ಬ್ಯೂಟಿಫುಲ್ ಅಮೆಲಿಯಾ ಕೇರ್ ಬ್ಯೂಟಿಫುಲ್ ಆಟ; ಮುಂಬೈ ಇಂಡಿಯನ್ಸ್ಗೆ ಸತತ 2ನೇ ಗೆಲುವು, ಗುಜರಾತ್ಗೆ ಸೋಲು
Gujarat Giants vs Mumbai Indians : ಮೆಲಿಯಾ ಕೇರ್ ಅವರ ಅಮೋಘ ಆಲ್ರೌಂಡ್ ಆಟದ ನೆರವಿನಿಂದ ಗುಜರಾತ್ ಜೈಂಟ್ಸ್ ವಿರುದ್ಧ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 5 ವಿಕೆಟ್ಗಳ ಸುಲಭ ಜಯ ಸಾಧಿಸಿತು.
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ (WPL 202) ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸತತ ಎರಡನೇ ಗೆಲುವು ದಾಖಲಿಸಿತು. ಅಮೆಲಿಯಾ ಕೇರ್ ಅವರ ಅಮೋಘ ಆಲ್ರೌಂಡ್ ಆಟದ ನೆರವಿನಿಂದ ಗುಜರಾತ್ ಜೈಂಟ್ಸ್ ವಿರುದ್ಧ ಹಾಲಿ ಚಾಂಪಿಯನ್ (Gujarat Giants vs Mumbai Indians) 5 ವಿಕೆಟ್ಗಳ ಸುಲಭ ಜಯ ಸಾಧಿಸಿತು. ಆದರೆ ತನ್ನ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಗುಜರಾತ್, ಸೋಲಿನೊಂದಿಗೆ ಅಭಿಯಾನ ಆರಂಭಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕಿ ಹರ್ಮನ್ಪ್ರೀತ್ ಕೌರ್ ಚೇಸಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಂಗ್ ನಡೆಸಿದ ಬೆತ್ ಮೂನಿ ಪಡೆ, ಮುಂಬೈ ಬೌಲರ್ಗಳ ಎದುರು ತತ್ತರಿಸಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಬೆತ್ ಮೂನಿ 24 ರನ್ ಗಳಿಸಿದರೆ, ವೇದಾ ಕೃಷ್ಣಮೂರ್ತಿ ಡಕೌಟ್ಗೆ ಬಲಿಯಾದರು.
ಇನ್ನು ಹರ್ಲೀನ್ ಡಿಯೋಲ್ (8) ಸಹ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರಲಿಲ್ಲ. ಅಗ್ರ ಕ್ರಮಾಂಕದ ಮೂವರು ಆಟಗಾರರನ್ನು ಶಬ್ನಿಮ್ ಇಸ್ಮಾಯಿಲ್ ಅವರು ಔಟ್ ಮಾಡಿದರು. ಫೋಬೆ ಲಿಚ್ಫೀಲ್ಡ್ (7) ಮತ್ತು ದಯಾಳನ್ ಹೇಮಲತಾ (3) ಅವರು ನಟಾಲಿ ಸೀವ್ ಮತ್ತು ಹೀಲಿ ಮ್ಯಾಥ್ಯೂಸ್ ಬೌಲಿಂಗ್ನಲ್ಲಿ ಹೊರ ನಡೆದರು. ಗುಜರಾತ್ ನೀಡಿದ ಕಳಪೆ ಪ್ರದರ್ಶನದಿಂದ ರನ್ ವೇಗ ಕುಸಿಯಿತು. ಈ ಹಂತದಲ್ಲಿ ದಾಳಿ ನಡೆಸಿದ ಅಮೆಲಿಯಾ ಕೇರ್ ನಾಲ್ಕು ವಿಕೆಟ್ ಉರುಳಿಸಿದರು.
ಅಮೆಲಿಯಾ ಕೇರ್ ದಾಳಿಗೆ ಗುಜರಾತ್ ಕುಸಿತ
ಕ್ಯಾಥರಿನ್ ಬ್ರೈಸ್ ಅಜೇಯ 28 ರನ್ ಸಿಡಿಸಿ ನೆರವಾದರು. ಡೇಂಜರಸ್ ಬ್ಯಾಟರ್ ಆ್ಯಶ್ಲೆ ಗಾರ್ಡ್ನರ್ ಕೇವಲ 15 ರನ್ಗಳಿಗೆ ಆಲೌಟ್ ಆದರು. ಕೇರ್ ಬೌಲಿಂಗ್ನಲ್ಲಿ ಹೊರ ನಡೆದರು. ಸ್ನೆಹ್ ರಾಣಾ, ತಂಡಕ್ಕೆ ಚೇತರಿಕೆ ನೀಡಿದ ತನುಜಾ ಕನ್ವರ್, ಲೀ ತಹುಹು ಸಹ ಅಮೆಲಿಯಾ ಬೌಲಿಂಗ್ನಲ್ಲಿ ನಿರ್ಗಮಿಸಿದರು. 4 ಓವರ್ಗಳಲ್ಲಿ 17 ರನ್ ಕಲೆ ಹಾಕಿ 4 ವಿಕೆಟ್ ಉರುಳಿಸಿದರು. ಇದರೊಂದಿಗೆ ಗುಜರಾತ್ ಜೈಂಟ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಕಲೆ ಹಾಕಿತು. ಶಬ್ನಿಮ್ ಇಸ್ಮಾಯಿಲ್ 3 ವಿಕೆಟ್ ಪಡೆದರು.
ಮುಂಬೈಗೆ ಸುಲಭ ಗೆಲುವು
ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಸಹ ಉತ್ತಮ ಆರಂಭ ಪಡೆಯಲಿಲ್ಲ. ಯಾಸ್ತಿಕಾ ಭಾಟಿಯಾ (7) ಮತ್ತು ಹೇಲಿ ಮ್ಯಾಥ್ಯೂಸ್ (7) ಬೇಗನೇ ಔಟಾಗಿ ತಂಡಕ್ಕೆ ಆಘಾತ ನೀಡಿದರು. ನಟಾಲಿ ಸೀವರ್ ಸಹ 22 ರನ್ಗಳಿಗೆ ಆಟ ಮುಗಿಸಿದರು. ಆದರೆ ಹರ್ಮನ್ಪ್ರೀತ್ ಮತ್ತೊಮ್ಮೆ ನಾಯಕಿಯ ಇನ್ನಿಂಗ್ಸ್ ಕಟ್ಟಿದರು. ಕಳೆದ ಪಂದ್ಯದಲ್ಲಿ ಅದ್ಭುತ ಅರ್ಧಶತಕ ಸಿಡಿಸಿದ ಹರ್ಮನ್, ಅಜೇಯ 46 ರನ್ ಸಿಡಿಸಿದರು.
ಇನ್ನು ಬೌಲಿಂಗ್ನಲ್ಲಿ 4 ವಿಕೆಟ್ ಉರುಳಿಸಿ ಗುಜರಾತ್ ಕುಸಿತಕ್ಕೆ ಕಾರಣವಾಗಿದ್ದ ಅಮೆಲಿಯಾ ಕೇರ್ ಬ್ಯಾಟಿಂಗ್ನಲ್ಲೂ ಉತ್ತಮ ಪ್ರದರ್ಶನ ತೋರಿದರು. 25 ಎಸೆತಗಳಲ್ಲಿ 31 ರನ್ ಕಲೆ ಹಾಕಿದರು. ಆರಂಭದಲ್ಲಿ ವಿಕೆಟ್ ಪಡೆದು ಜೋಶ್ ತೋರಿದ ಗುಜರಾತ್ ಬೌಲರ್ಸ್ಗೆ ಬೆಂಡೆತ್ತಿದ ಹರ್ಮನ್, ತನ್ನ ತಂಡಕ್ಕೆ 18.1ನೇ ಓವರ್ನಲ್ಲಿ ಸಿಕ್ಸರ್ ಸಿಡಿಸಿ ಗೆಲುವು ತಂದುಕೊಟ್ಟರು. ಇದರೊಂದಿಗೆ ಟೂರ್ನಿಯಲ್ಲಿ ಸತತ 2ನೇ ಗೆಲುವು ತಂದುಕೊಟ್ಟರು.