ನನ್ನ ಬದಲು ಬೇರೊಬ್ಬರಿಗೆ ಅವಕಾಶ ಕೊಡಿ; ಆರ್‌ಸಿಬಿ ಆಡುವ ಬಳಗದಿಂದ ಹಿಂದೆ ಸರಿದು ಐಪಿಎಲ್‌ನಿಂದ ವಿರಾಮ ಪಡೆದ ಮ್ಯಾಕ್ಸ್‌ವೆಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ನನ್ನ ಬದಲು ಬೇರೊಬ್ಬರಿಗೆ ಅವಕಾಶ ಕೊಡಿ; ಆರ್‌ಸಿಬಿ ಆಡುವ ಬಳಗದಿಂದ ಹಿಂದೆ ಸರಿದು ಐಪಿಎಲ್‌ನಿಂದ ವಿರಾಮ ಪಡೆದ ಮ್ಯಾಕ್ಸ್‌ವೆಲ್

ನನ್ನ ಬದಲು ಬೇರೊಬ್ಬರಿಗೆ ಅವಕಾಶ ಕೊಡಿ; ಆರ್‌ಸಿಬಿ ಆಡುವ ಬಳಗದಿಂದ ಹಿಂದೆ ಸರಿದು ಐಪಿಎಲ್‌ನಿಂದ ವಿರಾಮ ಪಡೆದ ಮ್ಯಾಕ್ಸ್‌ವೆಲ್

Glenn Maxwell: ಆರ್‌ಸಿಬಿ ತಂಡದ ಆಡುವ ಬಳಗದಿಂದ ಹೊರಗುಳಿಯುವ ನಿರ್ಧಾರ ಖುದ್ದು ತಾನೆ ಮಾಡಿದ್ದಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ. ಹೀಗಾಗಿ ತಂಡದ ಮುಂದಿನ ಪಂದ್ಯಗಳಲ್ಲೂ ಅವರು ಆಡುವ ಸಾಧ್ಯತೆ ಇಲ್ಲ. ಸದ್ಯಕ್ಕೆ ವಿರಾಮ ಪಡೆಯುವುದಾಗಿ ಅವರು ಹೇಳಿದ್ದಾರೆ.

ಆರ್‌ಸಿಬಿ ಆಡುವ ಬಳಗದಿಂದ ಹಿಂದೆ ಸರಿದು ಐಪಿಎಲ್‌ನಿಂದ ವಿರಾಮ ಪಡೆದ ಮ್ಯಾಕ್ಸ್‌ವೆಲ್
ಆರ್‌ಸಿಬಿ ಆಡುವ ಬಳಗದಿಂದ ಹಿಂದೆ ಸರಿದು ಐಪಿಎಲ್‌ನಿಂದ ವಿರಾಮ ಪಡೆದ ಮ್ಯಾಕ್ಸ್‌ವೆಲ್ (AFP)

ಐಪಿಎಲ್ 2024ರ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಯಾವ ಯೋಜನೆ ಕೂಡಾ ಫಲ ಕೊಡುತ್ತಿಲ್ಲ. ಪ್ಲೇಯಿಂಗ್ ಇಲೆವೆನ್‌ನಲ್ಲಿ ಏನೇ ಬದಲಾವಣೆ ಮಾಡಿದರೂ ಫಲಿತಾಂಶದಲ್ಲಿ ಗೆಲುವು ಮಾತ್ರ ಒಲಿಯುತ್ತಿಲ್ಲ. ತಂಡದ ಪರ‌ ಟೂರ್ನಿಯ ಆರಂಭದಿಂದಲೂ ಕಳಪೆ ಪ್ರದರ್ಶನ ನೀಡಿದ್ದ ಆಸೀಸ್‌ ಆಲ್‌ರೌಂಡರ್‌ ಗ್ಲೆನ್ ಮ್ಯಾಕ್ಸ್‌ವೆಲ್, ಕಡಿಮೆ ರನ್‌ ಕಲೆ ಹಾಕುವುದರೊಂದಿಗೆ ತಂಡಕ್ಕೆ ಕೊಡುಗೆ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ಸನ್‌ರೈಸರ್ಸ್‌ ವಿರುದ್ಧದ ಕೊನೆಯ ಪಂದ್ಯದಲ್ಲಿ ಅವರನ್ನು ಆಡುವ ಬಳಗದಿಂದ ಹೊರಗಿಡಲಾಗಿತ್ತು. ಆದರೆ, ಈ ನಿರ್ಧಾರಕ್ಕೆ ಬಂದಿದ್ದು ನಾಯಕ ಅಥವಾ ಮ್ಯಾನೇಜ್‌ಮೆಂಟ್‌ ಅಲ್ಲ.

ಆರ್‌ಸಿಬಿ ತಂಡದ ಆಡುವ ಬಳಗದಲ್ಲಿ ಮತ್ತೊಬ್ಬ ವಿದೇಶಿ ಆಟಗಾರನಿಗೆ ಸ್ಥಾನ ನೀಡುವ ಸಲುವಾಗಿ, ತಾವು ಸ್ವಯಂಪ್ರೇರಿತವಾಗಿ ತಂಡದಿಂದ ಹೊರಬರಲು ನಿರ್ಧರಿಸಿದ್ದಾಗಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಸತತ ವೈಫಲ್ಯದಿಂದಾಗಿ ಮನಸ್ಸು ಹಾಗೂ ದೇಹಕ್ಕೆ ವಿಶ್ರಾಂತಿ ನೀಡಿ ಚೇತರಿಸಿಕೊಳ್ಳಲು ವಿರಾಮ ತೆಗೆದುಕೊಳ್ಳುವುದಾಗಿ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಕೋಚಿಂಗ್ ಸಿಬ್ಬಂದಿಗೆ ಮ್ಯಾಕ್ಸಿ ಹೇಳಿಕೊಂಡಿದ್ದಾರೆ. ಈ ಕುರಿತು ಖುದ್ದು ಅವರೇ ಹೇಳಿಕೊಂಡಿದ್ದಾರೆ.

“ಮೊದಲ ಕೆಲವು ಪಂದ್ಯಗಳು ನಾವು ಯೋಜಿಸಿದಂತೆ ನಡೆಯಲಿಲ್ಲ. ಹೀಗಾಗಿ ಇದು ನನಗೆ ತುಂಬಾ ಸುಲಭದ ನಿರ್ಧಾರವಾಗಿತ್ತು. ನಾನು ನಾಯಕ ಫಾಫ್ ಮತ್ತು ತರಬೇತುದಾರರ ಬಳಿಗೆ ಹೋಗಿ 'ನಾವು ಬೇರೆ ಯಾರನ್ನಾದರೂ ಆಡಿಸುವ ಸಮಯ ಬಂದಿದೆʼ ಎಂದು ಹೇಳಿದೆ. ನನ್ನ ಮನಸ್ಸು ಮತ್ತು ದೇಹಕ್ಕೆ ವಿರಾಮ ನೀಡಿ ವಿಶ್ರಾಂತಿ ಪಡೆಯಲು ಇದು ಉತ್ತಮ ಸಮಯ,” ಎಂದು ಮ್ಯಾಕ್ಸ್‌ವೆಲ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಎಸ್ಆರ್‌ಎಚ್ ನಡುವಿನ ಪಂದ್ಯದ ನಂತರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ತಂಡಕ್ಕೆ ಅಗತ್ಯ ಬಿದ್ದರೆ ಮತ್ತೆ ಬರುವೆ

ಸದ್ಯ ಆಡುವ ಬಳಗದಿಂದ ಹೊರಗುಳಿಯುವ ನಿರ್ಧಾರಕ್ಕೆ ಬಂದಿರುವ ಮ್ಯಾಕ್ಸಿ, ಪಂದ್ಯಾವಳಿಯ ದ್ವಿತಿಯಾರ್ಧದಲ್ಲಿ ಅಗತ್ಯ ಬಿದ್ದರೆ ತಂಡಕ್ಕೆ ಮರಳುವ ಭರವಸೆ ನೀಡಿದ್ದಾರೆ. “ಪಂದ್ಯಾವಳಿಯ ಮುಂದಿನ ಪಂದ್ಯಗಳಿಗೆ ನನ್ನ ಅಗತ್ಯವಿದ್ದರೆ, ನಾನು ಮಾನಸಿಕವಾಗಿ ಸುಧಾರಿಸಿಕೊಂಡು ತಂಡ ಸೇರಬಲ್ಲೆ. ಆ ಬಳಿಕ ಪರಿಣಾಮಮಕಾರಿಯಾಗಿ ಆಡಬಹುದು ಎಂದು ಆಶಿಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | ವೇಗದ ಬೌಲಿಂಗ್ ವಿರುದ್ಧ ಬ್ಯಾಟ್ ಬೀಸಲು ಪರದಾಟ; ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಸುನಿಲ್ ಗವಾಸ್ಕರ್ ವಾಗ್ದಾಳಿ

ಆರ್‌ಸಿಬಿ ತಂಡದಲ್ಲಿರುವ ಇಬ್ಬರು ಆಸ್ಟ್ರೇಲಿಯಾ ಆಲ್‌ರೌಂಡರ್‌ಗಳಾದ ಮ್ಯಾಕ್ಸ್‌ವೆಲ್ ಮತ್ತು ಕ್ಯಾಮರೂನ್ ಗ್ರೀನ್, ಈ ಐಪಿಎಲ್‌ ಪಂದ್ಯಾವಳಿಯಲ್ಲಿ ಭಾರಿ ನಿರಾಶೆ ಮೂಡಿಸಿದ್ದಾರೆ. ಹೀಗಾಗಿ ಕೊನೆಯ ಎರಡು ಪಂದ್ಯಗಳಿಂದ ಗ್ರೀನ್ ಅವರನ್ನು ಆಡುವ ಬಳಗದಿಂದ ಕೈಬಿಡಲಾಯಿತು. ಅದರ ಬೆನ್ನಲ್ಲೇ ಮ್ಯಾಕ್ಸ್‌ವೆಲ್ ಕೂಡಾ ಎಸ್ಆರ್‌ಎಚ್ ವಿರುದ್ಧ ಪಂದ್ಯದಿಂದ ಹೊರಗುಳಿದರು. ಈ ವರ್ಷ ಆಡಿರುವ ಆರು ಪಂದ್ಯಗಳಲ್ಲಿ ಮ್ಯಾಕ್ಸಿ 5.33ರ ಸರಾಸರಿಯಲ್ಲಿ ಕೇವಲ 32 ರನ್ ಮಾತ್ರ ಗಳಿಸಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಗಳಿಸಿದ 28 ರನ್‌ ಮಾತ್ರ ಎರಡಂಕಿಯದ್ದಾಗಿದೆ. ಟೂರ್ನಿಯಲ್ಲಿ ಒಟ್ಟು ಮೂರು ಬಾರಿ ಡಕೌಟ್‌ ಆಗಿದ್ದಾರೆ.

“ನಾವು ಈ ಋತುವಿನಲ್ಲಿ ನಿರೀಕ್ಷೆಯಷ್ಟು ಉತ್ತಮವಾಗಿ ಆಡುತ್ತಿಲ್ಲ. ಬಹುಶಃ ಫಲಿತಾಂಶಗಳೇ ಅದನ್ನು ತೋರಿಸುತ್ತಿವೆ. ಪವರ್ ಪ್ಲೇ ಮತ್ತು ಮಧ್ಯಮ ಓವರ್‌ಗಳ ನಂತರ ನಮ್ಮಲ್ಲಿ ಬ್ಯಾಟರ್‌ಗಳ ಕೊರತೆಯಿದೆ. ನಾನು ಬ್ಯಾಟ್‌ನೊಂದಿಗೆ ಸಕಾರಾತ್ಮಕ ಕೊಡುಗೆ ನೀಡುತ್ತಿಲ್ಲ ಎಂದು ಭಾವಿಸಿದೆ. ಹೀಗಾಗಿ ಬೇರೊಬ್ಬರಿಗೆ ಅವಕಾಶ ನೀಡಲು ಇದು ಉತ್ತಮ ಸಮಯ. ಯಾರಾದರೂ ಆ ಸ್ಥಾನವನ್ನು ತಮ್ಮದಾಗಿಸಿಕೊಳ್ಳಬಹುದು,” ಎಂದು ಆಸೀಸ್‌ ದೈತ್ಯ ಹೇಳಿದ್ದಾರೆ.

Whats_app_banner