ಚೇಷ್ಟೆ ಬಿಟ್ಟು ಕ್ರಿಕೆಟ್ ಆಡಿ; ಫ್ಲೈಯಿಂಗ್ ಕಿಸ್ ಕೊಟ್ಟು ದುರ್ವತನೆ ತೋರಿದ ಹರ್ಷಿತ್ ವಿರುದ್ಧ ಸುನಿಲ್ ಗವಾಸ್ಕರ್ ಕಿಡಿ
Sunil Gavaskar: ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿದ ನಂತರ ಫ್ಲೈಯಿಂಗ್ ಕಿಸ್ ನೀಡಿ ಸೆಂಡ್ ಆಫ್ ಕೊಟ್ಟ ಹರ್ಷಿತ್ ರಾಣಾ ನಡೆಗೆ ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![ಮಯಾಂಕ್ ಔಟಾದಾಗ ಫ್ಲೈಯಿಂಗ್ ಕೊಟ್ಟು ದುರ್ವತನೆ ತೋರಿದ ಹರ್ಷಿತ್ ವಿರುದ್ಧ ಗವಾಸ್ಕರ್ ಕಿಡಿ ಮಯಾಂಕ್ ಔಟಾದಾಗ ಫ್ಲೈಯಿಂಗ್ ಕೊಟ್ಟು ದುರ್ವತನೆ ತೋರಿದ ಹರ್ಷಿತ್ ವಿರುದ್ಧ ಗವಾಸ್ಕರ್ ಕಿಡಿ](https://images.hindustantimes.com/kannada/img/2024/03/24/550x309/Sunil_gavaskar_1711290201937_1711290208413.jpg)
ಐಪಿಎಲ್-2024 3ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರೋಚಕ ಗೆಲುವು ದಾಖಲಿಸಿತು. ಅಮೋಘ ಬೌಲಿಂಗ್ ನಡೆಸಿ ಅಂತಿಮ ಓವರ್ನಲ್ಲಿ 13 ರನ್ಗಳನ್ನು ರಕ್ಷಿಸಿಕೊಂಡ ವೇಗಿ ಹರ್ಷಿತ್ ರಾಣಾ ಅವರು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನಂಬಲಸಾಧ್ಯವಾದ ಚೇಸ್ ಮೂಲಕ ಕೆಕೆಆರ್ಗೆ ಶಾಕ್ ನೀಡಿದ್ದ ಎಸ್ಆರ್ಹೆಚ್ ಕೊನೆಯ ಕ್ಷಣದಲ್ಲಿ ಸೋಲೊಪ್ಪಿಕೊಂಡಿತು.
ಆದರೆ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ಹರ್ಷಿತ್ ರಾಣಾ ಅವರು ಟೀಕೆಗೆ ಗುರಿಯಾಗಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿದ ಸಂದರ್ಭದಲ್ಲಿ ಪ್ಲೇಯಿಂಗ್ ಕಿಸ್ ಕೊಟ್ಟು ಸೆಂಡ್ ಆಫ್ ಕೊಟ್ಟರು. ಆ ಮೂಲಕ ಕೆಣಕುವ ಯತ್ನಕ್ಕೆ ಮುಂದಾದರು. ಯುವ ವೇಗಿಯ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಆರನೇ ಓವರ್ನ ಮೂರನೇ ಎಸೆತದಲ್ಲಿ ರಾಣಾ ಬೌನ್ಸರ್ ಅನ್ನು ಮಯಾಂಕ್ ಹಿಟ್ ಮಾಡಲು ಪ್ರಯತ್ನಿಸಿ ಕ್ಯಾಚ್ ನೀಡಿದರು. ವಿಕೆಟ್ ಪಡೆದ ಸಂಭ್ರಮದಲ್ಲಿ ಹರ್ಷಿತ್ ರಾಣಾ, ಔಟಾದ ಮಾಯಾಂಕ್ಗೆ ಗುರಾಯಿಸಿಕೊಂಡು ಫ್ಲೈಯಿಂಗ್ ಕಿಸ್ ನೀಡಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತದ ಬ್ಯಾಟ್ಸ್ಮನ್ ಬೌಲರ್ನತ್ತ ತಿರುಗಿ ನೋಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಯಾಂಕ್ 21 ಎಸೆತಗಳಲ್ಲಿ 32 ರನ್ ಗಳಿಸಿದರು.
ಸುನಿಲ್ ಗವಾಸ್ಕರ್ ಆಕ್ರೋಶ
ಹರ್ಷಿತ್ ಅವರ ಅತಿರೇಕದ ವರ್ತನೆಗೆ ಭಾರತದ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವ ಬೌಲರ್ ಹರ್ಷಿತ್ ರಾಣಾ ಹಾಗೆ ಮಾಡಬಾರದಿತ್ತು. ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸಿದ ಸಂದರ್ಭದಲ್ಲಿ ಮಯಾಂಕ್ ಏನಾದರೂ ರಿಪ್ಲೈ ಅಥವಾ ಪ್ರತಿಕ್ರಿಯೆ ನೀಡಿದ್ದಾರೆಯೇ? ಚೇಷ್ಟೆ ಮಾಡದೆ ಕ್ರಿಕೆಟ್ ಆಡಬೇಕು. ನಿಮ್ಮ ತಂಡದ ಸದಸ್ಯರೊಂದಿಗೆ ಸಂಭ್ರಮಿಸಿ. ಆದರೆ ಎದುರಾಳಿಗಳಿಗೆ ಅಂತಹ ವರ್ತನೆಗಳ ಅಗತ್ಯವಿಲ್ಲ ಎಂದು ರಾಣಾಗೆ ಬುದ್ದಿ ಹೇಳಿದ್ದಾರೆ.
‘ಅಂತಿಮ ಓವರ್‌ನಿಂದ ಪಂದ್ಯದ ಹೀರೋ ಆಗಿ ಮಿಂಚಿದ ರಾಣಾ ಆಕ್ರೋಶಕ್ಕೆ ಗುರಿಯಾಗಿರುವುದಲ್ಲದೆ, ತಮ್ಮ ಅನಗತ್ಯ ವರ್ತನೆಯ ಹಿನ್ನೆಲೆಯಲ್ಲಿ ಬಿಸಿಸಿಐನಿಂದ ದಂಡದ ಶಿಕ್ಷೆ ಎದುರಿಸಿದ್ದಾರೆ. ಮಯಾಂಕ್ ಜೊತೆ ಕೆಟ್ಟ ವರ್ತನೆ ಮಾಡಿದ ಕೆಕೆಆರ್ ವೇಗಿಗೆ ಪಂದ್ಯದ ಶುಲ್ಕದ ಶೇಕಡಾ 60ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಹರ್ಷಿತ್ ರಾಣಾಗೆ ಶಿಕ್ಷೆ ವಿಧಿಸಲಾಗಿದೆ’ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
'ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5ರ ಅಡಿಯಲ್ಲಿ ರಾಣಾ ಹಂತ 1ರಲ್ಲಿ ಎರಡು ತಪ್ಪುಗಳನ್ನು ಎಸಗಿದ್ದಾರೆ. ಹಾಗಾಗಿ ಅವರಿಗೆ ಪಂದ್ಯದ ಶುಲ್ಕದ 10 ಪ್ರತಿಶತ ಮತ್ತು 50 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ. ನೀತಿ ಸಂಹಿತೆಯ ಲೆವೆಲ್ 1ರ ನಿಯಮ ಉಲ್ಲಂಘನೆಗೆ ಮ್ಯಾಚ್ ರೆಫರಿ ನಿರ್ಧಾರವೇ ಅಂತಿಮವಾಗಿರುತ್ತದೆ' ಎಂದು ಬಿಸಿಸಿಐ ತಿಳಿಸಿದೆ.
ಈಡನ್ ಗಾರ್ಡನ್ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ಫಿಲ್ ಸಾಲ್ಟ್ (40 ಎಸೆತಗಳಲ್ಲಿ 54 ರನ್) ಮತ್ತು ಆಂಡ್ರೆ ರಸೆಲ್ (25 ಎಸೆತಗಳಲ್ಲಿ 64 ರನ್) ಅವರ ಆರ್ಭಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 208 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡವು ಹೆನ್ರಿಚ್ ಕ್ಲಾಸೆನ್ (29 ಎಸೆತಗಳಲ್ಲಿ 63 ರನ್) ಅವರ ಹೋರಾಟದ ನಡುವೆ ಸೋಲು ಕಂಡಿತು. 7 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು.
![Whats_app_banner Whats_app_banner](https://kannada.hindustantimes.com/static-content/1y/wBanner.png)