ಹೋಗಿ ರಣಜಿ ಸೆಮಿಫೈನಲ್ ಆಡಿ, ಲಯಕ್ಕೆ ಮರಳಿ; 5ನೇ ಟೆಸ್ಟ್ನಿಂದ ರಜತ್ ಪಾಟೀದಾರ್ ಕೈಬಿಡಲು ಬಿಸಿಸಿಐ ಚಿಂತನೆ
India vs England 5th Test: ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಇಬ್ಬರನ್ನು ಕೈಬಿಡಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ.
ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೂ (India vs England 5th Test) ಮುನ್ನ ಭಾರತ ತಂಡದಿಂದ ಪ್ರಮುಖ ಆಟಗಾರನನ್ನು ಟೀಮ್ ಮ್ಯಾನೇಜ್ಮೆಂಟ್ ಕೈಬಿಡಲು ಚಿಂತನೆ ನಡೆಸಿದೆ. ಟೆಸ್ಟ್ ಸರಣಿಯಿಂದ ವಿರಾಟ್ ಕೊಹ್ಲಿ (Virat Kohli) ಹಿಂದೆ ಸರಿದ ಬಳಿಕ ತಂಡದಲ್ಲಿ ಆಡುವ ಅವಕಾಶ ಪಡೆದ ರಜತ್ ಪಾಟೀದಾರ್ (Rajat Patidar) ಅವರನ್ನು ತಂಡದಿಂದ ಕೈಬಿಡಲು ಆಯ್ಕೆದಾರರು ನಿರ್ಧರಿಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ (KL Rahul) ಕೂಡ ಇದರ ಭಾಗವಾದರೂ ಅಚ್ಚರಿ ಇಲ್ಲ.
ಕೆಎಲ್ ರಾಹುಲ್ ಅನುಮಾನ
ಅಂತಿಮ ಟೆಸ್ಟ್ ಪಂದ್ಯವು ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ಆರಂಭವಾಗಲಿದ್ದು, ಕೆಎಲ್ ರಾಹುಲ್ ಫಿಟ್ನೆಸ್ ಭಾರತ ಪಾಳೆಯಯನ್ನು ಚಿಂತೆಗೀಡು ಮಾಡಿದೆ. ರಾಹುಲ್ ಬಲ ಮೊಣಕಾಲಿನ ಅಸ್ವಸ್ಥತೆ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ತಜ್ಞರ ಅಭಿಪ್ರಾಯ ಪಡೆಯಲು ಅವರನ್ನು ಲಂಡನ್‌ಗೆ ಕಳುಹಿಸಲಾಗಿದೆ ಎಂದು ವರದಿ ಹೇಳಿದೆ. ಗಾಯದ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಕೊನೆಯ 3 ಟೆಸ್ಟ್‌ಗಳಿಂದ ಹೊರಗುಳಿದಿದ್ದ ಕೆಎಲ್, ಮತ್ತೊಮ್ಮೆ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ.
ತಂಡದಿಂದ ಕೈಬಿಡುವ ಕುರಿತು ಆಯ್ಕೆದಾರರು ಮಾರ್ಚ್ 2 ರೊಳಗೆ ಈ ನಿರ್ಧಾರ ಕೈಗೊಳ್ಳಬೇಕಿದೆ. ಆಟಗಾರರು ಚಾರ್ಟರ್ಡ್ ಫ್ಲೈಟ್‌ನಲ್ಲಿ ಧರ್ಮಶಾಲಾಗೆ ಹಾರುವ ಮೊದಲು ಚಂಡೀಗಢದಲ್ಲಿ ನಡೆಯುವ ಕ್ಯಾಂಪ್ನಲ್ಲಿ ಪಾಲ್ಗೊಳ್ಳಬೇಕಿದೆ. ಮೂರನೇ ಟೆಸ್ಟ್‌ಗೂ ಮುನ್ನ ಬಿಸಿಸಿಐ ಪತ್ರಿಕಾ ಪ್ರಕಟಣೆಯ ಪ್ರಕಾರ, "90% ಫಿಟ್" ಆಗಿದ್ದ ರಾಹುಲ್, ಅಷ್ಟರೊಳಗೆ ಸಂಪೂರ್ಣ ಫಿಟ್ನೆಸ್ ಆಗದಿದ್ದರೆ, ಪಾಟೀದಾರ್ ಅವರನ್ನು ತಂಡದಲ್ಲಿ ಮುಂದುವರಿಸಬೇಕಾಗುತ್ತದೆ. ಆದರೆ, ಇದು ಸೆಲೆಕ್ಟರ್ಸ್ಗೆ ಇಷ್ಟವಿಲ್ಲ.
‘ಪಾಟೀದಾರ್ ಆಯ್ಕೆಗೆ ಇಷ್ಟವಿಲ್ಲ’
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಆಯ್ಕೆಗಾರರು ಪಾಟಿದಾರ್ ಅವರನ್ನು ಭಾರತ ಟೆಸ್ಟ್ ತಂಡದಿಂದ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ರಣಜಿ ಟ್ರೋಫಿ ಸೆಮಿಫೈನಲ್ನಲ್ಲಿ ವಿದರ್ಭ ವಿರುದ್ಧ ಮಧ್ಯಪ್ರದೇಶದ ಪರ ಆಡುವಂತೆ ಸೂಚಿಸಿದ್ದಾರೆ. ಮಾರ್ಚ್ 2 ರಂದು ಈ ಪಂದ್ಯ ನಡೆಯಲಿದೆ. ಭಾರತ ತಂಡದಲ್ಲಿ ಸಿಕ್ಕ ಅವಕಾಶ ಕೈಚೆಲ್ಲಿದ ರಜತ್ 6 ಇನ್ನಿಂಗ್ಸ್‌ಗಳಲ್ಲಿ 32, 9, 5, 0, 17, 0 ರನ್ಗಳಿಸಿ ನಿರಾಸೆ ಮೂಡಿಸಿದರು. 2 ಡಕೌಟ್ ಕೂಡ ಆಗಿದ್ದಾರೆ. ಹೀಗಾಗಿ ಪಾಟೀದಾರ್ರನ್ನು ಕೈಬಿಡಲು ಬಿಸಿಸಿಐ ಸೆಲೆಕ್ಟರ್ಸ್ ನಿರ್ಧರಿಸಿದ್ದಾರೆ.
ಒಂದು ವೇಳೆ ರಾಹುಲ್ ಸರಿಯಾದ ಸಮಯಕ್ಕೆ ಫಿಟ್ನೆಸ್ ಮರಳಿ ಪಡೆದರೆ, ತಂಡದ ಮ್ಯಾನೇಜ್‌ಮೆಂಟ್ ಪಾಟಿದಾರ್ ಅವರನ್ನು ತಂಡದಲ್ಲಿ ಹಿಡಿದಿಟ್ಟುಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಹೋಗಿ ರಣಜಿ ಆಡಿ. ಸೆಮಿಫೈನಲ್ನಲ್ಲಿ ಕಣಕ್ಕಿಳಿದು ಲಯಕ್ಕೆ ಮರಳುವಂತೆ ಸೂಚಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಮತ್ತೊಂದಡೆ ರಾಹುಲ್ ಫಿಟ್ನೆಸ್ ಬಗ್ಗೆಯೂ ಖಚಿತವಾಗಿ ಹೇಳಲಾಗದು. ಹೀಗಾಗಿ ಈ ಎರಡು ಆಯ್ಕೆಯ ನಡುವೆ ದೇವದತ್ ಪಡಿಕ್ಕಲ್ಗೆ ಚೊಚ್ಚಲ ಅವಕಾಶ ನೀಡುವ ಸಾಧ್ಯತೆ ಇದೆ.
ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಪ್ರಕಟವಾಗಿದ್ದ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್.