ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಪ್ಲೇಆಫ್ ರೇಸ್‌ನಿಂದ ಗುಜರಾತ್ ಔಟ್; ಸಿಎಸ್‌ಕೆ ಅಥವಾ ಆರ್‌ಸಿಬಿ, ಮಳೆಯಿಂದ ಲಾಭ ಯಾರಿಗೆ?

ಐಪಿಎಲ್ ಪ್ಲೇಆಫ್ ರೇಸ್‌ನಿಂದ ಗುಜರಾತ್ ಔಟ್; ಸಿಎಸ್‌ಕೆ ಅಥವಾ ಆರ್‌ಸಿಬಿ, ಮಳೆಯಿಂದ ಲಾಭ ಯಾರಿಗೆ?

ಶುಭ್ಮನ್‌ ಗಿಲ್‌ ನೇತೃತ್ವದ ಗುಜರಾತ್‌ ಟೈಟಾನ್ಸ್‌ ತಂಡವು ಐಪಿಎಲ್‌ 2024ರ ಪ್ಲೇಆಫ್ ರೇಸ್‌ನಿಂದ ನಿರ್ಗಮಿಸಿತು. ಇದರೊಂದಿಗೆ ಟೂರ್ನಿಯಿಂದ 3 ತಂಡಗಳು ಅಧಿಕೃತವಾಗಿ ಹೊರಬಿದ್ದಿವೆ. ಅಲ್ಲದೆ ಪ್ಲೇಆಫ್‌ ಸ್ಪರ್ಧಿಗಳ ಸಂಖ್ಯೆ ಇದೀಗ ಕಡಿಮೆಯಾಗಿದ್ದು, ಕೆಲವು ತಂಡಗಳಿಗೆ ಲಾಭವಾಗಿದೆ.

ಐಪಿಎಲ್ ಪ್ಲೇಆಫ್ ರೇಸ್‌ನಿಂದ ಗುಜರಾತ್ ಔಟ್; ಮಳೆಯಿಂದ ಲಾಭ ಯಾರಿಗೆ?
ಐಪಿಎಲ್ ಪ್ಲೇಆಫ್ ರೇಸ್‌ನಿಂದ ಗುಜರಾತ್ ಔಟ್; ಮಳೆಯಿಂದ ಲಾಭ ಯಾರಿಗೆ? (AFP-ANI-PTI)

ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್‌ 2024ರ ಆವೃತ್ತಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಶುಭ್ಮನ್ ಗಿಲ್ ನೇತೃತ್ವದ ತಂಡವು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗೆಲ್ಲಲೇ ಬೇಕಿತ್ತು. ಆದರೆ, ಭಾರಿ ಮಳೆಯಿಂದಾಗಿ ಪಂದ್ಯವು ರದ್ದಾದ ಕಾರಣದಿಂದಾಗಿ ಉಭಯ ತಂಡಗಳು ತಲಾ ಒಂದು ಅಂಕ ಮಾತ್ರ ಪಡೆದವು. ಇದರೊಂದಿಗೆ ದುರಾದೃಷ್ಟವಶಾತ್ ಗುಜರಾತ್‌ ತಂಡ ಪ್ಲೇಆಫ್‌ ರೇಸ್‌ನಿಂದ ಹೊರಬಿತ್ತು. ಅತ್ತ ಕೆಕೆಆರ್ ತಂಡವು ಅಗ್ರ 2 ಸ್ಥಾನಗಳಲ್ಲಿ ಒಂದು ಸ್ಥಾನ ಪಡೆಯುವುದು ಖಚಿತವಾಗಿದೆ. ಇದರೊಂದಿಗೆ ತಂಡವು ನೇರವಾಗಿ ಕ್ವಾಲಿಫೈಯರ್‌ ಒಂದಕ್ಕೆ ಎಂಟ್ರಿ ಕೊಟ್ಟಿದೆ.

ಟ್ರೆಂಡಿಂಗ್​ ಸುದ್ದಿ

ಜಿಟಿ ತಂಡದ ಖಾತೆಯಲ್ಲಿ 11 ಅಂಕಗಳು ಮಾತ್ರವೇ ಇದ್ದು, ರನ್ ರೇಟ್ ಕೇವಲ -1.063 ಆಗಿದೆ. ಕೆಕೆಆರ್ ವಿರುದ್ಧದ ಪಂದ್ಯವು ಕನಿಷ್ಠ ಟಾಸ್‌ ಕೂಡಾ ನಡೆಯದೆ ರದ್ದಾಯ್ತು. ಆ ಮೂಲಕ ಮುಂಬೈ ಹಾಗೂ ಪಂಜಾಬ್‌ ಬಳಿಕ ಐಪಿಎಲ್ 2024ರ ಪ್ಲೇಆಫ್ ರೇಸ್‌ನಿಂದ ಹೊರಗುಳಿದ ಮೂರನೇ ತಂಡವಾಗಿ ಗುಜರಾತ್‌ ಕಳಪೆ ದಾಖಲೆ ಬರೆಯಿತು.

ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು ಈಗಾಗಲೇ ಈ ಋತುವಿನಲ್ಲಿ ಪ್ಲೇಆಫ್ ಹಂತಕ್ಕೆ ಟಿಕೆಟ್ ಕಾಯ್ದಿರಿಸಿದೆ. ಎರಡು ಬಾರಿ ಚಾಂಪಿಯನ್ ಕೋಲ್ಕತ್ತಾ ಖಾತೆಯಲ್ಲಿ ಕೆಕೆಆರ್ 19 ಅಂಕಗಳಿವೆ. ತಂಡದ ಮುಂದೆ ಇನ್ನೂ ಒಂದು ಪಂದ್ಯ ಉಳಿದಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್‌ ವಿರುದ್ಧದ ಮುಂದಿನ ಪಂದ್ಯದಲ್ಲಿ ತಂಡ ಸೋತರೂ ಅಗ್ರ ಎರಡರ ಒಳಗೆ ಸ್ಥಾನ ಉಳಿಸಿಕೊಳ್ಳಲಿದೆ. ಅತ್ತ ರಾಜಸ್ಥಾನ ತಂಡವು ಮುಂದಿನ ಎರಡೂ ಪಂದ್ಯಗಳಲ್ಲಿ ಗೆದ್ದರೆ ಅಗ್ರಸ್ಥಾನಕ್ಕೆ ಮರಳಲಿದೆ. ಬಹುತೇಕ ಈ ಎರಡು ತಂಡಗಳೇ ಮೊದಲೆರಡು ಸ್ಥಾನಗಳನ್ನು ಆಕ್ರಮಿಸುವುದು ಖಚಿತವಾಗಿದೆ.

ಇದನ್ನೂ ಓದಿ | ಮಳೆಯಿಂದಾಗಿ ಕೆಕೆಆರ್‌ vs ಗುಜರಾತ್ ಪಂದ್ಯ ರದ್ದು; ಜಿಟಿ ಟೂರ್ನಿಯಿಂದ ಔಟ್‌, ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟ ಕೋಲ್ಕತ್ತಾ

ಸದ್ಯ ಹಾಲಿ ಚಾಂಪಿಯನ್ ಸಿಎಸ್‌ಕೆ 14 ಪಂದ್ಯಗಳಿಂದ 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ತಂಡವು ಮುಂದೆ ಆರ್‌ಸಿಬಿಯನ್ನು ಎದುರಿಸಲಿದ್ದು, ಅದರ ವಿರುದ್ಧ ಬೃಹತ್‌ ಅಂತರದಿಂದ ಸೋತರೆ ಈ ಸ್ಥಾನದಿಂದ ಜಾರಲಿದೆ. ಇದೇ ವೇಳೆ ನಾಲ್ಕನೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಮುಂದೆ ಎರಡು ಪಂದ್ಯಗಳನ್ನು ಆಡಲಿದ್ದು, ಈ ಎರಡೂ ಪಂದ್ಯಗಳಲ್ಲಿ ಗೆದ್ದರೆ ಖಚಿತವಾಗಿ ಪ್ಲೇಆಫ್‌ ಪ್ರವೇಶಿಸಲಿದೆ. ಒಂದು ಪಂದ್ಯದಲ್ಲಿ ಮಾತ್ರ ಗೆದ್ದರೂ ಅವಕಾಶವಿದೆ. ಆದರೆ, ಇತರ ತಂಡಗಳ ಫಲಿತಾಂಶ ಹಾಗೂ ನೆಟ್‌ ರನ್‌ ರೇಟ್‌ ಲೆಕ್ಕಕ್ಕೆ ಬರಲಿದೆ.

ಜಿಟಿ ಮತ್ತು ಕೆಕೆಆರ್‌ ಪಂದ್ಯ ಮಳೆಯಿಂದ ರದ್ದಾಗಿದ್ದು ಯಾರಿಗೆ ಲಾಭ?

ಒಂದು ಬಾರಿಯ ಚಾಂಪಿಯನ್‌ ಸನ್‌ರೈಸರ್ಸ್ ಹೈದರಾಬಾದ್ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಆರ್‌ಸಿಬಿಯಷ್ಟೇ ಅಂಕಗಳೊಂದಿಗೆ ಸಮಬಲ ಸಾಧಿಸಿವೆ. ಆದರೆ, ಕೆಎಲ್ ರಾಹುಲ್ ಪಡೆಗೆ ಇನ್ನೆರಡು ಪಂದ್ಯಗಳಲ್ಲಿ ಅವಕಾಶವಿದೆ. ಇದೀಗ ಜಿಟಿಯ ಅವಕಾಶಗಳು ಕಮರಿದ್ದು; ಸಿಎಸ್‌ಕೆ, ಆರ್‌ಸಿಬಿ, ಎಲ್ಎಸ್‌ಜಿ ಮತ್ತು ಡಿಸಿಯ ಅವಕಾಶಗಳು ಹೆಚ್ಚಿವೆ. ರಾಜಸ್ಥಾನ ಹೊರತುಪಡಿಸಿದರೆ, ಪ್ಲೇಆಫ್‌ಗೆ ಲಗ್ಗೆ ಹಾಕುವ ಮೂರು ಹಾಗೂ ನಾಲ್ಕನೇ ಸ್ಥಾನಿಗಳಿಗಾಗಿ ಐದು ತಂಡಗಳ ನಡುವೆ ಪೈಪೋಟಿ ಮುಂದುವರೆದಿದೆ.

IPL_Entry_Point