Video: ನಾಯಕತ್ವ ಬದಲಾವಣೆ ಬಳಿಕ ಮತ್ತೆ ಒಂದಾದ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ; ಅಪ್ಪುಗೆಯ ವಿಡಿಯೋ ವೈರಲ್-hardik pandya and rohit sharma hugs in first meeting after captaincy change of mumbai indians ahead of ipl 2024 jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  Video: ನಾಯಕತ್ವ ಬದಲಾವಣೆ ಬಳಿಕ ಮತ್ತೆ ಒಂದಾದ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ; ಅಪ್ಪುಗೆಯ ವಿಡಿಯೋ ವೈರಲ್

Video: ನಾಯಕತ್ವ ಬದಲಾವಣೆ ಬಳಿಕ ಮತ್ತೆ ಒಂದಾದ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ; ಅಪ್ಪುಗೆಯ ವಿಡಿಯೋ ವೈರಲ್

ಮುಂಬೈ ಇಂಡಿಯನ್ಸ್ ನಾಯಕತ್ವ ಬದಲಾವಣೆಯ ನಂತರ ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಐಪಿಎಲ್ 2024ರ ಆವೃತ್ತಿಗೆ ಹಾರ್ದಿಕ್‌ ಪಾಂಡ್ಯ ಎಂಐ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇವರಿಬ್ಬರು ಪರಸ್ಪರ ತಬ್ಬಿಕೊಂಡ ವಿಡಿಯೋವನ್ನು ಫ್ರಾಂಚೈಸ್‌ ಹಂಚಿಕೊಂಡಿದೆ.

ನಾಯಕತ್ವ ಬದಲಾವಣೆ ಬಳಿಕ ಮತ್ತೆ ಒಂದಾದ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ
ನಾಯಕತ್ವ ಬದಲಾವಣೆ ಬಳಿಕ ಮತ್ತೆ ಒಂದಾದ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ (Mumbai Indians)

ಪ್ರಸಕ್ತ ಆವೃತ್ತಿಯ ಐಪಿಎಲ್‌ ಆರಂಭಕ್ಕೂ ಮುಂಚಿತವಾಗಿ, ಹೆಚ್ಚು ಕುತೂಹಲ ಕೆರಳಿಸಿದ್ದು ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಬದಲಾವಣೆ. ಟೀಮ್‌ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ನಾಯಕ ರೋಹಿತ್‌ ಶರ್ಮಾ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ, ಮಾಜಿ ಚಾಂಪಿಯನ್‌ ತಂಡವು ಹಾರ್ದಿಕ್‌ ಪಾಂಡ್ಯಾಗೆ ನಾಯಕನ ಪಟ್ಟ ನೀಡಿತು. ಇದು ವ್ಯಾಪಕ ಚರ್ಚೆ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಸದ್ಯ ಐಪಿಎಲ್‌ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಉಭಯ ಆಟಗಾರರು ತಂಡದ ಶಿಬಿರದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಈ ನಡುವೆ ಇಬ್ಬರು ಆಟಗಾರರ ಸಮಾಗಮ ಹಾಗೂ ಮೊದಲ ಅಪ್ಪುಗೆ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ನೇಮಕಗೊಂಡ ಹಾರ್ದಿಕ್ ಪಾಂಡ್ಯ ಅವರೊಂದಿಗೆ ರೋಹಿತ್ ಶರ್ಮಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಸಂವಾದ ನಡೆಸಿದ್ದಾರೆ. ಗುಜರಾತ್ ಟೈಟಾನ್ಸ್ ತಂಡ ತೊರೆದ ಪಾಂಡ್ಯರನ್ನು, ರೋಹಿತ್ ಬದಲಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ನೇಮಿಸಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು ಹೊಸ ವಿಷಯವೇನಲ್ಲ. ಇದು ಪಾಂಡ್ಯ ಅವರಿಗೂ ತಿಳಿದಿದೆ. ಆದರೆ, ಐಪಿಎಲ್ 2024ರ ಆವೃತ್ತಿಯಲ್ಲಿ ಮುಂಬೈ ಐಕಾನ್‌ ಆಗಿರುವ ರೋಹಿತ್ ಶರ್ಮಾ, ನೂತನ ನಾಯಕನಿಗೆ ಮಾರ್ಗದರ್ಶಕರಾಗಿ ಸಲಹೆ ನೀಡಲಿದ್ದಾರೆ ಎಂದು ಹಾರ್ದಿಕ್‌ ಹೇಳಿಕೊಂಡಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಎಂಐ ತಂಡವು ಐಪಿಎಲ್ 2024ಕ್ಕೆ ಸಜ್ಜಾಗುತ್ತಿದೆ. ಈ ವೇಖೆ ಪಾಂಡ್ಯ ಮತ್ತು ರೋಹಿತ್‌ ಎದುರಾಗಿದ್ದಾರೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಉಭಯ ಆಟಗಾರರು ಪರಸ್ಪರ ತಬ್ಬಿಕೊಳ್ಳುವುದನ್ನು ಕಾಣಬಹುದು.

ಇದನ್ನೂ ಓದಿ | ಅವರಿಗೆ ನನ್ನ ಹೆಸರು ಗೊತ್ತಿದೆ; ರೋಲ್‌ ಮಾಡೆಲ್ ವಿರಾಟ್ ಕೊಹ್ಲಿ ಹೊಗಳಿಕೆಗೆ ಫ್ಯಾನ್‌ ಗರ್ಲ್‌ ಶ್ರೇಯಾಂಕಾ ಫುಲ್‌ ಖುಷ್

ನಾಯಕತ್ವ ಬದಲಾವಣೆಯ ನಂತರ ಹಾರ್ದಿಕ್‌ ಅವರು ರೋಹಿತ್ ಅವರನ್ನು ತಮ್ಮ ಮೊದಲ ಭೇಟಿಯಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದು. ರೋಹಿತ್ ಮತ್ತು ಹಾರ್ದಿಕ್ ನಡುವಿನ ಈ ಅಮೂಲ್ಯ ಸಂವಾದವು ಇಬ್ಬರು ಸೂಪರ್‌ಸ್ಟಾರ್‌ಗಳ ನಡುವೆ ಬಿರುಕು ಇರುವ ವದಂತಿಗಳನ್ನು ತಳ್ಳಿಹಾಕಿದೆ. ಆದರೆ, ಅಭಿಮಾನಿಗಳಿಗೆ ಇನ್ನೂ ಸಮಾಧಾನವಿಲ್ಲ. ರೋಹಿತ್‌ ಮುಖ ಹಾಗೂ ಅಪ್ಪುಗೆ ಸಪ್ಪಗಿದ್ದಂತೆ ಕಂಡುಬಂದಿದ್ದು, ಈ ಆವೃತ್ತಿಯಲ್ಲಿ ಅವರ ಆಟವನ್ನು ನೋಡಬೇಕಿದೆ.

ರೋಹಿತ್ ಶರ್ಮಾ ಕುರಿತು ಹಾರ್ದಿಕ್ ಪಾಂಡ್ಯ ಮಾತು

ತನ್ನ ಮತ್ತು ರೋಹಿತ್ ನಡುವೆ ಯಾವುದೇ ರೀತಿಯ ಗೊಂದಲ ಅಥವಾ ಭಿನ್ನಾಭಿಪ್ರಾಯ ಇರುವುದಿಲ್ಲ ಎಂದು ಹಾರ್ದಿಕ್ ಪಾಂಡ್ಯ ಹೇಳಿಕೊಂಡಿದ್ದಾರೆ. ಮುಂಬೈನಲ್ಲಿ ಇತ್ತೀಚೆಗೆ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಭಾರತೀಯ ನಾಯಕನ ಬಳಿ ನಾಯಕತ್ವ ಕುರಿತ ಸಾಕಷ್ಟು ಅನುಭವವಿದೆ. ಅವರ ಅನುಭವ ತಂಡದ ನೆರವಿಗೆ ಬರುತ್ತದೆ ಎಂದು ಹೇಳಿದ್ದಾರೆ. ಟೂರ್ನಿಯುದ್ದಕ್ಕೂ ಅವರು ತಂಡಕ್ಕೆ ಮಾರ್ಗದರ್ಶನ ನೀಡುತ್ತಾರೆ ಎಂದು ನಾಯಕ ಪಾಂಡ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೋಹಿತ್‌ ಕಂಡ ಯಶಸ್ಸು ಪಾಂಡ್ಯ ಪಡೆಯುತ್ತಾರಾ?

ಮುಂಬೈ ತಂಡದ ನಾಯಕನನಾಗಿ ರೋಹಿತ್ ಶರ್ಮಾ ಯಶಸ್ಸಿನ ಉತ್ತಂಗಕ್ಕೇರಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಧೋನಿ ಜೊತೆಗೆ ಜಂಟಿಯಾಗಿ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಮುಂಬೈ ತಂಡ ಎಲ್ಲಾ ಐದು ಐಪಿಎಲ್ ಟ್ರೋಫಿ ಗೆಲುವಿನಲ್ಲೂ ರೋಹಿತ್‌ ನಾಯಕನಾಗಿದ್ದಾರೆ. ಹಿಟ್‌ಮ್ಯಾನ್‌ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 2013, 2015, 2017, 2019 ಮತ್ತು 2020ರಲ್ಲಿ ಟ್ರೋಫಿ ಎತ್ತಿ ಹಿಡಿದಿದೆ. ರೋಹಿತ್ ಬರೋಬ್ಬರಿ 158 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದಾರೆ.

mysore-dasara_Entry_Point