ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಅಗ್ರಸ್ಥಾನ ವಶಪಡಿಸಿಕೊಂಡ ಗುಜರಾತ್ ಟೈಟನ್ಸ್; 3 ರನ್‌ಗಳಿಂದ ಶತಕ ವಂಚಿತರಾದ ಜೋಸ್ ಬಟ್ಲರ್
ಗುಜರಾತ್ ಟೈಟನ್ಸ್ ಪರ ಜೋಸ್ ಬಟ್ಲರ್ ಹಾಗೂ ರುದರ್‌ಫೋರ್ಡ್ ನಡುವಿನ ಶತಕದ ಜೊತೆಯಾಟ ಗಮನಸೆಳೆಯಿತು. ಇವರಿಬ್ಬರು 119 ರನ್‌ಗಳ ಅಮೋಘ ಜೊತೆಯಾಟವಾಡಿದರು. ಅಜೇಯ 97 ರನ್ ಗಳಿಸಿದ ಬಟ್ಲರ್ ಶತಕವಂಚಿತರಾದರು.

ಗುಜರಾತ್ ಟೈಟನ್ಸ್ ತಂಡ ಗೆಲುವಿನ ಹಳಿಗೆ ಮರಳುವ ಜೊತೆಗೆ ಐಪಿಎಲ್ 18ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತವರು ಮೈದಾನದಲ್ಲಿ ಅಬ್ಬರಿಸಿದ ಶುಭ್ಮನ್ ಗಿಲ್ ಬಳಗವು, ಟೂರ್ನಿಯಲ್ಲಿ ಐದನೇ ಗೆಲುವು ಸಾಧಿಸುವ ಮೂಲಕ ತಮ್ಮ ಫಾರ್ಮ್ ಮುಂದುವರೆಸಿದೆ. ಜಾಸ್ ಬಟ್ಲರ್ ಅಜೇಯ 97 ರನ್ ಸಿಡಿಸುವ ಮೂಲಕ ತಂಡದ ಗೆಲುವನ್ನು ಸುಲಭಗೊಳಿಸಿದ್ದಾರೆ. ಕೊನೆಯ ಎರಡು ಎಸೆತಗಳಲ್ಲಿ ರಾಹುಲ್ ತೆವಾಟಿಯಾ ಒಂದು ಸಿಕ್ಸರ್ ಹಾಗೂ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್, 203 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಯಶಸ್ವಿ ಚೇಸಿಂಗ್ ನಡೆಸಿದ ಟೈಟನ್ಸ್, 19.2 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಮಾತ್ರ ಕಳೆದುಕೊಂಡು 204 ರನ್ ಗಳಿಸಿ ಗೆದ್ದು ಬೀಗಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಯಾರೊಬ್ಬರೂ ಅರ್ಧಶತಕ ಗಳಿಸಿಲ್ಲ. ಆದರೂ ತಂಡದ ಸಾಂಘಿಕ ಹೋರಾಟದ ನೆರವಿಂದ 200ರನ್ ಗಡಿ ದಾಟಿತು. ಅಭಿಷೇಕ್ ಪೊರೆಲ್ 18 ರನ್ ಗಳಿಸಿದರೆ, ಕನ್ನಡಿಗ ಕೆಎಲ್ ರಾಹುಲ್ ವೇಗವಾಗಿ 28 ರನ್ ಬಾರಿಸಿದರು. ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಕರುಣ್ ನಾಯರ್ 31 ರನ್ ಗಳಿಸಿದರು. ನಾಯಕ ಅಕ್ಷರ್ ಪಟೇಲ್ ನಿಧಾನವಾಗಿ ಬ್ಯಾಟ್ ಬೀಸಿ 39 ರನ್ ಬಾರಿಸಿದರೆ, ಸ್ಟಬ್ಸ್ 31 ಹಾಗೂ ಅಶುತೋಷ್ 37 ರನ್ ಬಾರಿಸಿದರು. ಅಗ್ರ ಕ್ರಮಾಂಕದ ಎಲ್ಲಾ 6 ಬ್ಯಾಟರ್‌ಗಳು ಎರಡಂಕಿ ಮೊತ್ತ ಗಳಿಸುವಲ್ಲಿ ಯಶಸ್ವಿಯಾದರು.
ಚೇಸಿಂಗ್ ನಡೆಸಿದ ಗುಜರಾತ್ ಟೈಟನ್ಸ್ ಪರ ಜಾಸ್ ಬಟ್ಲರ್ ಅಬ್ಬರದಾಟವಾಡಿದರು. ಆರಂಭಿಕರಾಗಿ ಬಂದ ಶುಭ್ಮನ್ ಗಿಲ್ ಅಪರೂಪವೆಂಬಂತೆ ರನೌಟ್ ಆಗಿ ವಿಕೆಟ್ ಕಳೆದುಕೊಂಡರು. ಇವರ ಗಳಿಕೆ 7 ರನ್. ಅಮೋಘ ಫಾರ್ಮ್‌ನಲ್ಲಿರುವ ಸಾಯಿ ಸುದರ್ಶನ್ 21 ಎಸೆತಗಳಲ್ಲಿ 36 ರನ್ ಬಾರಿಸಿದರು. ಪಂದ್ಯದ ಆಕರ್ಷಣೆಯಾಗಿದ್ದು ಬಟ್ಲರ್ ಹಾಗೂ ರುದರ್‌ಫೋರ್ಡ್ ನಡುವಿನ ಶತಕದ ಜೊತೆಯಾಟ. ಇಬ್ಬರು 119 ರನ್‌ಗಳ ಅಮೋಘ ಜೊತೆಯಾಟವಾಡಿದ್ದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಕೊನೆಯಲ್ಲಿ ರಾಹುಲ್ ತೆವಾಟಿಯಾ ವಿನ್ನಿಂಗ್ ರನ್ ಬಾರಿಸಿದರು. ಅತ್ತ ನಾನ್ ಸ್ಟ್ರೈಕ್‌ನಲ್ಲಿದ್ದ ಜಾಸ್ ಬಟ್ಲರ್ ಅಜೇಯ 97 ರನ್ ಗಳಿಸಿ ಶತಕವಂಚಿತರಾದರು.
(ಸುದ್ದಿ ಅಪ್ಡೇಟ್ ಆಗಲಿದೆ)