ಹರ್ಮನ್ಪ್ರೀತ್ ರೌದ್ರಾವತಾರಕ್ಕೆ ಬೆದರಿದ ಜೈಂಟ್ಸ್; ಮುಂಬೈ ಇಂಡಿಯನ್ಸ್ ಪ್ಲೇಆಫ್ಗೆ, ಗುಜರಾತ್ ಬಹುತೇಕ ಹೊರಕ್ಕೆ
Harmanpreet Kaur: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಸೋಲುವ ಪಂದ್ಯವನ್ನು ಗೆಲ್ಲಿಸಿಕೊಟ್ಟ ನಾಯಕಿ ಹರ್ಮನ್ ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್ ತಂಡವನ್ನು ಪ್ಲೇ ಆಫ್ಗೇರಿಸುವಲ್ಲಿ ಯಶಸ್ಸು ಕಂಡರು.
ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಬೆಂಕಿ ಬಿರುಗಾಳಿ ಆಟದ ನೆರವಿನಿಂದ ರಣ ರೋಚಕ ಗೆಲುವು ದಾಖಲಿಸಿದ ಮುಂಬೈ ಇಂಡಿಯನ್ಸ್, 2ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಿದೆ. ಅತ್ತ ಬೃಹತ್ ಮೊತ್ತವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಗುಜರಾತ್ ಜೈಂಟ್ಸ್ ಲೀಗ್ನಿಂದ ಬಹುತೇಕ ಹೊರ ಬಿದ್ದಿದೆ. ಕೊನೆಯ 4 ಓವರ್ಗಳಲ್ಲಿ 65 ರನ್ ಗಳಿಸಿದ ಮುಂಬೈ, ಸೋಲುವ ಪಂದ್ಯದಲ್ಲಿ 7 ವಿಕೆಟ್ಗಳಿಂದ ಗೆದ್ದು ಸಂಭ್ರಮಿಸಿತು.
ಬೆಂಗಳೂರಿನಲ್ಲಿ ನಡೆದ ಮೊದಲ ಹಂತದ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲೂ ಸೋತಿದ್ದ ಗುಜರಾತ್ ಜೈಂಟ್ಸ್ ದೆಹಲಿಯಲ್ಲಿ ನಡೆಯುತ್ತಿರುವ ದ್ವಿತೀಯ ಹಂತದಲ್ಲಿ ಆರ್ಸಿಬಿ ವಿರುದ್ಧ ಗೆದ್ದು ಖಾತೆ ತೆರೆದಿತ್ತು. 2ನೇ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸದ ಜೊತೆಗೆ ಪ್ಲೇ ಆಫ್ ಕನಸನ್ನೂ ಜೀವಂತವಾಗಿಟ್ಟುಕೊಂಡಿತ್ತು. ಆದರೆ, ಗುಜರಾತ್ ಕನಸನ್ನು ಮುಂಬೈ ನುಚ್ಚು ನೂರು ಮಾಡಿತು. ಬೃಹತ್ ಗುರಿ ಬೆನ್ನಟ್ಟಿದ್ದಲ್ಲದೆ ಗುಜರಾತ್ ಪ್ಲೇಆಫ್ನಿಂದ ಬಹುತೇಕ ಹೊರಬೀಳುವಂತೆ ಮಾಡಿತು.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಉತ್ತಮ ಆರಂಭ ಪಡೆಯಲಿಲ್ಲ. ಲಾರಾ ವೊಲ್ವಾರ್ಡ್ಟ್ ಕೇವಲ 13 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಓಪನರ್ ಮತ್ತು ನಾಯಕಿ ಬೆತ್ ಮೂನಿ ಮತ್ತು 3ನೇ ಕ್ರಮಾಂಕದಲ್ಲಿ ಆಡಲಿಳಿದ ದಯಾಲನ್ ಹೇಮಲತಾ ಆರಂಭಿಕ ಆಘಾತ ಲೆಕ್ಕಿಸದೆ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದರು. ಮುಂಬೈ ಬೌಲರ್ಗಳ ಬೆವರಿಳಿಸಿದ ಈ ಜೋಡಿ 2ನೇ ವಿಕೆಟ್ಗೆ 121 ರನ್ಗಳ ಜೊತೆಯಾಟವಾಡಿತು.
ಕಳೆದ ಪಂದ್ಯಗಳಲ್ಲಿ ವಿಫಲವಾಗಿದ್ದ ಹೇಮಲತಾ ಬಿರುಸಿನ ಬ್ಯಾಟಿಂಗ್ ನಡೆಸಿದ್ದಲ್ಲದೆ, ಮಹತ್ವದ ಪಂದ್ಯದಲ್ಲಿ ಫಾರ್ಮ್ಗೆ ಮರಳಿದರು. 40 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಿತ 74 ರನ್ ಚಚ್ಚಿದರು. ಮತ್ತೊಂದು ಎಂಡ್ನಲ್ಲಿದ್ದ ಮೂನಿ 35 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಿತ 66 ರನ್ ಬಾರಿಸಿದರು. ಪರಿಣಾಮ ಗುಜರಾತ್ ಬೃಹತ್ ಮೊತ್ತ ಪೇರಿಸಲು ನೆರವಾಯಿತು. ಉಳಿದಂತೆ ಯಾರೂ ದೊಡ್ಡ ಮೊತ್ತದ ಕಾಣಿಕೆ ನೀಡಲಿಲ್ಲ. ಅಂತಿಮವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಕಲೆ ಹಾಕಿತು.
19.5 ಓವರ್ಗಳಲ್ಲೇ ಮುಂಬೈಗೆ ಗೆಲುವು
ಆದರೆ ಈ ಗುರಿ ಬೆನ್ನಟ್ಟಿದ ಮುಂಬೈ, ಆರಂಭದಿಂದಲೂ ಭರ್ಜರಿ ಬ್ಯಾಟಿಂಗ್ ನಡೆಸಿತು. ಯಾಸ್ತಿಕಾ ಭಾಟಿಯಾ ಮೊದಲ ಎಸೆತದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದರು. ಪರಿಣಾಮ ಪವರ್ಪ್ಲೇನಲ್ಲೇ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಆದರೆ ನಿಧಾನವಾಗಿ ರನ್ ಕಲೆ ಹಾಕುತ್ತಿದ್ದ ಹೇಲಿ ಮ್ಯಾಥ್ಯೂಸ್ 18 ರನ್ ಗಳಿಸಿ ಔಟಾದರು. ನಟಾಲಿ ಸೀವರ್ ಸಹ 2 ರನ್ಗೆ ಔಟಾಗಿ ನಿರಾಸೆ ಮೂಡಿಸಿದರು. ಇದರ ನಡುವೆಯೂ ಯಾಸ್ತಿಕಾ ಬಿರುಸಿನ ಬ್ಯಾಟಿಂಗ್ ನಡೆಸುತ್ತಲೇ ಇದ್ದರು.
ಹರ್ಮನ್ ಜೊತೆಗೂಡಿ ತಂಡದ ಮೊತ್ತವನ್ನು ಹೆಚ್ಚಿಸುತ್ತಿದ್ದ ಎಡಗೈ ಆಟಗಾರ್ತಿ 49 ರನ್ ಗಳಿಸಿದ್ದ ವಿಕೆಟ್ ಒಪ್ಪಿಸಿ ಅರ್ಧಶತಕ ವಂಚಿತರಾದರು. ಆದರೂ ಮುಂಬೈ ಚೇಸ್ ಮಾಡುವುದು ಕಷ್ಟವೆನಿಸಿತ್ತು. 16 ಓವರ್ಗಳ ಮುಕ್ತಾಯಕ್ಕೆ ಮುಂಬೈ 123 ರನ್ ಗಳಿಸಿತ್ತು. ಗೆಲುವಿಗೆ ಇನ್ನೂ 65 ರನ್ಗಳ ದೊಡ್ಡ ಮೊತ್ತ ಬೇಕಿತ್ತು. ಈ ವೇಳೆ ಜಿಜಿ ಬೌಲರ್ಗಳ ಮೇಲೆ ಚಾರ್ಜ್ ಮಾಡಿದ ಹರ್ಮನ್, ವಿಧ್ವಂಸ ಸೃಷ್ಟಿಸಿದರು. ರೌದ್ರಾವತಾರದ ಬ್ಯಾಟಿಂಗ್ಗೆ ಬೆಚ್ಚಿ ಬಿದ್ದ ಗುಜರಾತ್ 1 ಎಸೆತ ಬಾಕಿ ಇರುವಂತೆಯೇ ಶರಣಾಯಿತು.
ಹರ್ಮನ್ಪ್ರೀತ್ ರೌದ್ರಾವತಾರ
16ನೇ ಓವರ್ ಮುಕ್ತಾಯಕ್ಕೆ 31 ಎಸೆತಗಳಲ್ಲಿ 45 ರನ್ ಗಳಿಸಿದ್ದ ಹರ್ಮನ್, 17ನೇ ಓವರ್ನಿಂದ ಬ್ಯಾಟಿಂಗ್ ಗೇರ್ ಬದಲಾಯಿಸಿದರು. 17ನೇ ಓವರ್ನಲ್ಲಿ 18 ರನ್, 18ನೇ ಓವರ್ನಲ್ಲಿ 24 ರನ್ ಗಳಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಇದರೊಂದಿಗೆ ಗುಜರಾತ್ ತಾನು ಗೆಲ್ಲುವ ಆಸೆಯನ್ನು ಕೈಬಿಟ್ಟಿತು. 19ನೇ ಓವರ್ನಲ್ಲಿ 10 ರನ್ ಗಳಿಸಿದ ಮುಂಬೈ ಕೊನೆಯ ಓವರ್ ಗೆಲುವಿಗೆ 13 ರನ್ ಉಳಿಸಿಕೊಂಡಿತ್ತು. ಹರ್ಮನ್ ಭರ್ಜರಿ ಸಿಕ್ಸರ್ ಮತ್ತು ಬೌಂಡರಿ ಚಚ್ಚುವ ಮೂಲಕ ಮುಂಬೈಗೆ ರೋಚಕ ಗೆಲುವು ತಂದುಕೊಟ್ಟರು. ಅವರು 48 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್ ಸಹಿತ ಅಜೇಯ 95 ರನ್ ಚಚ್ಚಿದರು. ತನ್ನ ಕೊನೆಯ 17 ಎಸೆತಗಳಲ್ಲಿ 50 ಬಾರಿಸಿದ್ದು ವಿಶೇಷ.