಯಸಿದ್ದ ಗಂಭೀರ್‌ಗೆ ನೋ ಎಂದ ಆಯ್ಕೆದಾರರು; ಅರ್ಹ ಆಟಗಾರನಿಲ್ಲದೆ ಟೀಮ್‌ ಇಂಡಿಯಾ ವೈಫಲ್ಯ

ಚೇತೇಶ್ವರ ಪೂಜಾರ ಆಯ್ಕೆ ಬಯಸಿದ್ದ ಗಂಭೀರ್‌ಗೆ ನೋ ಎಂದ ಆಯ್ಕೆದಾರರು; ಅರ್ಹ ಆಟಗಾರನಿಲ್ಲದೆ ಟೀಮ್‌ ಇಂಡಿಯಾ ವೈಫಲ್ಯ

ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗೆ ಭಾರತ ತಂಡದ ಆಯ್ಕೆಗೆ ಸಂಬಂಧಿಸಿದಂತೆ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಟೀಮ್ ಮ್ಯಾನೇಜ್‌ಮೆಂಟ್ ನಡುವೆ ಭಿನ್ನಾಭಿಪ್ರಾಯಗಳಿರುವ ಬಗ್ಗೆ ವರದಿಯಾಗಿದೆ. ಚೇತೇಶ್ವರ ಪೂಜಾರ ಆಯ್ಕೆಗೆ ಗಂಭೀರ್ ಒಲವು ತೋರಿದ್ದರು. ಆದರೆ ಅದು ಸಾಧ್ಯವಾಗಿಲ್ಲ.

ಚೇತೇಶ್ವರ ಪೂಜಾರ ಆಯ್ಕೆ ಬಯಸಿದ್ದ ಗಂಭೀರ್‌ಗೆ ಆಯ್ಕೆದಾರರು ನೋ ಎಂದ
ಚೇತೇಶ್ವರ ಪೂಜಾರ ಆಯ್ಕೆ ಬಯಸಿದ್ದ ಗಂಭೀರ್‌ಗೆ ಆಯ್ಕೆದಾರರು ನೋ ಎಂದ (AFP/PTI)

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲೂ ಸೋತ ನಂತರ, ಭಾರತ ಕ್ರಿಕೆಟ್‌ ತಂಡದ ಮೇಲಿನ ಟೀಕೆಗಳು ಹೆಚ್ಚುತ್ತಿವೆ. ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಟೀಮ್‌ ಇಂಡಿತಾ, ಆ ನಂತರ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಕಳಪೆ ಪ್ರದರ್ಶನ ನೀಡಿದೆ. ಸರಣಿಯುದ್ದಕ್ಕೂ ಕಳಪೆ ಪ್ರದರ್ಶನದ ನಂತರ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಟೀಮ್ ಮ್ಯಾನೇಜ್ಮೆಂಟ್ ನಡುವೆ ಬಿರುಕು ಉಂಟಾಗಿದೆ ಎಂದು ವರದಿಯಾಗಿದೆ. ತಂಡದ ಕಳಪೆ ಪ್ರದರ್ಶನದಿಂದ ಹತಾಶರಾಗಿರುವ ಗಂಭೀರ್, ತಂಡಕ್ಕೆ ಅನುಭವಿ ಬ್ಯಾಟರ್‌ ಚೇತೇಶ್ವರ ಪೂಜಾರ ಅವರನ್ನು ಸೇರಿಸಿಕೊಳ್ಳುವಂತೆ ಒತ್ತಡ ಹೇರಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಕೋಚ್‌ ಸಲಹೆಯನ್ನು ಆಯ್ಕೆದಾರರು ಕಿವಿಗೆ ಹಾಕಿಕೊಂಡಿಲ್ಲ.

ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಪ್ರಕಾರ, ಕೋಚ್‌ ಗಂಭೀರ್‌ ಹಾಗೂ ಮ್ಯಾನೇಜ್‌ಮೆಂಟ್‌ ನಡುವೆ ಭಿನ್ನಾಭಿಪ್ರಾಯಗಳಿವೆ. ಆಸೀಸ್‌ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಭಾರತ ತಂಡಕ್ಕೆ, ಚೇತೇಶ್ವರ ಪೂಜಾರ ಅವರಂಥಾ ಸ್ಟ್ಯಾಂಡಿಂಗ್‌ ಆಟಗಾರನ ಅಗತ್ಯವಿದೆ. ಆದರೆ, ಆಸ್ಟ್ರೇಲಿಯಾ ವಿರುದ್ಧದ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಬಳಿಕ ಅವರು ಭಾರತ ತಂಡದ ಪರ ಆಡಿಲ್ಲ. ಆವರೆಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಬ್ಯಾಟಿಂಗ್‌ ಲೈನಪ್‌ನ ಆಧಾರ ಸ್ತಂಭದಂತಿದ್ದ ಪೂಜಾರ, ಡಬ್ಲ್ಯುಟಿಸಿ ಫೈನಲ್‌ನಲ್ಲಿ 14 ಮತ್ತು 27 ರನ್‌ ಗಳಿಸಿದ್ದರು. ಹೀಗಾಗಿ ಅವರನ್ನು ತಂಡದ ಆಯ್ಕೆಗೆ ಪರಿಗಣಿಸಿಲ್ಲ.

ಪರ್ತ್‌ ಟೆಸ್ಟ್‌ನಲ್ಲಿ ಗೆದ್ದ ನಂತರವೂ, ಪೂಜಾರ ಅವರ ಸೇರ್ಪಡೆಗಾಗಿ ಗಂಭೀರ್ ವಾದಿಸಿದ್ದರು ಎಂದು ವರದಿಯಾಗಿದೆ.‌ ಏಕೆಂದರೆ 36 ವರ್ಷದ ಆಟಗಾರ ತಂಡಕ್ಕೆ ಬಂದರೆ, ಅವರ ಅನುಭವ ಮತ್ತು ಸ್ಥಿರತೆ ಟೀಮ್‌ ಇಂಡಿಯಾಗೆ ನೆರವಾಗಲಿದೆ.

ಕಾಂಗರೂ ನೆಲದಲ್ಲಿ ಪೂಜಾರ ಸ್ಥಿರ ಪ್ರದರ್ಶನ

ಆಸ್ಟ್ರೇಲಿಯಾದಲ್ಲಿ ಪೂಜಾರ ಅವರ ಒಟ್ಟಾರೆ ದಾಖಲೆ ಉತ್ತಮವಾಗಿದೆ. ಕಾಂಗರೂ ನೆಲದ ಭಿನ್ನ ಪಿಚ್‌ನಲ್ಲಿ ಆಡಿದ ಅನುಭವವೂ ಇದೆ. ಆಸೀಸ್‌ನಲ್ಲಿ ಆಡಿದ 11 ಟೆಸ್ಟ್‌ಗಳಲ್ಲಿ ಪೂಜಾರ 47.28ರ ಸರಾಸರಿಯಲ್ಲಿ 993 ರನ್ ಗಳಿಸಿದ್ದಾರೆ. ಆದರೂ ತಂಡದ ಆಯ್ಕೆಯಿಂದ ಹೊರಗಿಟ್ಟಿದ್ದು ಅಚ್ಚರಿ. ಅವರನ್ನು ಮತ್ತೆ ತಂಡಕ್ಕೆ ಕರೆತರುವ ಗಂಭೀರ್ ಬಯಕೆಯು, ಭಾರತದ ದುರ್ಬಲ ಅಗ್ರ ಕ್ರಮಾಂಕದ ಬಗ್ಗೆ ಹೆಚ್ಚುತ್ತಿರುವ ಕಳವಳವನ್ನು ಎತ್ತಿ ತೋರಿಸುತ್ತದೆ.

ಈ ನಡುವೆ ಮೆಲ್ಬೋರ್ನ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ನಿರಾಶಾದಾಯಕ ಸೋಲಿನ ನಂತರ, ಭಾರತದ ಆಟಗಾರರ ಪ್ರದರ್ಶನದ ಬಗ್ಗೆ ಮುಖ್ಯ ಕೋಚ್'ಗಂಭೀರ ಮೌಲ್ಯಮಾಪನ' ವರದಿ ನೀಡಿದ್ದಾರೆ ಎಂದು ವರದಿಯಾಗಿದೆ.

ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರ

ಆಸೀಸ್‌ ನೆಲದಲ್ಲಿ ಭಾರತದ ಸರಣಿ ಗೆಲುವಿನಲ್ಲಿ ಪೂಜಾರ ಅವರ ಪಾತ್ರ ಮಹತ್ವದ್ದು. 2018-19ರ ಸರಣಿಯಲ್ಲಿ ಒಟ್ಟು 521 ರನ್‌ ಗಳಿಸಿದ್ದ ಅವರು, ಭಾರತದ ಪರ ಗರಿಷ್ಠ ಸ್ಕೋರರ್ ಆಗಿದ್ದರು. ಕ್ರೀಸ್‌ಕಚ್ಚಿ ಆಡುವ ಅವರ ಸ್ಥಿರತೆಯನ್ನು ಎದುರಾಳಿ ಆಟಗಾರರು ಕೂಡಾ ಶ್ಲಾಘಿಸಿದ್ದಾರೆ. “ಚೇತೇಶ್ವರ ಪೂಜಾರ ಈ ಬಾರಿ ತಂಡದಲ್ಲಿ ಇಲ್ಲದಿರುವುದಕ್ಕೆ ನನಗೆ ಸಂತೋಷವಾಗಿದೆ. ಅವರು ಕ್ರೀಸ್‌ನಲ್ಲಿ ಸಾಕಷ್ಟು ಸಮಯ ಕಳೆಯುತ್ತಾರೆ,” ಎಂದು ಈ ಬಾರಿಯ ಬಾರ್ಡರ್-ಗವಾಸ್ಕರ್ ಸರಣಿಗೆ ಮುಂಚಿತವಾಗಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್ವುಡ್ ಹೇಳಿದ್ದರು.‌

ಪೂಜಾರ ತಂಡದಲ್ಲಿದ್ದಾಗ ಭಾರತದ ಪ್ರದರ್ಶನ ಉತ್ತಮವಾಗಿತ್ತು. ಆದರೆ, ಈಗ ತಂಡದಿಂದ ಕೈಬಿಟ್ಟು ಸಾಧಿಸಿದ್ದು ಏನೂ ಇಲ್ಲ. ತಂಡದ ಅಗ್ರ ಕ್ರಮಾಂಕ ಬಲಿಷ್ಠವಾಗಿಲ್ಲ. ಅಲ್ಲಿಂದ ಸ್ಥಿರ ಪ್ರದರ್ಶನ ಬಂದರೆ ಮಾತ್ರ ಮುಂದಿನ ಸರಣಿಯಲ್ಲಿ ಗೆಲುವು ಒಲಿಯಬಹುದು.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope

Whats_app_banner