VIDEO: ರೋಹಿತ್... ರೋಹಿತ್... ಸ್ಟೇಡಿಯಂ ಚಾವಣಿ ಕಿತ್ತು ಹೋಗುವಂತೆ ಘೋಷಣೆ ಕೂಗಿದ ಫ್ಯಾನ್ಸ್; ಹಾರ್ದಿಕ್ ಪಾಂಡ್ಯಗೆ ಭಾರಿ ಮುಜುಗರ
Hardik Pandya Rohit Sharma: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ಆಡುತ್ತಿವೆ. ಹಾರ್ದಿಕ್ ಪಾಂಡ್ಯ ಎಂಐ ನಾಯಕನಾಗಿ ಆಡುತ್ತಿದ್ದು, ಮೊದಲ ಪಂದ್ಯದಲ್ಲೇ ಮುಜುಗರ ಅನುಭವಿಸಿದ್ದಾರೆ.
ನಾಯಕತ್ವ ಬದಲಾವಣೆ ಬಳಿಕ ಇದೇ ಮೊದಲ ಬಾರಿಗೆ ಆಡುತ್ತಿರುವ ಮುಂಬೈ ಇಂಡಿಯನ್ಸ್ ತಂಡವು, ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಚೇಸಿಂಗ್ ಆಯ್ಕೆ ಮಾಡಿಕೊಂಡಿದೆ. ರೋಹಿತ್ ಶರ್ಮಾರನ್ನು ನಾಯತ್ವದಿಂದ ಕೆಳಗಿಳಿಸಿದ ಮುಂಬೈ, ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯರನ್ನು ಮರಳಿ ತಂಡಕ್ಕೆ ಕರೆಸಿಕೊಂಡಿದೆ. ಅಲ್ಲದೆ ನಾಯಕನ ಪಟ್ಟವನ್ನೂ ನೀಡಿದೆ. ಅಭಿಮಾನಿಗಳ ಅಸಮಾಧಾನದ ನಡುವೆಯೂ ತಂಡದ ನಾಯಕತ್ವ ವಹಿಸಿದ ಪಾಂಡ್ಯ, ಅಹಮದಾಬಾದ್‌ನಲ್ಲಿ ಭಾರಿ ಮುಜುಗರ ಅನುಭವಿಸುವಂತಾಗಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳ ನಡುವೆ ಐಪಿಎಲ್ 17ನೇ ಆವೃತ್ತಿಯ ಮೊದಲ ಪಂದ್ಯ ನಡೆಯುತ್ತಿದೆ. ಪಂದ್ಯದ ಟಾಸ್ ಸಮಯದಲ್ಲೇ ಹಾರ್ದಿಕ್ ಪಾಂಡ್ಯ ಮಾತನಾಡುತ್ತಿದ್ದಾಗ ಅಭಿಮಾನಿಗಳು ರೋಹಿತ್ ರೋಹಿತ್ ಎಂಬ ಘೋಷಣೆ ಕೂಗಲು ಆರಂಭಿಸಿದರು. ತಮ್ಮ ಜೋರಾದ ಬೊಬ್ಬೆಯೊಂದಿಗೆ ಪಾಂಡ್ಯರನ್ನು ಅಭಿಮಾನಿಗಳು ಕೆರಳಿಸಿದ್ದಾರೆ. ಆ ಬಳಿಕ ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ವೇಳೆಯೂ ಇದು ಮುಂದುವರೆಯಿತು. ಹಾರ್ದಿಕ್ ಬೌಲಿಂಗ್ ಮಾಡುವಾಗಲೂ ಸ್ಟೇಡಿಯಂನಲ್ಲಿದ್ದ ಫ್ಯಾನ್ಸ್ ಕಿರುಚುತ್ತಿದ್ದರು.
ಮುಂಬೈ ತಂಡದ ನಾಯಕತ್ವ ಬದಲಾವಣೆಯು ರೋಹಿತ್ ಶರ್ಮಾ ಅಭಿಮಾನಿಗಳಿಗೆ ಆರಂಭದಿಂದಲೇ ಇಷ್ಟವಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆರಂಭದಿಂದಲೂ ವ್ಯಾಪಕ ಅಸಮಾಧಾನ ಹಾಗೂ ಆಕ್ರೋಶ ಕೇಳಿಬರುತ್ತಿದೆ. ಇಂದು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸಮಯದಲ್ಲೂ, ನರೇಂದ್ರ ಮೋದಿ ಸ್ಟೇಡಿಯಂ ತುಂಬೆಲ್ಲಾ ರೋಹಿತ್, ರೋಹಿತ್ ಘೋಷಣೆಗಳೇ ಕೇಳಿ ಬಂದಿದೆ. ಪಂದ್ಯದ ನಡುವೆಯೂ ನಿಮಿಷಗಳ ಕಾಲ ರೋಹಿತ್ ಶರ್ಮಾ ಹೆಸರುನ ಹೇಳಿ ಅಭಿಮಾನಿಗಳು ಘೋಷಣೆ ಕೂಗುವುದನ್ನು ಮುಂದುವರೆಸಿದರು. ಇದು ಹಾರ್ದಿಕ್ ಪಾಂಡ್ಯಗೆ ಮುಜುಗರ ಆಗುವಂತಿತ್ತು. ಸ್ಟೇಡಿಯಂ ಚಾವಣಿ ಕಿತ್ತುಬರುವಂತೆ ಬೊಬ್ಬೆ ಹಾಕಿರುವ ಅಭಿಮಾನಿಗಳು ತಮ್ಮ ನಾಯಕ ರೋಹಿತ್ ಶರ್ಮಾ ಎಂದು ಹೇಳಿಕೊಂಡಿದ್ದಾರೆ.
ಈ ನಡುವೆ ಹಲವು ಅಭಿಮಾನಿಗಳ ಕೈಯಲ್ಲಿ ರೋಹಿತ್ ಶರ್ಮಾ ನಮ್ಮ ನಾಯಕ ಎಂಬ ಪೋಸ್ಟರ್‌ಗಳು ಕಾಣಿಸಿವೆ. ಹಿಟ್‌ಮ್ಯಾನ್ ಫಾರೆವರ್, ರೋಹಿತ್ ಈಸ್ ಅವರ್ ಕ್ಯಾಪ್ಟನ್ ಎಂಬ ಪೋಸ್ಟರ್‌ಗಳು ಅಭಿಮಾನಿಗಳ ಕೈಯಲ್ಲಿ ಕಾಣಿಸಿಕೊಂಡಿದೆ. ಇದು ಹಾರ್ದಿಕ್‌ಗೆ ಮುಜುಗರ ತರಿಸುವಂತಿತ್ತು.
ಮುಂಬೈ ಇಂಡಿಯನ್ಸ್ ಆಡುವ ಬಳಗ
ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ನಮನ್ ಧೀರ್, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಶಮ್ಸ್ ಮುಲಾನಿ, ಪಿಯೂಷ್ ಚಾವ್ಲಾ, ಜೆರಾಲ್ಡ್ ಕೊಯೆಟ್ಜಿ, ಜಸ್ಪ್ರೀತ್ ಬುಮ್ರಾ, ಲ್ಯೂಕ್ ವುಡ್.
ಗುಜರಾತ್ ಟೈಟಾನ್ಸ್ ಆಡುವ ಬಳಗ
ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್.