ಕ್ರಿಸ್ ಗೇಲ್ ದಾಖಲೆ ಮುರಿದ ಸಾಯಿ ಸುದರ್ಶನ್; ಈ ಸಾಧನೆ ಮಾಡಿದ ಏಕೈಕ ಭಾರತೀಯ
Sai Sudharsan: ರಾಜಸ್ಥಾನ್ ರಾಯಲ್ಸ್ ವಿರುದ್ಧ 82 ರನ್ಗಳ ಭರ್ಜರಿ ಇನ್ನಿಂಗ್ಸ್ ಕಟ್ಟಿದ ಗುಜರಾತ್ ಟೈಟಾನ್ಸ್ ಬ್ಯಾಟರ್ ಸಾಯಿ ಸುದರ್ಶನ್ ಅವರು ಐಪಿಎಲ್‌ನಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.

ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಸಾಯಿ ಸುದರ್ಶನ್ 2025ರ ಐಪಿಎಲ್‌ನಲ್ಲಿ ಅದ್ಭುತ ಲಯ ಮುಂದುವರೆಸಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಮತ್ತೊಂದು ಶ್ರೇಷ್ಠ ಇನ್ನಿಂಗ್ಸ್ ಆಡಿದ್ದಾರೆ. ಏಪ್ರಿಲ್ 9ರ ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸುದರ್ಶನ್ 53 ಎಸೆತಗಳಲ್ಲಿ 82 ರನ್ ಗಳಿಸಿದರು. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಿದ ಈ ಪಂದ್ಯದಲ್ಲಿ ಅವರ ಇನ್ನಿಂಗ್ಸ್ನಲ್ಲಿ 8 ಬೌಂಡರಿ, 3 ಸಿಕ್ಸರ್ಗಳಿದ್ದವು. ಇದು ಸುದರ್ಶನ್ ಅವರ ಐಪಿಎಲ್ ವೃತ್ತಿಜೀವನದ 30ನೇ ಪಂದ್ಯ. ಚೆನ್ನೈ ಕ್ರಿಕೆಟಿಗ 'ಸೂಪರ್ 30' ಕ್ಲಬ್ಗೆ ಪ್ರವೇಶಿಸುವ ಮೂಲಕ ಕ್ರಿಸ್ ಗೇಲ್ ದಾಖಲೆ ಮುರಿದಿದ್ದಾರೆ.
ಐಪಿಎಲ್ನ 30 ಇನ್ನಿಂಗ್ಸ್ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸುದರ್ಶನ್ 2ನೇ ಸ್ಥಾನದಲ್ಲಿದ್ದಾರೆ. ಸದ್ಯ ಅವರ ಖಾತೆಯಲ್ಲಿ 1307 ರನ್ ಇದೆ. 30 ಐಪಿಎಲ್ ಇನ್ನಿಂಗ್ಸ್ಗಳಲ್ಲಿ 1141 ರನ್ ಗಳಿಸಿದ್ದ ಗೇಲ್ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಇಷ್ಟು ಇನ್ನಿಂಗ್ಸ್ಗಳಲ್ಲಿ 1,000 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೂ ಸುದರ್ಶನ್ ಪಾತ್ರರಾಗಿದ್ದಾರೆ. ಒಟ್ಟಾರೆ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಮಾತ್ರ ಸುದರ್ಶನ್ಗಿಂತ ಮುಂದಿದ್ದಾರೆ. ಮಾರ್ಷ್ 30 ಇನ್ನಿಂಗ್ಸ್ಗಳಲ್ಲಿ 1338 ರನ್ ಗಳಿಸಿದ್ದರು.
ಐಪಿಎಲ್‌ನಲ್ಲಿ 30 ಇನ್ನಿಂಗ್ಸ್‌ಗಳ ನಂತರ ಅತಿ ಹೆಚ್ಚು ರನ್ ಸಿಡಿಸಿದವರು
1338 - ಶಾನ್ ಮಾರ್ಷ್
1307 - ಸಾಯಿ ಸುದರ್ಶನ್
1141 - ಕ್ರಿಸ್ ಗೇಲ್
1096 - ಕೇನ್ ವಿಲಿಯಮ್ಸನ್
1082 - ಮ್ಯಾಥ್ಯೂ ಹೇಡನ್
1064 - ಮೈಕೆಲ್ ಹಸ್ಸಿ
1058 - ಜಾನಿ ಬೈರ್‌ಸ್ಟೋ
977 - ರಿತುರಾಜ್ ಗೈಕ್‌ವಾಡ್
975 - ಸಚಿನ್ ತೆಂಡೂಲ್ಕರ್
ಗುಜರಾತ್ಗೆ ಗೆಲುವು
ಇನ್ನು ಪಂದ್ಯದ ಚಿತ್ರಣ ನೋಡುವುದಾದರೆ, ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್, ಸುದರ್ಶನ್ ಅವರ ಅರ್ಧಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. ಜೋಸ್ ಬಟ್ಲರ್ (36) ಅವರೊಂದಿಗೆ ಎರಡನೇ ವಿಕೆಟ್ಗೆ 80 ರನ್ ಮತ್ತು ಶಾರುಖ್ ಖಾನ್ (36) ಅವರೊಂದಿಗೆ 3ನೇ ವಿಕೆಟ್ಗೆ 62 ರನ್ ಜೊತೆಯಾಟ ಸೇರಿಸಿದರು. ಸುದರ್ಶನ್ 10ನೇ ಓವರ್ನಲ್ಲಿ 32 ಎಸೆತಗಳಲ್ಲಿ ತಮ್ಮ 9ನೇ ಐಪಿಎಲ್ ಅರ್ಧಶತಕ ಪೂರೈಸಿದರು. ಇದು ಪ್ರಸಕ್ತ ಋತುವಿನಲ್ಲಿ ಅವರ 3ನೇ ಅರ್ಧಶತಕದ ಇನ್ನಿಂಗ್ಸ್ ಆಗಿದೆ. ಐದು ಪಂದ್ಯಗಳಲ್ಲಿ 54.60ರ ಸರಾಸರಿಯಲ್ಲಿ 273 ರನ್ ಗಳಿಸಿದ್ದಾರೆ.
19ನೇ ಓವರ್ನಲ್ಲಿ ಸುದರ್ಶನ್ ತುಷಾರ್ ದೇಶಪಾಂಡೆಗೆ ಬಲಿಯಾದರು. ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ಗೆ ಕ್ಯಾಚ್ ನೀಡಿದರು. ಸಾಯಿ ಸುದರ್ಶನ್ (82) ಅವರ ಸೊಗಸಾದ ಆಟದ ಬಲದಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 58 ರನ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದು ಜಿಟಿ ತಂಡದ ಸತತ ನಾಲ್ಕನೇ ಗೆಲುವು. ಆದರೆ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದ ಆರ್ಆರ್ಗೆ ನಿರಾಸೆಯಾಗಿದೆ. ಈ ಜಯದೊಂದಿಗೆ ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ 8 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ವಿಭಾಗ