ಭಾರತ ಆಸ್ಟ್ರೇಲಿಯಾ 3ನೇ ಟಿ20; ಮಳೆಯಿಂದ ಪಂದ್ಯ ರದ್ದಾಗುವ ಆತಂಕ ಇದೆಯಾ? ಗುವಾಹಟಿ ಹವಾಮಾನ ಹೀಗಿದೆ-guwahati weather update for india vs australia 3rd t20i assam rain forecast november 28 barsapara cricket stadium jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ಆಸ್ಟ್ರೇಲಿಯಾ 3ನೇ ಟಿ20; ಮಳೆಯಿಂದ ಪಂದ್ಯ ರದ್ದಾಗುವ ಆತಂಕ ಇದೆಯಾ? ಗುವಾಹಟಿ ಹವಾಮಾನ ಹೀಗಿದೆ

ಭಾರತ ಆಸ್ಟ್ರೇಲಿಯಾ 3ನೇ ಟಿ20; ಮಳೆಯಿಂದ ಪಂದ್ಯ ರದ್ದಾಗುವ ಆತಂಕ ಇದೆಯಾ? ಗುವಾಹಟಿ ಹವಾಮಾನ ಹೀಗಿದೆ

India vs Australia 3rd T20I Guwahati weather: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟಿ20 ಪಂದ್ಯವು ಗುವಾಹಟಿಯಲ್ಲಿ ನಡೆಯುತ್ತಿದೆ. ನಗರದಲ್ಲಿ ಹವಾಮಾನ ಹೇಗಿದೆ ಎಂಬುದನ್ನು ನೋಡಿ.

ಗುವಾಹಟಿಯಲ್ಲಿ ಇಂಡೋ-ಆಸೀಸ್‌ ಮೂರನೇ ಟಿ20 ಪಂದ್ಯ
ಗುವಾಹಟಿಯಲ್ಲಿ ಇಂಡೋ-ಆಸೀಸ್‌ ಮೂರನೇ ಟಿ20 ಪಂದ್ಯ (ANI)

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಹೈ ಸ್ಕೋರಿಂಗ್ ಪಂದ್ಯಗಳಲ್ಲಿ ಅಬ್ಬರಿಸಿ ಗೆದ್ದಿರುವ ಭಾರತ ತಂಡವು, ಐದು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇದೀಗ ವಿಶ್ವಚಾಂಪಿಯನ್ನರ ವಿರುದ್ಧದ ಮೂರನೇ ಟಿ20 (India vs Australia 3rd T20I) ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತಕ್ಕೆ ಸರಣಿ ಒಲಿಯಲಿದೆ.

ದಕ್ಷಿಣ ಭಾರತದ ವಿಶಾಖಪಟ್ಟಣ ಹಾಗೂ ತಿರುವನಂತಪುರದಲ್ಲಿ ನಡೆದ ಮೊದಲೆರಡು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದ ಭಾರತವು, ಮೂರನೇ ಚುಟುಕು ಕದನಕ್ಕಾಗಿ ಈಶಾನ್ಯ ಭಾರತದ ಪ್ರಮುಖ ನಗರ ಗುವಾಹಟಿಗೆ ಪ್ರಯಾಣಿಸಿದೆ. ಗುವಾಹಟಿಯ ಬರ್ಸಪರಾ ಕ್ರೀಡಾಂಗಣದಲ್ಲಿ (Barsapara Cricket Stadium) ನಡೆಯುವ ಪಂದ್ಯದಲ್ಲಿ ಗೆದ್ದು, ಸರಣಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿ ಸೂರ್ಯಕುಮಾರ್‌ ಯಾದವ್‌ ಬಳಗವಿದೆ.

ಇದನ್ನೂ ಓದಿ | ಸುಂದರ್‌ಗೆ ಅವಕಾಶಕ್ಕೆ ಚಿಂತನೆ; ಇಂಡೋ-ಆಸೀಸ್‌ 3ನೇ ಟಿ20ಗೆ ಭಾರತ ಸಂಭಾವ್ಯ ತಂಡ ಹೀಗಿದೆ

ಇದೇ ಮೊದಲ ಬಾರಿಗೆ ಯಾವುದೇ ಸ್ವರೂಪದಲ್ಲಿ ಸೂರ್ಯಕುಮಾರ್ ಯಾದವ್ ಭಾರತ ತಂಡದ ನಾಯಕತ್ವ ವಹಿಸಿದ್ದು, ಮೊದಲೆರಡೂ ಪಂದ್ಯಗಳಲ್ಲಿ ಯಶಸ್ಸು ಸಾಧಿಸಿದ್ದಾರೆ. ಮೊದಲ ಪಂದ್ಯವನ್ನು ಚೇಸಿಂಗ್‌ ಮಾಡಿದ್ದ ಭಾರತ ಕೊನೆಯ ಎಸೆತದಲ್ಲಿ ಗೆದ್ದಿತ್ತು. ಆಸ್ಟ್ರೇಲಿಯಾ ವಿರುದ್ಧ ಭಾರತವು ಅತಿ ಹೆಚ್ಚು ಟಿ20 ರನ್ ಚೇಸಿಂಗ್‌ ಮಾಡಿದ ದಾಖಲೆ ಬರೆಯಿತು. ಆ ಬಳಿಕ ಎರಡನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಅವರ ತಲಾ ಅರ್ಧಶತಕಗಳ ನೆರವಿಂದ ಭಾರತ ಬೃಹತ್ 235‌ ರನ್‌ ಕಲೆ ಹಾಕಿತು. ಆದರೆ, ಈ ಮೊತ್ತವನ್ನು ಚೇಸಿಂಗ್‌ ಮಾಡಲು ಆಸೀಸ್‌ಗೆ ಸಾಧ್ಯವಾಗಲಿಲ್ಲ.

ಗುವಾಹಟಿ ಹವಾಮಾನ ಹೇಗಿದೆ?

ತಿರುವನಂತಪುರದಲ್ಲಿ ನಡೆದ ಎರಡನೇ ಟಿ20 ಪಂದ್ಯಕ್ಕೆ ಮಳೆಯ ಆತಂಕವಿತ್ತು. ಆದರೆ, ಪಂದ್ಯದ ದಿನ ವರುಣ ಅಡ್ಡಿಪಡಿಸಲಿಲ್ಲ. ಇದೀಗ ಗುವಾಹಟಿಯಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಕುರಿತು ಅಭಿಮಾನಿಗಳಿಗೆ ತುಸು ಭೀತಿ ಇದೆ.

ಮೂರನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ ಎಂದು ಹವಾಮಾನ ವರದಿ ತಿಳಿಸಿದೆ. ಅಕ್ಯುವೆದರ್ ಪ್ರಕಾರ, ನಗರದಲ್ಲಿ ನವೆಂಬರ್ 28ರಂದು ಆಕಾಶ ಶುಭ್ರವಾಗಿ ಕಾಣಲಿದ್ದು, ಮೋಡ ಕಾಣಿಸುವ ಸಂಭವವಿಲ್ಲ. ರಾತ್ರಿ 7:00 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಆ ಸಮಯದಲ್ಲಿ ಗರಿಷ್ಠ ತಾಪಮಾನವು 21 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಆದರೆ ರಾತ್ರಿ 10:30ಕ್ಕೆ ಪಂದ್ಯ ಮುಕ್ತಾಯವಾಗಲಿದ್ದು, ಆ ಸಮಯದಲ್ಲಿ ತಾಪಮಾನವು 19 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ.

ಸರಣಿಯ ನಾಲ್ಕನೇ ಪಂದ್ಯವು ರಾಯ್‌ಪುರದಲ್ಲಿ ಡಿಸೆಂಬರ್ 1ರಂದು ನಡೆಯಲಿದೆ. ಅಂತಿಮ ಪಂದ್ಯವು ಡಿಸೆಂಬರ್ 3ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.

ಭಾರತ ಸಂಭಾವ್ಯ ಆಡುವ ಬಳಗ: ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್‌ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ.

ಆಸ್ಟ್ರೇಲಿಯಾ ಸಂಭಾವ್ಯ ಆಡುವ ಬಳಗ: ಮ್ಯಾಥ್ಯೂ ಶಾರ್ಟ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್‌ (ನಾಯಕ ಮತ್ತು ವಿಕೆಟ್‌ ಕೀಪರ್), ಸೀನ್ ಅಬಾಟ್, ನಾಥನ್ ಎಲ್ಲಿಸ್, ಆಡಮ್ ಜಂಪಾ, ಜೇಸನ್ ಬೆಹ್ರೆನ್‌ಡಾರ್ಫ್/ತನ್ವೀರ್ ಸಂಘ.

mysore-dasara_Entry_Point