ಇದು ಟೆಸ್ಟ್ ಕ್ರಿಕೆಟ್‌ನಂತಲ್ಲ, ತ್ವರಿತ ನಿರ್ಧಾರ ತೆಗೆದುಕೊಳ್ಳಬೇಕು; ಶುಭ್ಮನ್ ಗಿಲ್ ನಾಯಕತ್ವಕ್ಕೆ ಗ್ಯಾರಿ ಕರ್ಸ್ಟನ್ ಹೇಳಿದ್ದಿಷ್ಟು
ಶುಭ್ಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಮೂರನೇ ಪಂದ್ಯಕ್ಕೆ ಸಜ್ಜಾಗಿದೆ. ಈವರೆಗೆ ಆಡಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದಿರುವ ತಂಡವು, ಐಪಿಎಲ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯಕ್ಕೂ ಮುನ್ನ ತಂಡದ ಕೋಚ್ ಗ್ಯಾರಿ ಕರ್ಸ್ಟನ್, ಗಿಲ್ ನಾಯಕತ್ವ ಕುರಿತು ಮಾತನಾಡಿದ್ದಾರೆ.
ನಾಯಕನಾಗಿ ತಮ್ಮ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಶುಭ್ಮನ್ ಗಿಲ್ (Shubman Gill) ಶುಭಾರಂಭ ಮಾಡಿದರು. ಪ್ರಸಕ್ತ ಆವೃತ್ತಿಯ ಐಪಿಎಲ್ ಪಂದ್ಯಾವಳಿಯಲ್ಲಿ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುತ್ತಿರುವ ಗಿಲ್, ಕಳೆದ ವಾರ ಮುಂಬೈ ಇಂಡಿಯನ್ಸ್ ವಿರುದ್ಧ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ತಂಡದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ವಿರುದ್ಧದ 6 ರನ್‌ಗಳ ಗೆಲುವು, ತಂಡ ಹಾಗೂ ನಾಯಕನ ವಿಶ್ವಾಸ ಹೆಚ್ಚಿಸಿತು. ಆದರೆ, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ತಂಡವು ಸೋಲನುಭವಿಸಿತು. ಇದೀಗ ಗಿಲ್ ನಾಯಕತ್ವಕ್ಕೆ ತಂಡದ ಕೋಚ್ ಅಂಕ ನೀಡಿದ್ದಾರೆ.
ಕಳೆದ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗೆದ್ದಿದ್ದ ಗಿಲ್, ಈ ಬಾರಿ ಒಬ್ಬ ಬ್ಯಾಟರ್ ಆಗಿ ಉತ್ತಮ ಆರಂಭ ಪಡೆದಿಲ್ಲ. ಮುಂಬೈ ಹಾಗೂ ಸಿಎಸ್‌ಕೆ ವಿರುದ್ಧ ಕ್ರಮವಾಗಿ 31 ಮತ್ತು 8 ರನ್ ಗಳಿಸಿರುವ ಅವರು, ಮುಂದಿನ ಪಂದ್ಯಗಳಲ್ಲಿ ಅಬ್ಬರಿಸಬೇಕಾಗಿದೆ.
ಟೂರ್ನಿಯಲ್ಲಿ ಈವರೆಗೆ ಆಡಿದ ಎರಡು ಪಂದ್ಯಗಳಲ್ಲಿ, ಗುಜರಾತ್ ತಂಡವು ಒಂದರಲ್ಲಿ ಮಾತ್ರ ಜಯ ಸಾಧಿಸಿದೆ. ಆ ಮೂಲಕ ಟೈಟಾನ್ಸ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಮುಂದೆ ಮಾರ್ಚ್ 31ರ ಭಾನುವಾರ ನಡೆಯುತ್ತಿರುವ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ. ತವರು ಮೈದಾನದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ತಂಡ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ.
ಇದು ಟೆಸ್ಟ್ ಕ್ರಿಕೆಟ್ ಅಲ್ಲ, ತ್ವರಿತ ನಿರ್ಧಾರ ಬೇಕು
ಮಹತ್ವದ ಪಂದ್ಯಕ್ಕೂ ಮುನ್ನ, ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್, ಫ್ರಾಂಚೈಸಿಯ ನೂತನ ನಾಯಕನ ನಾಯಕತ್ವದ ಕುರಿತು ಮೊದಲ ಹಂತದ ಮೌಲ್ಯಮಾಪನ ಮಾಡಿದ್ದಾರೆ. ಚುಟುಕು ಸ್ವರೂಪದಲ್ಲಿ ತ್ವರಿತವಾಗಿ ಕಾರ್ಯತಂತ್ರ ರೂಪಿಸಿದ ನಿರ್ಧಾರ ತೆಗೆದುಕೊಳ್ಳುವ ಅಗತ್ಯತೆಯ ಕುರಿತು ಗ್ಯಾರಿ ಮಾತನಾಡಿದ್ದಾರೆ. ಆ ಕಲೆಯನ್ನು ಗಿಲ್ ಕಲಿಯುತ್ತಿದ್ದಾರೆ ಎಂದು ಕರ್ಸ್ಟನ್ ಹೇಳಿದ್ದಾರೆ.
ಇದನ್ನೂ ಓದಿ | IPL 2024: ಗುಜರಾತ್ vs ಎಸ್ಆರ್‌ಎಚ್; ಸಂಭಾವ್ಯ ತಂಡ, ಅಹಮದಾಬಾದ್ ಪಿಚ್ ಹಾಗೂ ಹವಾಮಾನ ವರದಿ ಹೀಗಿದೆ
“ಇದು ವೇಗದ ಆಟ. ಆಗಾಗ ಕಾರ್ಯತಂತ್ರ ರೂಪಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದು ಟೆಸ್ಟ್ ಕ್ರಿಕೆಟ್‌ನಂತೆ ಅಲ್ಲ. ಅಲ್ಲಿ ದೀರ್ಘಕಾಲದವರೆಗೆ ಆಟ ಮುಂದುವರೆಯುತ್ತದೆ,” ಎಂದು ಕರ್ಸ್ಟನ್ ಶನಿವಾರ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ನಾಯಕನಾಗಿ ಗಿಲ್ ನಡೆದುಕೊಂಡ ರೀತಿಯಿಂದ ನಾನು ನಿಜಕ್ಕೂ ಪ್ರಭಾವಿತನಾಗಿದ್ದೇನೆ. ಆತ ಉತ್ತಮ ನಾಯಕತ್ವದ ಗುಣಗಳನ್ನು ತೋರಿಸಿದ್ದಾನೆ. ಅಲ್ಲದೆ ಆತ ಬುದ್ಧಿವಂತ ಆಟಗಾರ. ಯುವ ನಾಯಕ ಆಗಿರುವುದರಿಂದ ಕಲಿಯಲು ಇನ್ನೂ ಸಾಕಷ್ಟಿದೆ. ವಿಶೇಷವಾಗಿ ಟಿ20ಯಲ್ಲಿ ತನ್ನ ದಾರಿಯುದ್ದಕ್ಕೂ ಸಾಕಷ್ಟು ಕಲಿಯುತ್ತಾನೆ,” ಎಂದು ಅವರು ಹೇಳಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ
ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ವಿಜಯ್ ಶಂಕರ್, ಅಜ್ಮತುಲ್ಲಾ ಒಮರ್ಜಾಯ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್.