ಕನ್ನಡ ಸುದ್ದಿ  /  Cricket  /  Gg Vs Upw Wpl 2024 Deepti Sharmas Fifty In Vain As Gujarat Giants Beat Up Warriroz By 8 Runs Rcb Wpl Playoff Prs

ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್​ ಜೈಂಟ್ಸ್​ಗೆ ಭರ್ಜರಿ ಗೆಲುವು; ಆರ್​​ಸಿಬಿಗೆ ಚಿಗುರಿತು ಪ್ಲೇಆಫ್ ಕನಸು

Gujarat Giants vs UP Warriorz : ಪ್ಲೇಆಫ್ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದ್ದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಅಮೋಘ ಗೆಲುವು ಸಾಧಿಸಿದೆ.

ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್​ ಜೈಂಟ್ಸ್​ಗೆ ಭರ್ಜರಿ ಗೆಲುವು
ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್​ ಜೈಂಟ್ಸ್​ಗೆ ಭರ್ಜರಿ ಗೆಲುವು (PTI)

ಆಲ್​ರೌಂಡರ್​​ ದೀಪ್ತಿ ಶರ್ಮಾ ಅವರ ಏಕಾಂಗಿ ಹೋರಾಟದ ನಡುವೆಯೂ ಯುಪಿ ವಾರಿಯರ್ಸ್ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಗೆಲುವಿನ ಕುದುರೆ ಏರಲು ಸಾಧ್ಯವಾಗಲಿಲ್ಲ. ಪ್ಲೇಆಫ್​ ದೃಷ್ಟಿಯಿಂದ ಮಹತ್ವ ಪಡೆದಿದ್ದ ಈ ಪಂದ್ಯದಲ್ಲಿ ಯುಪಿ ವಿರುದ್ಧ ಗುಜರಾತ್ ಜೈಂಟ್ಸ್ 8 ರನ್​ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ನಾಕೌಟ್ ಪ್ರವೇಶಿಸುವ ಆಸೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಯುಪಿ ಸೋತರೂ ನಾಕೌಟ್ ರೇಸ್​ನಿಂದ ಹಿಂದೆ ಬೀಳದಿದ್ದರೂ ಪ್ಲೇಆಫ್ ಪ್ರವೇಶಿಸಲು ಆರ್​ಸಿಬಿಗೆ ಹೆಚ್ಚಿನ ಅವಕಾಶ ಇದೆ.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿರೀಕ್ಷೆಯಂತೆ ಉತ್ತಮ ಆರಂಭ ಪಡೆಯಿತು. ಯುಪಿ ಬೌಲರ್​​ಗಳಿಗೆ ಬೆಂಡೆತ್ತಿದ ಲಾರಾ ವೋಲ್ವಾರ್ಡ್ಟ್ 30 ಬಾಲ್​ಗಳಲ್ಲಿ 8 ಬೌಂಡರಿ, 1 ಸಿಕ್ಸರ್​ ಸಹಿತ ಭರ್ಜರಿ 43 ರನ್ ಕಲೆ ಹಾಕಿ ಔಟಾದರು. ಮತ್ತೊಂದೆಡೆ ಬೆತ್​ ಮೂನಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು.

ಆದರೆ ಲಾರಾ ಔಟಾದ ಬೆನ್ನಲ್ಲೇ ಗುಜರಾತ್ ಕುಸಿತ ಕಂಡಿತು. ಆಟಗಾರ್ತಿಯರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ದಯಾಲನ್ ಹೇಮಲತಾ 0, ಫೀಬಿ ಲಿಚ್​ಫೀಲ್ಡ್ 4, ಆ್ಯಶ್ಲೆ ಗಾರ್ಡ್ನರ್ 15, ಭಾರತಿ ಫುಲ್ಮಾಲಿ 1, ಕ್ಯಾಥರಿನ್ ಬ್ರೈಸ್ 11, ತನುಜಾ ಕನ್ವರ್ 1, ಶಬ್ನಮ್ ಶಕೀಲ್ 0 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಆರಂಭಿಕ ಆಟಗಾರ್ತಿ ಬೆತ್​ ಮೂನಿ ವಿಕೆಟ್ ಕಾಯ್ದುಕೊಂಡು ತಂಡದ ಸ್ಕೋರ್ ಹೆಚ್ಚಿಸಿದರು.

52 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್​ ಸಹಿತ ಅಜೇಯ 74 ರನ್ ಗಳಿಸಿದ ಬೆತ್ ಮೂನಿ, ಕೊನೆಯ ಓವರ್​​ನಲ್ಲಿ 5 ಬೌಂಡರಿ ಸಿಡಿಸಿ ತಂಡದ ಮೊತ್ತ 150ರ ಗಡಿ ದಾಟಿಸಿದರು. ಯುಪಿಯ ಖಡಕ್ ಬೌಲಿಂಗ್​ ನಡುವೆಯೂ ಏಕಾಂಗಿ ಹೋರಾಟ ನಡೆಸಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ಕಾರಣರಾದರು. ಅಂತಿಮವಾಗಿ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದರು. ಸೋಫಿ ಎಕ್ಲೆಸ್ಟೊನ್ 3, ದೀಪ್ತಿ 2 ವಿಕೆಟ್ ಪಡೆದರು.

ಗೆಲುವಿಗಾಗಿ ಹೋರಾಡಿದ ದೀಪ್ತಿ ಶರ್ಮಾ

ಈ ಗುರಿ ಹಿಂಬಾಲಿಸಿದ ಯುಪಿ, ಅನಿರೀಕ್ಷಿತ ಎಂಬಂತೆ ಮೊದಲ ಓವರ್​​​ನಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಕೇವಲ 35 ರನ್​​ಗಳ ಅಂತರದಲ್ಲಿ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಶಬ್ನಮ್ ಶಕೀಲ್ ದಾಳಿಗೆ ನಡುಗಿದ ಯುಪಿ, ಬೇಗನೇ 5 ವಿಕೆಟ್​​ಗಳನ್ನು ಕಳೆದುಕೊಂಡಿತು. ಅಲ್ಲದೆ, ಪವರ್​​ಪ್ಲೇನಲ್ಲೇ 3 ವಿಕೆಟ್ ಪಡೆದ ಶಕೀಲ್​ಗೆ ಆ್ಯಶ್ಲೆ ಗಾರ್ಡ್ನರ್ ಮತ್ತು ಕ್ಯಾಥರಿನ್ ಬ್ರೈಸ್ ತಲಾ 1 ವಿಕೆಟ್ ಪಡೆದು ಸಾಥ್ ನೀಡಿದರು.

ಅಲೀಸ್ಸಾ ಹೀಲಿ 4, ಚಾಮರಿ ಅಥಾಪತ್ತು 0, ಕಿರಣ್ ನವ್​ಗಿರೆ 0, ಗ್ರೇಸ್ ಹ್ಯಾರಿಸ್ 1, ಶ್ವೇತಾ ಸೆಹ್ರಾವತ್ 8 ರನ್ ಗಳಿಸಿ ಔಟಾದರು. ಆದರೆ ಸಂಕಷ್ಟದಲ್ಲಿದ್ದ ತಂಡಕ್ಕೆ ದೀಪ್ತಿ ಶರ್ಮಾ ಮತ್ತು ಪೂನಂ ಖೇಮ್ನಾರ್ ಆಸರೆಯಾದರು. ಈ ಜೋಡಿ ಅಜೇಯ 109 ರನ್​ಗಳ ಪಾಲುದಾರಿಕೆ ನೀಡಿತು. ಆರಂಭದಲ್ಲಿ ಅಬ್ಬರಿಸಿದ್ದ ಬೌಲರ್ಸ್​​ಗೆ ದೀಪ್ತಿ ಶರ್ಮಾ ಬೆಂಡೆತ್ತಿದರು. ತಂಡಕ್ಕೆ ಗೆಲುವು ತಂದುಕೊಡಲು ಶತಾಯಗತಾಯ ಹೋರಾಡಿದರು. ಈ ವೇಳೆ ವಿಕೆಟ್ ಪಡೆಯಲು ಬೌಲರ್ಸ್ ಸಹ ಪರದಾಡಿದರು.

60 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್​ ಸಹಿತ ಅಜೇಯ 88 ರನ್ ಬಾರಿಸಿದರು. ದೀಪ್ತಿಗೆ 36 ರನ್ ಗಳಿಸಿ ಸಾಥ್ ನೀಡಿದ ಪೂನಂ ಅವರು ಬ್ಯಾಟಿಂಗ್​ನಲ್ಲಿ ಇನ್ನಷ್ಟು ವೇಗ ಪಡೆದುಕೊಂಡಿದ್ದರೆ, ಗೆಲುವು ಯುಪಿ ಪಾಲಾಗುತ್ತಿತ್ತು. ಕೊನೆಯ ಓವರ್​​ನಲ್ಲಿ ವಾರಿಯರ್ಸ್ ಗೆಲುವಿಗೆ 26 ರನ್ ಬೇಕಿತ್ತು. ಗೆಲುವಿಗಾಗಿ ತನ್ನ ಪ್ರಯತ್ನ ನಿಲ್ಲಿಸಿದ ದೀಪ್ತಿ 17 ರನ್ ಚಚ್ಚಿದರು. ಆದರೆ 8 ರನ್​ಗಳಿಂದ ಸೋಲು ಕಾಣಬೇಕಾಯಿತು.

ಪ್ಲೇಆಫ್ ಲೆಕ್ಕಾಚಾರ ಹೇಗಿದೆ

ಪ್ಲೇಆಫ್​ಗೆ ಪ್ರವೇಶಿಸಲು ಮೂರು ತಂಡಗಳ ನಡುವೆ ಪೈಪೋಟಿ ಮುಂದುವರೆದಿದೆ. ಆದರೆ, ಯುಪಿ ತನ್ನ ಪಂದ್ಯಗಳ ಖೋಟಾ ಮುಗಿಸಿದ್ದರೆ, ರೇಸ್​​​ನಲ್ಲಿರುವ ಆರ್​ಸಿಬಿ ಮತ್ತು ಗುಜರಾತ್ ಇನ್ನೂ ಒಂದು ಪಂದ್ಯವನ್ನಾಡಲಿವೆ. ಆದರೆ ಆರ್​​ಸಿಬಿ ಮತ್ತು ಯುಪಿ ತಲಾ 6 ಅಂಕ ಪಡೆದಿದ್ದರೆ, ಗುಜರಾತ್ 4 ಅಂಕ ಪಡೆದಿದೆ. ಒಂದು ವೇಳೆ ಆರ್​ಸಿಬಿ ಸೋತು, ಗುಜರಾತ್ ಗೆದ್ದರೆ ಆಗ ಮೂರು ತಂಡಗಳು ಸಹ 6 ಅಂಕ ಪಡೆಯಲಿದ್ದು, ಆಗ ಉತ್ತಮ ನೆಟ್​ರನ್​ ರೇಟ್ ಇರುವ ತಂಡವು ಪ್ಲೇ ಆಫ್ ಪ್ರವೇಶಿಸಲಿದೆ. ಒಂದು ವೇಳೆ ಆರ್​ಸಿಬಿ ಗೆದ್ದರೆ ಯಾವುದೇ ಪೈಪೋಟಿ ಇಲ್ಲದೆ 8 ಅಂಕಗಳೊಂದಿಗೆ ನಾಕೌಟ್ ತಲುಪಲಿದೆ. ಹೆಚ್ಚಿನ ಸಾಧ್ಯತೆ ಆರ್​ಸಿಬಿಗೆ ಇದೆ.