ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; ಕೆಟ್ಟ ದಾಖಲೆ ಜೊತೆಗೆ ಹೊಸ ಇತಿಹಾಸವನ್ನೂ ನಿರ್ಮಿಸಿದ ಹರ್ಷಿತ್ ರಾಣಾ!
Harshit Rana: ಪದಾರ್ಪಣೆ ಪಂದ್ಯದಲ್ಲಿ ಒಂದೇ ಓವರ್ನಲ್ಲಿ 26 ರನ್ ಬಿಟ್ಟು ಕೊಟ್ಟು ಕೆಟ್ಟ ದಾಖಲೆ ಬರೆದಿರುವ ಹರ್ಷಿತ್ ರಾಣಾ, ಮೂರು ವಿಕೆಟ್ ಉರುಳಿಸಿ ಹೊಸ ಇತಿಹಾಸವನ್ನೂ ನಿರ್ಮಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದ ತನ್ನ ಚೊಚ್ಚಲ ಏಕದಿನ ಪಂದ್ಯದಲ್ಲಿ ಒಂದೇ ಓವರ್ನಲ್ಲಿ 26 ರನ್ ಬಿಟ್ಟು ಕೊಟ್ಟು ಅನಗತ್ಯ ದಾಖಲೆ ಬರೆದಿರುವ ವೇಗಿ ಹರ್ಷಿತ್ ರಾಣಾ, ಇದೀಗ ಮೂರು ವಿಕೆಟ್ ಉರುಳಿಸಿ ಭಾರತೀಯ ಕ್ರಿಕೆಟ್ನಲ್ಲಿ ಯಾರೂ ಮಾಡಲು ಸಾಧ್ಯವಾಗದ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 7 ಓವರ್ಗಳಲ್ಲಿ 53 ರನ್ ನೀಡಿ 3 ವಿಕೆಟ್ ಉರುಳಿಸಿದ ರಾಣಾ ಭಾರತೀಯ ಕ್ರಿಕೆಟ್ ಪರ ಹ್ಯಾಟ್ರಿಕ್ ಪೂರೈಸಿದ್ದಾರೆ. ಆದರೆ ಇದು ಹ್ಯಾಟ್ರಿಕ್ ವಿಕೆಟ್ ಅಲ್ಲ!
ಫೆಬ್ರವರಿ 6ರಂದು ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಮೂಲಕ ಕೇವಲ 2 ತಿಂಗಳು 15 ದಿನಗಳು ಅಂದರೆ ಒಟ್ಟಾರೆ 76 ದಿನಗಳಲ್ಲಿ ಕ್ರಿಕೆಟ್ನ ಮೂರು ಸ್ವರೂಪಗಳ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಹರ್ಷಿತ್ ರಾಣಾ, ತಾನು ಡೆಬ್ಯೂ ಮಾಡಿದ ಮೂರೂ ಮಾದರಿಗಳ ಮೊದಲ ಪಂದ್ಯದಲ್ಲಿ ಮೂರು ಮೂರು ವಿಕೆಟ್ ಪಡೆಯುವ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಭಾರತೀಯ ಕ್ರಿಕೆಟ್ನ ಇತಿಹಾಸದಲ್ಲಿ ಇಂತಹದ್ದೊಂದು ಸಾಧನೆಯನ್ನು ಮಾಡಿರುವ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ಬ್ಯಾಟಿಂಗ್ ನಡೆಸುವ ವೇಳೆ ಆರನೇ ಓವರ್ನಲ್ಲಿ ಹರ್ಷಿತ್ ರಾಣಾ 26 ರನ್ ಬಿಟ್ಟುಕೊಟ್ಟರು. ಇದು ಬೌಲರ್ವೊಬ್ಬರು ತಮ್ಮ ಚೊಚ್ಚಲ ಪಂದ್ಯದಲ್ಲಿ ತಮ್ಮ ಬೌಲಿಂಗ್ನಲ್ಲಿ ಬಿಟ್ಟುಕೊಟ್ಟ ಭಾರತದ ಮೊದಲ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಅದಾಗಿಯೂ ಕಂಬ್ಯಾಕ್ ಮಾಡಿದ ರಾಣಾ, ಬ್ಯಾಕ್ ಟು ವಿಕೆಟ್ ಕಬಳಿಸಿ ಮಿಂಚಿದರು. ಬೆನ್ ಡಕೆಟ್, ಹ್ಯಾರಿ ಬ್ರೂಕ್ ಜೊತೆಗೆ ಲಿಯಾಮ್ ಲಿವಿಂಗ್ಸ್ಟನ್ ಅವರನ್ನು ಬಲಿ ಪಡೆದರು. ಈ ಮೂರು ವಿಕೆಟ್ ಪಡೆದ ಬಳಿಕ ದಾಖಲೆ ಬರೆದಿದ್ದಾರೆ. ಮೂರು ಸ್ವರೂಪಗಳಲ್ಲಿ ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿ 3+ ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿದ್ದಾರೆ.
ಪದಾರ್ಪಣೆ ಪಂದ್ಯಗಳಲ್ಲಿ ಮೂರು ಮೂರು ವಿಕೆಟ್
- 2024ರ ನವೆಂಬರ್ 22ರಂದು ಆಸ್ಟ್ರೇಲಿಯಾ ವಿರುದ್ಧ ಪರ್ತ್ನಲ್ಲಿ ಭಾರತದ ಪರ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 48 ರನ್ ನೀಡಿ 3 ವಿಕೆಟ್ ಪಡೆದಿದ್ದರು.
- 2025ರ ಜನವರಿ 31ರಂದು ಜರುಗಿದ ಇಂಗ್ಲೆಂಡ್ ವಿರುದ್ಧದ 4ನೇ ಟಿ20ಐ ಪಂದ್ಯದಲ್ಲಿ ಭಾರತದ ಪರ ಚುಟುಕು ಕ್ರಿಕೆಟ್ಗೆ ರಾಣಾ ಪದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ 33 ರನ್ ನೀಡಿ 3 ವಿಕೆಟ್ ಕಿತ್ತಿದ್ದರು.
- ಇದೀಗ 2025ರ ಫೆಬ್ರವರಿ 6ರಂದು ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 50 ಓವರ್ಗಳ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಹರ್ಷಿತ್ 53 ರನ್ ನೀಡಿ 3 ವಿಕೆಟ್ ಕಿತ್ತರು.
ಇದನ್ನೂ ಓದಿ: ಶುಭ್ಮನ್ ಗಿಲ್, ಅಯ್ಯರ್, ಅಕ್ಷರ್ ಬೊಂಬಾಟ್ ಆಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವಿನ ಶುಭಾರಂಭ
