75ಕ್ಕೆ 7 ವಿಕೆಟ್, 14 ಎಸೆತಗಳಲ್ಲಿ 76 ರನ್; ಗ್ಲೆನ್ ಮ್ಯಾಕ್ಸ್‌ವೆಲ್ ಸುನಾಮಿ, ಕೈಬಿಟ್ಟು ತಪ್ಪು ಮಾಡಿತೇ ಆರ್ಸಿಬಿ?
Glenn Maxwell: ಬಿಗ್ ಬ್ಯಾಷ್ ಲೀಗ್ನಲ್ಲಿ ನಡೆದ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಟಾರ್ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರಿಸಿ ಬೊಬ್ಬಿರಿದ್ದಾರೆ.

ಬಿಗ್ ಬ್ಯಾಷ್ ಲೀಗ್ನಲ್ಲಿ ಜನವರಿ 12ರ ಭಾನುವಾರ ನಡೆದ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಸುನಾಮಿ ಎಬ್ಬಿಸಿದ್ದಾರೆ. ಮೆಲ್ಬೋರ್ನ್ ಸ್ಟಾರ್ಸ್ ಪರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಕ್ಸ್‌ವೆಲ್, ಬೌಲರ್ಗಳ ಮೇಲೆ ಅಕ್ಷರಶಃ ದಂಡಯಾತ್ರೆ ನಡೆಸಿದರು. ತಂಡ 75ಕ್ಕೆ 7 ವಿಕೆಟ್ ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿದ್ದಾಗ ಸಿಡಿದೆದ್ದ ಮ್ಯಾಕ್ಸಿ, ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈದು ತಂಡವನ್ನು ರಕ್ಷಿಸಿದರು. 52 ಎಸೆತಗಳಲ್ಲಿ 10 ಸಿಕ್ಸರ್, 4 ಬೌಂಡರಿ ಸಹಿತ 90 ರನ್ ಗಳಿಸಿರುವ ಮ್ಯಾಕ್ಸ್‌ವೆಲ್, ಸಿಕ್ಸರ್-ಬೌಂಡರಿಗಳ ಮೂಲಕವೇ 76 ರನ್ ಸಿಡಿಸಿದ್ದಾರೆ. ಇದೀಗ ಇಂತಹ ಆಟಗಾರರನ್ನು ಕೈಬಿಟ್ಟು ಆರ್ಸಿಬಿ ತಪ್ಪು ಮಾಡಿತಾ ಎಂಬ ಪ್ರಶ್ನೆ ಮೂಡಿದೆ.
ಮೆಲ್ಬೋರ್ನ್ನ ಡಾಕ್‌ಲ್ಯಾಂಡ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮೆಲ್ಬೋರ್ನ್ ಸ್ಟಾರ್ಸ್, ತನ್ನ ನಿಗದಿತ 20 ಓವರ್ಗಳಲ್ಲಿ 165 ರನ್ಗೆ ಆಲೌಟ್ ಆಯಿತು. ಆದರೆ ಮ್ಯಾಕ್ಸಿ, ಕಣಕ್ಕಿಳಿಯುವುದಕ್ಕೂ ಮುನ್ನ ಮೆಲ್ಬೋರ್ನ್ ನೂರರ ಗಡಿ ದಾಟುವುದೇ ಕಷ್ಟವಾಗಿತ್ತು. ಆದರೆ ಮ್ಯಾಕ್ಸ್‌ವೆಲ್ ಕ್ರೀಸ್ಗೆ ಬಂದ ತಕ್ಷಣವೇ ಅಬ್ಬರಿಸಿ ಬೊಬ್ಬಿರಿದರು. ಪರಿಣಾಮ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕಲೆ ಹಾಕಲು ನೆರವಾದರು. ಆದರೆ 45ಕ್ಕೆ 4 ವಿಕೆಟ್ ಕಳೆದುಕೊಂಡಿದ್ದಾಗ ಮ್ಯಾಕ್ಸಿ ಕ್ರೀಸ್ಗೆ ಬಂದಿದ್ದರು. ತದನಂತರವೂ ಸತತ ವಿಕೆಟ್ಗಳು ಉರುಳಿದವು. 11 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತು.
81 ರನ್ ಪಾಲುದಾರಿಕೆ, ಅದರಲ್ಲೇ ಮ್ಯಾಕ್ಸಿಯದ್ದೇ 79 ರನ್
ಈ ಹಂತದಲ್ಲಿ ತಂಡದ ಜವಾಬ್ದಾರಿಯನ್ನು ಪಡೆದ ಆರ್ಸಿಬಿ ಮಾಜಿ ಆಟಗಾರ, 9ನೇ ಕ್ರಮಾಂಕದಲ್ಲಿ ಉಸಾಮಾ ಮಿರ್ ಜೊತೆ ಸೇರಿ 81 ಪಾಲುದಾರಿಕೆ ನೀಡಿದ್ದಲ್ಲದೆ, ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. 81 ರನ್ಗಳ ಜೊತೆಯಾಟದಲ್ಲಿ 79 ರನ್ಗಳು ಬಂದಿದ್ದು, ಮ್ಯಾಕ್ಸ್‌ವೆಲ್ ಬ್ಯಾಟಿಂಗ್ನಿಂದ. ಉಳಿದ ಎರಡು ರನ್ ಹೆಚ್ಚುವರಿಯಾಗಿ ಬಂದಿವೆ. ಕೇನ್ ರಿಚರ್ಡ್ಸನ್ 16ನೇ ಓವರ್ನ 2ನೇ ಎಸೆತವನ್ನು 122 ಮೀಟರ್ ದೂರ ಸಿಕ್ಸರ್ ಬಾರಿಸಿದರು. ಇದು ಬಿಬಿಎಲ್ ಇತಿಹಾಸದಲ್ಲೇ ಅತಿ ದೂರದ ಸಿಕ್ಸರ್. 81 ರನ್ಗಳ ಪಾಲುದಾರಿಕೆ ನೀಡಿದ್ದ ಉಸಾಮಾ 5 ಎಸೆತಗಳಲ್ಲಿ ಒಂದು ರನ್ ಕೂಡ ಗಳಿಸಿರಲಿಲ್ಲ. ಮ್ಯಾಕ್ಸಿ ಇನ್ನಿಂಗ್ಸ್ನಲ್ಲಿ 10 ಸಿಕ್ಸರ್ಗಳು, 4 ಬೌಂಡರಿಗಳಿವೆ.
ಕೈಬಿಟ್ಟು ತಪ್ಪು ಮಾಡಿತೇ ಆರ್ಸಿಬಿ?
90 ರನ್ಗಳ ಇನ್ನಿಂಗ್ಸ್ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮ್ಯಾಕ್ಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಪಂದ್ಯಕ್ಕೂ ಮುನ್ನ ಸಿಡ್ನಿ ಸಿಕ್ಸರ್ ವಿರುದ್ಧ 52 ರನ್ಗಳ ಭರ್ಜರಿ ಇನ್ನಿಂಗ್ಸ್ ಆಡಿದ್ದರು. ಆದರೆ ಮ್ಯಾಕ್ಸ್‌ವೆಲ್ ಬೆಂಕಿ ಆಟವನ್ನು ನೋಡಿದ ಆರ್ಸಿಬಿ ಅಭಿಮಾನಿಗಳು, ಮ್ಯಾಕ್ಸಿಯನ್ನು ಕೈಬಿಟ್ಟು ದೊಡ್ಡ ತಪ್ಪು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 2024ರ ಐಪಿಎಲ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮ್ಯಾಕ್ಸ್‌ವೆಲ್ ಅವರನ್ನು ಐಪಿಎಲ್ ಮೆಗಾ ಹರಾಜಿಗೂ ಮುನ್ನ ತಂಡದಿಂದ ಕೈಬಿಟ್ಟಿತು. ಆದರೆ ಅದಕ್ಕೂ ಮುನ್ನ ಆರ್ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದರು.
