ಜಿಟಿಗೆ ಅಗ್ರ-2ರೊಳಗೆ ಮುಗಿಸುವ ತವಕ, ಸಿಎಸ್ಕೆಗೆ ಗೆದ್ದು ಲೀಗ್ ಮುಗಿಸುವ ಗುರಿ; ಚೆನ್ನೈ-ಗುಜರಾತ್ ಪಂದ್ಯದ ಪ್ರಮುಖ ಅಂಶಗಳು
18ನೇ ಆವೃತ್ತಿಯ ಐಪಿಎಲ್ನ 68ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಮ್ಮ ಕೊನೆಯ ಲೀಗ್ ಪಂದ್ಯಕ್ಕೆ ಭರ್ಜರಿ ಸಿದ್ಧತೆ ನಡೆಸಿವೆ. ಈ ಪಂದ್ಯಕ್ಕೆ ನರೇಂದ್ರ ಮೋದಿ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ.

ಪ್ಲೇಆಫ್ ಪ್ರವೇಶಿಸಿರುವ ಗುಜರಾತ್ ಟೈಟಾನ್ಸ್ ಮತ್ತು ಎಲಿಮಿನೇಟ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಮ್ಮ ಕೊನೆಯ ಲೀಗ್ ಪಂದ್ಯಕ್ಕೆ ಸಜ್ಜಾಗಿವೆ. ಟೇಬಲ್ ಟಾಪರ್ ಮತ್ತು ಟೇಬಲ್ ಕೊನೆಯ ಸ್ಥಾನ ಪಡೆದ ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಗುಜರಾತ್ ಈ ಪಂದ್ಯವನ್ನು ಗೆದ್ದು ಅಗ್ರ-2ರಲ್ಲಿ ಮುಗಿಸುವ ತವಕದಲ್ಲಿದ್ದರೆ, ಚೆನ್ನೈ ಗೆದ್ದು ಲೀಗ್ ಮುಗಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಈ ಪಂದ್ಯಕ್ಕೆ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ. ಪಂದ್ಯ ಮಧ್ಯಾಹ್ನ 3.30ಕ್ಕೆ ನಡೆಯಲಿದೆ.
ತಮ್ಮ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತಿರುವ ಜಿಟಿ ತಂಡವು ಇಂದು (ಭಾನುವಾರ 25) ಸೋಲಿನಿಂದ ಹೊರಬರುವುದರ ಜೊತೆಗೆ ಟಾಪ್-2ರಲ್ಲಿ ಮುಗಿಸುವ ಯೋಜನೆ ಹಾಕಿಕೊಂಡಿದೆ. ಆದರೆ ನಾಕೌಟ್ಗೂ ಮುನ್ನ ಪ್ರಮುಖ ವೇಗಿಗಳಿಗೆ ವಿಶ್ರಾಂತಿ ನೀಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಆದರೆ ರಶೀದ್ ಖಾನ್ ನಿರೀಕ್ಷೆಗೆ ತಕ್ಕಂತೆ ಆಡದೇ ಇರುವುದು ತಲೆನೋವು ಹೆಚ್ಚಳಕ್ಕೆ ಕಾರಣವಾಗಿದೆ. ಸಿಎಸ್‌ಕೆ ಪಾಲಿಗೆ ಇದು ಅತ್ಯಂತ ಕೆಟ್ಟ ಆವೃತ್ತಿಯಾಗಿದ್ದು, ಮೊದಲ ಬಾರಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಕೊನೆಗೊಳ್ಳಲಿದೆ.
ಸ್ಪಿನ್ನರ್ ಸಾಯಿ ಕಿಶೋರ್ ಸಿಎಸ್‌ಕೆ ಪರ 3 ಆವೃತ್ತಿ ಆಡಿದ್ದರು. ಇದಾದ ನಂತರ ಅವರು 2022 ರಿಂದ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದಾರೆ. ಜೊತೆಗೆ ಅತ್ಯುತ್ತಮ ಪ್ರದರ್ಶನವನ್ನೂ ನೀಡುತ್ತಿದ್ದಾರೆ. ಜಿಟಿ ಪರ 13 ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸಿದ್ದು, ಕೌಶಲ್ಯ ಮತ್ತು ಚಾತುರ್ಯ ಎರಡನ್ನೂ ಪ್ರದರ್ಶಿಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್‌ಗಳ ವಿರುದ್ಧವೂ ಅವರು ಪರಿಣಾಮಕಾರಿಯಾಗಬಲ್ಲರು ಎಂದು ತೋರಿಸಿದ್ದಾರೆ.
ಐಪಿಎಲ್ ಸೀಸನ್ ಮಧ್ಯೆ ಬದಲಿಯಾಗಿ ಸಿಎಸ್‌ಕೆ ಸೇರಿಕೊಂಡ ಡೆವಾಲ್ಡ್ ಬ್ರೆವಿಸ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಕೇವಲ 5 ಪಂದ್ಯಗಳನ್ನು ಆಡಿದ್ದರೂ 164.70ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದಾರೆ. ಇದು ಸಿಎಸ್‌ಕೆ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಅಗತ್ಯವಾದ ಶಕ್ತಿಯನ್ನು ನೀಡಿದೆ. ಇದೀಗ ಕೊನೆಯ ಪಂದ್ಯದಲ್ಲೂ ಅಬ್ಬರಿಸಿ ಮುಂದಿನ ಹರಾಜಿನಲ್ಲಿ ತಮ್ಮನ್ನು ಉಳಿಸಿಕೊಳ್ಳಲು ಅಥವಾ ಜನಪ್ರಿಯ ಆಟಗಾರರನ್ನಾಗಿ ಮಾಡಲು ಬಯಸುತ್ತಾರೆ.
ಜಿಟಿ ತಂಡದ ಸುದ್ದಿ ಮತ್ತು ಸಂಭಾವ್ಯ XII
ಇದು ಜಿಟಿ ತಂಡಕ್ಕೆ ಜೋಸ್ ಬಟ್ಲರ್ ಮತ್ತು ಕಗಿಸೊ ರಬಾಡ ಲಭ್ಯವಿರುವ ಕೊನೆಯ ಪಂದ್ಯವಾಗಿರುತ್ತದೆ. ಕೊನೆಯ ಪಂದ್ಯದಲ್ಲಿ ರಬಾಡ ರನ್ ಲೀಕ್ ಮಾಡಿದ ಹಿನ್ನೆಲೆ ಅವರನ್ನು ಬದಲಾವಣೆ ಮಾಡಬಹುದು. ಆತನ ಬದಲಿಗೆ ಜೆರಾಲ್ಡ್ ಕೊಯೆಟ್ಜಿ ಅವರನ್ನು ಆಯ್ಕೆ ಮಾಡಬಹುದು. ಆದರೆ ಅದನ್ನು ಹೊರತುಪಡಿಸಿ ಯಾವುದೇ ಬದಲಾವಣೆಯನ್ನು ಮಾಡುವ ಸಾಧ್ಯತೆಯಿಲ್ಲ.
ಜಿಟಿ ಸಂಭಾವ್ಯ ತಂಡ (XII): ಶುಭ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್, ಶೆರ್ಫಾನೆ ರುದರ್ಫೋರ್ಡ್, ಶಾರೂಖ್ ಖಾನ್, ರಾಹುಲ್ ತೆವಾಟಿಯಾ, ಅರ್ಷದ್ ಖಾನ್, ರಶೀದ್ ಖಾನ್, ಜೆರಾಲ್ಡ್ ಕೊಯೆಟ್ಜಿ, ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಕಳೆದ ಪಂದ್ಯದಲ್ಲಿ ಗೆಲುವಿನ ನಗೆ ಬೀರುವ ಕನಸಿನಲ್ಲಿರುವ ಸಿಎಸ್‌ಕೆ ತಂಡದಲ್ಲಿ ಒಂದು ಬದಲಾವಣೆ ಕಾಣಬಹುದು. ಡೆವೊನ್ ಕಾನ್ವೆ ಬದಲಿಗೆ ಶೇಕ್ ರಶೀದ್ ಅವರಿಗೆ ಅವಕಾಶ ನೀಡಬಹುದು. ಅವರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗಬಹುದು.
ಸಿಎಸ್‌ಕೆ ಸಂಭಾವ್ಯ ತಂಡ (XII): ಆಯುಷ್ ಮಾತ್ರೆ, ಶೇಕ್ ರಶೀದ್, ಉರ್ವಿಲ್ ಪಟೇಲ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಆರ್ ಅಶ್ವಿನ್, ಎಂಎಸ್ ಧೋನಿ, ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮತೀಶಾ ಪತಿರಾಣ.
ಅಂಕಿ-ಅಂಶ
ಈ ಋತುವಿನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣವು ಮೊದಲು ಬ್ಯಾಟಿಂಗ್ ಮಾಡಲು ಅನುಕೂಲಕರ ಸ್ಥಳವಾಗಿದೆ. ಎಲ್ಎಸ್ಜಿ ತಂಡವು ಜಿಟಿಗೆ 236 ರನ್‌ಗಳ ಕಠಿಣ ಗುರಿ ನಿಗದಿಪಡಿಸಿ ಗೆದ್ದು ಬೀಗಿತ್ತು. ಈ ಆವೃತ್ತಿಯಲ್ಲಿ ಅಹಮದಾಬಾದ್‌ನಲ್ಲಿ ನಡೆದ ಆರರಲ್ಲಿ ಐದು ಪಂದ್ಯಗಳನ್ನು ಮೊದಲು ಬ್ಯಾಟ್ ಮಾಡಿದ ತಂಡಗಳು ಗೆದ್ದಿವೆ.
ಈ ಋತುವಿನಲ್ಲಿ ಜಿಟಿಯ ಅಗ್ರ ಮೂವರು ಬ್ಯಾಟರ್ಗಳ ಸರಾಸರಿ 58.29 ಆಗಿದೆ. ಯಾವುದೇ ತಂಡಕ್ಕೆ ಇದು ಅತ್ಯಧಿಕವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಸಿಎಸ್‌ಕೆಯ ಅಗ್ರ-3 ಬ್ಯಾಟರ್ಸ್ ಅತ್ಯಂತ ಕಡಿಮೆ (23.21) ಸರಾಸರಿ ಹೊಂದಿದ್ದಾರೆ.
ಜಿಟಿ ತಂಡದ ಮಧ್ಯಮ ಕ್ರಮಾಂಕವು ಕಡಿಮೆ ರನ್ ಗಳಿಸಿದ್ದರೂ ಈ ಆವೃತ್ತಿಯಲ್ಲಿ 166.66ರ ಸ್ಟ್ರೈಕ್ ರೇಟ್ ಹೊಂದಿರುವ ಇತರ ತಂಡಗಳಿಗಿಂತ ವೇಗವಾಗಿ ಸ್ಕೋರ್ ಗಳಿಸಿದೆ. ಆದರೆ, ಸಿಎಸ್‌ಕೆ ತಂಡದ ಮಧ್ಯಮ ಕ್ರಮಾಂಕ ಲೀಗ್‌ನಲ್ಲಿ ಅತ್ಯಂತ ನಿಧಾನಗತಿಯ ಸ್ಕೋರಿಂಗ್ ಘಟಕವಾಗಿದೆ (134.18).
ಮತೀಶಾ ಪತಿರಾಣ 2 ಪಂದ್ಯಗಳಲ್ಲಿ ಸಾಯಿ ಸುದರ್ಶನ್ಗೆ ಬೌಲಿಂಗ್ ಮಾಡಿದ್ದು, ಎರಡೂ ಬಾರಿ ಅವರನ್ನು ಔಟ್ ಮಾಡಿದ್ದಾರೆ. ಆದರೂ ಜಿಟಿ ಆರಂಭಿಕ ಆಟಗಾರ 190 ಸ್ಟ್ರೈಕ್ ರೇಟ್ನಲ್ಲಿ ಪತಿರಾಣಗೆ 38 ರನ್ ಗಳಿಸಿದ್ದಾರೆ.