ಭಾರತ ತಂಡಕ್ಕೆ ಶುಭಸುದ್ದಿ, ಎರಡನೇ ಟೆಸ್ಟ್ಗೆ ಜಡೇಜಾ ಮರಳುವುದು ಖಚಿತ; ಸುಳಿವು ನೀಡಿದ ರೋಹಿತ್
Rohit Sharma: ಸೌತ್ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಮರಳುವ ಕುರಿತು ರೋಹಿತ್ ಶರ್ಮಾ ದೊಡ್ಡ ಸುಳಿವು ಕೊಟ್ಟಿದ್ದಾರೆ.
ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲು ಭಾರತ (India vs South Africa 2nd Test) ಸಜ್ಜಾಗಿದೆ. ಮೊದಲ ಟೆಸ್ಟ್‌ನಲ್ಲಿ ಇನಿಂಗ್ಸ್ ಮತ್ತು 32 ರನ್‌ಗಳ ಸೋಲಿನ ನಂತರ ಹರಿಣಗಳ ವಿರುದ್ಧ ಸರಣಿ ಸೋಲನ್ನು ತಪ್ಪಿಸಲು ಭಾರತಕ್ಕೆ ಇದು ಅತ್ಯಂತ ನಿರ್ಣಾಯಕ ಪಂದ್ಯವಾಗಿದೆ.
ಜಡೇಜಾ ಕಂಬ್ಯಾಕ್
ಬೆನ್ನಿನ ಸೆಳೆತದಿಂದ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದ ರವೀಂದ್ರ ಜಡೇಜಾ (Ravindra Jadeja), ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ರೋಹಿತ್ ಶರ್ಮಾ (Rohit Sharma) ಸ್ವಲ್ಪಮಟ್ಟಿಗೆ ಖಚಿತಪಡಿಸಿದ್ದಾರೆ. 2ನೇ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ರವೀಂದ್ರ ಜಡೇಜಾ ಮರಳುವ ಕುರಿತು ರೋಹಿತ್ ದೊಡ್ಡ ಸುಳಿವು ಕೊಟ್ಟಿದ್ದಾರೆ.
ಟೀಮ್ ಮ್ಯಾನೇಜ್ಮೆಂಟ್ನೊಂದಿಗೆ ಮಾತುಕತೆ ನಡೆಸಿದ್ದು, ತಂಡದಲ್ಲಿ ಯಾವ ಗಾಯದ ಸಮಸ್ಯೆಯೂ ಇಲ್ಲ. ಎಲ್ಲರೂ ಆಯ್ಕೆಗೆ ಲಭ್ಯರಿದ್ದಾರೆ ಎಂದು ನಾಯಕ ಹೇಳಿದ್ದಾರೆ. ಹೀಗಾಗಿ ಜಡೇಜಾ ಇಂಜುರಿ ಮುಕ್ತರೆಂದು ಎಂದು ಹಿಟ್ಮ್ಯಾನ್ ಪರೋಕ್ಷವಾಗಿ ತಿಳಿಸಿದ್ದಾರೆ. ಒಂದ್ವೇಳೆ ಆಯ್ಕೆಗೆ ಲಭ್ಯರಿದ್ದರೆ, ಆರ್ ಅಶ್ವಿನ್ ಬೆಂಚ್ ಕಾಯುವುದು ಖಚಿತ.
ಮ್ಯಾನೇಜ್‌ಮೆಂಟ್, ಕೋಚಿಂಗ್ ಸ್ಟಾಫ್ ಜೊತೆ ಚರ್ಚಿಸಲಾಗಿದೆ. ಎರಡನೇ ಟೆಸ್ಟ್ಗೆ ಯಾರೆಲ್ಲಾ ಆಡಬೇಕು? ಯಾವೆಲ್ಲಾ ಬೌಲರ್ಗಳು ಬೇಕು ಎನ್ನುವುದರ ಬಗ್ಗೆ ಮಾತುಕತೆ ನಡೆಸಿದ್ದೇವೆ. ಆದರೆ ಯಾವುದನ್ನೂ ಅಂತಿಮಗೊಳಿಸಿಲ್ಲ. ನಿಸ್ಸಂಶಯವಾಗಿ ಎಲ್ಲರೂ ಫಿಟ್ ಆಗಿದ್ದು, ಆಯ್ಕೆಗೆ ಲಭ್ಯವಿದ್ದಾರೆ ಎಂದು ಹೇಳಿದ್ದಾರೆ.
ಪ್ರಸಿದ್ಧ್ ಕೃಷ್ಣ ಆಡುವುದು ಖಚಿತ
ಸದ್ಯ ತಂಡದಲ್ಲಿ ಯಾವುದೇ ಗಾಯದ ಆತಂಕ ಇಲ್ಲ. ಪ್ರತಿಯೊಬ್ಬ ಆಟಗಾರ ತಂಡದ ಪರ ಆಡಲು ಸಜ್ಜಾಗಿದ್ದಾರೆ ಎಂದರು. ಈ ಮಧ್ಯೆ ಪ್ರಸಿದ್ಧ್ ಕೃಷ್ಣ 2ನೇ ಟೆಸ್ಟ್ ಆಡ್ತಾರಾ ಇಲ್ಲವೇ ಎನ್ನುವುದರ ಕುರಿತು ರೋಹಿತ್ ದೊಡ್ಡ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಪ್ರಸಿದ್ಧ್ ಕೃಷ್ಣ, 93 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಹಾಗಾಗಿ 2ನೇ ಟೆಸ್ಟ್ಗೆ ತಂಡದಿಂದ ಕೈಬಿಡುವುದು ಖಚಿತ ಎಂದು ನಿರೀಕ್ಷಿಸಲಾಗಿತ್ತು. ಆದರೆ, ರೋಹಿತ್ ಮತ್ತೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯುವ ಬೌಲರ್ಗಳ ಮೇಲೆ ನಂಬಿಕೆ ಇಡಬೇಕು ಎಂದು ಹೇಳಿದ್ದಾರೆ.
‘ಆತನ ಮೇಲೆ ನಂಬಿಕೆ ಇಡಲಾಗಿದೆ’
ತಮ್ಮ ಬೌಲಿಂಗ್ ಲೈನ್‌ಅಪ್‌ನಲ್ಲಿ ಅನನುಭವಿಗಳ ಕೊರತೆ ಎದ್ದು ಕಾಣಿಸಿದಾಗ ನಾಯಕ ಯುವಕರ ಮೇಲೆ ನಂಬಿಕೆ ಇಡಬೇಕು ಎಂದು ರೋಹಿತ್ ಹೇಳಿದ್ದಾರೆ. ಪ್ರಸಿದ್ಧ್ ಕೃಷ್ಣ ತಮ್ಮ ಮೊದಲ ಪಂದ್ಯವನ್ನು ಆಡುವಾಗ ಆತಂಕಕ್ಕೊಳಗಾದರು ಎಂದು ಹೇಳಿದ್ದೆ. ಪ್ರಸಿದ್ಧ್ಗೆ ಉನ್ನತ ಮಟ್ಟದಲ್ಲಿ ಯಶಸ್ವಿಯಾಗುವ ಸಾಮರ್ಥ್ಯವಿದೆ ಎಂದರು.
ಆತನ ಮೇಲೆ ನಂಬಿಕೆ ಇಡಲಾಗಿದೆ. ಅವರನ್ನು ಬೆಂಬಲಿಸುವ ಮೂಲಕ ಉತ್ತಮ ಸಾಮರ್ಥ್ಯವನ್ನು ಹೊರ ತೆಗೆಯಬೇಕು ಎಂದು ಕರ್ನಾಟಕದ ಕ್ರಿಕೆಟಿಗನ್ನು ರೋಹಿತ್ ಬೆಂಬಲಿಸಿದ್ದಾರೆ. ಹಾಗಾಗಿ 2ನೇ ಟೆಸ್ಟ್ ಪಂದ್ಯಕ್ಕೆ ಪ್ರಸಿದ್ಧ್ ಅವರನ್ನು ಕೈಬಿಡುವುದಿಲ್ಲ ಎಂದು ಸುಳಿವು ನೀಡಿದ್ದಾರೆ. ಇಂದಿನ ಪಂದ್ಯದಲ್ಲೂ ಆಡುವ ಸಾಧ್ಯತೆ ದಟ್ಟವಾಗಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಯಶಸ್ವಿಯಾಗಲು ಅವರು (ಪ್ರಸಿದ್ಧ್) ಉತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದ ಅವರು, ಪ್ರತಿಯೊಬ್ಬರ ಮೇಲೂ ನಂಬಿಕೆ ತೋರಿಸುವುದು, ಅವರಿಂದ ಕೆಲಸ ಪಡೆಯುವುದು ಮಾತ್ರ ಎಂದು ನಾಯಕ ಹೇಳಿದ್ದಾರೆ. ಆದರೆ ಆಡುವ 11ರ ಬಳಗದಲ್ಲಿ ಕಣಕ್ಕಿಳಿಯುವ ತಂಡವನ್ನು ಈ ವೇಳೆ ಪ್ರಸ್ತಾಪಿಸಿಲ್ಲ.
ಭಾರತ ಟೆಸ್ಟ್ ತಂಡ
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಕೇಶ್ ಕುಮಾರ್, ರವೀಂದ್ರ ಜಡೇಜಾ , ಶ್ರೀಕರ್ ಭರತ್, ಅಭಿಮನ್ಯು ಈಶ್ವರನ್.