‘ಸನ್’ ಆಗದ ರೈಸ್, ಎಸ್ಆರ್ಹೆಚ್ ಪ್ಲೇಆಫ್ ಹಾದಿ ಬಹುತೇಕ ಅಂತ್ಯ; 38 ರನ್ನಿಂದ ಗೆದ್ದ ಗುಜರಾತ್ 2ನೇ ಸ್ಥಾನಕ್ಕೆ ಲಗ್ಗೆ
ಇಂಡಿಯನ್ ಪ್ರೀಮಿಯರ್ ಲೀಗ್ 51ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 38 ರನ್ಗಳಿಂದ ಗೆದ್ದು ಬೀಗಿದ ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಶುಭ್ಮನ್ ಗಿಲ್ ಮತ್ತು ಜೋಸ್ ಬಟ್ಲರ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಅದ್ಭುತ ಬೌಲಿಂಗ್ ಬಲದಿಂದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ 38 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಜಿಟಿ ಪ್ಲೇಆಫ್ ಸನಿಹಕ್ಕೆ ಬಂದಿದ್ದು, 10 ಪಂದ್ಯಗಳಲ್ಲಿ 7 ಗೆಲುವು, 3 ಸೋಲಿನೊಂದಿಗೆ 14 ಅಂಕ ಪಡೆದು ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಎಸ್ಆರ್ಹೆಚ್ ಕೂಡ ಅಷ್ಟೇ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 7 ಸೋಲು, 3 ಗೆಲುವಿನೊಂದಿಗೆ 6 ಅಂಕ ಪಡೆದಿದೆ. ಸದ್ಯ ಪ್ಲೇಆಫ್ ಪ್ರವೇಶಿಸಲು ಸಾಸಿವೆ ಕಾಳಿನಷ್ಟು ಅವಕಾಶ ಇದ್ದರೂ ತಂಡದ ಕನಸು ಬಹುತೇಕ ಅಂತ್ಯಗೊಂಡಿದೆ ಎಂದರೂ ತಪ್ಪಾಗಲ್ಲ. ಕಳೆದ ವರ್ಷದ ರನ್ನರ್ಅಪ್ ತಂಡ ಇಷ್ಟು ಹೀನಾಯ ಪ್ರದರ್ಶನ ನೀಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು ಅತ್ಯುತ್ತಮ ಪ್ರದರ್ಶನ ನೀಡಿತು. ಮೊದಲ ವಿಕೆಟ್ಗೆ 41 ಎಸೆತಗಳಲ್ಲಿ 87 ರನ್ ಹರಿದು ಬಂತು. ಶುಭ್ಮನ್ ಗಿಲ್ (76) ಮತ್ತು ಜೋಸ್ ಬಟ್ಲರ್ (64) ಆಕ್ರಮಣಕಾರಿ ಅರ್ಧಶತಕಗಳು ಸಿಡಿಸಿದ ಪರಿಣಾಮ ತಂಡದ ಮೊತ್ತವು 200ರ ಗಡಿ ದಾಟಲು ಸಾಧ್ಯವಾಯಿತು. ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 224 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಎಸ್ಆರ್ಹೆಚ್ ಆರಂಭದಲ್ಲಿ ಗೆಲ್ಲುವ ಭರವಸೆ ಮೂಡಿಸಿತ್ತು. ಆದರೆ ಜಿಟಿ ಬೌಲರ್ಗಳ ಮಾರಕ ದಾಳಿಯನ್ನು ಎದುರಿಸುವಲ್ಲಿ ವಿಫಲವಾಯಿತು. ಪರಿಣಾಮ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಅಭಿಷೇಕ್ ಶರ್ಮಾ (74) ಏಕಾಂಗಿ ಹೋರಾಟ ನಡೆಸಿದರಾದರೂ ಗೆಲುವು ದಕ್ಕಲಿಲ್ಲ.
ಜಿಟಿ, ಎಸ್ಆರ್ಹೆಚ್ ಪ್ಲೇಆಫ್ ಲೆಕ್ಕಾಚಾರ ಹೇಗಿದೆ?
18ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇಆಫ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಆದರೆ ಈ ಸರದಿಗೆ ಸನ್ರೈಸರ್ಸ್ ಹೈದರಾಬಾದ್ ಕೂಡ ಸೇರಿದೆ. ಆದರೆ ಅಧಿಕೃತವಾಗಿ ಇನ್ನೂ ಹೊರಬಿದ್ದಿಲ್ಲ. ಏಕೆಂದರೆ ಪ್ರಸ್ತುತ 6 ಅಂಕ ಪಡೆದಿದ್ದು, ಉಳಿದ 4 ಪಂದ್ಯಗಳನ್ನೂ ಗೆದ್ದರೆ 14 ಅಂಕಗಳೊಂದಿಗೆ ಅಗ್ರ-4ರೊಳಗೆ ಪ್ರವೇಶಿಸುವ ಸಾಧ್ಯತೆ ಇದೆ. ಇದು ಅಸಾಧ್ಯವಾದರೂ ಗಣಿತ-ಅಂಶಗಳ ಪ್ರಕಾರ ಸಾಧ್ಯ. ಏಕೆಂದರೆ ಪ್ಲೇಆಫ್ಗೆ ಇನ್ನು ಯಾವ ತಂಡವೂ ಅಧಿಕೃತವಾಗಿ ಪ್ರವೇಶಿಸದ ಹಿನ್ನೆಲೆ ಎಸ್ಆರ್ಹೆಚ್ಗೆ ಅದೃಷ್ಟ ಒಲಿಯುತ್ತದೆಯೇ ಎನ್ನುವ ಕಾತರತೆ ಇನ್ನೂ ಹಾಗೆಯೇ ಉಳಿದಿದೆ. ಮತ್ತೊಂದೆಡೆ 14 ಅಂಕ ಸಂಪಾದಿಸಿರುವ ಗಿಲ್ ಪಡೆ, ಇನ್ನೊಂದು ಪಂದ್ಯ ಗೆದ್ದರೂ ಅಧಿಕೃತವಾಗಿ ಪ್ಲೇಆಫ್ಗೆ ಲಗ್ಗೆ ಹಾಕಲಿದೆ. ಜೊತೆಗೆ ಆರ್ಸಿಬಿ, ಮುಂಬೈ ಸಹ ಇಷ್ಟೇ ಅಂಕ ಪಡೆದಿದ್ದು, ಅವುಗಳಿಗೂ ಒಂದು ಗೆಲುವು ಸಾಕಿದೆ.
ಎಸ್ಆರ್ಹೆಚ್ ವಿರುದ್ಧ ಜಿಟಿ ಸತತ 5ನೇ ಗೆಲುವು
ಈ ಗೆಲುವಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಿಟಿ ಸವಾರಿ ಮಾಡಿದೆ. ಉಭಯ ತಂಡಗಳು ಒಟ್ಟು 6 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಸತತ ಐದು ಪಂದ್ಯಗಳಲ್ಲಿ ಜಿಟಿ ತಂಡವೇ ಗೆಲ್ಲುತ್ತಾ ಬಂದಿದೆ. ಇನ್ನು ಈ ಪಂದ್ಯದಲ್ಲಿ ಎರಡು ವಿಕೆಟ್ ಉರುಳಿಸಿದ ಪ್ರಸಿದ್ಧ್ ಕೃಷ್ಣ ಮತ್ತೆ ಪರ್ಪಲ್ ಕ್ಯಾಪ್ ಗೆದ್ದುಕೊಂಡರು. ಈಗವರ ಖಾತೆಯಲ್ಲಿ 19 ವಿಕೆಟ್ಗಳಿವೆ. ಅದರಂತೆ ಸಾಯಿ ಸುದರ್ಶನ್ 504 ರನ್ಗಳೊಂದಿಗೆ ಮತ್ತೆ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಈ ಪಂದ್ಯಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ಅವರ ಬಳಿ ಇತ್ತು. ಅಲ್ಲದೆ, ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಮೂರು ಸ್ಥಾನಗಳಲ್ಲಿ ಗುಜರಾತ್ ತಂಡದ ಆಟಗಾರರೇ ಇರುವುದು ವಿಶೇಷ.