ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯಗೆ ಕೋಟ್ಯಂತರ ರೂಪಾಯಿ ವಂಚಿಸಿದ ಮಲ ಸಹೋದರನ ಬಂಧನ; ಏನಿದು ಪ್ರಕರಣ?
Vaibhav Pandya: ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರಿಗೆ 4.3 ಕೋಟಿ ರೂ.ಗಳನ್ನು ವಂಚಿಸಿದ ಆರೋಪದ ಮೇಲೆ ಅವರ ಮಲ ಸಹೋದರ ವೈಭವ್ ಪಾಂಡ್ಯ ಅವರನ್ನು ಬಂಧಿಸಲಾಗಿದೆ.
ಭಾರತ ತಂಡದ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಕೃನಾಲ್ ಪಾಂಡ್ಯ (Krunal Pandya) ಅವರ ಮಲ ಸಹೋದರ ವೈಭವ್ ಪಾಂಡ್ಯ (Vaibhav Pandya) ಅವರನ್ನು ವ್ಯವಹಾರ ಪಾಲುದಾರಿಕೆಯಲ್ಲಿ ಸುಮಾರು 4.3 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹಾರ್ದಿಕ್ ಮತ್ತು ಕೃನಾಲ್ ಅವರಿಗೆ 37 ವರ್ಷದ ವೈಭವ್ 4.3 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ.
ಪಾಲುದಾರಿಕೆ ಸಂಸ್ಥೆಯಲ್ಲಿ 4.3 ಕೋಟಿ ತಿರುಗಿಸಿದ ಹಿನ್ನೆಲೆ ಹಾರ್ದಿಕ್ ಮತ್ತು ಕೃನಾಲ್ ಅವರಿಗೆ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ. ಮೂವರು ಸೇರಿ 2021ರಲ್ಲಿ ಪಾಲಿಮರ್ ವ್ಯವಹಾರ ಆರಂಭಿಸಿದ್ದರು. ಈ ಒಪ್ಪಂದದ ಪ್ರಕಾರ ಹಾರ್ದಿಕ್ ಮತ್ತು ಕೃನಾಲ್ ಬಂದ ಲಾಭದಲ್ಲಿ ಶೇಕಡಾ 40 ರಷ್ಟು ಲಾಭದ ಪಡೆಯಬೇಕಿತ್ತು. ವೈಭವ್ ಶೇಕಡಾ 20ರಷ್ಟು ಪಡೆಯಬೇಕಿತ್ತು. ಆದರೆ, ವೈಭವ್ ಲಾಭ ಹಂಚಿಕೆಯ ಬದಲು ವ್ಯವಹಾರದಿಂದ ಬಂದ ಹಣವನ್ನು ಅದರಲ್ಲಿ ಹೂಡಿಕೆ ಮಾಡಿದ್ದರು.
ಲಾಭದ ಪಾಲು ಹೆಚ್ಚಿಸಿಕೊಂಡ ವೈಭವ್
ಆ ಹಣವನ್ನು ಬೇರೆಡೆಗೆ ತಿರುಗಿಸಿ ಪಾಲುದಾರಿಕೆ ನಿಯಮಗಳ ಉಲ್ಲಂಘಿಸಿದ್ದರು. ಈ ಷೇರುಗಳ ಲಾಭ ವಿತರಿಸದೆ ಮತ್ತು ವೈಭವ್ ತನ್ನ ಮಲ ಸಹೋದರರಿಗೆ ತಿಳಿಸದೆ ಅದೇ ವ್ಯಾಪಾರದಲ್ಲಿ ಮತ್ತೊಂದು ಸಂಸ್ಥೆ ಸ್ಥಾಪಿಸಿದ್ದರು. ಇದರ ಪರಿಣಾಮ ಮೂಲ ಪಾಲುದಾರಿಕೆಯಿಂದ ಲಾಭವು ಕುಸಿಯಿತು. ಇದು ಅಂದಾಜು 3 ಕೋಟಿ ರೂ.ಗಳ ನಷ್ಟಕ್ಕೆ ಕಾರಣವಾಯಿತು. ಇದಲ್ಲದೆ, ವೈಭವ್ ರಹಸ್ಯವಾಗಿ ತನ್ನ ಸ್ವಂತ ಲಾಭದ ಪಾಲನ್ನು 20% ರಿಂದ 33.3% ಕ್ಕೆ ಹೆಚ್ಚಿಸಿದ್ದಾರೆ. ಇದು ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅವರ ಆರ್ಥಿಕ ಹಿತಾಸಕ್ತಿಗಳ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ ಎಂದು ಆರೋಪಿಸಲಾಗಿದೆ.
ಈ ಕ್ರಮಗಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ವೈಭವ್ ಪಾಂಡ್ಯ ವಿರುದ್ಧ ವಂಚನೆ ಮತ್ತು ಫೋರ್ಜರಿ ಆರೋಪ ಹೊರಿಸಿದೆ. ಕ್ರಿಕೆಟ್ ಪರಾಕ್ರಮಕ್ಕೆ ಹೆಸರುವಾಸಿಯಾದ ಪಾಂಡ್ಯ ಸಹೋದರರು ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. ಇಬ್ಬರೂ ಕ್ರಿಕೆಟಿಗ ಸಹೋದರರು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಿರತರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೃನಾಲ್ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿದ್ದಾರೆ.
2023ರ ವಿಶ್ವಕಪ್ ವೇಳೆ ಪಾದದ ಗಾಯದಿಂದ ಚೇತರಿಸಿಕೊಂಡಿದ್ದ ಹಾರ್ದಿಕ್ ಕಳೆದ ಕೆಲವು ತಿಂಗಳುಗಳಿಂದ ಕಠಿಣ ಪರಿಸ್ಥಿತಿ ಎದುರಿಸಿದ್ದರು. ಹೆಚ್ಚುವರಿಯಾಗಿ ಎಂಐ ನಾಯಕನಾದ ಬಳಿಕ ಸ್ವಂತ ಅಭಿಮಾನಿಗಳಿಂದ ಗಮನಾರ್ಹ ವಿರೋಧವನ್ನು ಎದುರಿಸಿದರು. ರೋಹಿತ್ ಶರ್ಮಾ ಅಭಿಮಾನಿಗಳಿಂದಲೂ ವಿರೋಧಕ್ಕೆ ಒಳಗಾಗಿದ್ದಾರೆ. ಕಳೆದ ವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 29 ರನ್ಗಳಿಂದ ಸೋಲಿಸುವ ಮೊದಲು ಮುಂಬೈ ಇಂಡಿಯನ್ಸ್ ಸತತ 3 ಸೋಲುಗಳನ್ನು ಕಂಡಿತ್ತು. ಇದೀಗ ಏಪ್ರಿಲ್ 11ರಂದು ಆರ್ಸಿಬಿ ಎದುರಿನ ಪಂದ್ಯಕ್ಕೆ ಮುಂಬೈ ಸಜ್ಜಾಗಿದೆ.