ಹಾರ್ದಿಕ್ ಪಾಂಡ್ಯ 15 ಕೋಟಿಗೆ ಗುಜರಾತ್ ತೊರೆದು ಮುಂಬೈ ಸೇರುವುದು ಖಚಿತ; ಇದಕ್ಕಿದೆ ಬಲವಾದ ಕಾರಣ!
Hardik Pandya Set To Join Mumbai Indians: ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅಹಮದಾಬಾದ್ ಮೂಲದ ಫ್ರಾಂಚೈಸಿ ತೊರೆದು ಮತ್ತೆ ಮುಂಬೈ ಇಂಡಿಯನ್ಸ್‌ಗೆ ಮರಳುವುದು ಖಚಿತವಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್(IPL 2024) ಫ್ರಾಂಚೈಸಿಗಳು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಅಂತಿಮ ಪಟ್ಟಿ ಸಲ್ಲಿಸಲು ನವೆಂಬರ್ 26 ಕೊನೆಯ ದಿನಾಂಕವಾಗಿದೆ. ಆದರೆ ಅದಕ್ಕೂ ಮುನ್ನ ಐಪಿಎಲ್ ಟ್ರೆಡಿಂಗ್ ಹೆಚ್ಚಾಗುತ್ತಿದೆ. ಗುಜರಾತ್ ಟೈಟಾನ್ಸ್ (Gujarat Titans) ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಅಹಮದಾಬಾದ್ ಮೂಲದ ಫ್ರಾಂಚೈಸಿ ತೊರೆದು ಮತ್ತೆ ಮುಂಬೈ ಇಂಡಿಯನ್ಸ್‌ಗೆ (Mumbai Indians) ಮರಳುವುದು ಖಚಿತವಾಗಿದೆ.
2015ರಿಂದ 2021ರವರೆಗೂ ಮುಂಬೈ ತಂಡದಲ್ಲಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಕಳೆದ ಹಾರ್ದಿಕ್, ಎರಡು ವರ್ಷಗಳ ಹಿಂದೆ ಗುಜರಾತ್ ಸೇರಿದರು. 2021ರ ಐಪಿಎಲ್ ನಂತರ ಎಂಐ ತೊರೆದ 30 ವರ್ಷದ ಕ್ರಿಕೆಟಿಗ 15 ಕೋಟಿ ರೂ.ಗೆ ಗುಜರಾತ್ ಟೈಟಾನ್ಸ್‌ಗೆ ಸೇರಿ ನಾಯಕರಾದರು. ಎರಡೇ ವರ್ಷಗಳಲ್ಲಿ ಗುಜರಾತ್ ತಂಡವನ್ನು ಅತ್ಯಂತ ಯಶಸ್ವಿ ತಂಡಗಳ ಪಟ್ಟಿಗೆ ಸೇರಿಸುವಲ್ಲಿ ಹಾರ್ದಿಕ್ ಪ್ರಮುಖ ಪಾತ್ರವಹಿಸಿದರು.
15 ಕೋಟಿಗೆ ಡೀಲ್
ನಾಯಕನಾಗಿ ಕಣಕ್ಕಿಳಿದ ಚೊಚ್ಚಲ ಐಪಿಎಲ್ನಲ್ಲೇ ಟ್ರೋಫಿ ಗೆದ್ದರು. 2022ರಲ್ಲಿ ಟ್ರೋಫಿ ಗೆದ್ದ ಹಾರ್ದಿಕ್, 2023ರಲ್ಲೂ ಗುಜರಾತ್ ತಂಡವನ್ನು ಫೈನಲ್ಗೇರಿಸಿದ್ದರು. ಆದರೆ ಎನ್ನರ್ಅಪ್ ಆದರು. ಇದೀಗ ಟೈಟಾನ್ಸ್ ತೊರೆದು ಮರಳಿಗೂಡಿಗೆ ಸೇರುವುದು ಬಹುತೇಕ ಖಚಿತವಾಗಿದೆ. ESPNCricinfo ವರದಿ ಪ್ರಕಾರ, ಪ್ರಸ್ತುತ ಗಾಯಗೊಂಡಿರುವ ಸ್ಟಾರ್ ಆಲ್‌ರೌಂಡರ್, ಎಲ್ಲಾ ನಗದು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಗುಜರಾತ್ಗೆ ಮುಂಬೈ 15 ಕೋಟಿ ನೀಡಲು ಒಪ್ಪಿಗೆ ಸಿಕ್ಕಿದೆ ಎನ್ನಲಾಗಿದೆ. ಹಾರ್ದಿಕ್ರನ್ನು ಖರೀದಿಸಿದ ಮೊತ್ತ 15 ಕೋಟಿ, ಟೈಟಾನ್ಸ್‌ಗೆ ಟ್ರೇಡಿಂಗ್ ಶುಲ್ಕ ಸೇರಿದಂತೆ ಎಲ್ಲಾ ರೀತಿಯ ನಗದು ವ್ಯವಹಾರ ಈ ಒಪ್ಪಂದ ಒಳಗೊಂಡಿರುತ್ತದೆ. ಪಾಂಡ್ಯ ವರ್ಗಾವಣೆ ಶುಲ್ಕದ 15 ಕೋಟಿ ಜೊತೆಗೆ ಇನ್ನಷ್ಟು ಮೊತ್ತ ಪಡೆಯಲಿದ್ದಾರೆ (ಶೇ 50ರಷ್ಟ)
ಯಾರನ್ನೂ ಬಿಟ್ಟುಕೊಡಲ್ಲ ಮುಂಬೈ
ಹಾರ್ದಿಕ್‌ಗೆ ಬದಲಾಗಿ ಮುಂಬೈ ನಾಯಕ ರೋಹಿತ್ ಶರ್ಮಾ ಅಥವಾ ವೇಗಿ ಜೋಫ್ರಾ ಆರ್ಚರ್ ಜಿಟಿಗೆ ಸೇರುತ್ತಾರೆ ಎಂದು ವರದಿಗಳಿವೆ. ಆದರೆ ESPNCricinfo ವರದಿ ಪ್ರಕಾರ, ರೋಹಿತ್ ಮುಂಬೈನಲ್ಲೇ ಉಳಿಯುತ್ತಾರೆ. ವಿನಿಯಮದ ಮೂಲಕ ಯಾವುದೇ ಆಟಗಾರರು ಜಿಟಿಗೆ ಸೇರುವುದಿಲ್ಲ. ಬದಲಿಗೆ ಹಾರ್ದಿಕ್ 5 ಬಾರಿಯ ಚಾಂಪಿಯನ್ ತಂಡದ ಫ್ರಾಂಚೈಸಿಯೊಂದಿಗೆ ಎಲ್ಲಾ ನಗದು ಒಪ್ಪಂದದಲ್ಲಿ ಸಹಿ ಹಾಕಲಿದ್ದಾರೆ.
ಒಂದು ವೇಳೆ ಹಾರ್ದಿಕ್, ಮುಂಬೈ ಸೇರಿದರೆ ಟ್ರೇಡಿಂಗ್ ಮೂಲಕ ಮತ್ತೊಂದು ತಂಡ ಸೇರಿದ ರವಿಚಂದ್ರನ್ ಅಶ್ವಿನ್ ಮತ್ತು ಅಜಿಂಕ್ಯ ರಹಾನೆ ಬಳಿಕ ಮೂರನೇ ನಾಯಕ ಎಂದು ಕರೆಸಿಕೊಳ್ಳಲಿದ್ದಾರೆ. ಈ ಹಿಂದೆ 2020ರಲ್ಲಿ ಅಶ್ವಿನ್ ಪಂಜಾಜ್ ಕಿಂಗ್ಸ್ ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್ಗೆ ಟ್ರೇಡ್ ಆಗಿದ್ದರು. ಆಗವರು ಕ್ಯಾಪ್ಟನ್ ಆಗಿದ್ದರು. ಅದೇ ವರ್ಷ ಅಜಿಂಕ್ಯ ರಹಾನೆ ರಾಜಸ್ಥಾನ ರಾಯಲ್ಸ್ ತಂಡದಿಂದ ಡೆಲ್ಲಿಗೆ ಡೆಲ್ಲಿಗೆ ಟ್ರೇಡ್ ಆಗಿದ್ದರು. ಅವರು ಸಹ ನಾಯಕನಾಗಿದ್ದರು.
ಹಾರ್ದಿಕ್ರನ್ನೇ ಆಯ್ಕೆ ಮಾಡಲು ಕಾರಣ ಇಲ್ಲಿದೆ
ಸದ್ಯ ಮುಂಬೈ ಭವಿಷ್ಯದ ಕ್ಯಾಪ್ಟನ್ ಹುಡುಕಾಟದಲ್ಲಿದೆ. ನಾಯಕ ರೋಹಿತ್ ಶರ್ಮಾ ಹೆಚ್ಚೆಂದರೂ ಎರಡು ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಇದರಿಂದಾಗಿ ಸೂಕ್ತ ನಾಯಕನ ಹುಡುಕಾಟಕ್ಕೆ ಮುಂಬೈ ಕೈ ಹಾಕಿದೆ. ಹಾಗಾಗಿ ಅಂಬಾನಿ ಬ್ರಿಗೇಡ್, ಹಾರ್ದಿಕ್ ಮೇಲೆ ಕಣ್ಣಾಕಿದೆ. ಹಾರ್ದಿಕ್, 2015ರಿಂದ 2021ರವರೆಗೂ ಮುಂಬೈ ಪರ ಆಡಿದ್ದು, 4 ಟ್ರೋಫಿ ಗೆದ್ದಿದ್ದಾರೆ. 2025ರ ನಂತರ ರೋಹಿತ್ ಕ್ರಿಕೆಟ್ನಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ಹಾಗಾಗಿ ಹಾರ್ದಿಕ್ ತಮ್ಮ ಮುಂದಿನ ನಾಯಕನಾಗಿ ತಂಡಕ್ಕೆ ಸೇರಿಸಿಕೊಳ್ಳಲು ಹೆಜ್ಜೆ ಇಟ್ಟಿದೆ ಮುಂಬೈ.
ಹಾರ್ದಿಕ್ ಐಪಿಎಲ್ ಹಾದಿ
ಹಾರ್ದಿಕ್ 2015, 2017, 2019, ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್‌ನೊಂದಿಗೆ ರೋಹಿತ್ ನಾಯಕತ್ವದಲ್ಲಿ 4 ಐಪಿಎಲ್ ಪ್ರಶಸ್ತಿ ಗೆದ್ದರು. ಆದರೆ ಐಪಿಎಲ್ 2022ರ ಮೆಗಾ ಹರಾಜಿಗೂ ಮೊದಲು ಫ್ರಾಂಚೈಸಿ ಹಾರ್ದಿಕ್ರನ್ನು ಉಳಿಸಿಕೊಳ್ಳಲಿಲ್ಲ. ನಂತರ ಅವರು ಜಿಟಿಗೆ ಸೇರಿದರು. ಹಾರ್ದಿಕ್ ಜಿಟಿಯಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತಿದ್ದಾರೆ. 2022ರ ಋತುವಿನಲ್ಲಿ ಜಿಟಿ ಪರ ಅಧಿಕ ರನ್ ಗಳಿಸಿದ ಆಟಗಾರ ಎನಿಸಿದರು.
ಅಲ್ಲದೆ, ನಾಯಕನಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಫೈನಲ್‌ನಲ್ಲಿ ಗೆದ್ದು ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡರು. ಜಿಟಿಯೊಂದಿಗೆ 2 ವರ್ಷಗಳಲ್ಲಿ ಆಲ್‌ರೌಂಡರ್, 31 ಪಂದ್ಯಗಳಲ್ಲಿ ಕಣಕ್ಕಿಳಿದು 41.65ರ ಬ್ಯಾಟಿಂಗ್ ಸರಾಸರಿಯಲ್ಲಿ 833 ರನ್ ಗಳಿಸಿದ್ದಾರೆ. 133.49ರ ಸ್ಟ್ರೈಕ್ ರೇಟ್ ಹೊಂದಿದ್ದು, ಬೌಲಿಂಗ್ನಲ್ಲೂ 11 ವಿಕೆಟ್ ಪಡೆದಿದ್ದಾರೆ.