ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್ ಸಂಭ್ರಮ ಹೆಚ್ಚಿಸಿದ ಗೂಗಲ್ ಡೂಡಲ್; ತಂಡಗಳಿಗೆ ಶುಭಕೋರಿದ ಸಿಇಒ ಸುಂದರ್‌ ಪಿಚ್ಚೈ

ಟಿ20 ವಿಶ್ವಕಪ್ ಸಂಭ್ರಮ ಹೆಚ್ಚಿಸಿದ ಗೂಗಲ್ ಡೂಡಲ್; ತಂಡಗಳಿಗೆ ಶುಭಕೋರಿದ ಸಿಇಒ ಸುಂದರ್‌ ಪಿಚ್ಚೈ

ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಗೂಗಲ್‌ ಡೂಡಲ್‌ ಸಂಭ್ರಮಿಸಿದೆ. ಪಂದ್ಯಾವಳಿಯ ಆರಂಭಕ್ಕೂ ಮುನ್ನ ಗೂಗಲ್‌ ಸಿಇಒ ತಂಡಗಳಿಗೆ ಶುಭಹಾರೈಸಿದ್ದಾರೆ.

ಟಿ20 ವಿಶ್ವಕಪ್ ಸಂಭ್ರಮ ಹೆಚ್ಚಿಸಿದ ಗೂಗಲ್ ಡೂಡಲ್; ತಂಡಗಳಿಗೆ ಶುಭಕೋರಿದ ಸಿಇಒ ಸುಂದರ್‌ ಪಿಚ್ಚೈ
ಟಿ20 ವಿಶ್ವಕಪ್ ಸಂಭ್ರಮ ಹೆಚ್ಚಿಸಿದ ಗೂಗಲ್ ಡೂಡಲ್; ತಂಡಗಳಿಗೆ ಶುಭಕೋರಿದ ಸಿಇಒ ಸುಂದರ್‌ ಪಿಚ್ಚೈ

ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆರಂಭಕ್ಕೆ ಗೂಗಲ್ ಭಿನ್ನ ರೀತಿಯಲ್ಲಿ ಶುಭಕೋರಿದೆ. ಗೂಗಲ್‌ ಸಿಇಒ ಸುಂದರ್ ಪಿಚೈ, ಚುಟುಕು ವಿಶ್ವಸಮರದ ಆರಂಭಕ್ಕೆ ಸಂತಸ ವ್ಯಕ್ತಪಡಿಸಿದ್ದು, ಟೂರ್ನಿಯಲ್ಲಿ ಭಾಗವಹಿಸುವ ತಂಡಗಳಿಗೆ ಶುಭಹಾರೈಸಿದ್ದಾರೆ. ಇದೇ ವೇಳೆ ವಿನೂತನ ಡೂಡಲ್‌ ಮೂಲಕ ಜಾಗತಿಕ ಕ್ರೀಡಾಕೂಟವನ್ನು ಟೆಕ್‌ ಸಂಸ್ಥೆ ಭಿನ್ನವಾಗಿ ಸ್ವಾಗತಿಸಿದೆ. ಯುನೈಟೆಡ್‌ ಸ್ಟೇಟ್ಸ್‌ನ ಡಲ್ಲಾಸ್‌ನಲ್ಲಿ ವಿಶ್ವಕಪ್‌ ಪಂದ್ಯಾವಳಿಗೆ ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಕೆನಡಾ ವಿರುದ್ಧ ಆತಿಥೇಯ ಯುಎಸ್‌ಎ ಗೆದ್ದಿದೆ.

ಟ್ರೆಂಡಿಂಗ್​ ಸುದ್ದಿ

ಡೂಡಲ್‌ ಮೂಲಕ ವಿಶ್ವಕಪ್‌ ಪಂದ್ಯಾವಳಿ ಸಂಭ್ರಮ ಹೆಚ್ಚಿಸಿರುವ ಗೂಗಲ್‌ ಸಿಇಒ ಸುಂದರ್‌ ಪಿಚ್ಚೈ, ಎಕ್ಸ್ ಪೋಸ್ಟ್ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ನೆಚ್ಚಿನ ಕ್ರೀಡೆಯ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

“ಈ ವರ್ಷ ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಈ ಹಿಂದಿಗಿಂತಲೂ ಹೆಚ್ಚಿನ ತಂಡಗಳು ಭಾಗವಸುತ್ತಿವೆ. ನನ್ನ ನೆಚ್ಚಿನ ಕ್ರೀಡೆ ಜಾಗತಿಕವಾಗಿ ಬೆಳೆಯುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ. ಇದನ್ನು ಇಂದಿನ ಡೂಡಲ್‌ ಮೂಲಕ ಆಚರಿಸಲಾಗುತ್ತದೆ. ಟೂರ್ನಿಯಲ್ಲಿ ಆಡುತ್ತಿರುವ ಎಲ್ಲಾ ತಂಡಗಳಿಗೆ ಶುಭವಾಗಲಿ!” ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

2024ರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಅಭಿಮಾನಿಗಳಲ್ಲಿ ಭಾರಿ ಉತ್ಸಾಹವನ್ನು ಹುಟ್ಟುಹಾಕಿದೆ. ಟೂರ್ನಿಯ ಜೋಶ್‌ ಹೆಚ್ಚಿಸುವಲ್ಲಿ ಡೂಡಲ್‌ ಕೂಡಾ ಪ್ರಮುಖ ಪಾತ್ರ ವಹಿಸಿದೆ. ಜಾಗತಿಕ ಟೆಕ್ ದೈತ್ಯ, ತನ್ನ ಮುಖಪುಟದಲ್ಲಿ ಆಕರ್ಷಕ ಡೂಡಲ್ ಪರಿಚಯಿಸಿರುವುದು ಪಂದ್ಯಾವಳಿಯ ಉತ್ಸಾಹವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.

ಜೂನ್ 1ರಂದು (ಭಾರತದಲ್ಲಿ ಜೂನ್‌ 2) ಟೂರ್ನಿಗೆ ಚಾಲನೆ ಸಿಕ್ಕಿದ್ದು, 29ರಂದು ಪಂದ್ಯಾವಳಿ ಮುಗಿಯಲಿದೆ. ಈ ವರ್ಷದ ಟಿ20 ವಿಶ್ವಕಪ್ ಟೂರ್ನಿಗೆ ವೆಸ್ಟ್ ಇಂಡೀಸ್‌ ಜೊತೆಗೆ ಯುನೈಟೆಡ್ ಸ್ಟೇಟ್ಸ್ ಸಹ-ಆತಿಥ್ಯ ವಹಿಸಿದೆ. ಇದೇ ಮೊದಲ ಬಾರಿಗೆ ಯುಎಸ್‌ನಲ್ಲಿ ವಿಶ್ವಕಪ್‌ ಪಂದ್ಯಗಳು ನಡೆಯುತ್ತಿರುವುದು ವಿಶೇಷ. ಈ ಬಾರಿ ದಾಖಲೆಯ 20 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ.

2007ರಲ್ಲಿ ಚೊಚ್ಚಲ ವಿಶ್ವಕಪ್‌ ಪಂದ್ಯಾವಳಿ ನಡೆದಿದ್ದು, ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಈ ಬಾರಿ ನಡೆಯುತ್ತಿರುವ ಒಂಬತ್ತನೇ ಆವೃತ್ತಿಯಲ್ಲಿ ಗೆಲ್ಲುವ ಮೂಲಕ ಎರಡನೇ ಟ್ರೋಫಿ ಎತ್ತಿಹಿಡಿಯಲು ಭಾರತ ಸಿದ್ಧತೆ ನಡೆಸಿದೆ.

ಐಸಿಸಿ ಟ್ರೋಫಿ ಬರ

2013ರಲ್ಲಿ ಕೊನೆಯ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ಭಾರತ, ಐಸಿಸಿ ಟ್ರೋಫಿ ಬರವನ್ನು ಕೊನೆಗಾಣಿಸುವ ಗುರಿ ಹಾಕಿಕೊಂಡಿದೆ. ಭಾರತವು 2023ರಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು. 2015 ಮತ್ತು 2019ರಲ್ಲಿ ಸೆಮಿಫೈನಲ್‌ನಲ್ಲಿ ಸೋತು ನಿರ್ಗಮಿಸಿತ್ತು.‌ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಕೊನೆಯ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ, ಭಾರತವು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ ಸೋತಿತ್ತು.

ಭಾರತ ಟಿ20 ವಿಶ್ವಕಪ್ ತಂಡ‌

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಾಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ