ನಿಜವಾದ ಅಭಿಮಾನಿಗಳು ಇರೋದು ಧೋನಿಗೆ ಮಾತ್ರ; ಉಳಿದೋರು ಪೇಯ್ಡ್ ಫ್ಯಾನ್ಸ್; ಹರ್ಭಜನ್ ಹೇಳಿಕೆಗೆ ಕೊಹ್ಲಿ ಫ್ಯಾನ್ಸ್ ಕಿಡಿ
ಹರ್ಭಜನ್ ಸಿಂಗ್ ನೀಡಿರುವ ವಿವಾದಾತ್ಮಕ ಹೇಳಿಕೆ ಅಂತರ್ಜಾಲದಲ್ಲಿ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಕ್ರಿಕೆಟಿಗ ಪರೋಕ್ಷವಾಗಿ ವಿರಾಟ್ ಕೊಹ್ಲಿಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಲಗೆ ಹರಿಬಿಟ್ಟು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟೀಕಾಕಾರರ ಬಾಯಿಗೆ ಆಹಾರವಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರನ್ನು ಹೊಗಳಿ ಅಟ್ಟಕ್ಕೇರಿಸುವ ಬರದಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಧೋನಿಗೆ ಹೋಲಿಸಿದರೆ ಭಾರತದ ಉಳಿದ ಕ್ರಿಕೆಟಿಗರ ಅಭಿಮಾನಿ ಬಳಗದ ಬಗ್ಗೆ ಹರ್ಭಜನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ಮಾಜಿ ಸ್ಪಿನ್ನರ್ ಮೇಲೆ ಆಕ್ರೋಶದ ಮಳೆ ಹರಿಯಲು ಕಾರಣವಾಗಿದೆ. ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅವರ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ಈ ರೀತಿ ಹೇಳಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.
ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯ ನಡೆಯಬೇಕಿದ್ದ ಸಮಯದಲ್ಲಿ ಹರ್ಭಜನ್ ಈ ಹೇಳಿಕೆ ನೀಡಿದ್ದಾರೆ. ಸ್ಟಾರ್ ಸ್ಪೋರ್ಟ್‌ನಲ್ಲಿ ಮಾತನಾಡಿದ ಅವರು, ಐಪಿಎಲ್‌ನಲ್ಲಿ ಧೋನಿ ಮತ್ತು ಅವರ ಭವಿಷ್ಯದ ಕುರಿತು ವಿವರಿಸಿದರು.
43 ವರ್ಷದ ಧೋನಿ ಅವರು ಸಾಧ್ಯವಾದಷ್ಟು ಕಾಲ ಸಿಎಸ್‌ಕೆ ಪರ ಆಡುವುದನ್ನು ಮುಂದುವರಿಸಬೇಕು ಎಂದು ಹರ್ಭಜನ್ ಹೇಳಿದರು. ಮಾಹಿ ಐಪಿಎಲ್‌ನಲ್ಲಿ ಆಡುವ ಚರ್ಚೆಯು ತಕ್ಷಣವೇ ಅಭಿಮಾನಿಗಳ ವಿಷಯಕ್ಕೆ ತಿರುಗಿತು. ಅಭಿಮಾನಿಗಳು ಕೂಡಾ ಧೋನಿ ಇನ್ನೂ ಆಡುವುದನ್ನು ಬಯಸುತ್ತಾರೆ ಎಂದು ಹೇಳಿದರು. ತಮ್ಮ ನಂತರದ ಹೇಳಿಕೆಯಲ್ಲಿ, ಧೋನಿ "ನಿಜವಾದ ಅಭಿಮಾನಿ ಬಳಗವನ್ನು" ಹೊಂದಿರುವ ಏಕೈಕ ಆಟಗಾರ ಎಂದು ಹೊಗಳಿದರು. ಅಷ್ಟಕ್ಕೆ ಮಾತು ನಿಲ್ಲಿಸದೆ, ಉಳಿದ ಆಟಗಾರರ ಅಭಿಮಾನಿಗಳು ‘ಸೋಷಿಯಲ್ ಮೀಡಿಯಕ್ಕಷ್ಟೇ ಸೀಮಿತ, ಅವರು ಪೇಯ್ಡ್ ಫ್ಯಾನ್ಸ್ ಮತ್ತು ಪಿಆರ್’ ಅನ್ನು ಅವಲಂಬಿಸಿದ್ದಾರೆ ಎಂದು ಹೇಳಿದರು. ಇದು ವಿರಾಟ್ ಕೊಹ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಧೋನಿಗೆ ನೈಜ ಅಭಿಮಾನಿಗಳಿದ್ದಾರೆ
“ಅವರು (ಧೋನಿ) ಸಾಧ್ಯವಾದಷ್ಟು ಕಾಲ ಆಡಬಹುದು. ಅದು ನನ್ನ ತಂಡವಾಗಿದ್ದರೆ, ನಾನು ವಿಭಿನ್ನ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ. ಅವರು ಆಡುವುದನ್ನು ಮುಂದುವರಿಸಬೇಕೆಂದು ಅಭಿಮಾನಿಗಳು ಕೂಡಾ ಬಯಸುತ್ತಾರೆ. ಅವರಿಗೆ ನಿಜವಾದ ಅಭಿಮಾನಿ ಬಳಗವಿದೆ ಎಂದು ನಾನು ಭಾವಿಸುತ್ತೇನೆ. ಇನ್ನು ಉಳಿದವರೆಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇ. ಅವರಲ್ಲಿ ಪಾವತಿಸಿದ ಅಭಿಮಾನಿಗಳು ಸಹ (ಪಾವತಿ ಗಿರಾಕಿಗಳು ಎನ್ನುವಂಥಾ ಅರ್ಥ) ಇದ್ದಾರೆ. ಅವರ ವಿಷಯ ಬಿಡಿ. ಏಕೆಂದರೆ ನಾವು ಆ ಬಗ್ಗೆ ಚರ್ಚಿಸಲು ಪ್ರಾರಂಭಿಸಿದರೆ, ಚರ್ಚೆ ಬೇರೆ ದಿಕ್ಕಿನಲ್ಲಿ ಹೋಗುತ್ತದೆ” ಎಂದು ಹರ್ಭಜನೆ ಹೇಳಿದರು.
ಇಲ್ಲಿದೆ ಹರ್ಭಜನ್ ಸಿಂಗ್ ಹೇಳಿಕೆ
ಈ ವೇಳೆ ಆ ಚರ್ಚೆಯ ಪ್ಯಾನೆಲ್‌ನ ಭಾಗವಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, "ಇತ್ನಾ ಸಚ್ ನೇಹಿ ಬೋಲ್ನಾ ಥಾ (ನೀವು ಇಷ್ಟು ಪ್ರಾಮಾಣಿಕರಾಗಬಾರದಿತ್ತು) ಎಂದು ಹೇಳುವ ಹರ್ಭಜನ್ ಮಾತಿಗೆ ಪರೋಕ್ಷವಾಗಿ ಕೊಂಕು ಮಾತಿನ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಹರ್ಭಜನ್ ಸಿಂಗ್ ಅವರ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರು ಪರೋಕ್ಷವಾಗಿ ಕೊಹ್ಲಿಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳಿಗೆ ಅರ್ಥವಾಗಿದೆ. ಅದರ ಬೆನ್ನಲ್ಲೇ ಕೊಹ್ಲಿ ಅಭಿಮಾನಿಗಳು ಕಿಂಗ್ ಕೊಹ್ಲಿಯನ್ನು ಸಮರ್ಥನೆ ಮಾಡಲು ಶುರುವಾಗಿದ್ದಾರೆ.
ಮೇ 17ರಂದು ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳ ನಡುವೆ ಐಪಿಎಲ್ ಪಂದ್ಯ ನಡೆಯಬೇಕಿತ್ತು. ಆದರೆ ಬೆಂಗಳೂರಿನಲ್ಲಿ ನಿರಂತರ ಮಳೆ ಸುರಿದ ಕಾರಣದಿಂದಾಗಿ ಪಂದ್ಯ ರದ್ದಾಯ್ತು.