ರೋಚಕ ಗೆಲುವು ಸಾಧಿಸಿದ ಮುಂಬೈಗೆ ಗುಜರಾತ್ ಸವಾಲು; ಪ್ಲೇಯಿಂಗ್ XI, ಪಿಚ್ ವರದಿ, ಲೈವ್ಸ್ಟ್ರೀಮ್ ಕುರಿತ ವಿವರ ಇಲ್ಲಿದೆ
Gujarat Giants vs Mumbai Indians : ವುಮೆನ್ಸ್ ಪ್ರೀಮಿಯರ್ ಲೀಗ್ನ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ವುಮೆನ್ಸ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್, ತನ್ನ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ (Gujarat Giants vs Mumbai Indians) ಸೆಣಸಾಟ ನಡೆಸಲು ಸಜ್ಜಾಗಿದೆ. ಇದು ಗುಜರಾತ್ ತಂಡಕ್ಕೆ ಮೊದಲ ಪಂದ್ಯವಾಗಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದೆ. ಆದರೆ ಹಾಲಿ ಚಾಂಪಿಯನ್ ಮುಂಬೈ 2ನೇ ಗೆಲುವಿನ ಕನಸಿನಲ್ಲಿದೆ.
ಡೆಲ್ಲಿ ವಿರುದ್ಧ 4 ವಿಕೆಟ್ಗಳ ಜಯ ಸಾಧಿಸಿದ ಹರ್ಮನ್ ಪಡೆ, ಬ್ಯಾಟಿಂಗ್ ಮತ್ತು ವಿಭಾಗದಲ್ಲಿ ಅತ್ಯಂತ ಬಲಿಷ್ಠವಾಗಿದೆ. ವಿಶ್ವ ಶ್ರೇಷ್ಠ ಆಟಗಾರ್ತಿಯರನ್ನೇ ಹೊಂದಿರುವ ಮುಂಬೈ, ಎದುರಾಳಿ ತಂಡಕ್ಕೆ ಕಠಿಣ ಪೈಪೋಟಿ ನೀಡಲಿದೆ. ಮತ್ತೊಂದೆಡೆ ಗುಜರಾತ್ ತಂಡದಲ್ಲಿ ವಿದೇಶಿಯರು ಹೊರತುಪಡಿಸಿ ಹೇಳಿಕೊಳ್ಳುವಂತಹ ಭಾರತದ ದೊಡ್ಡ ಆಟಗಾರ್ತಿ ತಂಡದಲ್ಲಿಲ್ಲ. ಇದು ತಂಡದ ಚಿಂತೆಗೆ ಕಾರಣವಾಗಿದೆ.
ಮುಂಬೈ ಕಳೆದ ಋತುವಿನಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಎರಡು ಪಂದ್ಯಗಳನ್ನು ಆಡಿದೆ. ಆಡಿದ ಎರಡನ್ನೂ ಗೆದ್ದು ಅಜೇಯ ದಾಖಲೆ ಹೊಂದಿದೆ. ಮೊದಲ ಪಂದ್ಯವನ್ನು 143 ರನ್‌ಗಳಿಂದ ಮತ್ತು ಎರಡನೇ ಪಂದ್ಯವನ್ನು 55 ರನ್‌ಗಳಿಂದ ಗೆದ್ದುಕೊಂಡಿತು. ಇದೀಗ ಆ ಎರಡು ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಈ ಸೀಸನ್ನಲ್ಲಿ ಗೆಲುವಿನ ಅಭಿಯಾನ ಆರಂಭಿಸಲು ಗುಜರಾತ್ ಸಿದ್ಧವಾಗಿದೆ.
ಗುಜರಾತ್ ಜೈಂಟ್ಸ್ ಸಂಭಾವ್ಯ ತಂಡ
ಆಶ್ಲೇ ಗಾರ್ಡ್ನರ್, ಬೆತ್ ಮೂನಿ (ನಾಯಕಿ), ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಸ್ನೇಹ ರಾಣಾ, ಫೋಬೆ ಲಿಚ್‌ಫೀಲ್ಡ್, ಮೇಘನಾ ಸಿಂಗ್, ದಯಾಲನ್ ಹೇಮಲತಾ, ತನುಜಾ ಕನ್ವರ್, ಕ್ಯಾಥರಿನ್ ಬ್ರೈಸ್, ಕಾಶ್ವೀ ಗೌತಮ್.
ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್, ಹೇಲಿ ಮ್ಯಾಥ್ಯೂಸ್, ಇಸಾಬೆಲ್ಲೆ ವಾಂಗ್, ನಟಾಲಿ ಸಿವರ್, ಸಾಯಿಕಾ ಇಶಾಕ್, ಯಾಸ್ತಿಕಾ ಭಾಟಿಯಾ, ಪ್ರಿಯಾಂಕಾ ಬಾಲಾ, ಶಬ್ನಿಮ್ ಇಸ್ಮಾಯಿಲ್, ಎಸ್ ಸಜನಾ.
ಪಿಚ್ ರಿಪೋರ್ಟ್
ಚಿಕ್ಕ ಬೌಂಡರಿಗಳು ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಎತ್ತರವು ಸೀಮಿತ-ಓವರ್‌ಗಳ ಸ್ವರೂಪದಲ್ಲಿ ಬ್ಯಾಟರ್‌ಗಳಿಗೆ ಸಂಪೂರ್ಣ ಸ್ವರ್ಗವಾಗಿದೆ. ಎರಡೂ ತಂಡಗಳಲ್ಲಿ ಹಿಟ್ಟರ್ಗಳೇ ಇರುವ ಕಾರಣ ದೊಡ್ಡ ಸ್ಕೋರ್ ಅನ್ನು ನಿರೀಕ್ಷಿಸಬಹುದು. ಅಲ್ಲದೆ, ಸ್ಕೋರ್ ಎಷ್ಟೇ ಇದ್ದರೂ ಬೆನ್ನಟ್ಟಬಹುದಾದ ಪಿಚ್ ಇದಾಗಿದೆ.
ಹವಾಮಾನ ವರದಿ
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹವಾಮಾನವು ಯೋಗ್ಯವಾಗಿರುತ್ತದೆ. ಕೇವಲ 5 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆ ಇದೆ. ಅಕ್ಯುವೆದರ್ ಪ್ರಕಾರ, ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್, ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರುತ್ತದೆ. ಸ್ಥಳದಲ್ಲಿ ಗಾಳಿಯ ವೇಗ ಗಂಟೆಗೆ 18 ಕಿಮೀ ಆಗಿದ್ದು, ಶೇಕಡಾ 53 ರಷ್ಟು ಆರ್ದ್ರತೆ ಇರುತ್ತದೆ.
ನೇರ ಪ್ರಸಾರ ಎಲ್ಲಿ ವೀಕ್ಷಿಸಬಹುದು?
ಉಭಯ ತಂಡಗಳ ನಡುವಿನ ಪಂದ್ಯವನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಅಲ್ಲದೆ, ಚಾನೆಲ್ಗಳಲ್ಲಿ ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.