ಕನ್ನಡ ಸುದ್ದಿ  /  Cricket  /  Gujarat Titans Explain Why Hardik Pandya Moves To Mumbai Indians For Ipl 2024 Vikram Solanki Indian Premier League Jra

ಅವರ ನಿರ್ಧಾರಕ್ಕೆ ಗೌರವವಿದೆ; ಹಾರ್ದಿಕ್ ಪಾಂಡ್ಯ ಮುಂಬೈ ಮರಳಲು ಕಾರಣ ವಿವರಿಸಿದ ಗುಜರಾತ್ ಟೈಟಾನ್ಸ್

Hardik Pandya: ಗುಜರಾತ್‌ ಟೈಟಾನ್ಸ್ ತಂಡದ ನಿರ್ದೇಶಕ ವಿಕ್ರಮ್ ಸೋಲಂಕಿ, ಹಾರ್ದಿಕ್ ಪಾಂಡ್ಯ ತಂಡದ ತೊರೆಯಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಹಾರ್ದಿಕ್‌ ಪಾಂಡ್ಯ
ಹಾರ್ದಿಕ್‌ ಪಾಂಡ್ಯ (PTI)

ಐಪಿಎಲ್‌ ಮಿನಿ ಹರಾಜಿಗೂ ಮುನ್ನ, ಫ್ರಾಂಚೈಸಿಗಳ ನಡುವೆ ಟ್ರೇಡಿಂಗ್‌ ವ್ಯವಹಾರ ಜೋರಾಗಿ ಸಾಗುತ್ತಿದೆ. ಆಟಗಾರರ ರಿಟೆನ್ಷನ್‌ ಮತ್ತು ಬಿಡುಗಡೆಯ ಪಟ್ಟಿ ಸಲ್ಲಿಕೆ ಬಳಿಕ ನಡೆದ ಕೆಲವೊಂದು ಬೆಳವಣಿಗಳು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ ತಂಡವು ಮತ್ತೆ ತನ್ನ ತೆಕ್ಕೆ ಸೇರಿಸಿಕೊಂಡಿರುವುದು, ಐಪಿಎಲ್‌ 2024ರ ಪ್ರಮುಖ ಬೆಳವಣಿಗೆಯಾಗಿದೆ.

ಗುಜರಾತ್ ಟೈಟಾನ್ಸ್ ತಂಡವು ಹಾರ್ದಿಕ್‌ ಪಾಂಡ್ಯರನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ನಗದು ವ್ಯಾಪಾರ ವ್ಯವಹಾರದ ಭಾಗವಾಗಿ ಮುಂಬೈ ತಂಡದಿಂದ ಬರೋಬ್ಬರಿ 15 ಕೋಟಿ ರೂಪಾಯಿಗಳನ್ನು ಪಡೆಯಲಿದೆ. ಇದೇ ವೇಳೆ ಮುಂಬೈ ತಂಡವು ಕ್ಯಾಮರೂನ್ ಗ್ರೀನ್‌ ಅವರನ್ನು ಆರ್‌ಸಿಬಿಗೆ ಕಳುಹಿಸಿದೆ.‌

ಇದನ್ನೂ ಓದಿ | ಮರಳಿ ಮುಂಬೈ ಸೇರಿದ ಬಳಿಕ ಪಾಂಡ್ಯ ಮೊದಲ ಪ್ರತಿಕ್ರಿಯೆ; ಹಿತವೆನಿಸುತ್ತಿದೆ ಎಂದ ಹಾರ್ದಿಕ್

ತಮ್ಮ ಹಳೆಯ ಐಪಿಎಲ್‌ ತಂಡವಾದ ಮುಂಬೈ ಇಂಡಿಯನ್ಸ್‌ ಸೇರಿಕೊಂಡ ಕುರಿತು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿರುವ ಪಾಂಡ್ಯ, ಹೊಸ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. “ಇದು ಅನೇಕ ಅದ್ಭುತ ನೆನಪುಗಳನ್ನು ಮೆಲುಕು ಹಾಕಿಸಿದೆ. ಮುಂಬೈ, ವಾಂಖೆಡೆ, ಪಲ್ಟನ್. ಮುಂಬೈಗೆ ಮರಳಿರುವುದು ಹಿತವೆನಿಸುತ್ತಿದೆ,” ಎಂದು ಪಾಂಡ್ಯ ಹೇಳಿದ್ದಾರೆ. ಮಾಜಿ‌ ಚಾಂಪಿಯನ್‌ ಮುಂಬೈ, 2015ರ ಐಪಿಎಲ್ ಹರಾಜಿನಲ್ಲಿ ಪಾಂಡ್ಯ ಅವರನ್ನು ಕೇವಲ 10 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು.

ಪಾಂಡ್ಯ ಬಿಟ್ಟುಕೊಡಲು ಕಾರಣ ಬಹಿರಂಗಪಡಿಸಿದ ಗುಜರಾತ್

ಪಾಂಡ್ಯರನ್ನು ತಂಡದಿಂದ ಬಿಟ್ಟುಕೊಟ್ಟಿರುವ ಕುರಿತಾಗಿ ಗುಜರಾತ್‌ ಟೈಟಾನ್ಸ್‌ ತಂಡದ ನಿರ್ದೇಶಕ ವಿಕ್ರಮ್ ಸೋಲಂಕಿ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ತಂಡದ ಯಶಸ್ಸಿನಲ್ಲಿ ಪಾಂಡ್ಯ ಅವರ ಕೊಡುಗೆಯನ್ನು ಅವರು ಶ್ಲಾಘಿಸಿದ್ದಾರೆ.

“ಗುಜರಾತ್ ಟೈಟಾನ್ಸ್‌ ತಂಡದ ಚೊಚ್ಚಲ ನಾಯಕನಾಗಿ ಹಾರ್ದಿಕ್ ಪಾಂಡ್ಯ ಫ್ರಾಂಚೈಸಿಗೆ ಎರಡು ಅದ್ಭುತ ಆವೃತ್ತಿಗಳನ್ನು ಕೊಡುವಲ್ಲಿ ನೆರವಾಗಿದ್ದಾರೆ. ಇದರ ಪರಿಣಾಮವಾಗಿ ಒಂದು ಬಾರಿ ತಂಡವು ಚಾಂಪಿಯನ್ ಆಗಿದ್ದು, ಮತ್ತೊಂದು ಬಾರಿ ಫೈನಲ್ ತಲುಪಲು ಸಾಧ್ಯವಾಯಿತು” ಎಂದು ಸೋಲಂಕಿ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಪಾಂಡ್ಯ ನಿರ್ಧಾರಕ್ಕೆ ಗೌರವ

“ಈಗ ಪಾಂಡ್ಯ ಅವರು ತಮ್ಮ ಮೂಲ ತಂಡವಾದ ಮುಂಬೈ ಇಂಡಿಯನ್ಸ್‌ಗೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ. ಅದರಂತೆಯೇ ಅವರ ಮುಂದಿನ ಪಯಣಕ್ಕೆ ಶುಭ ಹಾರೈಸುತ್ತೇವೆ” ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

ಮುಂಬೈ ಮಾಲಕಿ ಸಂತಸ

ಮತ್ತೊಂದೆಡೆ ಪಾಂಡ್ಯ ಮತ್ತೆ ಮುಂಬೈ ಸೇರಿಕೊಂಡ ಕುರಿತು ಮಾತನಾಡಿರುವ ಮಾಲಕಿ ನೀತಾ ಅಂಬಾನಿ ಮತ್ತು ಆಕಾಶ್ ಅಂಬಾನಿ ತುಂಬಾ ಖುಷಿಯಾಗಿದ್ದಾರೆ. “ಮತ್ತೆ ಮನೆಗೆ ಮರಳಿದ ಹಾರ್ದಿಕ್ ಅವರನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ. ಇದು ನಮ್ಮ ಮುಂಬೈ ಇಂಡಿಯನ್ಸ್ ಕುಟುಂಬದೊಂದಿಗೆ ಹೃದಯಸ್ಪರ್ಶಿ ಪುನರ್ಮಿಲನವಾಗಿದೆ” ಎಂದು ನೀತಾ ಅಂಬಾನಿ ಹೇಳಿದ್ದಾರೆ.