ಮಿಚೆಲ್ ಮಾರ್ಷ್ ಸ್ಫೋಟಕ ಶತಕ; ತನ್ನ ಔಪಚಾರಿಕ ಪಂದ್ಯದಲ್ಲಿ ಟೇಬಲ್ ಟಾಪರ್ ಗುಜರಾತ್ ಮಣಿಸಿದ ಲಕ್ನೋ ಸೂಪರ್ ಜೈಂಟ್ಸ್
18ನೇ ಆವೃತ್ತಿಯ ಐಪಿಎಲ್ನ 64ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 33 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಅಗ್ರಸ್ಥಾನ ಬಲಪಡಿಸುವ ಜಿಟಿಗೆ ಪೆಟ್ಟು ನೀಡಿತು.

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಮಿಚೆಲ್ ಮಾರ್ಷ್ ಅವರ (117) ಸ್ಫೋಟಕ ಶತಕದ ಸಹಾಯದಿಂದ ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 33 ರನ್‌ಗಳ ಅಂತರದಿಂದ ಗೆದ್ದು ಬೀಗಿದೆ. ಸತತ ನಾಲ್ಕನೇ ಸೋಲುಗಳ ನಂತರ ತನ್ನ ಔಪಚಾರಿಕ ಪಂದ್ಯದಲ್ಲಿ ಎಲ್ಎಸ್ಜಿ ಜಯದ ನಗೆ ಬೀರಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ಜಿಟಿ ಪಾಲಿಗೆ ಗೆಲುವು ಅಗತ್ಯವಾಗಿತ್ತು. ಸೋತರೂ ಅಗ್ರಸ್ಥಾನವನ್ನೇ ಕಾಯ್ದುಕೊಂಡರೂ ಮುಂದಿನ ಪಂದ್ಯಗಳಲ್ಲಿ ಉಳಿದ ತಂಡಗಳು ಮೇಲೇರುವ ಸಾಧ್ಯತೆ ಸೃಷ್ಟಿಸಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಲಕ್ನೋ ತಂಡವು ಮಿಚೆಲ್ ಮಾರ್ಷ್ ಅವರ ಅಬ್ಬರದ ಶತಕದ ಸಹಾಯದಿಂದ ಬೃಹತ್ ಮೊತ್ತ ಪೇರಿಸಲು ನೆರವಾಯಿತು. ನಿಕೋಲಸ್ ಪೂರನ್ ಕೂಡ ಅರ್ಧಶತಕದ ಇನ್ನಿಂಗ್ಸ್ ಕಟ್ಟಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 235 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಜಿಟಿ 20 ಓವರ್ಗಳನ್ನು ಪೂರ್ಣಗೊಳಿಸಿದರೂ 9 ವಿಕೆಟ್ ನಷ್ಟಕ್ಕೆ ಗಳಿಸಿದ್ದು 202 ರನ್. 33 ರನ್‌ಗಳ ಅಂತರದಿಂದ ಎಲ್ಎಸ್ಜಿ ಗೆದ್ದು ಬೀಗಿತು.
ಈ ಋತುವಿನಲ್ಲಿ ಅಹಮದಾಬಾದ್‌ನಲ್ಲಿ ಟಾಸ್ ಗೆದ್ದ ತಂಡವು ಇದುವರೆಗಿನ ಎಲ್ಲಾ ಆರು ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿದೆ. ಆದರೆ ಈ ಪಂದ್ಯದಲ್ಲಿ ಮಾತ್ರ ಮೊದಲ ಇನ್ನಿಂಗ್ಸ್ ಸ್ಕೋರನ್ನು ರಕ್ಷಿಸಿಕೊಳ್ಳಲಾಗಿದೆ. ಸದ್ಯ ಲಕ್ನೋ ಆಡಿದ 13 ಪಂದ್ಯಗಳಲ್ಲಿ 6 ಗೆಲುವು, 7 ಸೋಲುಗಳೊಂದಿಗೆ 12 ಅಂಕ ಗಳಿಸಿ 7ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಗುಜರಾತ್ಗೆ ಪ್ರಸಕ್ತ ಲೀಗ್ನಲ್ಲಿದು 4ನೇ ಸೋಲು. 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲೇ ಉಳಿದಿದೆ.
ಮಿಚೆಲ್ ಮಾರ್ಷ್
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಪವರ್‌ಪ್ಲೇನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 53 ರನ್ ಗಳಿಸಿತು. ಏಡನ್ ಮಾರ್ಕ್ರಾಮ್ 24 ಎಸೆತಗಳಲ್ಲಿ 36 ರನ್ ಗಳಿಸಿ ಔಟಾದರು. ಸಾಯಿ ಕಿಶೋರ್ ಮೊದಲ ಯಶಸ್ಸು ತಂದುಕೊಟ್ಟರು. ಮಿಚೆಲ್ ಮಾರ್ಷ್ 64 ಎಸೆತಗಳಲ್ಲಿ 117 ರನ್ ಗಳಿಸಿ ಔಟಾದರು. ಇದು ಅವರ ಚೊಚ್ಚಲ ಮತ್ತು ದಾಖಲೆಯ ಐಪಿಎಲ್ ಶತಕವಾಗಿದೆ. ಇವರಿಗೆ ಅರ್ಷದ್ ಪೆವಿಲಿಯನ್ ದಾರಿ ತೋರಿಸಿದರು. ಮಾರ್ಷ್ ತಮ್ಮ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು ಎಂಟು ಸಿಕ್ಸರ್ ಬಾರಿಸಿದರು. ನಿಕೋಲಸ್ ಪೂರನ್ 27 ಎಸೆತಗಳಲ್ಲಿ 56 ರನ್ ಗಳಿಸಿ ಅಜೇಯರಾಗುಳಿದರು. ರಿಷಭ್ ಪಂತ್ 6 ಎಸೆತಗಳಲ್ಲಿ 16 ರನ್ ಗಳಿಸಿದರು. ಗುಜರಾತ್ ಪರ ಅರ್ಷದ್, ಸಾಯಿ ಕಿಶೋರ್ ತಲಾ 1 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಲು ಜಿಟಿ ವಿಫಲ
236 ರನ್‌ಗಳ ಗುರಿ ಬೆನ್ನಟ್ಟಿದ ಟೈಟಾನ್ಸ್‌ಗೆ ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಉತ್ತಮ ಆರಂಭ ನೀಡಿದರು. ಇವರಿಬ್ಬರ ನಡುವೆ ಮೊದಲ ವಿಕೆಟ್‌ಗೆ 46 ರನ್‌ಗಳ ಪಾಲುದಾರಿಕೆ ಇತ್ತು. ಸಾಯಿ ಸುದರ್ಶನ್ 16 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. ಗಿಲ್ 20 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು. ಜೋಸ್ ಬಟ್ಲರ್ 18 ಎಸೆತಗಳಲ್ಲಿ 33 ರನ್ ಗಳಿಸಿದರು. ಶಾರುಖ್ ಮತ್ತು ರುದರ್ಫೋರ್ಡ್ 4ನೇ ವಿಕೆಟ್‌ಗೆ 40 ಎಸೆತಗಳಲ್ಲಿ 86 ರನ್‌ಗಳ ಪಾಲುದಾರಿಕೆ ಒದಗಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಇದು ಸಾಧ್ಯವಾಗಲಿಲ್ಲ. ರುದರ್ಫೋರ್ಡ್ 22 ಎಸೆತಗಳಲ್ಲಿ 38 ರನ್ ಗಳಿಸಿ ನಿರ್ಗಮಿಸಿದರೆ, ಶಾರುಖ್ 29 ಎಸೆತಗಳಲ್ಲಿ 57 ರನ್ ಗಳಿಸಿದರು. ಕಗಿಸೊ ರಬಾಡ 2 ರನ್, ಸಾಯಿ ಕಿಶೋರ್ 1 ರನ್ ಗಳಿಸಿ ಔಟಾದರು. ರಶೀದ್ 4 ರನ್ ಗಳಿಸಿ ಅಜೇಯರಾಗುಳಿದರು. ಲಕ್ನೋ ಪರ ವಿಲಿಯಂ ಮೂರು ವಿಕೆಟ್ ಪಡೆದರೆ, ಆವೇಶ್ ಮತ್ತು ಆಯುಷ್ ತಲಾ 2 ವಿಕೆಟ್ ಪಡೆದರು.