ಕನ್ನಡ ಸುದ್ದಿ  /  Cricket  /  Harbhajan Singh Bold Rely To Pakistan Fan Dreaming Babar Azam To Join Virat Kohli In Rcb To Play Ipl Mohammad Rizwan Jra

ನಿದ್ದೆಯಿಂದ ಎದ್ದೇಳಿ; ವಿರಾಟ್ ಜೊತೆಗೆ ಬಾಬರ್ ಆರ್‌ಸಿಬಿ ಪರ ಆಡಬೇಕೆಂಬ ಪಾಕ್ ಅಭಿಮಾನಿ ಕನಸಿಗೆ ಹರ್ಭಜನ್ ನೀಡಿದ್ರು ಉತ್ತರ

ಪಾಕ್‌ ಅಭಿಮಾನಿಯೊಬ್ಬ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಕನಸನ್ನು ತೋರಿಸಿಕೊಂಡಿದ್ದಾರೆ. ಪಾಕ್‌ ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡಬೇಕೆಂಬ ಕನಸಿಗೆ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೊಳ್ಳಿ ಇಟ್ಟಿದ್ದಾರೆ. ಟೀಮ್‌ ಇಂಡಿಯಾ ಮಾಜಿ ಸ್ಪಿನ್ನರ್‌ ಮಾಡಿರುವ ಟ್ವೀಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವಿರಾಟ್ ಜೊತೆಗೆ ಬಾಬರ್ ಆರ್‌ಸಿಬಿ ಪರ ಆಡಬೇಕೆಂಬ ಪಾಕ್ ಅಭಿಮಾನಿ ಕನಸಿಗೆ ಹರ್ಭಜನ್ ನೀಡಿದ್ರು ಉತ್ತರ
ವಿರಾಟ್ ಜೊತೆಗೆ ಬಾಬರ್ ಆರ್‌ಸಿಬಿ ಪರ ಆಡಬೇಕೆಂಬ ಪಾಕ್ ಅಭಿಮಾನಿ ಕನಸಿಗೆ ಹರ್ಭಜನ್ ನೀಡಿದ್ರು ಉತ್ತರ

ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಅಷ್ಟೇನೂ ಉತ್ತಮ ಬಾಂಧವ್ಯವಿಲ್ಲ. ಉಭಯ ದೇಶಗಳ ನಡುವಿನ ಪಂದ್ಯವನ್ನು ಬದ್ಧವೈರಿಗಳ ಕಾದಾಟವೆಂದೇ ಬಣ್ಣಿಸುವವರು ಹೆಚ್ಚು. ಈ ನಡುವೆ ಪಾಕಿಸ್ತಾನಕ್ಕೆ ಭಾರತೀಯ ಕ್ರಿಕೆಟ್‌ ತಂಡ ಪ್ರಯಾಣಿಸಿ, ಅಲ್ಲಿ ಕ್ರಿಕೆಟ್‌ ಆಡುವ ಸಾಧ್ಯತೆ ಸದ್ಯಕ್ಕಂತೂ ಇಲ್ಲ. ಇದೇ ವೇಳೆ ಪಾಕ್‌ ತಂಡ ಭಾರತಕ್ಕೆ ಬಂದು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾಗಿಯಾದರೂ, ಐಪಿಎಲ್‌ನಲ್ಲಿ ಆಡುವ ಅವಕಾಶ ಪಾಕಿಸ್ತಾನಕ್ಕಿಲ್ಲ. ಈ ನಡುವೆ ಪಾಕಿಸ್ತಾನದ ಆಟಗಾರರು ಹಾಗೂ ಅಲ್ಲಿನ ಅಭಿಮಾನಿಗಳು, ತಮ್ಮ ದೇಶದ ಆಟಗಾರರು ಐಪಿಎಲ್‌ನಲ್ಲಿ ಆಡಬೇಕೆಂಬ ಕನಸು ಕಾಣುತ್ತಲೇ ಇದ್ದಾರೆ.

ವಿಶ್ವದ ಜನಪ್ರಿಯ, ಅತಿ ದೊಡ್ಡ ಹಾಗೂ ಶ್ರೀಮಂತ ಕ್ರಿಕೆಟ್‌ ಲೀಗ್‌ ಐಪಿಎಲ್.‌ ಹೀಗಾಗಿ ಇದರಲ್ಲಿ ಆಡಿ ವಿಶ್ವ ಕ್ರಿಕೆಟ್‌ನಲ್ಲಿ ಗುರುತಿಸಿಕೊಳ್ಳುವುದು ಜಾಗತಿಕ ಮಟ್ಟದ ಹಲವು ಆಟಗಾರರ ಆಸೆ ಮತ್ತು ಕನಸು.‌ ಇದು ಪಾಕಿಸ್ತಾನವನ್ನೂ ಬಿಟ್ಟಿಲ್ಲ. ಪಾಕ್‌ನ ಹಲವು ಆಟಗಾರರು ಈ ಕುರಿತು ತಮ್ಮ ಇರಾದೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಈ ನಡುವೆ, ಪಾಕಿಸ್ತಾನದ ಅಭಿಮಾನಿಗಳು ತಮ್ಮ ದೇಶದ ಪ್ರಮುಖ ಆಟಗಾರರಾದ ಬಾಬರ್ ಅಜಾಮ್, ಮೊಹಮ್ಮದ್ ರಿಜ್ವಾನ್ ಹಾಗೂ ಶಾಹೀನ್ ಅಫ್ರಿದಿ ಅವರಂಥವರು ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ.

ಪಾಕ್ ಕ್ರಿಕೆಟಿಗರನ್ನು ಐಪಿಎಲ್‌ನಲ್ಲಿ ಭಾಗವಹಿಸದಂತೆ ನಿಷೇಧಿಸಲಾಗಿದೆ. ಈ ನಿಷೇಧ ಹೆಚ್ಚು ಸಮಯ ಇರಲಾರದು. ಒಂದಲ್ಲಾ ಒಂದು ದಿನ ನಿಯಮ ಬದಲಾಯಿಸುವ ಸಾಧ್ಯತೆಯ ಬಗ್ಗೆ ಪಾಕಿಸ್ತಾನದ ಕೆಲವು ಅಭಿಮಾನಿಗಳು ಕನಸು ಕಾಣುತ್ತಲೇ ಇದ್ದಾರೆ.

ಪಾಕ್‌ ಅಭಿಮಾನಿಯ ಕನಿಸಿಗ ಹರ್ಭಜನ್‌ ಸಿಂಗ್‌ ಅಡ್ಡಿ

ಈ ಕುರಿತು ಪಾಕ್‌ ಅಭಿಮಾನಿಯೊಬ್ಬ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಕನಸನ್ನು ತೋರಿಸಿಕೊಂಡಿದ್ದಾರೆ. ಪಾಕ್‌ ಅಭಿಮಾನಿಯ ಕನಸಿಗೆ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೊಳ್ಳಿ ಇಟ್ಟಿದ್ದಾರೆ. ಭಾರತದ ಮಾಜಿ ಸ್ಪಿನ್ನರ್‌ ಟ್ವೀಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ | ಐಪಿಎಲ್‌ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತೆ ಹಿನ್ನಡೆ; ಬ್ರೂಕ್‌ ಬಳಿಕ ಲುಂಗಿ ಎನ್‌ಗಿಡಿ ಔಟ್, ಬದಲಿ ಘೋಷಣೆ

ವಿರಾಟ್ ಕೊಹ್ಲಿ ಜೊತೆಗೆ ಬಾಬರ್ ಅಜಾಮ್ ಆರ್‌ಸಿಬಿ ಪರ ಆಡುತ್ತಿರುವುದನ್ನು ನೋಡಲು ಅಭಿಮಾನಿಯೊಬ್ಬರು ಬಯಸಿದ್ದಾರೆ. ಇದೇ ವೇಳೆ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಜೊತೆಗೆ ಶಾಹೀನ್ ಅಫ್ರಿದಿ ಆಡಬೇಕೆಂದು ಅವರು ಕನಸು ಕಂಡಿದ್ದಾರೆ. ಅಷ್ಟೇ ಅಲ್ಲ; ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ವಿಕೆಟ್‌ ಕೀಪರ್ ಮೊಹಮ್ಮದ್ ರಿಜ್ವಾನ್ ಆಡಬೇಕೆಂದು ಬಯಸುವುದಾಗಿ ಪಾಕಿಸ್ತಾನದ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಇದು ಅನೇಕ ಭಾರತೀಯ ಮತ್ತು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳ ಕನಸು ಎಂದು ಹೇಳಿದ್ದಾರೆ

ಪಾಕ್‌ ಅಭಿಮಾನಿಯ ಟ್ವೀಟ್‌, ಭಾರತದ ಮಾಜಿ ಕ್ರಿಕೆಟಗ ಹರ್ಭಜನ್‌ಗೂ ತಲುಪಿದೆ. ಹೀಗಾಗಿ ಅವರು ಆ ಟ್ವೀಟ್‌ಗೆ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ. “ಭಾರತೀಯರು ಯಾರೊಬ್ಬರೂ ಇಂಥಾ ಕನಸು ಕಾಣುತ್ತಿಲ್ಲ . ಮೊದಲಿಗೆ ನೀವು ಹಗಲುಗನಸು ಕಾಣುವುದನ್ನು ನಿಲ್ಲಿಸಿ. ಈಗಲೇ ನಿದ್ದೆಯಿಂದ ಎದ್ದೇಳಿ” ಎಂದು ಭಜ್ಜಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಟ್ವೀಟ್‌ ಎಲ್ಲೆಡೆ ವೈರಲ್‌ ಆಗಿದೆ.

ಐಪಿಎಲ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಪ್ರಸಕ್ತ ಆವೃತ್ತಿಯ ಐಪಿಎಲ್‌ ಪಂದ್ಯಾವಳಿಯು ಮಾರ್ಚ್ 22ರಂದು ಆರಂಭವಾಗುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ವಿರಾಟ್‌ ಕೊಹ್ಲಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯುತ್ತಿದೆ. ಆರ್‌ಸಿಬಿ ತಂಡವು ಈಗಾಗಲೇ ಅಭ್ಯಾಸ ಆರಂಭಿಸಿದ್ದು, ವಿರಾಟ್ ಕೊಹ್ಲಿ ಇನ್ನೂ ತಂಡ ಸೇರಿಕೊಂಡಿಲ್ಲ. ಕೆಲವೇ ದಿನಗಳಲ್ಲಿ ಕೊಹ್ಲಿ ತಂಡ ಸೇರುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಮೂಲವೊಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದೆ.

ಪಂದ್ಯಾವಳಿ ಆರಂಭಕ್ಕೂ ಮನ್ನ ಬೆಂಗಳೂರಿನಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ನಡೆಯುತ್ತಿದೆ.‌ ಮಾರ್ಚ್ 19ರಂದು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಕೊಹ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.‌

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ