ಕನ್ನಡ ಸುದ್ದಿ  /  Cricket  /  Glenn Maxwell Century Helps Australia To Win By 5 Wickets In 3rd T20i Against India Ind Vs Aus Third T20i Guwahati Jra

ಸ್ಫೋಟಕ ಶತಕದೊಂದಿಗೆ ಭಾರತದ ಗೆಲುವು ಕಸಿದ ಮ್ಯಾಕ್ಸ್‌ವೆಲ್;‌ ಕೊನೆಯ ಎಸೆತದಲ್ಲಿ ಗೆದ್ದು ಬೀಗಿದ ಆಸ್ಟ್ರೇಲಿಯಾ

India vs Australia 3rd T20I: ಗುವಾಹಟಿಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ರೋಚಕ ಜಯ ಸಾಧಿಸಿದೆ. ಆ ಮೂಲಕ ಸರಣಿಯಲ್ಲಿ ಜೀವಂತವಾಗಿ ಉಳಿದಿದೆ.

ಕೊನೆಯ ಎಸೆತದಲ್ಲಿ ಗೆದ್ದು ಬೀಗಿದ ಆಸ್ಟ್ರೇಲಿಯಾ
ಕೊನೆಯ ಎಸೆತದಲ್ಲಿ ಗೆದ್ದು ಬೀಗಿದ ಆಸ್ಟ್ರೇಲಿಯಾ (AP)

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಹೈ ಸ್ಕೋರಿಂಗ್‌ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ರೋಚಕವಾಗಿ ಸಾಗಿದ ಇನ್ನಿಂಗ್ಸ್‌ನಲ್ಲಿ ಮ್ಯಾಕ್ಸ್‌ವೆಲ್‌ ಆಕರ್ಷಕ ಶತಕದೊಂದಿಗೆ ಕಾಂಗರೂಗಳಿಗೆ ಜಯವೂ ಒಲಿಯಿತು. ಈ ಗೆಲುವಿನ ಬಳಿಕ ಭಾರತವು ಸರಣಿಯಲ್ಲಿ 2-1 ರಿಂದ ಮುನ್ನಡೆ ಕಾಯ್ದುಕೊಂಡಿದೆ.

ಗುವಾಹಟಿಯ ಬರ್ಸಪರಾ ಕ್ರೀಡಾಂಗಣದಲ್ಲಿ (Barsapara Cricket Stadium) ನಡೆದ ಮೂರನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡವು, ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿತು. ರುತುರಾಜ್‌ ಗಾಯಕ್ವಾಡ್‌ ಆಕರ್ಷಕ ಶತಕದ ನೆರವಿಂದ ಭಾರತವು 3 ವಿಕೆಟ್‌ ಕಳೆದುಕೊಂಡು 222 ರನ್‌ ಪೇರಿಸಿತು. ಬೃಹತ್‌ ಗುರಿ ಬೆನ್ನಟ್ಟಿದ ಆಸೀಸ್‌, ಮ್ಯಾಕ್ಸ್‌ವೆಲ್‌ ಸ್ಫೋಟಕ ಶತಕದ ನೆರವಿನಿಂದ ಕೊನೆಯ ಎಸೆತದಲ್ಲಿ ಗುರಿ ತಲುಪುವುದರೊಂದಿಗೆ 5 ವಿಕೆಟ್‌ ಕಳೆದುಕೊಂಡು 225 ರನ್‌ ಗಳಿಸಿತು.

ಕೊನೆಯ ಓವರ್‌ನಲ್ಲಿ ಆಸೀಸ್‌ ಗೆಲುವಿಗೆ 21 ರನ್‌ಗಳ ಅಗತ್ಯವಿತ್ತು. ಆದರೆ ಈ ಮೊತ್ತವನ್ನು ಮ್ಯಾಕ್ಸ್‌ವೆಲ್‌ ಮತ್ತು ವೇಡ್‌ ಸುಲಭವಾಗಿ ಬೆನ್ನಟ್ಟಿದರು. ಅಂತಿಮ ಓವರ್‌ನಲ್ಲಿ ನಾಲ್ಕು ಬೌಂಡರಿ ಹಾಗೂ 1 ಸಿಕ್ಸರ್‌ ಸಿಡಿಸಿದ ಕಾಂಗರೂಗಳು ಪಂದ್ಯವನ್ನು ವಶಪಡಿಸಿಕೊಂಡರು.

ಬೃಹತ್‌ ಮೊತ್ತ ಚೇಸಿಂಗ್‌ಗೆ ಇಳಿದ ಆಸೀಸ್‌, ಉತ್ತಮ ಆರಂಭ ಪಡೆಯಿತು. ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತವನ್ನು ಕಾಡಿದ್ದ ಟ್ರಾವಿಸ್‌ ಹೆಡ್‌ ಸ್ಫೋಟಕ ಆರಂಭ ಕೊಟ್ಟರು. ಮೊದಲ ವಿಕೆಟ್‌ಗೆ ಹಾರ್ಡಿ ಜೊತೆಗೂಡಿ 47 ರನ್‌ ಕಲೆ ಹಾಕಿದರು. 16 ರನ್‌ ಗಳಿಸಿದ್ದ ಹಾರ್ಡಿ ಅರ್ಷದೀಪ್‌ ಸಿಂಗ್‌ಗೆ ಮೊದಲನೆಯವರಾಗಿ ವಿಕೆಟ್‌ ಒಪ್ಪಿಸಿದರು. ಅವರ ಬೆನ್ನಲ್ಲೇ ಡೇಂಜರಸ್‌ ಬ್ಯಾಟರ್‌ ಹೆಡ್‌ಗೆ ಆವೇಶ್‌ ಖಾನ್‌ ಕಂಟಕರಾದರು. ಟ್ರಾವಿಸ್‌ ಗಳಿಕೆ 18 ಎಸೆತಗಳಿಂದ 35 ರನ್.‌

ಮೊದಲ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದ ಜೋಶ್‌ ಇಂಗ್ಲಿಸ್‌ 10 ರನ್‌ ಗಳಿಸಿದ್ದಾಗ ರವಿ ಬಿಷ್ಣೋಯ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. 17 ರನ್‌ ಗಳಿಸಿದ್ದ ಸ್ಟೋಯ್ನಿಸ್‌ ಅಕ್ಷರ್‌ ಪಟೇಲ್‌ ಎಸೆತದಲ್ಲಿ ಸೂರ್ಯಕುಮಾರ್‌ಗೆ ಸುಲಭ ಕ್ಯಾಚ್‌ ನೀಡಿ ಔಟಾದರು. ಅವರ ಬೆನ್ನಲ್ಲೇ ಟಿಮ್‌ ಡೇವಿಡ್‌ ಗೋಲ್ಡನ್‌ ಡಕ್‌ಗೆ ಬಲಿಯಾದರು. ಕೊನೆಯವರೆಗೂ ಅಬ್ಬರಿಸಿದ ಮ್ಯಾಕ್ಸಿ, ಕೇವಲ 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 8 ಸಿಕ್ಸರ್‌ ನೆರವಿಂದ 104 ರನ್‌ ಕಲೆ ಹಾಕಿದರು. ಈ ಇನ್ನಿಂಗ್ಸ್‌ ಭಾರತದ ಗೆಲುವು ಕಸಿಯಿತು.

ಇದನ್ನೂ ಓದಿ | ವಿಶ್ವಕಪ್ ಗೆದ್ದ 6 ಆಟಗಾರರನ್ನು ಟಿ20 ಸರಣಿಯಿಂದ ಹೊರಗಿಟ್ಟ ಆಸೀಸ್; ಉಳಿದ 3 ಪಂದ್ಯಗಳಿಗೆ ನೂತನ ತಂಡ ಪ್ರಕಟ

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ, ರುತುರಾಜ್‌ ಗಾಯಕ್ವಾಡ್‌ ಆಕರ್ಷಕ ಶತಕದ ನೆರವಿಂದ ಸತತ ಮೂರನೇ ಪಂದ್ಯದಲ್ಲಿಯೂ 200ಕ್ಕೂ ಹೆಚ್ಚು ರನ್‌ ಕಲೆ ಹಾಕಿತು. ತಂಡದ ಆರಂಭ ಉತ್ತಮವಾಗಿರಲಿಲ್ಲ. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಕೇವಲ 6 ರನ್‌ ಗಳಿಸಿ ಔಟಾದರು. ಅವರ ಬೆನ್ನಲ್ಲೇ ಸತತ ಎರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಇಶಾನ್‌ ಕಿಶನ್‌ ಖಾತೆ ತೆರೆಯದೆ ಡಕೌಟ್‌ ಆದರು.

ಈ ವೇಳೆ ಒಂದಾದ ರುತುರಾಜ್‌ ಮತ್ತು ನಾಯಕ ಸೂರ್ಯಕುಮಾರ್‌ ಯಾದವ್‌ ಅರ್ಧಶತಕದ ಜೊತೆಯಾಟವಾಡಿದರು. 29 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 39 ರನ್‌ ಗಳಿಸಿದ್ದ ನಾಯಕ ಸೂರ್ಯ, ಹಾರ್ಡಿಗೆ ವಿಕೆಟ್‌ ಒಪ್ಪಿಸಿದರು. ಈ ವೇಳೆ ಶುರುವಾಗಿದ್ದೇ ರುತುರಾಜ್‌ ಗಾಯಕ್ವಾಡ್‌ ಹೊಡಿಬಡಿ ಆಟ.

ಚೊಚ್ಚಲ ಟಿ20 ಶತಕ ಸಿಡಿಸಿದ ಗಾಯಕ್ವಾಡ್

ಆರಂಭದಿಂದಲೂ ನಿಧಾನಗತಿಯಲ್ಲಿ ಬ್ಯಾಟ್‌ ಬೀಸಿ ವಿಕೆಟ್‌ ಉಳಿಸಿಕೊಂಡಿದ್ದ ರುತುರಾಜ್‌ ಗಾಯಕ್ವಾಡ್‌, ಡೆತ್‌ ಓವರ್‌ಗಳಲ್ಲಿ ಅಬ್ಬರಿಸಿದರು. ನೋಡ ನೋಡುತ್ತಿದ್ದಂತೆಯೇ ಚೊಚ್ಚಲ ಟಿ20 ಶತಕ ಸಿಡಿಸಿ ಮಿಂಚಿದರು. ಮೊದಲ 22 ಎಸೆತಗಳಲ್ಲಿ ಕೇವಲ 22 ರನ್‌ ಗಳಿಸಿದ್ದ ಅವರು, ನಂತರದ 35‌ ಎಸೆತಗಳಲ್ಲಿ ಬರೋಬ್ಬರಿ 101 ರನ್‌ ಕಲೆ ಹಾಕಿದರು. ಒಟ್ಟಾರೆ ತಮ್ಮ ಇನ್ನಿಂಗ್ಸ್‌ನಲ್ಲಿ 57 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 7 ಸಿಕ್ಸರ್‌ ಸಹಿತ 123 ರನ್‌ ಸಿಡಿಸಿ ಅಜೇಯರಾಗಿ ಉಳಿದರು. ಅವರಿಗೆ ಉತ್ತಮ ಸಾಥ್‌ ನೀಡಿದ ತಿಲಕ್‌ ವರ್ಮಾ 31 ರನ್‌ ಗಳಿಸಿದರು. ಇವರಿಬ್ಬರ ಬ್ಯಾಟ್‌ನಿಂದ ಬಂದ ಶತಕದ ಜೊತೆಯಾಟವು ಭಾರತದ ಒಟ್ಟು ಮೊತ್ತವು 200ರ ಗಡಿ ದಾಟಲು ನೆರವಾಯ್ತು. ಮ್ಯಾಕ್ಸ್‌ವೆಲ್‌ ಎಸೆದ ಕೊನೆಯ ಓವರ್‌ನಲ್ಲಿ 30 ರನ್‌ಗಳು ಹರಿದು ಬಂದಿದ್ದು ವಿಶೇಷ.